ಅಗೊಳಿ ಮಂಞಣೆ ಬೀಮೆ

ಅಗೊಳಿ ಮಂಞಣೆ ಬೀಮೆ

ಪುಸ್ತಕದ ಲೇಖಕ/ಕವಿಯ ಹೆಸರು
ಅಂಶುಮಾಲಿ
ಪ್ರಕಾಶಕರು
ತುಳು ಕೂಟ, ಉಡುಪಿ
ಪುಸ್ತಕದ ಬೆಲೆ
ರೂ.100.00

*ಅಂಶುಮಾಲಿ ಅವರ ತುಳು ನಾಟಕ "ಅಗೊಳಿ ಮಂಞಣೆ ಬೀಮೆ"*

 " ಅಗೊಳಿ ಮಂಞಣೆ ಬೀಮೆ", ಅಂಶುಮಾಲಿಯವರು ಸುಮಾರು 1980 - 81ರಲ್ಲಿ ರಚಿಸಿದ ಮತ್ತು 1985ರಲ್ಲಿ ಮಂಗಳೂರಿನ "ತುಳು ಕೂಟ" ನಡೆಸಿದ "ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ತುಳು ನಾಟಕ ರಚನಾ ಸ್ಪರ್ಧೆ" ಯಲ್ಲಿ ತೃತೀಯ ಬಹುಮಾನ ಪಡೆದ ನಾಟಕ. ಇದನ್ನು ನಾಲ್ಕು ದಶಕಗಳ ಬಳಿಕ ಉಡುಪಿಯ "ತುಳು ಕೂಟ" ಪ್ರಕಾಶಿಸಿದೆ. 88 ಪುಟಗಳ ಕೃತಿಯ ಬೆಲೆ ನೂರು ರೂಪಾಯಿ.

ಕೃತಿಯಲ್ಲಿ ಅಂಶುಮಾಲಿಯವರ "ಸೊಲ್ಮೆಲು", ಸೀತಾರಾಮ ಹೆಗ್ಡೆಯವರು ಅಂಶುಮಾಲಿಯವರಿಗೆ 1980 ಮತ್ತು 1982ರಲ್ಲಿ ಬರೆದ ಮೂರು ಪತ್ರಗಳ ಆಯ್ದ ಭಾಗಗಳ "ಇಂಚ ಬರೆಯೆರ್ ಸೀತಾರಾಮೆರ್", ಡಾ. ಇಂದಿರಾ ಹೆಗ್ಗಡೆಯವರ " ಚೆಳ್ಳಾರ್ ಗುತ್ತು", ಡಾ. ಎನ್. ನಾರಾಯಣ ಶೆಟ್ಟಿ ಶಿಮಂತೂರು ಅವರ "ಸೇಸೆ", ಡಾ. ಭಾಸ್ಕಾರಾನಂದ ಕುಮಾರ್ ಅವರ "ರಡ್ಡ್ ಪಾತೆರ" ಮತ್ತು ಅಂಬಲಪಾಡಿ ಶ್ರೀಪತಿ ಆಚಾರ್ಯರು ಬರೆದ "ಅಗೊಳಿ" ಇದೆ. ಸೀತಾರಾಮ ಹೆಗ್ಡೆ , ಇಂದಿರಾ ಹೆಗ್ಗಡೆ ಹಾಗೂ ನಾರಾಯಣ ಶೆಟ್ಟಿಯವರ ಬರಹಗಳಲ್ಲಿ ಅಗೊಳಿ ಮಂಞಣನ ಬಗ್ಗೆ ಮತ್ತು ಅಗೊಳಿ ಮಂಞಣನ ಬಗ್ಗೆ ಹಿಂದೆ ಬಂದ ಕೃತಿಗಳು ಮತ್ತು ಇತರ ಕೆಲವು ವಿಷಯಗಳ ಬಗ್ಗೆ ಒಂದಷ್ಟು ಮಾಹಿತಿಗಳಿವೆ. 

ಕವಿ "ಅಂಶುಮಾಲಿ" ("ನವಮಿ", ಅಲೆವೂರು ಮಾರ್ಗ, ಮಂಚಿಜೆರೆ, ಮಣಿಪಾಲ- 576104, ಉಡುಪಿ ಜಿಲ್ಲೆ) ಎಂದೇ ಪ್ರಸಿದ್ಧಿ ಪಡೆದಿರುವ ಭಾಸ್ಕರ ಕನ್ಯಾನ ಅವರು ಮೂಲತಹಾ ಕೇರಳ ರಾಜ್ಯದ ಕಣ್ಣಾನ್ನೂರು ಜಿಲ್ಲೆಯವರು. ಮಲೆಯಾಳ ಮಾತೃ ಭಾಷೆಯ ಇವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನ.

ಮಣಿಪಾಲದ ಪ್ರಧಾನ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದು ಸ್ವಯಂ ನಿವೃತ್ತರಾದ ಅಂಶುಮಾಲಿಯವರ 23 ನೆಯ ಪ್ರಕಟಿತ ಕೃತಿ "ಅಗೊಳಿ ಮಂಞಣೆ ಬೀಮೆ".

"ಕ್ಷ - ಕಿರಣ" (1972), "ರೂಪಕ ರಾಮಾಯಣ" (1985), "ಆನೆ ಮತ್ತು ಏನೊ" (1997), "ತಲೆ ಬುರುಡೆ" (2000), "ಪತ್ರೊಡೆ" (2001), "ಅಂಧಕಾರಪುರ" (2005) ಮತ್ತು "Thousand Islands" (ಆಂಗ್ಲ ನಾಟಕ / 2016) ಅಂಶುಮಾಲಿಯವರ ಇತರ ಪ್ರಕಟಿತ ನಾಟಕ ಕೃತಿಗಳು. "ಉಪ್ಪಡ್", 2012ರಲ್ಲಿ "ಪಣಿಯಾಡಿ ಪ್ರಶಸ್ತಿ" ಪಡೆದ ತುಳು ಕಾದಂಬರಿ.

1980ರಲ್ಲಿ ಅಂಶುಮಾಲಿಯವರು ಕಾಪು ಅಂಚೆ ಕಚೇರಿಯಿಂದ ಉಚ್ಚಿಲ ಅಂಚೆ ಕಚೇರಿಗೆ ವರ್ಗಾವಣೆಗೊಂಡಿದ್ದರು. ಈ ಸಂದರ್ಭದಲ್ಲಿ, ಪಂಜೆ ಮಂಗೇಶ ರಾಯರು ಮಕ್ಕಳಿಗಾಗಿ ಬರೆದು ಜನಪ್ರಿಯವಾದ "ಅಗೊಳಿ ಮಂಜಣ"ನನ್ನು ಓದಿ, ಅದೇ ಗುಂಗಿನಲ್ಲಿದ್ದ ಅಂಶುಮಾಲಿಯವರು ಚೇಳಾರ್ ಗುತ್ತುವಿಗೆ ಹೋಗಿ ಅಗೊಳಿ ಮಂಜಣ ಇದ್ದ ಎನ್ನುವ ಗುತ್ತಿನ ಮನೆಯ ಪಂಚಾಂಗವನ್ನು ನೋಡಿ, ಅಲ್ಲೇ ಪಕ್ಕದಲ್ಲಿದ್ದ ಮನೆಯವರು ತೋರಿಸಿದ ಅಗೊಳಿ ಮಂಜಣನದು ಎನ್ನಲಾದ ಕೆಲವು ವಸ್ತುಗಳನ್ನು ಕಣ್ತುಂಬಿಸಿಕೊಂಡು, ಅವರು ಹೇಳಿದ ಕೆಲವು ವಿಷಯಗಳನ್ನು ಕೇಳಿಕೊಂಡು ಬಂದವರು ಪಂಜೆಯವರ ಕೃತಿಯನ್ನು ಆಧಾರವಾಗಿರಿಸಿಕೊಂಡು ರಚಿಸಿದ ತುಳು ನಾಟಕವೇ “ಅಗೊಳಿ ಮಂಞಣೆ ಬೀಮೆ". ಈ  ಅಗೊಳಿ ಮಂಜಣನ ಮನೆ ಬಳಿಕ ಎಂ ಆರ್ ಪಿ ಎಲ್ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂಬ ಮಾಹಿತಿ ಇದೆ.

"ನಮ್ಮ ಹಿಂದಿದ್ದ ಮನೆ 1968ರಲ್ಲಿ ಸುಟ್ಟು ಹೋಗಿ ನಾವು ಹೊಸ ಮನೆಯನ್ನು ಕಟ್ಟಿದೆವು. ಅದರ ಮೊದಲಿದ್ದ ಮನೆಯ ಬಾಗಿಲುಗಳು ಬಹಳ ಚಿಕ್ಕವಾಗಿದ್ದುವು. ಅದರಲ್ಲಿ ಮಂಞಣನಂತಹವರು ಒಳಗೆ ಹೋಗುವುದು ಸಾಧ್ಯವಾಗಿರಲಿಕ್ಕಿಲ್ಲ ಎಂದು ನನ್ನ ಭಾವನೆ. ಹಾಗಿರುವಾಗ ಅವನು ಇದ್ದಿದ್ದ ಮನೆ ಅದಕ್ಕಿಂತಲೂ ಹಿಂದಿನದ್ದಿರಬೇಕು. ಅವರ ಅಂಗಿಯ ಕೈ ಒಂದನ್ನು ಸಣ್ಣಂದಿನಲ್ಲಿ ನೋಡಿದ ನೆನಪು.  ಅವಶೇಷಗಳನ್ನು ಉಳಿಸಿಕೊಳ್ಳುವ ಬುದ್ಧಿ ನಮಗೆ ದೇವರು ಕೊಟ್ಟಿರಲಿಲ್ಲ... ತಂದೆಯವರಿಗೆ (ಎನ್. ಎ. ಶೀನಪ್ಪ ಹೆಗ್ಡೆ ಪೊಳಲಿ) ಅಗೊಳಿ ಮಂಞಣನ ಬಗ್ಗೆ ಬಹಳ ತಿಳಿದಿತ್ತು. ಆದರೆ ಇಂದು ಅವರಿಲ್ಲ. " ದೇವು ಪೂಂಜ ಪ್ರತಾಪ", "ಬಪ್ಪನಾಡು ಕ್ಷೇತ್ರ ಮಹಾತ್ಮೆ" ಯಕ್ಷಗಾನ ಪ್ರಸಂಗಗಳಲ್ಲಿ ಅಗೊಳಿ ಮಂಞಣನ ಪಾತ್ರವಿದೆ" ಎಂದು ಅಂಶುಮಾಲಿಯವರಿಗೆ ಬರೆದ ಪತ್ರದಲ್ಲಿ ಸೀತಾರಾಮ ಹೆಗ್ಗಡೆಯವರು ಬರೆದುಕೊಂಡಿದ್ದಾರೆ.

ಪತಿ ಎಸ್. ಆರ್. ಹೆಗ್ಗಡೆಯವರ ಪ್ರೋತ್ಸಾದಿಂದ "ಚೇಳಾರುಗುತ್ತು ಮಂಜನ್ನಾಯ್ಗೆರ್ - ಸಾಂಸ್ಕೃತಿಕ ಐತಿಹಾಸಿಕ ಶೋಧ" ಎಂಬ ಸಂಶೋಧನಾ ಗ್ರಂಥ ಬರೆದವರು ಡಾ. ಇಂದಿರಾ ಹೆಗ್ಗಡೆಯವರು. ಈ ಗ್ರಂಥವನ್ನು ಎಸ್. ಆರ್. ಹೆಗ್ಗಡೆಯವರೇ ತಮ್ಮ "ಅಗೊಳಿ ಮಂಞಣ ಟ್ರಸ್ಟ್" ನಿಂದ ಪ್ರಕಟಿಸಿದ್ದರು.

ನಮ್ಮ ನಾಡಿನ ಇತಿಹಾಸ ಕಟ್ಟಲು ಬೇಕಾದ ಶಾಸನಗಳು ಕಡಿಮೆಯಿದೆ. ಲಭ್ಯ ಶಾಸನಗಳಲ್ಲಿ ಅರಸರ ವಿಷಯ,  ಅವರೊಳಗೆ ನಡೆದ ಲಡಾಯಿ ಮತ್ತು ಅವರು ಕೊಟ್ಟ ದಾನದ ವಿಷಯಗಳೆಲ್ಲ ದಾಖಲಿಸಲ್ಪಟ್ಟಿದೆ. ಆದರೆ, ಅರಸರ ಬೆನ್ನಿಗೆ ನಿಂತು ಸಾಹಸ ಸಾಧನೆ ಮಾಡಿದವರ ಮೇಲೆ ಹಿಂದೆ ದಾಖಲಿಸಿದ ದಾಖಲೆಗಳು ಬಹಳ ಕಡಿಮೆ ಇದೆ ಎಂಬ ವಾಸ್ತವಾಂಶಗಳ ಜೊತೆಗೆ, "ಬೇತೆ ಬೆಂದ್ ತಿನ್ಪಿನಕಲೆ ಸುದ್ಧಿಲಾ ಉಪ್ಪುಜಿ" ಎಂದು ರಾಜಾಡಳಿತ ಕಾಲದ ಇತಿಹಾಸದ ದಾಖಲೆಗಳ ಕುರಿತ ಸತ್ಯಾಂಶವನ್ನು ಮಾರ್ಮೀಕವಾಗಿ ತಿಳಿಸಿದ್ದಾರೆ ಇಂದಿರಾ ಹೆಗ್ಗಡೆಯವರು.

300 - 400 ವರ್ಷಗಳ ಹಿಂದೆ ಚೇಳಾರ್ ನಲ್ಲಿ ಹುಟ್ಟಿ ಕೀರ್ತಿಶೇಷನಾದ "ಬೀರೆ" ಅಗೊಳಿ ಮಂಞಣನ ಸಾಹಸ ಸಾಧನೆಗಳು ಬಾಯಿಯಿಂದ ಬಾಯಿಗೆ ಹರಿದಾಡಿ, ಪಾಡ್ದನಗಳಾಗಿವೆ. "ರಾಣಿ ಕಿನ್ಯಗನ" ಯಕ್ಷಗಾನದಲ್ಲೂ ಮಂಞಣನ ಒಂದು ಪ್ರಸಂಗ ಇದೆ ಎನ್ನುವುದನ್ನು ಶಿಮಂತೂರು ನಾರಾಯಣ ಶೆಟ್ಟಿಯವರು ನೆನಪಿಸಿಕೊಂಡಿದ್ದಾರೆ. "ಅಗೊಳಿ ಪಂಡ್ಂಡ ಒಂಜಿ ಮುಡಿ ಅರಿತ್ತಾತ್ ಮಲ್ಲ ಗುರ್ಕೆ ಪಂಡ್ ದ್ ಪನ್ಪೆರ್. ಅಯಿಟೆ ಅಪ್ಪೆ ದುಗ್ಗು ಬಳಸುನು. ಮಗೆ ಮಂಞಣೆ ಉನ್ಪುನು - ಇಂಚ ಪಾತೆರ ಉಂಡು" ಎಂದು "ಅಗೊಳಿ" ಎಂಬುದರ ಮರ್ಮವನ್ನೂ ನಾರಾಯಣ ಶೆಟ್ಟರು ಇಲ್ಲಿ ಹೇಳಿಕೊಂಡಿದ್ದಾರೆ.

ನಾಟಕದ ಪಾತ್ರಧಾರಿಗಳ ಹೆಸರುಗಳನ್ನು ಓದದೆ ನಾಟಕದೊಳಗೆ ಪ್ರವೇಶಿಸುವುದು ಸರಿಯಾಗುವುದಿಲ್ಲ, ಪರಿಣಾಮಕಾರಿಯೂ ಅಲ್ಲ. ಆ ಜನ, ಈ ಜನ, ಮೇಳೊ, ದುಗ್ಗು, ಮಂಞಣೆ, ಸಂಕಪ್ಪ, ಎಂಕಪ್ಪ, ಬೊಗ್ರೆ, ತುಕ್ರೆ, ಪೋಂಕ್ರೆ, ಸೋಂಪೆ, ಬಗ್ಗ ಅಡ್ಯಂತಾಯೆರ್, ನಾರಾಯಣೆ, ಬಾಗವತೆರ್, ಚೀಂಕ್ರೆ, ಮಮ್ಮದೆ, ಕುಂಞಾಲಿ, ಕರಿಯೆ, ಗುರುವೆ, ಮೂಲ್ಯೆ, ಸುಂದರಿ, ಕೊರಗೆ, ಕೊರಪೊಳು, ಅರಸು, ಮಂತ್ರಿ, ಐನ್ ಜನಕುಲು, ತೋಮೆ, ತನಿಯೆ, ಸ್ವರೊ, ದೇವಿ, ಅಯೆ, ಇಂಬ್ಯೆ, ಗುರಿಕಾರೆ, ಬಾಗಿ, ಜಾರಂದಾಯೆ. ಇವಿಷ್ಟು ಪಾತ್ರಗಳ ಸುತ್ತ ಸುತ್ತುವ ನಾಟಕ , ನಾಟಕದೊಳಗಿನ ನಾಟಕವಾಗಿದ್ದು, ಓದಿನ ಆರಂಭದಲ್ಲಿಯೇ ಕುತೂಹಲ ಮೂಡಿಸುತ್ತದೆ.

ಎರಡು ಅಂಕಗಳ ಈ ನಾಟಕದಲ್ಲಿ ಹದಿಮೂರು ಹದಿಮೂರರಂತೆ ಒಟ್ಟು ಇಪ್ಪತ್ತಾರು ದೃಶ್ಯಗಳಿವೆ. ಒಂದೊಂದರಲ್ಲೂ ಅಗೊಳಿ ಮಂಞಣನ ಸಾಹಸಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ಚಿತ್ರಿಸಲಾಗಿದೆ. ಇಲ್ಲಿ ಹಾಸ್ಯವೂ ಇದೆ, ಪ್ರೀತಿಯೂ ಇದೆ. ಗಂಭೀರತೆಯೂ ಇದೆ, ಸೌಹಾರ್ದತೆಯೂ ಇದೆ. ಮೋಸವೂ ಇದೆ, ಶೋಷಣೆಯ ಚಿತ್ರಣವೂ ಇದೆ. ಶಿಲ್ಪಿಯೊಬ್ಬ ಕಲ್ಲನ್ನು ಕೆತ್ತಿ ಕೆತ್ತಿ ಅತ್ಯಪೂರ್ವ ಮೂರ್ತಿಯನ್ನಾಗಿ ಮಾಡುವಂತೆ, ಅಂಶುಮಾಲಿಯವರು ಇಲ್ಲಿ ತುಳುನಾಡಿನ ಜನಜೀವನದ ನಿತ್ಯ ಸತ್ಯಗಳನ್ನು ಸಹಜವೂ ಸರಳವೂ ಆಗಿ ಚಿತ್ರಿಸುತ್ತಾ ಅಗೊಳಿ ಮಂಞಣನ ಸಾಹಸಗಳನ್ನು ಇವುಗಳೊಂದಿಗೆ ಚಾಕಚಕ್ಯತೆಯಿಂದ ಜೋಡಿಸುವ ಮೂಲಕ ಸರ್ವರಸಗಳಿಂದ ಕೂಡಿದ ನಾಟಕವೊಂದನ್ನು ಮುತ್ತಿನ ಮಾಲೆಯನ್ನು ನೇಯ್ದಂತೆ ನೇಯ್ದು ಕೊಟ್ಟಿದ್ದಾರೆ. ಈ ನಾಟಕವನ್ನು ಓದುವಾಗ ಎಷ್ಟು ಇಷ್ಟವಾಗುತ್ತದೋ, ನೋಡುವಾಗ ಇದಕ್ಕಿಂತ ಇಮ್ಮಡಿ ಇಷ್ಟವಾಗಬಹುದು.

ಸಂದರ್ಭಾನುಸಾರವಾಗಿ ಜೈನರ ತುಳುವಿನ ಜೊತೆಗೆ ಮೂಲ್ಕಿ, ಪಂಜ, ಪುತ್ತೂರು ಮೊದಲಾದ ಸೀಮೆಗಳ ಜನರಲ್ಲಿ ನಲಿದಾಡುವ ತುಳುವನ್ನು ನಾಟಕದಲ್ಲಿ ಹೆಣೆಯಲಾಗಿದೆ. ಬ್ಯಾರಿ ಭಾಷೆಯ ಸೊಗಡನ್ನೂ ಸೇರಿಸಲಾಗಿದೆ. ಹೀಗೆ ಇಲ್ಲಿ ಅಂಶುಮಾಲಿಯವರು ಭಾಷಾ ಸೌಹಾರ್ದವನ್ನೂ, ಜಾತಿ ಸೌಹಾರ್ದವನ್ನೂ  ಎತ್ತಿಹಿಡಿದಿದ್ದಾರೆ. ಈ ಮೂಲಕ ಅಗೊಳಿ ಮಂಞಣ ಬೀಮೆ ನಾಟಕ ಮತ್ತು ಕೃತಿಕಾರರಾದ ಅಂಶುಮಾಲಿಯವರು ತುಳುನಾಡಿನ, ಸಾಂಸ್ಕೃತಿಕ ರಾಯಭಾರಿಯಾಗಿಯೂ ಕೆಲಸ ಮಾಡಿದಂತಾಗಿದೆ. ಇದು ನಾಟಕದ ಹೆಚ್ಚುಗಾರಿಕೆಯೂ ಆಗಿದೆ.  ಅಂಶುಮಾಲಿಯವರು ಕವಿಗಳಾಗಿಯೂ ಪ್ರಸಿದ್ಧರು. ಕವಿಯೇ ಇಲ್ಲಿ ನಾಟಕ ರಚನಾಕಾರರಾಗಿರುವುದರಿಂದ ನಾಟಕದ ಕೆಲವು ದೃಶ್ಯಗಳಲ್ಲಿ ಪದ್ಯಗಳನ್ನೂ ಜೋಡಿಸಲಾಗಿದೆ. ಕೆಲವು ದೃಶ್ಯಗಳು, ದೃಶ್ಯ ಕಾವ್ಯಗಳಾಗಿಯೇ ಮೂಡಿಬಂದಿದೆ. ತುಳು ವೈವಿಧ್ಯದ ಜೊತೆಗೆ ಪದ್ಯಗಳು ಮೂಡಿಬರುವ ಮೂಲಕ ಅಗೊಳಿ ಮಂಞಣನ ಸಾಹಸ ಗಾಥೆ ಚಿತ್ರಿಸಲ್ಪಟ್ಟಿರುವುದು ನಾಟಕದ ಸ್ವಾದವನ್ನು ಹೆಚ್ಚಿಸಿದೆ.

ತುಳುನಾಡಿನ ಸಂಸ್ಕೃತಿಯ ಭಾಗಗಳಾದ ಕಂಬಳ, ಕೋಳಿ ಅಂಕ, ಯಕ್ಷಗಾನ, ಕೋಲವನ್ನು ನಾಟಕದಲ್ಲಿ ಅಳವಡಿಸಲಾಗಿದೆ. ಮಂಞಣನ ಕಾಲ , ತುಳುನಾಡಿನಲ್ಲಿ ಒಕ್ಕಲು - ಗೇಣಿ ಜೀವಂತವಾಗಿದ್ದ ಕಾಲ. ನಾಟಕದಲ್ಲೂ ಒಕ್ಕಲುದಾರರ ಕಷ್ಟ, ಶ್ರಮಜೀವನ, ಗುರಿಕಾರರು ಮಾಡುವ ಮೋಸ ಇತ್ಯಾದಿಗಳ ಚಿತ್ರಣವನ್ನು ಸೂಕ್ಷ್ಮವಾಗಿ ಹೊಸೆಯಲಾಗಿದೆ. ಕೊರಗ ಜನರ ನೋವುಗಳಿಗೂ ಧ್ವನಿಯಾದ ನಾಟಕ, ಭೂತ, ಪ್ರೇತ, ಪಿಶಾಚಿಗಳ ಭಯವನ್ನೂ ಸೂಚ್ಯವಾಗಿ ಬಯಲುಪಡಿಸಿದೆ.

ನಾಟಕದ ಕೊನೆಯ ಕೋಲದ ದೃಶ್ಯ. ಜಾರಂದಾಯ ದೈವದ ಬಾಯಿಯಲ್ಲಿ ಕವಿ ಅಂಶುಮಾಲಿ ಹೊರಡಿಸಿದ ನುಡಿ ಕಾವ್ಯ : 

ಗಾಳಿಯಾದ್ ಬೀಜೊಂದುಪ್ಪುವೆ...

ಸೂವಾದ್ ಅರಳೊಂದುಪ್ಪುವೆ...

ಬರ್ಸೊ ಆದ್ ದಿರಿಯೊಂದುಪ್ಪುವೆ...

ಬುಳೆಯಾದ್ ಬುಳೆಯೊಂದುಪ್ಪುವೆ...

ನಲಿಕೆದ ಮಿತ್ತ್ ಎನ್ನ ತೆಲಿಕೆ ಉಂಡು...

ತೆಲಿಕೆದ ಮಿತ್ತ್ ಎನ್ನ ನಲಿಕೆ ಉಂಡು...

ನಲಿಕೆ ತೆಲಿಕೆಡ್ ಎನ್ನ ಪರಕೆ ಉಂಡು...

ತೆಲಿತ್ತೊಂದುಪ್ಪುಲೆ, ತೆಲಿತ್ತೊಂದುಪ್ಪುಲೆ...

ನಲಿತೊಂದುಪ್ಪುಲೆ ನಲಿತ್ತೊಂದುಪ್ಪುಲೆ...

ಅಂಶುಮಾಲಿಯವರು "ಅಗೊಳಿ ಮಂಞಣ ಬೀಮೆ" ನಾಟಕದದ ಮೂಲಕ ಒಂದು ಸದಭಿರುಚಿಯ, ತುಳುನಾಡಿನ ಸಂಸ್ಕೃತಿ, ಪರಂಪರೆ, ವೀರತನವನ್ನು ಪ್ರತಿಬಿಂಬಿಸುವ ಅತ್ಯುತ್ತಮ ನಾಟಕವನ್ನು ರಚಿಸಿ ಸಮರ್ಪಿಸುವ ಮೂಲಕ ನೀಡಿದ ಕೊಡುಗೆಗೆ ತುಳುನಾಡಿನ ಸಮಸ್ತರೂ ಅಭಿಮಾನಪಡಬೇಕಾಗಿದೆ. ಅಂಶುಮಾಲಿಯವರನ್ನು ಅಭಿನಂದಿಸಬೇಕಾಗಿದೆ.

~ ಶ್ರೀರಾಮ ದಿವಾಣ, ಮೂಡುಬೆಳ್ಳೆ, ಉಡುಪಿ.