ಅಂತರ್ಜಾಲದಲ್ಲಿ ಉಗ್ರ ಸಿದ್ಧಾಂತ ಪ್ರಚಾರ : ಆತಂಕದ ವಿದ್ಯಮಾನ
ಸಾಮಾಜಿಕ ಜಾಲತಾಣಗಳಲ್ಲಿ ಜಿಹಾದಿ ಸಂದೇಶಗಳನ್ನು ಹರಿಬಿಟ್ಟು ಯುವಕರನ್ನು ಭಯೋತ್ಪಾದನಾ ಸಂಘಟನೆಗಳಿಗೆ ಸೇರಲು ಪ್ರಚೋದಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಮತ್ತು ಸ್ಥಳೀಯ ಪೋಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶನಿವಾರ ಬೆಂಗಳೂರು ಮತ್ತು ಮುಂಬೈಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬನಾದ ಮೊಹಮ್ಮದ್ ಆರೀಫ್ ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಈತ ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ಆಲ್ ಖೈದಾ ಭಯೋತ್ಪಾದನಾ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ. ಸಂಘಟನೆ ಸೇರುವ ಉದ್ದೇಶದಿಂದ ಇನ್ನು ಕೆಲ ದಿನಗಳಲ್ಲಿ ಸಿರಿಯಾಕ್ಕೆ ತೆರಳಲು ಸಜ್ಜಾಗಿದ್ದ ಎಂದು ತನಿಖಾದಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿವರಗಳು ಬಹಿರಂಗವಾಗಬಹುದಾಗಿದೆ. ಈತ ಮಾತ್ರವಲ್ಲದೆ ಕುಟುಂಬದ ಹಲವಾರು ಮಂದಿ ಸಹ ಉನ್ನತ ವಿದ್ಯಾಭ್ಯಾಸ ಮಾಡಿದವರು. ಇಂಥ ಎಷ್ಟೋ ಉದಾಹರಣೆಗಳು ಈಚಿನ ದಿನಗಳಲ್ಲಿ ವರದಿಯಾಗುತ್ತಿವೆ. ಧರ್ಮದ ಗುಂಗನ್ನು ಹತ್ತಿಸಿಕೊಂಡು ಬೇರೇನನ್ನೂ ಯೋಚಿಸದೆ ಆ ದಿಕ್ಕಿನಲ್ಲಿ ಸಾಗುವವರು ಒಂದು ರೀತಿ. ಇಂಥವರು ಹಾಗಲ್ಲ. ಇವರಿಗೆ ಜಾಗತಿಕ ವಿದ್ಯಮಾನದ ಅರಿವಿರುತ್ತದೆ; ಯಾವ ಸಂಘಟನೆ ಎಂಥ ಕೆಲಸದಲ್ಲಿ ತೊಡಗಿದೆ ಎಂಬುದರ ಚಿತ್ರಣ ಇರುತ್ತದೆ; ಆಯಾ ದೇಶದ ಕಾನೂನು ಮಾಹಿತಿ ಇವರಿಗಿರುತ್ತದೆ. ಹೀಗಿದ್ದರೂ ಭಯೋತ್ಪಾದಕರ ಜಾಲಕ್ಕೆ ಸಿಲುಕುವುದು ಅಚ್ಚರಿ ಮೂಡಿಸುತ್ತದೆ. ಸರ್ಕಾರಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಮತ್ತು ಸುರಕ್ಷಾ ಸಂಸ್ಥೆಗಳ ಕಾರ್ಯಾಚರಣೆಯಿಂದಾಗಿ, ಮೊದಲಿನ ರೀತಿಯಲ್ಲಿ ಈಗ ಸಾಂಪ್ರದಾಯಿಕ ರೀತಿಯಲ್ಲಿ ಭಯೋತ್ಪಾದನೆ ಪ್ರಚಾರ ಮಾಡುವುದು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ, ಸಾಮಾಜಿಕ ಜಾಲತಾಣಗಳನ್ನು ಇದಕ್ಕೆ ವೇದಿಕೆಯಾಗಿ ಬಳಸುವ ಪರಿಪಾಠ ಹೆಚ್ಚಿದೆ. ಇದು ವಿಶ್ವದಾದ್ಯಂತ ಕಂಡುಬರುತ್ತಿರುವ ವಿದ್ಯಮಾನ. ಯುವಜನರು ಇಂಥ ಸಲ್ಲದ ವಿಷಯಗಳಲ್ಲಿ ಮುಂದಾಗುವುದನ್ನು ಬಿಟ್ಟು ಉತ್ತಮ ಜೀವನವನ್ನು ರೂಪಿಸಿಕೊಳ್ಳುವತ್ತ ಗಮನ ಕೊಟ್ಟರೆ ಅವರಿಗೆ ಮಾತ್ರವಲ್ಲ, ಅವರ ಕುಟುಂಬ ಹಾಗೂ ಒಟ್ಟಾರೆಯಾಗಿ ಸಮಾಜಕ್ಕೂ ಹಿತಕರ. ಇವರು ಯಾವ ತಂತ್ರಜ್ಞಾನವನ್ನು ದೇಶವಿರೋಧಿ ಕೆಲಸಕ್ಕೆ ಬಳಸಿಕೊಳ್ಳುತ್ತಾರೋ ಅದೇ ತಂತ್ರಜ್ಞಾನವನ್ನು ದೇಶ ಉಪಯೋಗಿಸಿಕೊಂಡು ಜೀವನ ರೂಪಿಸಿಕೊಳ್ಳುವ ಅವಕಾಶ ಹೇರಳವಾಗಿದೆ; ಅದಕ್ಕೆ ಪ್ರಾದೇಶಿಕ ಪರಿಮಿತಿಯೂ ಇಲ್ಲ. ಉಗ್ರ ನಂಟು, ಪ್ರಚಾರ ಇತ್ಯಾದಿ ಪ್ರಕರಣಗಳಲ್ಲಿ ಸಾವಿರಾರು ಜನರು ಬಂಧಿತರಾಗಿದ್ದು, ಎಷ್ಟೋ ಜನರಿಗೆ ಶಿಕ್ಷೆ ಪ್ರಕಟವಾಗಿದೆ. ಇದು ಉಳಿದವರಿಗೆ ಪಾಠವಾಗಬೇಕು. ಸಮಾಜ ವಿರೋಧಿ ಕೆಲಸ ಮಾಡುವುದು ಎಷ್ಟು ಸುಲಭವೋ, ಅದರಲ್ಲಿ ಸಿಕ್ಕಿಬೀಳುವ ಪ್ರಮಾಣವೂ ಅಷ್ಟೇ ಜಾಸ್ತಿ ಇದೆ ಎಂಬುದನ್ನು ಮರೆಯಬಾರದು. ಏಕೆಂದರೆ, ಇವರು ಯಾವ ತಂತ್ರಜ್ಞಾನ ಬಳಸುತ್ತಾರೋ ಅದೇ ತಂತ್ರಜ್ಞಾನದ ನೆರವಿನಿಂದ ಪೋಲೀಸ್ ಮತ್ತಿತರ ಕಾನೂನುಪಾಲನಾ ಸಂಸ್ಥೆಗಳು ಇಂಥವರ ಹೆಡೆಮುರಿ ಕಟ್ಟಲು ಸಾಧ್ಯವಿದೆ. ಈಚಿನ ದಿನಗಳಲ್ಲಿ ಸೈಬರ್ ಪೋಲೀಸ್ ವಿಭಾಗವನ್ನು ಬಲಗೊಳಿಸಲಾಗುತ್ತಿದ್ದು, ಇದನ್ನು ಇನ್ನಷ್ಟು ಬಲಗೊಳಿಸಿ, ಪರಿಣಿತರನ್ನು ತಯಾರು ಮಾಡುವ ಕೆಲಸ ವೇಗದಲ್ಲಿ ನಡೆಯಬೇಕಿದೆ. ಏಕೆಂದರೆ, ಈ ಕೆಲಸ ದೇಶಗಳ ಗಡಿಗಳನ್ನು ಮೀರಿದ್ದು, ವಿದ್ರೋಹಿಗಳನ್ನು ಹಿಡಿಯುವ ಪ್ರಕ್ರಿಯೆ ಕ್ಲಿಷ್ಟಕರವಾಗಿದ್ದು, ಇದರಲ್ಲಿ ಕಾನೂನು, ರಾಜತಾಂತ್ರಿಕ ಮತ್ತಿತರ ಸಂಗತಿಗಳು ಸೇರಿಕೊಂಡಿರುತ್ತವೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೩-೦೨-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ