ಸಾಗರನ ಸಂಜೆ ಗಾನ

ಸಾಗರನ ಸಂಜೆ ಗಾನ

ಕವನ

ನಸುಕಿನಲ್ಲಿ ಕರು ಕೊರಳಾಡಿಸಿ

ಗಂಟೆ ಘಲರವಿಸುವ ತನನ

ನವಜಾತ ಮಗು ಮುದ್ದು ನಗೆ ಹರಿಸಿ

ತಾಯಿ ಎದೆಯೊಳಗರಳಿಸಿದ ಚೇತನ

ನನಗಿಲ್ಲೇ ತಾವು ಬಾ ಸಖಾ ಬಾ

ಎಂದು ಎದೆಗೊರಗಿ ನಲ್ಲೆ ಪಿಸುಗುಡುವ

ಪಲ್ಲವದಂತೆ ಸಾಗರನ ಸಂಜೆ ಗಾನ

ಕೆಂಪಡರಿದ ರವಿ ಸ್ನಾನಿಸಿ ವಿರಮಿಸುವ 

ಸಂಕ್ರಮಣ ಸಮಯ

 

ಕನ್ನೆಯ ಕನಸು ಕೊನರಿಸುವಂಥ ಭಾವ

ಏರಿಳಿಸುವ ಅಲೆಗಳ ಸ್ಪಂದ

ನಾಭೀ ಮೂಲದೋಂಕಾರದ ಉದಕ

ದಣಿವಿಲ್ಲದ್ದರ ಅಪರಾವತಾರಕ

ಶಬ್ಧದೊಡೆಯನ ಮೌನದತ್ತಲ ರಾಗ

ಪಸರಿಸುವ ಕತ್ತಲೆಯಲ್ಲಿ

’ಅಂಬುಧಿಗೆ ಚಂದ್ರೋದಯದ ಪುಳಕ’

 

ಅನಾದಿಯಿಂದದೇ ಅನವರತದ 

ಗಾರುಡೀ ಗಾನ

ಒಡಲೊಳಗೆ ಪೊರೆಯುತ್ತಲೆ ಇದೆ 

ಶತಕೋಟಿ ಪ್ರಾಣ

ಸಂಚಯಿಸುತ್ತಿದೆ ತೆನೆ ತೆನೆಯ 

ಮೋಡಕ್ಕೆ ಅಮೃತದ ಪಾನ

 

ಅಪ್ಪಳಿಸಿ ಬೊಬ್ಬಿಟ್ಟರೂ 

ಅದಕ್ಕದೇ ಪರಿಧಿ

ಇರುವಲ್ಲೇ ಯಾನ 

ಹೊರಳುತ್ತಲೇ ಧ್ಯಾನ 

ಮತ್ತೆ ಮರುಕಳಿಸಿತ್ತೆ 

ಅರಸುವ ತೆರೆ ತೆರೆ

ಒಳಗದೇ ಒರತೆ 

ನೀರ..ವತೆ ಮತ್ತದೇ ಮಥನ

                                  - ಅನಂತ ರಮೇಶ್

(ಚಿತ್ರಕೃಪೆ: ಅಂತರ್ಜಾಲ mrwallpaper)

ಚಿತ್ರ್