ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎರಡನೇ ಕಂತು)
ಇಲ್ಲಿಯೂ ನೋಡಿ.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)
ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ):
ಸ್ವಾತಂತ್ರ್ಯಾನಂತರ ಆಧುನಿಕ ಭಾರತದಲ್ಲಿ ವೈಜ್ಞಾನಿಕ ವಿಚಾರಧಾರೆಯನ್ನು ಜನಪ್ರಿಯಗೊಳಿಸುವುದು ಪಂಡಿತ ಜವಾಹರಲಾಲ್ ನೆಹರೂ ಅವರ ಆಶಯವಾಗಿತ್ತು. ಆ ನಿಟ್ಟಿನಲ್ಲಿ ಅವರು ಕೈಕೊಂಡ ಬೃಹತ್ ಯೋಜನೆಯ ಅಂಗವಾಗಿ ವೈದ್ಯಕೀಯ ಸೇವೆಗಳಲ್ಲಿ ಅತ್ಯುನ್ನತ ಗುಣಮಟ್ಟವನ್ನು ಸಾಧಿಸಲು 'ಜೀವಕೇಂದ್ರ'ವಾಗಿ ಕೆಲಸ ಮಾಡಬೇಕೆಂಬ ಆಶಯದೊಂದಿಗೆ ಅಭಾವೈವಿಸಂ ಉದಯವಾಯಿತು. ಇದನ್ನು ಪ್ರಾರಂಭಿಸಲು ನೆಹರೂರವರಿಗೆ ಸಹಾಯ ಮಾಡಿದವರು ಅವರ ಸಂಪುಟದಲ್ಲಿ ಆರೋಗ್ಯ ಸಚಿವೆಯಾಗಿದ್ದ ರಾಜಕುಮಾರಿ ಅಮೃತ್ ಕೌರ್ ಅವರು. ಹತ್ತೊಂಭತ್ತು ನೂರ ನಲ್ವತ್ತಾರರಲ್ಲೇ, ಆರೋಗ್ಯ ಸಮೀಕ್ಷೆ ಮತ್ತು ಸುಧಾರಣೆ ಮಂಡಳಿಯ ಅಧ್ಯಕ್ಷರಾಗಿದ್ದ ಸರ್ ಜೋಸೆಫ್ ಭೋರೆಯವರು ಹೆಚ್ಚುತ್ತಿರುವ ಭಾರತದ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು, ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಮೇಲ್ಮಟ್ಟದ ಪರಿಣತಿಯನ್ನು ಹೊಂದಿರುವ ಪಡೆಯೊಂದನ್ನು ಹುಟ್ಟುಹಾಕಬಲ್ಲ ಸಾಮರ್ಥ್ಯವುಳ್ಳ ಒಂದು ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಯ ಅಗತ್ಯದ ಕುರಿತು ಅಂದಿನ ಸರಕಾರಕ್ಕೆ ವರದಿ ಒಪ್ಪಿಸಿದ್ದರು. ಹೀಗೆ ನೆಹರು, ರಾಜಕುಮಾರಿ ಅಮೃತ್ ಕೌರ್ ಅವರುಗಳ ಕನಸು, ಭೋರೆ ವರದಿಯ ಬೆಂಬಲ ಇವುಗಳ ಜೊತೆಗೆ ಕೊಲಂಬೊ ಯೋಜನೆಯಡಿ ನ್ಯೂಜಿಲ್ಯಾಂಡ್ ಸರಕಾರದಿಂದ ಸಿಕ್ಕ ಕೊಡುಗೈ ದಾನ ಎಲ್ಲ ಬೆರೆತು ಹತ್ತೊಂಭತ್ತು ನೂರ ಐವತ್ತೆರಡರಲ್ಲಿ ಅಭಾವೈವಿಸಂದ ಶಂಕುಸ್ಥಾಪನೆಯಾಯ್ತು. ಸಾವಿರದ ಒಂಭೈನೂರ ಐವತ್ತಾರರಲ್ಲಿ ಲೋಕಸಭೆಯ ಅಧಿನಿಯಮದಂತೆ ಒಂದು ಸ್ವಾಯತ್ತ ಸಂಸ್ಥೆಯಾಗಿ (an autonomous institution through an Act of Parliament) ಅಭಾವೈವಿಸಂ ಜನ್ಮ ತಾಳಿತು.
ಸರಿ, ಈಗ ವಿಷಯಾಂತರಕ್ಕೆ ಅಪ್ಪಣೆ ನೀಡಿ. ಹಿಂದಿನ ಸರಕಾರದಲ್ಲಿ ಮಾನವ ಸಂಪನ್ಮೂಲ ಮಂತ್ರಿಗಳಾಗಿದ್ದ ಶ್ರೀ ಅರ್ಜುನ್ ಸಿಂಗ್ ಅವರು ಮೊನ್ನೆ ಅಭಾವೈವಿಸಂದಲ್ಲಿ ಇಲಾಜು ಪಡೆದು ಗುಣಮುಖರಾಗಿ ಮರಳಿದ್ದಾರೆ. (ನಾನದನ್ನು ಓದಿದ್ದು ಇಂಟರ್ನೆಟ್ನಲ್ಲಿ; ಒಂದಿಷ್ಟು ಕಾರುಗಳು ನಿಂತಿರೋದನ್ನ ನೋಡಿದ್ದೆ, ಯಾವ ವಿಐಪಿ ಬಂದಿದ್ದಾನೆಂದು ವಿಚಾರಿಸಿರಲಿಲ್ಲ; ಇರಲಿ) ಇದನ್ನೋದುವಾಗ, ನಾಲ್ಕು ವರ್ಷಗಳ ಹಿಂದಿನ ಮಾತು ನೆನಪಾಯ್ತು.
ಸರಕಾರದಿಂದ ಅನುದಾನ ಪಡೆಯುವ ರಾಷ್ಟ್ರೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಇಪ್ಪತ್ತೇಳು ಪ್ರತಿಶತ ಸೀಟ್ಗಳನ್ನು ಕಾಯ್ದಿರಿಸುವ ಕಾಯಿದೆಯ ಪರವಾಗಿದ್ದ ಶ್ರೀ ಅರ್ಜುನ್ ಸಿಂಗ್ ಅಭಾವೈವಿಸಂದಲ್ಲಿ ಅತ್ಯಂತ ದ್ವೇಷಿಸಲ್ಪಡುವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. (ಹಾಗೆಯೇ, ಎಷ್ಟು ಜನ ವಿಐಪಿಗಳು ಕಡಿಮೆ ಅಂಕ ಗಳಿಸಿ ಪಾಸಾದ, ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವೈದ್ಯರುಗಳಿಂದ ಆರೈಕೆಗೆ ಸಿಧ್ಧರಿರುತ್ತಾರೆ ಎಂಬ ಪ್ರಶ್ನೆ ಸಹ ಕೇಳಿ ಬಂದಿದ್ದು ಬೇಡವೆಂದರೂ ನೆನಪಿಗೆ ಬಂತು; ಆ ವಿವಾದದ ಕುರಿತು ಚರ್ಚೆ ಇಲ್ಲಿ ಬೇಡ.) ಅಂದು ಅಭಾವೈವಿಸಂದ ಯುವ ವೈದ್ಯರು ಶ್ರೀ ಅರ್ಜುನ್ ಸಿಂಗ್ ಅವರ ಭೇಟಿಯಾಗಲು ಶತಾಯ ಗತಾಯ ಹೆಣಗಬೇಕಾಗಿತ್ತು. ಮುಷ್ಕರಕ್ಕೆ ಕುಳಿತವರಂತೂ ಪೋಲಿಸರಿಂದ ಒದೆ ತಿನ್ನಿಸಿಕೊಂಡು ಬಂದಿದ್ದರು. ಇಂದು ಅದೇ ಶ್ರೀ ಅರ್ಜುನ್ ಸಿಂಗ್ ರೋಗಿಯಾಗಿ ಅಭಾವೈವಿಸಂನ ವೈದ್ಯರಲ್ಲಿ ಆರೈಕೆಗಾಗಿ ಬಂದಿದ್ದಾರೆ!
ಇದಲ್ಲವೇ ಜೀವನದ ವಿಪರ್ಯಾಸ!
[ನಿಮ್ಮ ಪ್ರೋತ್ಸಾಹವಿದ್ದರೆ ಮುಂದುವರಿಯುವುದು :-) ]