ಸಜ್ಜನ್ ರಾವ್ ದೇವಸ್ಥಾನ !

ಸಜ್ಜನ್ ರಾವ್ ದೇವಸ್ಥಾನ !

ಬೆಂಗಳೂರಿನ ವಿಶ್ವೇಶ್ವರಪುರಂ ನಲ್ಲಿರುವ ಸಜ್ಜನ್ ರಾವ್ ಸರ್ಕಲ್ ನ ಹತ್ತಿರವಿರುವ ಸಜ್ಜನ್ ರಾವ್ ದೇವಾಲಯವನ್ನು ನಾನು ಚಿಕ್ಕಂದಿನಿಂದಲೂ ಬಲ್ಲೆ. ನಮ್ಮ ಅಜ್ಜಿ, ಅಮ್ಮ ಅಕ್ಕ ಎಲ್ಲರೂ ಇದೇ ಹೆಸರಿನಲ್ಲಿ ಕರೆಯುತ್ತಿದ್ದರು. ಆದರೂ ಅಲ್ಲಿ ಪುಜಿಸಲ್ಪಡುವ ದೇವರು  ಅವರಿಗೆ ತಿಳಿದಿತ್ತು. ಹಲವು ಬಾರಿ  ಅವರು ನನಗೆ ತಿಳಿಸಿದ್ದರು ಸಹಿತ. ಆದರೆ ನನ್ನ ತಲೆಗೆ ಅದು ಹೋಗಿರಲೇ ಇಲ್ಲ. ಬೆಂಗಳೂರು ಬಿಟ್ಟಮೇಲೆ ಹಲವು ಬಾರಿ ಈದೇವಸ್ಥಾನದ ಬಗ್ಗೆ ಮಾತು ಬಂದಾಗ ನನ್ನ ಗೆಳೆಯರು ನಗುತ್ತಾ ಅರೆ, ಯಾವ್ದ್ರಿ ಅಲ್ಲಿರೊ ದೇವರು ? ಅಂತ ಕೇಳ್ಬಿಡೋದೆ ! ಸರಿಹೋಯ್ತು. ನನಗೂ ಅದೇ ಡೌಟ್ ಇದೆ. ಅಲ್ಲಿನ ಪ್ರಮುಖ ದೇವರು ಸುಬ್ರಹ್ಮಣ್ಯ ಸ್ವಾಮಿ. ಗಣಪತಿಯೂ ಇದೆ. ಸರ್ಕಲ್ಲಿನ ಮತ್ತೊಂದು ಹೆಸರಾಂತ ದೇವಾಲಯ, ಲಕ್ಷ್ಮೀವೆಂಕಟರಮಣ ದೇವಾಲಯದ ನಿರ್ಮಾತ ಶ್ರೀ. ಕೋಟ ಕಾಮಾಕ್ಷಯ್ಯನವರು. ಜನ ಆ ದೇವಾಲಯವನ್ನು ಕೋಟ ಕಾಮಕ್ಷಯ್ಯನವರ ದೇವಸ್ಥಾನವೆಂದೇ ಗುರುತಿಸಿಕೊಳ್ಳುತ್ತಿದ್ದರು !

   

ಬೆಂಗಳೂರಿನ ಹೆಸರಾಂತ ರೇಷ್ಮೆ ನೂಲಿನ ಮಾರಾಟಗಾರರಾಗಿ ಅತಿ ಧನವಂತರಾದ ಸಜ್ಜನ್ ರಾವ್ ಕಟ್ಟಿಸಿದ್ದರು. ಇಂದು  ಅವರ ಮಕ್ಕಳು ಮೊಮ್ಮಕ್ಕಳು ಈ ದೇವಾಲಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ದೇವಾಲಯದ ಬದಿಯಲ್ಲೇ ಸಜ್ಜನ್ ರಾವ್ ಛತ್ರವಿದೆ. ಮದುವೆ ಮುಂತಾದ ಸಂದರ್ಭಕ್ಕೆ ಇಲ್ಲಿ ಛತ್ರದ ಹಾಲು ಬಾಡಿಗೆಗೆ ದೊರೆಯುತ್ತದೆ. ಇದೇ ವೃತ್ತದಲ್ಲಿ ಲಕ್ಷ್ಮೀವೆಂಕಟರಮಣ, ಸತ್ಯನಾರಾಯಣ  ದೇವಾಲಯಗಳಿವೆ. ಇದರ ಬಳಿಯ  ವಿ.ಬಿ.ಬೇಕ್ರಿಯ ಬನ್, ಕೇಕ್, ಹುರಿಗಾಳು, ಬ್ರೆಡ್ ರುಚಿ ಸವಿಯಲು ನಾವು ಪ್ರತಿವಾರವೂ ಅಲ್ಲಿಗೆ ಭೆಟ್ಟಿನೀಡುತ್ತಿದ್ದೆವು. ಸರ್ಕಲ್ ನ ಹುಲ್ಲಿನಮೇಲೆ ಕುಳಿತು ಖಾರಬನ್ನು ತಿನ್ನುವುದು ಒಂದು ಮುದತರುವ ಸನ್ನಿವೇಶ.
 
ಬರುವ ದಾರಿಯಲ್ಲಿ ಬಿಸಿಬಿಸಿ ಪುದೀನ ಮಿಶ್ರಿತ ವಡೆಯನ್ನು ಕರಿದುಕೊಡುತ್ತಿದ್ದರು. ಅದೇನು ರುಚಿಯೋ ಅದು.  ನಾವು ಇದ್ದದ್ದು ಬಸವನಗುಡಿಯಲ್ಲಿ ಹತ್ತಿರ. 'ನ್ಯಾಶನಲ್ ಕಾಲೇಜ್', 'ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ', ಮತ್ತು ಇಲ್ಲಿಯೇ ವೃತ್ತದ ಹತ್ತಿರ, ಆನಕೃರವರ ಮನೆ ’ಅನ್ನಪೂರ್ಣ’ ಯಿತ್ತು. ಈಗ ಇದೆಯೋಇಲ್ಲವೊ ಕಾಣೆ. 
 
ಮತ್ತೊಂದು ಮರೆಯಲಾರದ ಅನುಭವವೆಂದರೆ,  ಅಲ್ಲಿನ ವಾಲ್ಮೀಕಾಶ್ರಮದಲ್ಲಿ  ಪ್ರತಿದಿನ ಸಂಜೆ ತಪ್ಪದೆ ಹರಿಕಥೆ ಪಾರಾಯಣ ನಡೆಯುತ್ತಿತ್ತು. ಭದ್ರಗಿರಿ ಕೇಶವದಾಸ್, ಗುರುರಾಜುಲು ನಾಯ್ಡು ಮುಂತಾದ ಕೀರ್ತನಕಾರರು ಅಲ್ಲಿನ ಭಕ್ತವೃಂದವನ್ನು ತಮ್ಮ ಅಮೋಘ ಕಥಾನಕಗಳಿಂದ ತಣಿಸುತ್ತಿದ್ದರು. ಚಿಕ್ಕವನಾದ ನಾನು ನಮ್ಮ ತಿಮ್ಮಮ್ಮಜ್ಜಿಯವರ ಜೊತೆ ಹರಿಕಥೆ ಕೇಳಲು ಹೋಗುತ್ತಿದ್ದೆ.  ಅಂದು ಬಬ್ರುವಾಹನ ಕಾಳಗದ ಪ್ರಸಂಗವನ್ನು ಕೇಳುವಾಗ ನಾನು ನನಗರಿವಿಲ್ಲದಂತೆ  ನಾಯ್ಡುರವರ ಕಥೆಯ ಸುಧೆಯಲ್ಲಿ  ಕರಗಿಹೋಗಿದ್ದೆ. ಅದೇನು ವರ್ಣನೆ, ಭಕ್ತಿಭಾವ, ಸೊಗಸಾದ  ಪದಪ್ರಯೋಗಗಳು, ಭಕ್ತಿ, ಪ್ರಣಯ ಸನ್ನಿವೇಶಗಳು, ವಿರಹ, ಮುಂತಾದ ಸುಂದರ ಸನ್ನಿವೇಶಗಳನ್ನು ಅವರು ನಮ್ಮ ಮುಂದೆ ತೆರೆದಿಟ್ಟಿದ್ದರು. ಅದೊಂದು ಮರೆಯಲಾರದ ರಸಾನುಭವ !  
 

Comments