ಅಕಾಲಿಕ ಮಾವು ; ಹಿಂದಿನ ಸತ್ಯಗಳೇನು?
ಮೊದಲೆಲ್ಲಾ ಮಾವಿನಹಣ್ಣಿನ ಸೀಸನ್ ಎಂದರೆ ಮಾರ್ಚ್ ತಿಂಗಳಿಂದ ಜೂನ್ ತಿಂಗಳು ಎಂದು ಹೇಳಬಹುದಾಗಿತ್ತು. ಆದರೆ ವಾತಾವರಣದ ಏರುಪೇರು, ಬದಲಾದ ಹವಾಮಾನ, ಅಪರೂಪದ ಕಸಿ ತಳಿಗಳ ಮಾರುಕಟ್ಟೆ, ನೂತನ ತಂತ್ರಜ್ಞಾನಗಳ ಕಾರಣದಿಂದಾಗಿ ಈಗ ಅಕಾಲಿಕ ಮಾವಿನದ್ದೇ ಸುದ್ದಿ. ಮಾರುಕಟ್ಟೆಯಲ್ಲಿ ಅಕಾಲಿಕವಾಗಿ ತೋತಾಪುರಿ, ಆಪೂಸು ಮಾವಿನಕಾಯಿಗಳು ಲಭ್ಯವಾದರೆ ಕಿಲೋ ಒಂದಕ್ಕೆ ರೂ.೧೨೫ ಕ್ಕೂ ಹೆಚ್ಚಿನ ಬೆಲೆಗೆ ಮಾರಲ್ಪಡುತ್ತದೆ. ಅದೇ ಈಗ ತೋತಾಪುರಿ ದರ ೩೦ ರೂಪಾಯಿಗೂ ಕಡಿಮೆ ಇದೆ. ಯಾವುದೇ ಹಣ್ಣು ಹಂಪಲು, ತರಕಾರಿ ಅಕಾಲದಲ್ಲಿ ಬೆಳೆದರೆ ಅಧಿಕ ಲಾಭ. ಮಾವು ಸಹ ಹಾಗೆಯೇ. ಕರಾವಳಿಯ ಭಟ್ಕಳದಿಂದ ಮತ್ತು ಕೋಲಾರ ಕಡೆಯಿಂದ ಅಕಾಲಿಕವಾಗಿ ಮಾವಿನ ಕಾಯಿ ಗರಿಷ್ಟ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.
ಮಾವು ಒಂದು ಋತುಮಾನದ ಹಣ್ಣಿನ ಬೆಳೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಚಾರ. ಬೇಸಿಗೆ ಕಾಲ ಮಾರ್ಚ್ ನಿಂದ ಜೂನ್ ತನಕ ಮಾವಿನ ಪ್ರಮುಖ ಸೀಸನ್. ಈಗ ತಂತ್ರಜ್ಞಾನ ಬದಲಾಗಿದ್ದು, ಮಾವು ಯಾವಾಗಬೇಕಾದರೂ ಸಿಗುವಂತಾಗಿದೆ. ಯಾವ ಸೀಸನ್ ನಲ್ಲೂ ಮಾವಿನ ಮರಗಳಲ್ಲಿ ಹೂ ಬರಿಸಿ ಕಾಯಿ ಪಡೆಯಬಹುದು. ಮಾವಿನ ಕಾಯಿಯ ನೈಜ ಸೀಸನ್ ಅಲ್ಲದ ಸಮಯದಲ್ಲಿ ಫಲ ಸಿಕ್ಕರೆ ಅದಕ್ಕೆ ಬೇಡಿಕೆಯೂ ಹೆಚ್ಚು ಬೆಲೆಯೂ ಹೆಚ್ಚು ಸಿಗುತ್ತದೆ. ಇತ್ತೀಚೆಗಿನ ಕೆಲವು ವರ್ಷಗಳಿಂದ ಅದರಲ್ಲೂ ಕೊರೋನಾ ಸಮಯದ ತರುವಾಯ ಕೆಲವು ಕಡೆ ಮಾವು ಬೆಳೆಗಾರರು ಅಕಾಲದಲ್ಲಿ ಮಾವು ಉತ್ಪಾದನೆಗೆ ಪ್ರಾರಂಭಿಸಿದ್ದಾರೆ.
ಯಾವಾಗ ಮಾವಿನ ಕಾಯಿಗೆ ಬೇಡಿಕೆ?: ಮಾವು ಏನಾದರೂ ಸಪ್ಟೆಂಬರ್ ನಿಂದ ಮಾರ್ಚ್ ತನಕ ಲಭ್ಯವಾಯಿತೆಂದಾದರೆ ನಾವು ಅಪೇಕ್ಷಿಸಿದ ಬೆಲೆ ಪಡೆಯಬಹುದು. ಈ ಸಮಯದಲ್ಲಿ ಮಾವು ಅಪರೂಪದ ವಸ್ತುವಾದ ಕಾರಣ ಜನ ಎಷ್ಟೇ ಬೆಲೆಯಾದರೂ ಕೊಟ್ಟು ಖರೀದಿ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕಾರಣ ರೈತರಿಗೂ ಹೆಚ್ಚು ಬೆಲೆ ಸಿಗುತ್ತದೆ. ಈ ಸಮಯದಲ್ಲಿ ಹಣ್ಣು ಮಾವಿಗಿಂತಲೂ ಮಾವಿನಕಾಯಿಗೆ ಬೇಡಿಕೆ ಜಾಸ್ತಿ. ಹಾಗಾಗಿ ಬೆಳೆಗಾರರು ಕಾಯಿ ಬಲಿಯುವ ತನಕ ಕಾಯಬೇಕಾಗಿಲ್ಲ. ಎಳೆಯದಿರುವಾಗಲೇ ಕೊಯಿಲು ಮಾಡಿ ಮಾರಾಟ ಮಾಡಬಹುದು. ಆಗ ಇದಕ್ಕೆ ಕಿಲೋ ೧೨೫-೧೫೦ ತನಕ ಬೆಲೆ ಇರುತ್ತದೆ.
ಅಕಾಲಿಕ ಮಾವಿನ ಫಸಲು ಪಡೆಯುವವರು ಹೆಚ್ಚಾಗುತ್ತಿದ್ದಾರೆ: ಮಾವಿನ ಆಫ್ ಸೀಸನ್ ಕಾಲವೇ? ಈಗ ಹೇಗೆ ಮಾವಿನ ಫಲ ಪಡೆಯುವುದು? ಇದು ಅಸಾಧ್ಯವಲ್ಲ. ಕಳೆದ ೫ ವರ್ಷಕ್ಕೆ ಹಿಂದೆ ನಿಪ್ಪಾಣಿಯ ಓರ್ವ ಕೃಷಿಕ ಮಹಾದೇವ ಶಿಂಧೆ ಎಂಬವರು ಜನವರಿಯಲ್ಲಿ ತನ್ನ ಮಾವಿನ ತೋಟದಲ್ಲಿ ಫಸಲನ್ನು ಪಡೆದ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಅವರನ್ನು ಸಂಪರ್ಕಿಸಿದಾಗ ವಿಷಯ ಸತ್ಯವೆಂದು ತಿಳಿದು ಬಂತು.
ಆಫ್ ಸೀಸನ್ ನಲ್ಲಿ ಬೆಳೆದ ತೋತಾಪುರಿ ಮಾವು: ಮಾವಿನ ಮರದಲ್ಲಿ ಅಕಾಲದಲ್ಲೂ ಫಸಲು ಪಡೆಯಬಹುದು. ರತ್ನಗಿರಿ, ವೆಂಗುರ್ಲಾ, ದಾಪೋಲಿ ಮುಂತಾದ ಕಡೆಯ ಮಾವು ಬೆಳೆಗಾರರ ಹೊಲದಲ್ಲಿ, ಮಾರ್ಚ್ ತಿಂಗಳಿಗೆ ಹಣ್ಣು ದೊರೆಯುತ್ತದೆ. ಮಾರುಕಟ್ಟೆಯಲ್ಲಿ ಬೇರೆ ಮಾವು ಬರುವುದಕ್ಕೆ ಮುಂಚೆ ಇವರ ಮಾವು ಬಂದಾಗಿರುತ್ತದೆ. ಇದು ಮಾವನ್ನು ಸ್ವಲ್ಪ ಬೇಗ ಪಡೆಯುವ ತಾಂತ್ರಿಕತೆಯನ್ನು ಅಳವಡಿಸಿಕೊಂಡ ಕಾರಣ.
ಇಂದು ನಮ್ಮಲ್ಲಿರುವ ತಾಂತ್ರಿಕತೆಯಲ್ಲಿ ಫಸಲು ಪಡೆಯಲು ಅದರದ್ದೇ ಆದ ಸೀಸನ್ ಎಂಬುದು ಅಗತ್ಯವೇ ಇಲ್ಲ. ಸೂಕ್ತ ತಂತ್ರಜ್ಞಾನ ಬಳಸಿಕೊಂಡರೆ ವರ್ಷದ ಎಲ್ಲಾ ಕಾಲದಲ್ಲೂ ಮಾವು ಉತ್ಪಾದನೆ ಮಾಡಬಹುದು. ಮಾರುಕಟ್ಟೆಯಲ್ಲಿ ಈಗ ಯಾವಾಗ ಬೇಕಾದರೂ ಮಾವಿನ ಕಾಯಿ- ಹಣ್ಣು ದೊರೆಯುವುದು ಇದೇ ಕಾರಣಕ್ಕೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಚಿತ್ರಗಳನ್ನು ಕಂಡಿರಬಹುದು. ಅದು ಅಸಾಧ್ಯವಾದ ಸಂಗತಿಯೇನಲ್ಲ.
ಮಾವಿನಲ್ಲಿ ಹೂ ಬಿಡುವಿಕೆ: ಮಾವು ಹೂ ಬಿಡುವುದು ಹವಾಮಾನದ ಅನುಕೂಲತೆಯನ್ನು ಆಧರಿಸಿ. ಶುಷ್ಕ ಹವೆ ಹೂವು ಬರಲು ಪ್ರೇರಣೆ. ಸಾಧಾರಣವಾಗಿ ಚಳಿಗಾಲದಲ್ಲಿ ಹೂ ಬಿಡುತ್ತದೆ. ಕೆಲವು ಚಳಿಗೂ ಮುಂಚೆ ಹೂವು ಬಿಟ್ಟು ನವೆಂಬರ್ ನಿಂದ ಫೆಬ್ರವರಿವರೆಗೆ ಹಣ್ಣುಗಳನ್ನು ಕೊಡುತ್ತದೆ. ಹೂ ಬಿಡಬೇಕಾದರೆ ಒಂದು ರೀತಿಯಾ ಸ್ಟ್ರೆಸ್ (ಒತ್ತಡ) ಆಗಬೇಕು.
ಈಗ ಈ ರೀತಿಯಲ್ಲಿ ಫಸಲನ್ನು ತಮಿಳುನಾಡಿನ ಕನ್ಯಾಕುಮಾರಿ, ತಿರುನಲ್ವೇಲಿ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ತೂತುಕುಡಿ, ಥೇನಿ, ಕೃಷ್ಣಗಿರಿ, ಧರ್ಮಪುರಿ ಮತ್ತು ದಿಂಡಿಗಲ್ ನಲ್ಲಿ, ಮಹಾರಾಷ್ಟ್ರದ ಕೆಲವು ಕಡೆ ಹಾಗೂ ಗುಜರಾತ್ ನಲ್ಲಿ ಅಕಾಲಿಕವಾಗಿ ಮಾವು ಬೆಳೆಯಲಾಗುತ್ತದೆ.
ನಮ್ಮ ಸುತ್ತಮುತ್ತಲೂ ಕೆಲವು ಮರಗಳು ಬೇಗ ಹೂವು ಬಿಡುವುದನ್ನು ಗಮನಿಸಿರಬಹುದು. ಆಲ್ ಸೀಸನ್ (ಸರ್ವ ಋತು) ಮಾವನ್ನೂ ನೀವು ಕೇಳಿರಬಹುದು. ಕೆಲವು ತಳಿ ಗುಣದಲ್ಲಿ ಸಹಜವಾಗಿ ಹೂ ಬಿಟ್ಟರೆ ಕೆಲವು ಹೂ ಬರಲು ಪ್ರೇರೇಪಿಸಿ ಬರಿಸಲಾಗುತ್ತದೆ.
ಫಸಲು ಪಡೆಯುವುದು ಹೇಗೆ?: ಮಾವಿನಲ್ಲಿ ಆಕಾಲಿಕ ಫಸಲನ್ನು ಪಡೆಯಲು ಕೆಲವು ಉಪಚಾರಗಳನ್ನು ಮಾಡಬೇಕಾಗುತ್ತದೆ. ಹೂ ಬಿಡುವುದನ್ನು ಪ್ರಚೋದಿಸಲು ಪ್ಯಾಕ್ಲೋಬ್ಯುಟ್ರಜಾಲ್ ( ಕಲ್ಟಾರ್) ಅನ್ನು ಹೆಚ್ಚಾಗಿ ಬಳಸುತ್ತಾರೆ. ಮರವನ್ನು ಮುಂಚಿತವಾಗಿ ಚೆನ್ನಾಗಿ ಗೊಬ್ಬರ ಕೊಟ್ಟು ಆರೋಗ್ಯವಾಗಿ ಬೆಳೆಸಿರಬೇಕು. ಯಾವಾಗ ಫಸಲು ಬೇಕು ಆ ಸಮಯಕ್ಕೆ ೬ ತಿಂಗಳ ಮುಂಚೆ ಈ ರಾಸಾಯನಿಕದ ಉಪಚಾರ ಮಾಡಬೇಕು. ಮಾವಿನ ಮರದ ಗೆಲ್ಲುಗಳ ವೈಶಾಲ್ಯತೆಗೆ ಅನುಗುಣವಾಗಿ (ನೆತ್ತಿಯ ವಿಸ್ತಾರಕ್ಕೆ ಅನುಗುಣವಾಗಿ) ನೆಲವನ್ನು ಸಣ್ಣಗೆ ಗೀರಿ ದ್ರವೀಕರಿಸಿದ (೧ ಲೀ ನೀರಿಗೆ ೩-೫ ಮಿಲಿ ಲೀಟರ್ ಪ್ರಚೋದಕವನ್ನು ಸೇರಿಸಿದ ನೀರನ್ನು ಮಣ್ಣಿಗೆ ಹಾಕಿ ಮಣ್ಣು ಮುಚ್ಚಬೇಕು. ಒಂದು 15 ವರ್ಷ ಪ್ರಾಯದ ಮರಕ್ಕೆ ೫ ಮಿಲಿ ಗಿಂತ ಹೆಚ್ಚು ಕಲ್ಟಾರ್ ಬಳಸಬಾರದು. ಅದು ಬೇರಿನ ಮೂಲಕ ಹೀರಿಕೊಂಡು ಮರಕ್ಕೆ ಕೃತಕ ಹೂ ಪ್ರಚೋದಕವಾಗಿ ಕೆಲಸ ಮಾಡುತ್ತದೆ. ನಂತರ ನೀರುಣಿಸಬೇಕು. ನೀರಿನೊಂದಿಗೆ ಬೇರುಗಳಿಗೆ ಇದು ಚೆನ್ನಾಗಿ ಲಭ್ಯವಾಗುತ್ತದೆ. ಮರಕ್ಕೆ ಕೃತಕ ಸ್ಟ್ರೆಸ್ ದೊರೆತು ಹೂವು ಬಿಡಲು ಪ್ರೇರಣೆಯುಂಟಾಗುತ್ತದೆ.
ಅಕಾಲಿಕ ಹೂ ಬರಿಸಲು ಕೆಲವು ಪೋಷಕಗಳೂ ನೆರವಾಗುತ್ತವೆ. ಶೇ. ೩ರ ಪೊಟ್ಯಾಶಿಯಂ ನೈಟ್ರೇಟ್ ಅನ್ನು ಸಿಂಪಡಿಸುವುದರಿಂದಲೂ ಹೂ ಬರಲು ಪ್ರಚೋದನೆ ಆಗುತ್ತದೆ. ಮೋನೋ ಪೊಟಾಶಿಯಂ ಫೋಸ್ಫೇಟ್ ೧೦೦ ಲೀ. ನೀರಿಗೆ ೨ ಕಿಲೋ ಪ್ರಮಾಣದಲ್ಲಿ ಸೇರಿಸಿ ಸಿಂಪಡಿಸಿದರೆ ಹೂ ಪ್ರಚೋದನೆ ಆಗುತ್ತದೆ. ಇದಲ್ಲದೆ ಮೋನೋ ಅಮೋನಿಯಂ ಫೋಸ್ಫೇಟ್ ಸಹ ಕೆಲಸ ಮಾಡುತ್ತದೆ.
ಎಚ್ಚರಿಕೆ:
* ಯಾವುದೇ ಕಾರಣಕ್ಕೆ ಕಲ್ಟಾರ್ ಹೆಚ್ಚು ಬಳಕೆ ಮಾಡಬಾರದು.
* ಈ ರೀತಿ ಫಸಲು ಪಡೆಯುವಾಗ ಕೆಲವು ಕೀಟ – ರೋಗಗಳ ತೊಂದರೆ ಹೆಚ್ಚು.
* ಕಾಯಿ ಉದುರುವಿಕೆ ಪ್ರಮಾಣ ಹೆಚ್ಚು. ಅದಕ್ಕೆ ಕೆಲವು ಅಗತ್ಯ ಉಪಚಾರ ಮಾಡಬೇಕಾಗುತ್ತದೆ.
* ಸೀಸನ್ ನಲ್ಲಿ ಬೆಳೆಯಲು ಮಾಡುವ ಖರ್ಚಿಗಿಂತ ಹೆಚ್ಚು ಖರ್ಚು ತಗಲುತ್ತದೆ. ಅದನ್ನು ಸೂಕ್ತ ವಿಧಾನಗಳಿಂದ ನಿಯಂತ್ರಣ ಮಾಡಿಕೊಳ್ಳಬೇಕು.
ಅಕಾಲದಲ್ಲಿ ಮಾವು ಬೆಳೆಯಲು ಸೂಕ್ತ ತಳಿಗಳು: ಬೆಂಗಳೂರು, ಬಂಗನಪಲ್ಲಿ, ದಿಲ್ ಪಸಂದ್, ಹಿಮಾ ಪಸಂದ್, ಜಹಂಗೀರ್, ಕಾಲಪ್ಪಾಡ್, ನಂದನ, ನೀಲಂ, ಪಂಚವರನಂ, ಸುರನಗುಡಿ, ಸ್ವರನ್ ಜಹಾಂಗೀರ್, ವೆಟ್ಟಾಯನ್ ಸುರನಗುಡಿ, ಸ್ವರ್ಣ ರೇಖಾ, ರುಮಾನಿ, ತಿರುವರಂಬು ಅಲ್ಲದೆ ಕೆಲವು ಸ್ಥಳೀಯ ತಳಿಗಳು ಅಕಾಲದಲ್ಲಿ ಹೂ ಬಿಟ್ಟು ಕಾಯಿಯಾಗುತ್ತವೆ.
ಭೂ ಪ್ರಕೃತಿಯೂ ಅನುಕೂಲಕರವಾಗಿರಬೇಕು: ಮಣ್ಣು ಬೇಗ ಒಣಗುವಂತಹ ಭೂಮಿಯಲ್ಲಿ ಹೂ ಪ್ರಚೋದನೆ ಮಾಡುವುದು ಸುಲಭ. ಜಂಬಿಟ್ಟಿಗೆ ಕಲ್ಲುಗಳಿರುವ ಮಣ್ಣಿನಲ್ಲಿ ತೇವಾಂಶ ಕಡಿಮೆ ಇರುತ್ತದೆ. ಅಂತಹ ಕಡೆ ಮಾವು ಹೂ ಬರಲು ಹೆಚ್ಚು ಅನುಕೂಲ. ಮಳೆ ಕಡಿಮೆ ಇರುವ ಕಡೆ ಹೂ ಬರಿಸುವುದು ಸುಲಭ. ಗುಡ್ಡ ಪ್ರದೇಶದಲ್ಲಿ ಮಣ್ಣು ಏರಿ ಮಾಡಿ ಹಾಕಿ ನೆಟ್ಟಕಡೆ ಮಳೆ ಕಡಿಮೆಯಾದಾಗ ಮೇಲಿನ ಬೇರುಗಳು ಸಹಜವಾಗಿ ಸ್ತ್ರೆಸ್ ಗೆ ಒಳಗಾಗುತ್ತದೆ. ಅಂತವುಗಳು ಬೇಗ ಹೂ ಬಿಡುತ್ತವೆ, ಪ್ರತೀ ವರ್ಷವೂ ಹೂ ಬಿಡುತ್ತವೆ. ಇಂತಹ ಕಡೆ ಹಾರ್ಮೋನು ಉಪಚಾರವನ್ನೂ ಮಾಡಿದರೆ ಚೆನ್ನಾಗಿ ಸ್ಪಂದಿಸುತ್ತದೆ.
ನಾವೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ವೀಡಿಯೋಗಳನ್ನು ನೋಡುತ್ತೇವೆ. ಕೆಲವು ಪಾಲಿ ಹೌಸ್ ನಲ್ಲೂ ಮಾವು ಬೆಳೆದದ್ದನ್ನು ಕಂಡಿದ್ದೇವೆ. ಇದೆಲ್ಲಾ ಅಸಾಧ್ಯವಾದುದಲ್ಲ. ವಾಣಿಜ್ಯಿಕ ಬೇಸಾಯ ಕ್ರಮ ಎಂದರೆ ಹೀಗೆ. ಕೆಲವು ಮೂಲಗಳ ಪ್ರಕಾರ ಚೈನಾ ಥೈವಾನ್ ದೇಶದ ರೈತರು ಇಂತಹ ವಿಷಯದಲ್ಲಿ ಮೇಲುಗೈ ಅಂತೆ. ಕೊರೋನಾ ಬಂದ ವರ್ಷ ಮಾವು ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಅದರ ಮುಂದಿನ ವರ್ಷ ಕೋಲಾರದ ಕೆಲವು ಮಾವು ಬೆಳೆಗಾರರು ಅಕಾಲದಲ್ಲಿ ಮಾವು ಉತ್ಪಾದಿಸಿದ್ದಾರೆ. ೨೦೨೦ರ ಜನವರಿಯಲ್ಲಿ ಕೋಲಾರದ ಸಕ್ಕರೆ ಮಾವು ಹಾಗೂ ಕೆಲವು ಇತರ ಮಾವು ಮಾರುಕಟ್ಟೆಗೆ ಬಂದಿತ್ತು.
ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ