ಅಂತರಾಷ್ಟ್ರೀಯ π (ಪೈ) ದಿನಾಚರಣೆ

ಮಾರ್ಚ್ 14, ಅಥವಾ 3.14 ಅಮೇರಿಕದವರು ದಿನಾಂಕವನ್ನು ಬರೆಯುವ ರೀತಿಯನ್ನು π ದಿನಾಚರಣೆಯಂದು ಆಚರಿಸಲಾಗುತ್ತದೆ. ಇದನ್ನು ಅಮೇರಿಕದ ಸಾನ್ ಫ್ರಾನ್ಸಿಸ್ಕೋದಲ್ಲಿ 1988 ರಲ್ಲಿ ಆಚರಿಸಲು ಪ್ರಾರಂಭಿಸಲಾಯಿತು.
ಪೈ (Pi) = π ಯು ಗ್ರೀಕ್ ನ ಒಂದು ಅಕ್ಷರ. ಇದು ಗಣಿತದ ಬಹುಮುಖ್ಯವಾದ ಸ್ಥಿರ ಸಂಖ್ಯೆ. ಇದು ಅಭಾಜ್ಯ ಸಂಖ್ಯೆ. ಅಂದರೆ ಇದನ್ನು ಎರಡು ಪೂರ್ಣಾಂಕಗಳ ಪ್ರಮಾಣವಾಗಿ ನಿಖರವಾಗಿ ತೋರಿಸಲಾಗುವುದಿಲ್ಲ. ನಮ್ಮ ಭಾರತದ ಗಣಿತಜ್ಞ ಆರ್ಯಭಟನು π ಸ್ಥಿರ ಸಂಖ್ಯೆಯ ಬೆಲೆಯನ್ನು ನಾಲ್ಕು ದಶಮಾಂಶ ಸ್ಥಾನಗಳವರೆಗೂ ನಿಖರವಾಗಿ ನೀಡಿದ್ದಾನೆ. ಭಾಸ್ಕರಾಚಾರ್ಯರು 9 ದಶಮಾಂಶ ಸ್ಥಾನಗಳವರೆಗೂ ಕೊಟ್ಟಿದ್ದಾರೆ. π = 3.141592654 ಈಗ ಇದನ್ನು ಹಲವು ದಶಮಾಂಶ ಗಳವರೆಗೂ ಗಣಕ ಯಂತ್ರಗಳಿಂದ ಪಡೆಯಬಹುದು.
π = 3.14159265359....
π = 22/7 ಇದು ಇದರ ನಿಖರ ಬೆಲೆಯಲ್ಲ..
π ದಿನವನ್ನು ಆಚರಿಸುವುದಲ್ಲದೆ ಅದರ ಮಹತ್ವವನ್ನು ನಾವು ತಿಳಿದುಕೊಳ್ಳಬೇಕು. ಇದು ಅನೇಕ ವಿಜ್ಞಾನದ ಭಾಗಗಳು ಉಪಯೋಗಿಸಲ್ಪಡುತ್ತದೆ. ಜಾಮಿತಿ ಖಗೋಳಶಾಸ್ತ್ರ ಸಂಖ್ಯಾಶಾಸ್ತ್ರ ಭೌತಶಾಸ್ತ್ರಗಳಲ್ಲಿ ಇದರ ಮಹತ್ವವನ್ನು ಪರಿಗಣಿಸಲಾಗುತ್ತದೆ. ವಕ್ರ ರೇಖೆಯ ಉದ್ದ ಮತ್ತು ವಕ್ರ ರೇಖೆಯನ್ನು ಒಳಗೊಂಡಿರುವ ವಿಸ್ತೀರ್ಣವನ್ನು ಅಳೆಯಲು (ಪೈ) π ಬೇಕೇ ಬೇಕು.
ಈ ದಿನವು ಗಣಿತದ ಶಕ್ತಿಯನ್ನು ತಿಳಿಯಲು ಆಚರಿಸುವ ಸಂಭ್ರಮದ ದಿನವೆಂದು ಪರಿಗಣಿಸಲಾಗುವುದು. ಅಲ್ಲದೆ ನಮ್ಮ ದಿನನಿತ್ಯದ ಜೀವನದಲ್ಲಿ ಗಣಿತ ಮತ್ತು ವಿಜ್ಞಾನದ ಮಹತ್ವವನ್ನು ಅರಿವು ಮೂಡಿಸುವ ದಿನ. ಇದು ಗಣಿತದ ಸೌಂದರ್ಯವನ್ನು ಆನಂದಿಸುವ ದಿನವೂ ಹೌದು.
ಗಣಿತದ ಡಿಮೂವಿರಸ್ ಪ್ರಮೇಯದ ಪ್ರಕಾರ
e i ¢ = cos ¢ + i sin ¢
ಇಲ್ಲಿ
¢ = π ಎಂದು ಬರೆದಾಗ
e i π = cos π + i sin π
e i π = -1 + i 0
e i π = -1
ಇದು ಗಣಿತ ಲೋಕದ ಪ್ರಸಿದ್ಧ ಸುಂದರ ಸಮೀಕರಣ. ಇದು 4 ಸ್ಥಿರಾಂಕಗಳನ್ನು ಹೊಂದಿರುವ Golden equation.
ಗಣಿತವನ್ನು ಚಿತ್ರದೊಂದಿಗೆ ಆನಂದಿಸುವುದಾದರೆ ಅದರ ಅನುಭವವೇ ಬೇರೆ. ನನ್ನ ಮನೆಯ ಗೋಡೆಯಲ್ಲಿ ಹತ್ತು ವರ್ಷಗಳ ಹಿಂದೆಯೇ ಈ ಸಮೀಕರಣವನ್ನು ಆಧ್ಯಾತ್ಮಿಕ ನೆಲಗಟ್ಟಿನಲ್ಲಿ ವರ್ಲಿ ಚಿತ್ರದ ಮೂಲಕ ಬಿಂಬಿಸಿ ಆನಂದಿಸುತ್ತಿದ್ದೇನೆ. ಬರುವ ಅತಿಥಿಗಳಿಗೂ ವಿವರಿಸಿ ತಿಳಿಸುವ ಮುಖೇನ ಹೊಸ ಆಲೋಚನೆಗಳಿಗೆ ಕಾರಣವಾಗುತ್ತಾ ಸಂಭ್ರಮಿಸುತ್ತಿದ್ದೇವೆ. ಈ ಮಾರ್ಚ್ - 14 ದಿನಾಂಕವನ್ನು ನಾವೆಲ್ಲರೂ ಗಣಿತಶಾಸ್ತ್ರದ ಮಹತ್ವದ ಸ್ಥಿರಾಂಕ π ದಿನಾಚರಣೆಯೊಂದಿಗೆ ಸಂಭ್ರಮಿಸೋಣ.
-ಜಯಂತಿ ಪುರಂದರ್, ಧರ್ಮಸ್ಥಳ