ಅಂತರಾಷ್ಟ್ರೀಯ ಯೋಗ ದಿನ ; ನಿತ್ಯ ಯೋಗ ಮಾಡಿ, ಆರೋಗ್ಯವಂತರಾಗಿರಿ
ಯೋಗ ಎನ್ನುವ ಒಂದು ಕಾಯಕವನ್ನು ನಾವು ಅನಾದಿ ಕಾಲದಿಂದಲೂ ಮಾಡುತ್ತಾ ಬಂದಿದ್ದೇವೆ. ಭಾರತೀಯರ ಪಾಲಿಗಂತೂ ಯೋಗ ಎನ್ನುವುದು ಹೊಸ ವಿಚಾರ ಅಲ್ಲವೇ ಅಲ್ಲ. ನಮ್ಮ ಋಷಿ ಮುನಿಗಳ ಕಾಲದಿಂದಲೂ ಆರೋಗ್ಯ ಮತ್ತು ಮಾನಸಿಕ ಧೃಡತೆಗಾಗಿ ನಾವು ಕಾಪಾಡಿಕೊಂಡು ಬಂದ ದಿವ್ಯ ಸಂಜೀವಿನಿ ವಿದ್ಯೆಯೇ ಯೋಗ. ಯೋಗ ಮಾಡಿ ನಿರೋಗಿಯಾಗಿ ಎನ್ನುವುದು ಇತ್ತೀಚಿನ ಮಾತಲ್ಲ. ತಲತಲಾಂತರದಿಂದ ಬಂದ ಒಂದು ಪ್ರಾಚೀನ ವಿದ್ಯೆ ಅದು. ಹಲವಾರು ಆಸನಗಳು. ಯಾವುದೇ ವಸ್ತುಗಳ ಅಗತ್ಯವಿಲ್ಲದೇ ಕೇವಲ ನಮ್ಮ ಶರೀರದ ಅಂಗಗಳನ್ನು ಹಾಗೂ ಉಸಿರಾಟದ ಮೂಲಕ ಸೃಷ್ಟಿಸಿದ ಒಂದು ಅದ್ಭುತ ಕ್ರಿಯೆಯೇ ಯೋಗ ಎಂದರೆ ತಪ್ಪಾಗದು. ಯೋಗದ ಪ್ರತಿಯೊಂದು ಆಸನವೂ ನಮಗೆ ಪ್ರತ್ಯೇಕ ಫಲ ನೀಡುತ್ತದೆ. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ನಮ್ಮ ಶರೀರವನ್ನು ಬೊಜ್ಜಿನಿಂದ ಕಾಪಾಡಿ, ಶರೀರದ ಕಾಂತಿಯನ್ನು ವೃದ್ಧಿಸುತ್ತದೆ.
ನೀವೇ ಗಮನಿಸಿ ನೋಡಿ. ನಮ್ಮ ಪೂರ್ವಜರು ಆರೋಗ್ಯವಂತರಾಗಿದ್ದರು. ಅವರ ಆಹಾರ ಪದ್ಧತಿ ಇದಕ್ಕೆ ಕಾರಣವಿರಬಹುದು. ಅದರೊಂದಿಗೆ ಅವರು ಶ್ರಮಜೀವಿಗಳಾಗಿದ್ದರು. ಪ್ರಾತಃಕಾಲ ಸೂರ್ಯೋದಯಕ್ಕೆ ಮೊದಲೇ ಎದ್ದು, ತಮ್ಮ ತಮ್ಮ ಹೊಲದಲ್ಲಿ ಅಥವಾ ತೋಟದಲ್ಲಿ ನಿತ್ಯ ಕಾಯಕ ಮಾಡುತ್ತಿದ್ದರು. ಇದೊಂದು ಬಗೆಯ ಯೋಗದಂತೆಯೇ. ಏಕೆಂದರೆ ಮೈಮುರಿದು ದುಡಿದರೆ ದೇಹ ದಣಿಯುತ್ತದೆ. ಬೆವರು ಹೊರ ಬರುತ್ತೆ. ಶರೀರ ಸ್ವಸ್ಥವಾಗುತ್ತದೆ. ಇದನ್ನು ಹಿಂದಿನವರು ಅರಿತಿದ್ದರು. ಬೆಳಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡುವುದು ಎಷ್ಟು ಪ್ರಯೋಜನಕಾರಿ ಎಂಬುದನ್ನು ಯಾರು ಅದನ್ನು ಮಾಡುತ್ತಾರೋ ಅವರನ್ನು ಕೇಳಿದರೆ ಖಂಡಿತಾ ಹೇಳುತ್ತಾರೆ. ಪ್ರಾಣಾಯಾಮಗಳು ನಮ್ಮ ಜೀವನವನ್ನು ಇನ್ನಷ್ಟು ಉತ್ತಮ ಗೊಳಿಸಲು ಮಾರ್ಗವಾಗುತ್ತದೆ.
ಜೂನ್ ೨೧ ಅಂತರಾಷ್ಟ್ರೀಯ ಯೋಗ ದಿನ. ೨೦೧೫ರಲ್ಲಿ ವಿಶ್ವ ಸಂಸ್ಥೆ ಈ ಘೋಷಣೆ ಮಾಡಿತು. ಇದಕ್ಕೆ ಕಾರಣೀಭೂತರಾದವರು ನಾವು ಭಾರತೀಯರೇ. ನಮ್ಮ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಸ್ವತಃ ಯೋಗ ಪಟುಗಳು. ಅವರ ಮುತುವರ್ಜಿಯಿಂದ ವಿಶ್ವ ಯೋಗ ದಿನ ನಿರ್ಧಾರವಾಯಿತು. ಯೋಗಕ್ಕೆ ಒಂದು ದಿನ ಆಚರಣೆಗೆ ಮಾತ್ರ. ಆದರೆ ಯೋಗ ಎಂಬುವುದು ನಿರಂತರ ಕ್ರಿಯೆ. ನಮ್ಮ ಯೋಗ ಕ್ರಿಯೆಗಳು ಈ ದಿನ ಘೋಷಣೆಗಳಿಗೆ ಮೊದಲೇ ವಿದೇಶಗಳಲ್ಲಿ ಜನಪ್ರಿಯವಾಗಿದ್ದವು. ನಮ್ಮ ಹಲವಾರು ಯೋಗ ಗುರುಗಳು ವಿದೇಶಕ್ಕೆ ತೆರಳಿ ಯೋಗ ವಿದ್ಯೆಯನ್ನು ಹೇಳಿ ಕೊಡುತ್ತಿದ್ದರು. ವಿದೇಶದಿಂದಲೂ ಲಕ್ಷಾಂತರ ಜನರು ಯೋಗ ವಿದ್ಯೆಯನ್ನು ಅಭ್ಯಸಿಸಲು ಭಾರತಕ್ಕೆ ಪ್ರತೀ ವರ್ಷ ಬರುತ್ತಿದ್ದರು. ಒಂದು ರೀತಿಯಲ್ಲಿ ನೋಡಿದರೆ ನಮಗೇ ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಾವು ಭಾರತೀಯರು ಯೋಗದತ್ತ್ ಮುಖ ಮಾಡಿದ್ದು ಕಮ್ಮಿಯೇ. ನಮಗೇನಿದ್ದರೂ ವಿದೇಶೀ ವ್ಯಾಮೋಹ. ಜಿಮ್ ಮೋಹ. ವಿವಿಧ ಸಾಧನಗಳನ್ನು ಉಪಯೋಗಿಸಿ ಮೈ ದಂಡಿಸುವ ಚಟ. ಆದರೆ ಕಾಲ ಕ್ರಮೇಣ ಯೋಗದ ತತ್ವ, ಆಚರಣೆಗಳು, ಸಾಧನೆಗಳು ಪ್ರಸಕ್ತ ದಿನದ ಪ್ರಮುಖ ಅಂಗಗಳಾಗಿ ಬದಲಾಗಿವೆ.
ಯೋಗ ಎಂದರೇನು? ‘ಯೋಗ' ಎಂಬ ಪದ ಸಂಸ್ಕೃತದ ‘ಯುಚ್' ಎಂಬ ಪದದಿಂದ ಹುಟ್ಟಿಕೊಂಡಿದೆ. ಇದರ ಅರ್ಥ ಸೇರುವುದು ಅಥವಾ ಸಂಯೋಗ. ಆತ್ಮವು ಪರಮಾತ್ಮನೊಡನೆ ಸೇರುವ ಕ್ರಿಯೆಯೇ ಯೋಗ. ಯೋಗವೆಂದರೆ ಶಿಸ್ತು. ಯೋಗದ ಪ್ರಮುಖ ಧ್ಯೇಯ ದೇಹ, ಮನಸ್ಸು ಹಾಗೂ ಆತ್ಮದ ನಡುವೆ ಸಮತೋಲನವನ್ನು ಕಲ್ಪಿಸುವುದು. ಇದರಿಂದ ನಮ್ಮ ದೇಹ, ಮನಸ್ಸು ಎಲ್ಲವೂ ಪರಿಪೂರ್ಣವಾಗುತ್ತದೆ. ನೀವು ನಿರಂತರ ಯೋಗ ಮಾಡುವವರನ್ನು ಗಮನಿಸಿದರೆ ನಿಮಗೇ ಗೊತ್ತಾಗುತ್ತದೆ. ಅವರು ಅತ್ಯಂತ ಸಮಚಿತ್ತರಾಗಿರುತ್ತಾರೆ. ಸಹನಾಶೀಲರೂ, ಆರೋಗ್ಯವಂತರೂ ಆಗಿರುತ್ತಾರೆ. ಜೀವದ ಕಳೆ ಅವರ ಮುಖ ಕಮಲದಲ್ಲೇ ಕಾಣುತ್ತದೆ.
ಯಾರಿಗೆ ಯೋಗ ಸಿದ್ಧಿಸುತ್ತದೆ ಎನ್ನುವುದನ್ನು ಭಗವದ್ಗೀತೆಯ ಈ ಶ್ಲೋಕ ಅತ್ಯಂತ ಸೊಗಸಾಗಿ ಹೇಳುತ್ತದೆ
“ಯುಕ್ತಾಹಾರ ವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು
ಯುಕ್ತ ಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖತಾ”
ಇದರರ್ಥ ‘ಅತಿಯಾಗಿ ತಿನ್ನುವವನಿಗೂ ಅಥವಾ ಏನನ್ನೂ ತಿನ್ನದೇ ಉಪವಾಸ ಇರುವವನಿಗೂ ಯೋಗ ಸಿದ್ಧಿಸುವುದಿಲ್ಲ. ಅತಿ ನಿದ್ರೆ ಅಥವಾ ಜಾಗರಣೆ ಮಾಡುವವರಿಗೂ ಕೂಡಾ ಯೋಗ ಸಿದ್ಧಿಸುವುದಿಲ್ಲ. ಯುಕ್ತ ಆಹಾರ, ಯುಕ್ತ ವಿಚಾರಗಳನ್ನು ಹೊಂದಿರಬೇಕು. ತಂದೆ ತಾಯಿಯವರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಗುರುಹಿರಿಯರ ಸೇವೆಯಂತಹ ಯುಕ್ತ ಚೇಷ್ಟೆಗಳುಳ್ಳ, ಶಾಸ್ತ್ರ ನಿರ್ದೇಶಿತ ಶೌಚ ಸ್ನಾನಾದಿ ಯುಕ್ತ ಕರ್ಮಗಳನ್ನು ಆಚರಿಸುವವರಿಗಷ್ಟೇ ಯೋಗ ಸಿದ್ಧಿಸುತ್ತದೆ'
ಇದರಂತೆ ನಡೆಯುವವರಿಗೆ ಯೋಗದ ಕಲೆ ಸಿದ್ಧಿಸುತ್ತದೆ. ಪತಂಜಲಿಯ ಯೋಗ ಕ್ರಿಯೆಯಲ್ಲಿ ೮ ತಂತ್ರಗಳ ಸಮೂಹವಿದೆ. ಅವೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಹಾಗೂ ಸಮಾಧಿ. ಇದನ್ನು ವಿವರಿಸಲು ಹೋದರೆ ಯಮ ಅಂದರೆ ಐದು ರೀತಿಯ ಪಾಲನೆಗಳು, ನಿಯಮ ಅಂದರೆ ಐದು ರೀತಿಯ ಅನುಷ್ಟಾನಗಳು (ಸಂತುಷ್ಟಿ, ಸಹನೆ, ಅಧ್ಯಯನ, ಶುಧ್ಧತೆ ಹಾಗೂ ದೇವರಲ್ಲಿ ಶರಣಾಗತಿ) ಕುಳಿತುಕೊಳ್ಳುವ ಭಂಗಿಗೆ ಆಸನ ಎನ್ನುತ್ತಾರೆ. ಉಸಿರನ್ನು ನಿಯಂತ್ರಿಸುವ ಯೋಗ ಕಲೆಯೇ ಪ್ರಾಣಾಯಮ, ಬಾಹ್ಯ ಸ್ಪರ್ಷಗಳಿಂದ ನಮ್ಮನ್ನು ದೂರ ಇಡುವಿಕೆಯೇ ಪ್ರತ್ಯಾಹಾರ, ಏಕಾಗ್ರತೆಯನ್ನು ಕೇಂದ್ರೀಕರಿಸುವುದೇ ಧಾರಣ, ಅತೀವ ಚಿಂತನೆಯೇ ಧ್ಯಾನ ಹಾಗೂ ಧ್ಯಾನ ವಸ್ತುವಿನಲ್ಲಿ ತನ್ನ ಪ್ರಜ್ಞೆಯನ್ನು ಲೀನವನ್ನಾಗಿಸುವುದೇ ಸಮಾಧಿ ಅಥವಾ ಪ್ರಾಪಂಚಿಕ ಮೋಹದಿಂದ ಬಿಡುಗಡೆ.
ಇವನ್ನೆಲ್ಲಾ ತಮ್ಮ ತಮ್ಮ ಜೀವನ ಕ್ರಮದಲ್ಲಿ ಅಳವಡಿಸಿಕೊಂಡರೆ ನೀವು ಯೋಗ ಮಾಡಿ ಯೋಗಿಗಳಾಗಬಹುದು. ಹಠಯೋಗಿಗಳು ತಮ್ಮ ಸಾಧನೆಗಾಗಿ ಅತ್ಯಂತ ದುರ್ಗಮವಾದ ಮಾರ್ಗಗಳನ್ನು ಆರಿಸುತ್ತಾರೆ. ಮೈಕೊರೆಯುವ ಚಳಿಯಲ್ಲಿ ಯೋಗ ಮಾಡುವ ಸಿದ್ಧಿಯನ್ನು ದಕ್ಕಿಸಿಕೊಳ್ಳುತ್ತಾರೆ. ಹಲವಾರು ಯೋಗ ಗುರುಗಳು ನಮಗೆ ಪ್ರೇರಕ ಶಕ್ತಿಯಾಗಬಲ್ಲರು. ಅದರಲ್ಲಿ ಖ್ಯಾತನಮರೆಂದರೆ ಪದ್ಮವಿಭೂಷಣ ಬಿ.ಕೆ.ಎಸ್. ಅಯ್ಯಂಗಾರ್. ಇವರ ಅಯ್ಯಂಗಾರೀ ಯೋಗ ತುಂಬಾ ಖ್ಯಾತಿ ಪಡೆದಿದೆ. ಇವರು ಬರೆದ ‘ಲೈಟ್ ಆನ್ ಯೋಗ' ಗ್ರಂಥವು ಯೋಗದ ಭಗವದ್ಗೀತೆ ಎಂದೇ ಖ್ಯಾತಿ ಪಡೆದಿದೆ. ಇವರಲ್ಲದೇ ಮೈಸೂರಿನ ಕೆ.ಪಟ್ಟಾಭಿ ಜೋಯಿಸರು, ಟಿ.ಕೆ.ವಿ.ದೇಶಿಕಾಚಾರ್, ಇಂದ್ರಾ ದೇವಿ ಹೀಗೆ ಹಲವಾರು ಮಂದಿ ಖ್ಯಾತನಾಮರು ಯೋಗವನ್ನು ದೇಶ-ವಿದೇಶಕ್ಕೆ ಪಸರಿಸಿದ್ದಾರೆ.
ಈಗ ಯೋಗವನ್ನು ಇಡೀ ವಿಶ್ವವೇ ಮಾನ್ಯ ಮಾಡಿದೆ. ವಿಶ್ವ ಯೋಗ ದಿನವಾದ ಜೂನ್ ೨೧ ಮಾತ್ರವಲ್ಲ ಪ್ರತೀ ದಿನ ಕ್ರಮ ಬಧ್ಧವಾದ ಯೋಗವು ನಮ್ಮನ್ನು ಇನ್ನಷ್ಟು ರೋಗಗಳಿಂದ ದೂರ ಮಾಡುತ್ತದೆ. ನಮ್ಮ ಆಯಸ್ಸು ವೃದ್ಧಿ ಮಾಡುತ್ತದೆ. ಜೀವ ಚೈತನ್ಯವನ್ನು ಅಧಿಕಗೊಳಿಸುತ್ತದೆ. ಹಾಗಾದರೆ ಇನ್ನೇಕೆ ತಡ, ಕ್ರಮಬಧ್ಧವಾದ ಯೋಗ ಕಲಿಸುವ ಗುರುಗಳನ್ನು ಅವಲಂಬಿಸಿ ಯೋಗ ಕಲಿಯುವ. ದಿನ ನಿತ್ಯ ಯೋಗ ಮಾಡುವ. ಆ ಮೂಲಕ ಆರೋಗ್ಯವಂತ ಭಾರತದ ನಿರ್ಮಾಣಕ್ಕೆ ಮುಂದಡಿಯಿಡೋಣ.
ಚಿತ್ರ ೧: ಯೋಗ ದಿನ, ಚಿತ್ರ ೨: ಖ್ಯಾತ ಯೋಗ ಗುರು ಪದ್ಮವಿಭೂಷಣ ವಿ.ಕೆ.ಎಸ್. ಅಯ್ಯಂಗಾರ್
ಕೃಪೆ: ಅಂತರ್ಜಾಲ ತಾಣ