ಅಕ್ರಮವಾಸಿಗಳ ಮೇಲೆ ನಿಗಾ ಅಗತ್ಯ

ಅಕ್ರಮವಾಸಿಗಳ ಮೇಲೆ ನಿಗಾ ಅಗತ್ಯ

ಬೆಂಗಳೂರಿನ ಜನಸಂಖ್ಯೆ ಹೆಚ್ಚುತ್ತಿದೆ. ನಗರದ ಸದ್ಯದ ಜನಸಂಖ್ಯೆ ೧.೨೦ ಕೋಟಿ ಮೀರಿದೆ ಎಂದು ಅಂದಾಜಿಸಲಾಗಿದೆ. ಅಂದರೆ ರಾಜ್ಯದ ಪ್ರತೀ ೬ ಜನರಲ್ಲಿ ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದಾಯಿತು. ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಬಹುಪಾಲು ಮಂದಿ ಅನ್ಯರಾಜ್ಯಗಳಿಂದ ಕೆಲಸ ಆರಿಸಿಕೊಂಡು ಬಂದವರು. ಭಾರತದ ಯಾವುದೇ ಭಾಗದ ಜನರು ದೇಶದ ಯಾವುದೇ ಭಾಗದಲ್ಲಿ ನೆಲೆ ಕಂಡುಕೊಳ್ಳಲು ನಮ್ಮ ಸಂವಿಧಾನವೇ ಅವಕಾಶ ಮಾಡಿಕೊಟ್ಟಿದೆ. ಆದರೆ ಅನ್ಯ ದೇಶಗಳಿಂದ ಇಲ್ಲಿಗೆ ಬಂದು ಅಕ್ರಮವಾಗಿ ವಾಸ್ತವ್ಯ ಹೂಡುವುದನ್ನು ತಡೆಯಲೇಬೇಕಿದೆ. ನಗರದಲ್ಲಿ ಒಂದೇ ವಾರದಲ್ಲಿ ಅಕ್ರಮ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಏಳೆಂಟು ಪ್ರಜೆಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಕಳೆದ ೬ ವರ್ಷಗಳಿಂದ ನಕಲಿ ಗುರುತಿನ ಚೀಟಿಯೊಂದಿಗೆ ಇಲ್ಲಿ ನೆಲೆಸಿದ್ದರು. ಪ್ರಾಥಮಿಕ ವಿಚಾರಣೆಯ ಪ್ರಕಾರ, ಜಿಗಣಿಯಲ್ಲಿ ವಾಸವಿದ್ದ ಪಾಕ್ ಪ್ರಜೆಯ ಪತ್ನಿ ಬಾಂಗ್ಲಾ ಪ್ರಜೆಯಾಗಿದ್ದು ಇವರು ಢಾಕಾದಲ್ಲಿ ವಿವಾಹವಾಗಿದ್ದರು. 

೨೦೧೪ರಲ್ಲಿ ದೆಹಲಿಗೆ ಬಂದಿದ್ದ ದಂಪತಿ, ನಂತರ ೨೦೧೮ರಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಇನ್ನಿಬ್ಬರು ಆತನ ಸೋದರ ಅಳಿಯಂದಿರು, ಇದೀಗ ಮೂವರನ್ನು ಬಂಧಿಸಲಾಗಿದೆ. ಪೋಲೀಸ್ ಮೂಲಗಳ ಪ್ರಕಾರ ಪಾಕಿಸ್ತಾನದಿಂದ ೧೫ಕ್ಕೂ ಹೆಚ್ಚು ಮಂದಿ ಭಾರತಕ್ಕೆ ಅಕ್ರಮವಾಗಿ ನುಸುಳಿ ಬಂದಿದ್ದಾರೆ. ಇವರಲ್ಲಿ ಹೆಚ್ಚಿನವರು ಹಿಂದೂ ಹೆಸರಿನೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮತದಾರರ ಚೀಟಿ ಹೊಂದಿದ್ದಾರೆ. ‘ಪ್ರತಿದಿನ ನಾವು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರನ್ನು ಹಿಡಿದು ವಾಪಾಸ್ ಕಳುಹಿಸುತ್ತಿದ್ದೇವೆ. ಅವರು ಬರುತ್ತಲೇ ಇರುತ್ತಾರೆ. ಬಾಂಗ್ಲಾದೇಶದ ಗಡಿಯನ್ನು ಬಿಗಿಗೊಳಿಸಬೇಕು' ಎಂದು ಗೃಹಸಚಿವ ಪರಮೇಶ್ವರ ಹೇಳಿದ್ದಾರೆ. ಕಳೆದ ತಿಂಗಳು ಬೆಂಗಳೂರಿನ ಸರ್ಜಾಪುರದಲ್ಲಿರುವ ಖಾಸಗಿ ಕಾಲೇಜು ಮೈದಾನದಲ್ಲಿ ಅಸ್ಸಾಂ ರಾಜ್ಯ ಬುಡಕಟ್ಟು ಜನರ ಸಂಸ್ಕೃತಿ ಹಬ್ಬ ಆಚರಣೆ ವೇಳೆ ಪೋಲೀಸರ ಮೇಲೆ ಹಲ್ಲೆ ನಡೆದಿತ್ತು. ದೇಶದ ಸುರಕ್ಷತೆ ದೃಷ್ಟಿಯಿಂದ ಈ ಬಗ್ಗೆ ನಿಗಾ ವಹಿಸಲೇಬೇಕು.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೦೪-೧೦-೨೦೨೪

ಚಿತ್ರ ಕೃಪೆ: ಇಂಟರ್ನೆಟ್ ತಾಣ