ಅಂಚೆ ದಿನದ ಬಗ್ಗೆ ಒಂದು ನೋಟ…

ಅಂಚೆ ದಿನದ ಬಗ್ಗೆ ಒಂದು ನೋಟ…

ಒಂದು ಕಾಲದಲ್ಲಿ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದ್ದ ಅಂಚೆ ಇಲಾಖೆ ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದೆ. ಈಗ ಕಾಗದ ಪತ್ರಗಳ ಬಟವಾಡೆ ಕಮ್ಮಿಯಾಗಿ ಅಂಚೆ  ಯೋಜನೆಗಳು, ಸರಕಾರೀ ದಾಖಲೆಗಳ ತಯಾರಿ (ಆಧಾರ್ ಇತ್ಯಾದಿ), ಅಂಚೆ ಬ್ಯಾಂಕ್ ಇತ್ಯಾದಿ ವಿಭಿನ್ನ ಮಾರ್ಗಗಳನ್ನು ಹಾಕಿಕೊಳ್ಳಲಾಗಿದೆ. ಯಾರು ಏನೇ ಹೇಳಲಿ, ಜನರು ಈಗಲೂ ನೂರಕ್ಕೆ ನೂರು ವಿಶ್ವಾಸವನ್ನು ವ್ಯಕ್ತ ಪಡಿಸುವುದು ಅಂಚೆ ಇಲಾಖೆಯ ಮೇಲೆಯೇ. ನೀವು ಅಂಚೆ ಕಾರ್ಡಿನಲ್ಲಿ ಬರೆಯುವ ಒಂದು ಕಾಗದ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕದ ಯಾವುದೇ ವಿಳಾಸಕ್ಕೆ ಕೇವಲ ೫೦ ಪೈಸೆಯಲ್ಲಿ ಬಟವಾಡೆಯಾಗುತ್ತದೆ ಎಂದರೆ ಇದೊಂದು ಅದ್ಬುತ ಸೇವೆಯೇ ಅಲ್ಲವೇ? 

ನೀವು ಬಳಸಿದ ಅಂಚೆ ಕಾರ್ಡು ಮುದ್ರಿಸಲು ಹಾಗೂ ರವಾನೆ ಮಾಡಲು ಅದರ ಮೂಲ ಬೆಲೆಯ ಎಷ್ಟೋ ಅಧಿಕ ಹಣ ಖರ್ಚಾಗುತ್ತದೆ. ಆದರೆ ಇದೊಂದು ಸೇವೆ ಎಂದು ಸರಕಾರ ಕಾರ್ಯ ನಿರ್ವಹಿಸುತ್ತದೆ. ನೀವು ಕಳಿಸುವ ನೋಂದಾಯಿತ (ರಿಜಿಸ್ಟರ್ಡ್) ಪತ್ರ ಅಥವಾ ಮನಿ ಆರ್ಡರ್ ಸೇವೆ ಖಾತರಿಯಾಗಿ ವಿಳಾಸವನ್ನು ತಲುಪುತ್ತವೆ. ಕಳೆದ ೯೦ರ ದಶಕದ ತನಕ ಅನಿವಾರ್ಯವೇ ಆಗಿದ್ದ ಈ ಅಂಚೆ ಇಲಾಖೆಯ ಬಹಳಷ್ಟು ಸೇವೆಗಳು ನಿಧಾನವಾಗಿ ಕಡಿಮೆ ಬಳಕೆಯಾಗತೊಡಗಿದವು. ಈಗಂತೂ ಖಾಸಗಿ ಅಥವಾ ವೈಯಕ್ತಿಕ ಪತ್ರಗಳು ಅಂಚೆಯ ಮೂಲಕ ಬರುತ್ತಲೇ ಇಲ್ಲ. ಅದಕ್ಕಾಗಿಯೇ ಈಗ ಹಲವಾರು  ಮೊಬೈಲ್ ಆಪ್ ಗಳಿವೆ, ಇ-ಮೈಲ್ ಸೌಲಭ್ಯಗಳಿವೆ. ಬಳಕೆಯಲ್ಲೇ ಇಲ್ಲದ ೨೫ ಪೈಸೆಗೆ ಅಂಚೆ ಇಲಾಖೆ ಪತ್ರಿಕೆಯನ್ನೇ ಬಟವಾಡೆ ಮಾಡುತ್ತದೆ. ಇದೊಂದು ಅದ್ಭುತವಲ್ಲವೇ? ನೋಂದಾಯಿತ ಪತ್ರಿಕೆಯನ್ನು ಕೇವಲ ೨೫ ಪೈಸೆಗೆ ನೀವು ಭಾರತದಾದ್ಯಂತ ಎಲ್ಲಿಗೆ ಬೇಕಾದರೂ ಕಳಿಸಬಹುದು.     

ಗ್ರಾಮೀಣ ಭಾಗಗಳಲ್ಲಿ ಅಂಚೆ ಪೇದೆಯೇ ಅಥವಾ ಅಂಚೆಯಣ್ಣನೇ ಮುಖ್ಯ ಸುದ್ದಿವಾಹಕನಾಗಿರುತ್ತಿದ್ದ. ಹಳಬರು ಪಿಂಚಣಿಗೆ, ವಿದೇಶ ಅಥವಾ ಸೈನ್ಯದಲ್ಲಿರುವವರು ಬರೆಯುವ ಪತ್ರಗಳನ್ನು ಕಾದು ಕುಳಿತ ಹೆತ್ತವರು ಇವರಿಗೆಲ್ಲಾ ಅಂಚೆ ಪೇದೆ ಸಾಕ್ಷಾತ್ ದೇವರ ಅವತಾರವೇ ಆಗಿ ಹೋಗಿದ್ದ. ಆಗೆಲ್ಲಾ ಅನಕ್ಷರಸ್ಥರ ಸಂಖ್ಯೆಯೂ ಅಧಿಕ. ಬಂದ ಕಾಗದಗಳನ್ನು ಅಂಚೆಯಣ್ಣನೇ ಓದಿ ಹೇಳಬೇಕು. ನಂತರ ಮರುತ್ತರವನ್ನು ಅವನೇ ಬರೆಯಬೇಕು. ಗ್ರಾಮೀಣ ಭಾಗದಲ್ಲಿ ಮನೆಗಳೂ ದೂರ ದೂರ. ಆದರೂ ಬೇಸರಿಸದೇ ತಮ್ಮ ಸೇವೆಯನ್ನು ಮಾಡಿದ ಅಂಚೆಯಣ್ಣರು ಇದ್ದಾರೆ ಮತ್ತು ಅವರು ಅಭಿನಂದನಾರ್ಹರು.

೧೯೯೦ರ ದಶಕದಲ್ಲಿ ಕನ್ನಡದ ಬಹುತೇಕ ಪತ್ರಿಕೆಗಳು ‘ಪತ್ರ ಮೈತ್ರಿ' ‘ಸ್ನೇಹ ಸೇತು' ಮುಂತಾದ ಗೆಳೆತನ ಬೆಳೆಸುವ ಸದಾಶಯದಿಂದ ವಿಳಾಸಗಳನ್ನು ಮುದ್ರಿಸುತ್ತಿದ್ದರು. ಈ ಮೈತ್ರಿಗೆ ಮುಖ್ಯ ಸೇತುವೆಯಾಗಿದ್ದವರು ಅಂಚೆ ಇಲಾಖೆ ಹಾಗೂ ಅಂಚೆ ಪೇದೆ (Postman). ನಾವೆಲ್ಲಾ ಆಗ ಗೆಳೆತನ ಕೋರಿ ಪತ್ರಿಕೆಯಲ್ಲಿರುವ ವಿಳಾಸಕ್ಕೆ ಕಾಗದ ಬರೆಯುತ್ತಿದ್ದೆವು. ನಂತರ ಅವರ ಕಡೆಯಿಂದ ಏನಾದರೂ ಉತ್ತರ ಬರುವುದೋ ಎಂದು ಕಾಯುತ್ತಿದ್ದೆವು. ಕ್ರಮೇಣ ಈ ಪತ್ರ ಮೈತ್ರಿ ಜಾಸ್ತಿಯಾಗಿ ದಿನವೂ ಪೋಸ್ಟ್ ಮೆನ್ ಕಾಯುವ ಕೆಲಸವಾಗಿ ಹೋಗಿತ್ತು. ಈಗಿನ ಮಕ್ಕಳು ಬಹುಷಃ ಅಂಚೆ ಕಚೇರಿ, ಅಂಚೆ ಪೆಟ್ಟಿಗೆಯನ್ನೇ ನೋಡಿರಲಾರರು. ಅಂಚೆ ಕವರಿನಲ್ಲಿ ಬರುವ ಕಾಗದಗಳಿಗೆ ಒಂದು ಅಂಚೆ ಚೀಟಿ ಇರುತ್ತಿತ್ತು. ಅದರಲ್ಲಿ ಯಾರಾದರೊಬ್ಬ ಮಹನೀಯರ ಚಿತ್ರ ಅಥವಾ ಯಾವುದಾದರೂ ಊರಿನ, ಸ್ಮಾರಕಗಳ ಚಿತ್ರಗಳು ಇರುತ್ತಿದ್ದವು. ಕ್ರಮೇಣ ಅವುಗಳನ್ನು ಸಂಗ್ರಹಿಸುವ ಹವ್ಯಾಸ ಶುರುವಾಯಿತು. ಆಗೆಲ್ಲಾ ಎಷ್ಟು ಬಗೆಯ ಹವ್ಯಾಸಗಳಿದ್ದುವು ಎಂದರೆ ಆಶ್ಚರ್ಯವಾಗುತ್ತದೆ. ಅಂಚೆ ಚೀಟಿ ಸಂಗ್ರಹ, ನಾಣ್ಯಗಳ ಸಂಗ್ರಹ, ಬೆಂಕಿ ಪೆಟ್ಟಿಗೆಗಳ ಸಂಗ್ರಹ, ಎಲೆಗಳನ್ನು ಪುಸ್ತಕದ ನಡುವೆ ಇರಿಸುವ ಅಭ್ಯಾಸ, ಹಲವಾರು ಗ್ರಾಮೀಣ ಆಟಗಳನ್ನು ಆಡುವ ಅಭ್ಯಾಸಗಳೆಲ್ಲಾ ಇತ್ತು. ಈಗ ಎಲ್ಲದಕ್ಕೂ ಒಂದೇ ಉತ್ತರ ಮೊಬೈಲ್.

ಎಲ್ಲಾ ಬಗೆಯ ಅಂಚೆ ಚೀಟಿ ಸಂಗ್ರಹ ಮಾಡುವವರು ಒಂದೆಡೆಯಾದರೆ, ಒಂದು ವಿಷಯದ ಬಗ್ಗೆ ಇರುವ (ಉದಾ: ಹಕ್ಕಿಗಳು, ಪ್ರಾಣಿಗಳು, ಗಾಂಧೀಜಿ ಬಗ್ಗೆ) ಅಂಚೆ ಚೀಟಿ (Stamps) ಗಳನ್ನು ಸಂಗ್ರಹಿಸುವ ಅಭ್ಯಾಸ ಶುರುವಾಯಿತು. ಹೊಸ ಅಂಚೆ ಚೀಟಿಗಳು ಬಿಡುಗಡೆಯಾದಾಗ ಎಲ್ಲರಿಗೂ ಸಿಗುವಂತಾಗಲು ‘ಫಿಲಟೆಲಿ’ (Philately) ವಿಭಾಗ ಮುಖ್ಯ ಅಂಚೆ ಕಚೇರಿಗಳಲ್ಲಿ ಪ್ರಾರಂಭವಾಯಿತು. ಈಗಲೂ ಫಿಲಟೆಲಿ ವಿಭಾಗದಲ್ಲಿ ಖಾತೆ ತೆರೆದರೆ ನೀವು ತುಂಬಿದ ಹಣಕ್ಕೆ ಸರಿಯಾದ ಅಂಚೆ ಚೀಟಿಗಳನ್ನು ನಿಮ್ಮ ಮನೆಗೇ ರವಾನಿಸುತ್ತಾರೆ. ಇದರಿಂದಾಗಿ ನಿಮಗೆ ಹೊಸ ಹೊಸ ಅಂಚೆ ಚೀಟಿ ಬಿಡುಗಡೆಯಾದಾಗ ಅವುಗಳು ತಪ್ಪದೇ ನಿಮ್ಮ ಮನೆಗೆ ಬರುತ್ತವೆ. ಈ ಹವ್ಯಾಸವನ್ನು ಈಗಿನ ಮಕ್ಕಳಲ್ಲಿ ಬೆಳೆಸುವುದು ಅತ್ಯವಶ್ಯಕ. ಇದರಿಂದ ಅವರಿಗೆ ಆ ಅಂಚೆ ಚೀಟಿಯಲ್ಲಿ ಮುದ್ರಿತವಾದ ವಿಷಯದ ಬಗ್ಗೆ ಮಾಹಿತಿ ಸಿಗುತ್ತದೆ. ಜ್ಞಾನ ಸಂಪತ್ತು ಬೆಳೆಯುತ್ತದೆ. ನೀವು ಯಾವುದಾದರೂ ಮಗುವಿಗೆ ಉಡುಗೊರೆ ಕೊಡಬಯಸುವಿರಾದರೆ ಫಿಲಟೆಲಿ ಸದಸ್ಯತ್ವವನ್ನು ಮಾಡಿಕೊಡಿ. ಅದರಿಂದ ಅವರಿಗೆ ಅಂಚೆ ಚೀಟಿ ಸಂಗ್ರಹದ ಹವ್ಯಾಸ ಬೆಳೆಯುತ್ತದೆ. ಈಗಂತೂ ವಿವಿಧ ನಮೂನೆಯ ಅಂಚೆ ಚೀಟಿಗಳು ಬಂದಿವೆ. ಸುಗಂಧ ಅಂಚೆ ಚೀಟಿ, ಪ್ರಾಣಿಗಳ ಬಗ್ಗೆ, ರಾಮಾಯಣ, ಮಹಾಭಾರತದ ಕತೆಗಳ ಬಗ್ಗೆ, ಖಾದಿ ಬಟ್ಟೆಯ ಮೇಲೆ ಮುದ್ರಿತ ಅಂಚೆ ಚೀಟಿ, ಬೇರೆ ಬೇರೆ ಆಕೃತಿಯ (ತ್ರಿಕೋನ, ಆಯತ ಇತ್ಯಾದಿ) ಅಂಚೆ ಚೀಟಿಗಳು ಹೊರ ಬಂದಿವೆ. ಸುಗಂಧಿತ ಅಂಚೆ ಚೀಟಿಗಳ ಮೇಲೆ ಯಾವ ಹೂವಿನ ಚಿತ್ರ ಮುದ್ರಿತವಾಗಿರುತ್ತದೆಯೋ ಅದೇ ಹೂವಿನ ಪರಿಮಳ ಬರುತ್ತಿರುತ್ತದೆ. ಅದೇ ರೀತಿ ಶ್ರೀಗಂಧ, ಕಾಫಿ ಘಮದ ಅಂಚೆ ಚೀಟಿಗಳೂ ಬಂದಿವೆ. 

ಅಂಚೆ ಚೀಟಿ ಹೊರಬಂದಾಗ ಅದರ ಜೊತೆಗೆ ಆ ಅಂಚೆ ಚೀಟಿಯ ಬಗ್ಗೆ ಮಾಹಿತಿ ನೀಡುವ ಪುಟ್ಟ ವಿವರಣಾ ಪತ್ರವೂ ಫಿಲಟೆಲಿ ವಿಭಾಗದಲ್ಲಿ ಸಿಗುತ್ತದೆ. ಅದಕ್ಕೆ ನಿಗದಿತ ದರ ನೀಡಿ ಖರೀದಿಸಿದರೆ ನಿಮಗೆ ನಿಮ್ಮ ಕೈಯಲ್ಲಿರುವ ಅಂಚೆ ಚೀಟಿಯ ಸಮಗ್ರ ವಿವರಗಳು ಸಿಗುತ್ತವೆ. ಹಾಗೆಯೇ ವಿಶೇಷ ಸಂದರ್ಭಗಳಲ್ಲಿ ಅಂಚೆ ಇಲಾಖೆ ‘ವಿಶೇಷ ಮೊದಲ ದಿನದ ಕವರ್' (First Day Cover) ಮತ್ತು ವಿಶೇಷ ಕವರ್ (Special Cover) ಗಳನ್ನು ಹೊರತರುತ್ತದೆ. ಉದಾಹರಣೆಗೆ ಉಡುಪಿ ಪರ್ಯಾಯದ ಸಮಯ, ಮಟ್ಟುಗುಳ್ಳದ ಬಗ್ಗೆ, ಅಟಲ್ ಬಿಹಾರಿ ವಾಜಪೇಯಿ, ಜಾರ್ಜ್ ಫೆರ್ನಾಂಡೀಸ್ ಬಗ್ಗೆ, ರಾಮಾನುಜನ್ ಬಗ್ಗೆ ಹೀಗೆ ಹತ್ತು ಹಲವಾರು ವಿಧಗಳಲ್ಲಿ ಅಂಚೆ ಕವರ್ ಸಿಗುತ್ತದೆ. ಇದಕ್ಕೂ ನಿಗದಿತ ದರ ಇರುತ್ತದೆ. ಅದಕ್ಕೆ ಅಂಚೆ ಚೀಟಿ ಅಂಟಿಸಿ ಅದನ್ನು ವಿಶೇಷ ಮೊಹರು ಹಾಕಿ ಕೊಡುತ್ತಾರೆ. 

ಅಂಚೆ ಇಲಾಖೆಯಲ್ಲಿ ಹಲವಾರು ಸೌಲಭ್ಯಗಳಿವೆ. ಈಗಂತೂ ಬ್ಯಾಂಕ್ ರೀತಿಯಲ್ಲೇ ಇದು ಕೆಲಸ ಮಾಡುತ್ತದೆ. ಉಳಿತಾಯ ಖಾತೆ, ಎಫ್ ಡಿ, ಆರ್ ಡಿ, ಸುಕನ್ಯಾ ಸಮೃದ್ಧಿ ಯೋಜನೆ, ಜೀವ ವಿಮೆ ಸೌಲಭ್ಯ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ, ಎಟಿಎಂ ಕಾರ್ಡ್ ಹೀಗೆ ಹತ್ತು ಹಲವಾರು ಯೋಜನೆಗಳು ಇವೆ. ಬಹಳ ಕಡಿಮೆ ವೆಚ್ಚದಲ್ಲಿ ಪಾರ್ಸೆಲ್ ಕಳಿಸುವ ವ್ಯವಸ್ಥೆ ಹಾಗೂ ತ್ವರಿತ ಗತಿಯಲ್ಲಿ ಕಳಿಸುವ (Speed Post) ವ್ಯವಸ್ಥೆ ಇದೆ. 

ಈಗಿನ ಮಕ್ಕಳಿಗೆ ಅಂಚೆ ಇಲಾಖೆ ಹಾಗೂ ವ್ಯವಸ್ಥೆಗಳ ಬಗ್ಗೆ ಆಸಕ್ತಿ ಮೂಡಿಸಲು, ಅವರನ್ನು ಒಮ್ಮೆ ಅಂಚೆ ಇಲಾಖೆಗೆ ಕರೆದುಕೊಂಡು ಹೋಗಿ. ಅವರ ಕೈಯಿಂದಲೇ ಒಂದು ಕಾರ್ಡ್ ಅಥವಾ ಅಂತರ್ದೇಶೀಯ ಪತ್ರ (Inland letter card) ಅನ್ನು ಖರೀದಿಸಿ, ಅವರಿಂದಲೇ ಒಂದು ಕಾಗದ ಬರೆಯಿಸಿ ನಂತರ ಅವರ ಮನೆಯ ವಿಳಾಸವನ್ನು ಬರೆಯಿಸಿ ಅಂಚೆ ಡಬ್ಬಿಗೆ ಹಾಕುವಂತೆ ಹೇಳಿ. ಒಂದೆರಡು ದಿನಗಳಲ್ಲಿ ಅವರೇ ಬರೆದ ಪತ್ರ ಅವರ ಮನೆಯ ವಿಳಾಸಕ್ಕೇ ಬರುತ್ತದೆ. ಅದರಲ್ಲಿರುವ ಅಂಚೆ ಮೊಹರು, ಅಲ್ಲಿ ನಮೂದಾದ ದಿನಾಂಕ, ಬಡವಾಡೆಯಾದ ದಿನಾಂಕ ಎಲ್ಲವನ್ನೂ ತೋರಿಸಿ, ವಿವರಿಸಿ. ಸ್ವಲ್ಪ ಅಂಚೆ ಚೀಟಿಗಳನ್ನು ಖರೀದಿಸಿ ಕೊಡಿ. ಮುಂದೆ ಕಾಗದ ಬರೆಯುವಾಗ ಅಥವಾ ಗ್ರೀಟಿಂಗ್ಸ್ ಕಳಿಸುವಾಗ ಅದನ್ನು ಹಚ್ಚಲು ಹೇಳಿ. ಕ್ರಮೇಣ ಅವರಿಗೆ ಈ ವ್ಯವಸ್ಥೆಯಲ್ಲಿ ಆಸಕ್ತಿ ಕುದುರುತ್ತದೆ. ಹಿಂದಿನ ಸಂಪ್ರದಾಯ ಮತ್ತೆ ಚಾಲನೆಯಲ್ಲಿರುತ್ತದೆ. ನಿಮ್ಮ ಪ್ರೀತಿ ಪಾತ್ರರ ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್' ಯೋಜನೆಯಡಿ ಮುದ್ರಿಸಬಹುದು. ನಿಗದಿತ ಮೊತ್ತವನ್ನು ಪಾವತಿಸಿ ಅವಶ್ಯ ದಾಖಲಾತಿಗಳನ್ನು ನೀಡಿದರೆ ನಿಮ್ಮ ಪ್ರೀತಿ ಪಾತ್ರರ ಅಂಚೆ ಚೀಟಿ ತಯಾರಿಸಿಕೊಡುತ್ತಾರೆ. ಇದನ್ನು ನೀವು ಮಾಮೂಲಿ ಅಂಚೆ ಚೀಟಿಯಂತೆ ಬಳಸಲೂ ಬಹುದು. ಆ ವ್ಯಕ್ತಿಗೆ ಉಡುಗೊರೆಯಾಗಿ ಕೊಡಲೂ ಬಹುದು.

ಶತಮಾನಗಳ ಇತಿಹಾಸವಿರುವ ಅಂಚೆ ಇಲಾಖೆಯನ್ನು ಇನ್ನಷ್ಟು ಉನ್ನತೀಕರಣ ಮಾಡಬೇಕು. ಈ ರಾಕೆಟ್ ಯುಗದಲ್ಲಿ ಮೊದಲಿನಂತೆ ಕಾಗದ ಬರೆದು ಅದನ್ನು ಕಾದು ಕುಳಿತುಕೊಳ್ಳುವುದು ಸ್ವಲ್ಪ ಹಾಸ್ಯಾಸ್ಪದವೆಂದು ಕಂಡರೂ, ಅಂಚೆ ಇಲಾಖೆಯ ಇತರ ಸೇವೆಗಳನ್ನು ಬಳಸಿಕೊಳ್ಳುವತ್ತ ಗಮನ ಹರಿಸಬೇಕು. ವಿವಿಧ ಯೋಜನೆಗಳಲ್ಲಿ ನಿಮ್ಮ ಹಾಗೂ ಕುಟುಂಬದವರನ್ನು ಪಾಲ್ಗೊಳ್ಳುವಂತೆ ಮಾಡಬಹುದು. 

ಅಂಚೆ ದಿನದ ವಿಶೇಷ: ಅಕ್ಟೋಬರ್ ೯ ‘ವಿಶ್ವ ಅಂಚೆ ದಿನ’ ಹಾಗೂ ಅಕ್ಟೋಬರ್ ೧೦ ‘ಭಾರತೀಯ ಅಂಚೆ ದಿನ'. ಈ ಕಾರಣದಿಂದ ಈ ಲೇಖನ. ವಿಶ್ವದ ವಿವಿಧ ಭಾಗಗಳಲ್ಲಿ ಚದುರಿ ಹೋಗಿರುವ ಅಂಚೆ ಸೇವಾ ನೌಕರರನ್ನು ಒಗ್ಗೂಡಿಸುವ ಉದ್ದೇಶದಿಂದ ಅಕ್ಟೋಬರ್ ೯, ೧೮೭೪ರಲ್ಲಿ ‘ಯೂನಿವರ್ಸಲ್ ಪೋಸ್ಟಲ್ ಯೂನಿಯನ್’ (UPU), ಸ್ವಿಡ್ಜರ್ ಲ್ಯಾಂಡ್ ನ ಬರ್ನ್ ಎಂಬಲ್ಲಿ ಸ್ಥಾಪನೆಯಾಯಿತು. ಜಾಗತಿಕ ಅಂಚೆ ಸೇವೆಗೆ ಸಂಬಂಧಿಸಿದಂತೆ ತಾಂತ್ರಿಕ ಸಹಕಾರ, ಅಂಚೆ ಇಲಾಖೆಯಲ್ಲಿ ಸುಧಾರಣೆ, ಅಂಚೆ ಸೇವೆಗಳಲ್ಲಿ ಉನ್ನತೀಕರಣ, ಅಂಚೆ ಇಲಾಖೆಯ ಸೇವೆಗಳಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುವುದು ಹಾಗೂ ನಿಯಮಗಳನ್ನು ರೂಪಿಸುವುದು ಇದರ ಕಾರ್ಯ ಚಟುವಟಿಕೆಗಳಲ್ಲಿ ಪ್ರಮುಖವಾದದ್ದು. ಅಕ್ಟೋಬರ್ ೯, ೧೯೬೯ರಿಂದ 'ವಿಶ್ವ ಅಂಚೆ ದಿನ' ಎಂದು ಆಚರಣೆಯ ಕ್ರಮ ಜಾರಿಗೆ ಬಂತು. ಭಾರತದಲ್ಲೂ ಅಂಚೆ ಸೇವೆಯ ೧೫೦ ವರ್ಷಗಳನ್ನು ಸ್ಮರಿಸಲು ಅಕ್ಟೋಬರ್ ೧೦ ನ್ನು ‘ಭಾರತೀಯ ಅಂಚೆ ದಿನ' ಎಂದು ಆಚರಿಸಲಾಗುತ್ತದೆ.  

ಚಿತ್ರ ಕೃಪೆ: ಅಂತರ್ಜಾಲ ತಾಣ