ಅಗ್ರಹಾರದ‌ ಆ ಮನೆ !!

ಅಗ್ರಹಾರದ‌ ಆ ಮನೆ !!

ಜಗನ್ನಾಥ ಒಂದೇ ಸಮನೆ ಓಡುತ್ತಿದ್ದಾನೆ ... ಕಾಲುಗಳು ಇನ್ನು ಓಡಲಾರೆ ಎಂದು ನಿಶ್ಯಕ್ತಿಯಿಂದ ಕುಸಿಯುತ್ತಿದ್ದರೂ ಲೆಕ್ಕಿಸದೆ ಓಡುತ್ತಿದ್ದಾನೆ ... ಏದುಸಿರು ಬಿಡುತ್ತ ಓಡುತ್ತಲೇ ಇದ್ದಾನೆ ... ಮಳೆಯಿಂದಾದ ಕೊಚ್ಚೆಯಾದ ನೆಲವನ್ನು ಲೆಕ್ಕಿಸದೆ ಓಡುತ್ತಿದ್ದಾನೆ ... ಚಳಿಗಾಳಿ ಕಣ್ಣು-ಮೂಗಿಗೆ ಬಡಿಯುತ್ತ ನೀರು ಸುರಿಸುತ್ತಿದ್ದರೂ ಓಡುತ್ತಲೇ ಇದ್ದಾನೆ ...

ಆಗಾಗ ತಿಕ್ಕಿಕೊಳ್ಳುತ್ತಿದ್ದುದರಿಂದ ಮೂಗು ಕೆಂಪಾಗಿತ್ತು ... ಕಗ್ಗತ್ತಲಲ್ಲಿ ಅದನ್ನು ಕಾಣುವವರಾದರೂ ಯಾರು? ಅಟ್ಟಿಸಿಕೊಂಡು ಬರುತ್ತಿರುವ ’ಅವನನ್ನು’ ಬಿಟ್ಟರೆ !!! ಹೃದಯ ನಾಲ್ಕು ಜನಕ್ಕೆ ಕೇಳಿಸುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು ... ಕುಳ್ಳರಿಸಿ ಸಾಂತ್ವನಗೊಳಿಸಲು ಯಾರೂ ಇರಲಿಲ್ಲ ಅಷ್ಟೇ!

ತನ್ನನ್ನು ಅವನು ಇನ್ನೂ ಅಟ್ಟಿಸಿಕೊಂಡು ಬರುತ್ತಿದ್ದಾನೆ ಎನ್ನಿಸಿಯೇ, ಇನ್ನೂ ಜೋರಾಗಿ ಓಡುತ್ತಿದ್ದಾನೆ... ಹಿಂದುರುಗಿ ನೋಡುವ ವ್ಯವಧಾನವಾಗಲಿ ಅಥವಾ ಧೈರ್ಯವಾಗಲೀ ಇರಲಿಲ್ಲ ... ಕಾಲಿಗೆ ಶಕ್ತಿ ಕಳೆದು ಮನಸ್ಸು ಧೃಡವಾಗಿತ್ತೋ ಅಥವಾ ಮನಸ್ಸು ಸೋಲುತ್ತಿದ್ದರೂ ಕಾಲುಗಳಲ್ಲಿ ಚೈತನ್ಯವಿತ್ತೋ ತಿಳಿಯದು ... ಒಟ್ಟಿನಲ್ಲಿ ಮರಗಿಡಗಳನ್ನು ಹಿಂದೆ ಹಾಕಿ ಓಡುತ್ತಿದ್ದಾನೆ ...

ಕಾಲಿಗೆ ಹಾಕಿದ್ದ ಚಪ್ಪಲಿ ಎಲ್ಲೋ ಬಿದ್ದು ಹೋಗಿತ್ತು ...

ಕಲ್ಲು, ಮುಳ್ಳು, ಕಸ, ಕಡ್ಡಿ ಚುಚ್ಚಿ ಪಾದದಲ್ಲಿ ರಕ್ತ ಸೋರುತ್ತಿದ್ದರೂ ಅದಾವುದೂ ಪ್ರಾಣಕ್ಕಿಂತ ಮಿಗಿಲಾಗಿರಲಿಲ್ಲ ... ಓಡುತ್ತಲೇ ಇದ್ದಾನೆ !

ದೂರದಲ್ಲಿ ದೀಪಗಳು ಕಂಡಂತಾಗಿ ಸ್ವಲ್ಪ ಚೇತರಿಕೆ ಬಂತು ... ಹಾಗೆಂದು ಓಡುವ ಗತಿ ಮಾತ್ರ ನಿಧಾನವಾಗಲಿಲ್ಲ ! ಯಾವ ಹೊತ್ತಿನಲ್ಲೂ ಆ ಎರಡು ಕೈಗಳು ತನ್ನ ಕತ್ತನ್ನು ಹಿಸುಕಬಹುದು ! ಅಥವಾ ತನ್ನನ್ನು ಎನಾಮತ್ತಾಗಿ ಎತ್ತು ಬಿಸುಡಲೂ ಬಹುದು !!

ದೀಪವ ಕಂಡ ಮೇಲೆ, ಕಾಲ್ಗಳಿಗೆ ಇನ್ನೂ ಶಕ್ತಿ ಬಂದಂತಾಗಿತ್ತು ... ಅಟ್ಟಿಸಿಕೊಂಡು ಬರುತ್ತಿರುವ ಶಬ್ದವೂ ನಿಂತಂತಾಗಿತ್ತು ... ಅಥವಾ ಅದು  ಭ್ರಮೆಯೋ? ತಾನು ದೀಪವಿರುವ ಜಾಗ ತಲುಪುವ ಮುನ್ನವೇ, ಧುತ್ತನೆ ತನ್ನ ಮುಂದೆ ಬಂದು ನಿಂತು ಅಟ್ಟಹಾದಿಂದ ನಗುತ್ತಾ ನಿಂತರೆ ತಾನೇನು ಮಾಡಬಲ್ಲೆ?

ಇದ್ದಷ್ಟೂ ಶಕ್ತಿ ಬಳಸಿ ಓಡುತ್ತ ಆಲದ ಮರದ ಕಟ್ಟೆಯ ಬಳಿ ತಲುಪಿ ... ಬಿದ್ದ ... ಕೆಲವೇ ಕ್ಷಣಗಳಲ್ಲಿ ಅವನಿಂದ ಅನತಿ ದೂರದಲ್ಲಿ ಕಾರು ಗಕ್ಕನೆ ಬ್ರೇಕ್ ಹಾಕಿ ನಿಂತಿತು....

---

ಬೆಳಗಿನ ಚುಮು ಚುಮು ಛಳಿಯಲ್ಲಿ, ಅಲ್ಲಲ್ಲೇ ಮಾತುಗಳು ಕೇಳಿಸಿದಂತಾಗಿ ಕಣ್ಣು ಬಿಟ್ಟ ... ಒಂದು ಘಳಿಗೆ ಏನೂ ಅರ್ಥವಾಗಲಿಲ್ಲ ... ಮನದಲ್ಲಿ ಶೂನ್ಯ ಆವರಿಸಿತ್ತು ... ಗಾಳಿಯಲ್ಲಿ ತೇಲಿ ಬಂದ ಕಾಫಿಯ ವಾಸನೆಗೆ ಎಚ್ಚೆತ್ತುಗೊಂಡ ಗ್ರಂಥಿಗಳು, ಅವನಿರುವುದು ಒಂದು ಆಸ್ಪತ್ರೆಯಲ್ಲಿ ಎಂಬ ಸಂದೇಶವನ್ನು ತಲೆಗೆ ರವಾನಿಸಿತ್ತು ...

ಇಲ್ಲಿಗೆ ಹೇಗೆ ಬಂದೆ? ರಾತ್ರಿಯೆಲ್ಲ ಇದೇ ಬೆಡ್ ಮೇಲೆ ಮೇಲೆ ಮಲಗಿದ್ದೆನಾ? ಅಲ್ಲಲ್ಲ! ಯಾವುದೋ ಕಾರಿನ ಹೆಡ್-ಲೈಟ್ ನೋಡಿ ಚೈತನ್ಯ ಬಂದು ಓಡಿ ಬರುತ್ತಿದ್ದೆ ... ಆದರೆ ತಾನು ಅದರ ಬಳಿ ಹೋಗುವಷ್ಟರಲ್ಲಿ ಆ ಕಾರು ಹೋಗಿಯಾಗಿತ್ತು. ಕೂಗಲು ದನಿಯೂ ಏಳುತ್ತಿರಲಿಲ್ಲ ! ಹಾಗಿದ್ದ ಮೇಲೆ, ಇಲ್ಲಿಗೆ ಹೇಗೆ ಬಂದೆ?

ಕೈ-ಕಾಲುಗಳು ವಿಪರೀತ ನೋಯುತ್ತಿತ್ತು ... ಪಾದಗಳಿಗೆ, ತಲೆಗೆ ಬ್ಯಾಂಡೇಜ್ ಹಾಕಿದ್ದಾರೆ ಎಂದೂ ಅರಿವಾಯ್ತು ... ನಿತ್ರಾಣಗೊಂಡಿದ್ದರಿಂದ ದೇಹಕ್ಕೆ ಗ್ಲೂಕೋಸ್ ಕೂಡ ಕೊಟ್ಟಂತಿದೆ !! ಸದ್ಯಕ್ಕೆ ತೆಗೆದಿದ್ದಾರೆ.

ಹಾಗೇ ಹೊರಳಿ ಮತ್ತೊಂದು ಬದಿ ನೋಡಿದರೆ, ಚೇರ್’ನಲ್ಲೇ ಕೂತು ನಿದ್ರಿಸುತ್ತಿದ್ದಳು ಧರ್ಮಪತ್ನಿ ಸಾವಿತ್ರಿ !

ಜಗನ್ನಾಥ ಮಿಸುಕಾಡಿದ್ದು ತಿಳಿಯುತ್ತಲೇ ಧಡ ಭಡ ಎದ್ದವಳು "ಅಬ್ಬ! ಸದ್ಯ ಕಣ್ಣು ಬಿಟ್ರಲ್ಲ. ದೇವರು ದೊಡ್ಡವನು" ಎಂದು ತಾಳಿಯನ್ನು ಕಣ್ಣಿಗೆ ಒತ್ತಿಕೊಂಡಳು.

ಸಾವಿತ್ರಿಯತ್ತ ಒಣ ನಗೆ ಬೀರಿ "ಒಂದು ರಾತ್ರಿ ಆಸ್ಪತ್ರೆಯಲ್ಲಿ ಇದ್ದುದಕ್ಕೇ ಹೀಗಾಡ್ತೀಯಲ್ಲ?" ಎಂದ. ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ನುಡಿದಳು ಸಾವಿತ್ರಿ "ನೀವು ಆಸ್ಪತ್ರೆ ಸೇರಿ ಮೂರು ದಿನ ಆಯ್ತು. ಕಣ್ಣು ಬಿಟ್ಟಿದ್ದೇ ಇವತ್ತು" ! ಅವಳಾಡಿದ ಮಾತಿಗೆ ಮೂಕಾಗಿದ್ದ ಜಗನ್ನಾಥ !

ಸಾವಿತ್ರಿ "ಇಷ್ಟಕ್ಕೂ ಏನಾಯ್ತು? ಊರಾಚೆಯೆಲ್ಲೋ ಯಾಕೆ ಹೋಗಿದ್ರಿ? ನಮ್ ಪುಣ್ಯ, ಯಾವುದೋ ಕಾರಿನವರು ನಿಮ್ಮನ್ನು ಇಲ್ಲಿ ಸೇರಿಸಿ ನನಗೆ ವಿಷಯ ತಿಳಿಸಿದರು. ಅಲ್ಲಾ, ಏನನ್ನು ಕಂಡು ಹೆದರಿದಿರಿ? ನನಗೆ ಮೂರು ದಿನದಿಂದ ಇದೇ ಯೋಚನೆ ಆಗಿದೆ. ಹೇಳಿ ಏನಾಯ್ತು" ಎಂದು ಪ್ರಶ್ನೆಗಳ ಸುರಿಮಳೆಯೇ ಸುರಿಸಿದಳು.

ಯಾವುದೇ ವಿಷಯದಲ್ಲೂ ವಿಪರೀತ ಕುತೂಹಲವಿರುವ ಸಾವಿತ್ರಿ ಇಷ್ಟು ದಿನ ತಡೆದಿರುವುದೇ ದೊಡ್ಡ ವಿಷಯ. "ಕುಡಿಯಲಿಕ್ಕೆ ಏನಾದ್ರೂ ಕೊಡ್ತೀಯಾ?" ಅಂದ ಜಗನ್ನಾಥ. ಕುಡಿಯಲಿಕ್ಕೂ ಕೊಡದೆ ಪ್ರಶ್ನೆಗಳನ್ನೇ ಕೇಳಿದ್ದಕ್ಕೆ ಬೇಸರಿಸಿಕೊಂಡು "ಸಾರಿ" ಎನ್ನುತ್ತ ಫ್ಲಾಸ್ಕಿನಿಂದ ಲೋಟಕ್ಕೆ ಕಾಫಿ ಬಗ್ಗಿಸಿ, ಭದ್ರವಾಗಿ ಅವನ ಕೈಲಿರಿಸಿ ಕುಡಿಸಿದಳು.

ಜಗನ್ನಾಥನ ಮನದಲ್ಲಿ ಅಂದು ನೆಡೆದ ಘಟನೆ ಮೂಡಿ, ಒಮ್ಮೆ ಬೆಚ್ಚಿದ ....
--------

ಬಾಡಿಗೆ ಮನೆ ಬೇಸತ್ತು ಒಂದು ಒಳ್ಳೆಯ ಮನೆಗಾಗಿ ಹುಡುಕುತ್ತಿದ್ದರು ಜಗನ್ನಾಥ ಮತ್ತು ಸಾವಿತ್ರಿ. ದಳ್ಳಾಲಿ ಪರಂಧಾಮಯ್ಯ ಹತ್ತು ಹಲವು ಮನೆ ತೋರಿಸಿದ್ದರೂ ಯಾವುದೂ ಮನಸ್ಸಿಗೇ ಬರುತ್ತಿರಲಿಲ್ಲ. ಒಂದು ದಕ್ಷಿಣಾಭಿಮುಖವಾದರೆ ಮತ್ತೊಂದಕ್ಕೆ ಕಾಗದ ಪತ್ರ ವ್ಯವಹಾರ ಅನುಮಾನಾಸ್ಪದವಾಗಿತ್ತು. ಒಂದು ಮನೆ ಚೆನ್ನಾಗಿದ್ದರೂ ಪಕ್ಕದಲ್ಲೇ ಗಾಡಿ ರಿಪೇರಿ ಮಾಡುವ ಗ್ಯಾರೇಜ್ ಇತ್ತು. ಮತ್ತೊಂದು ಮನೆಯ ಪಕ್ಕದಲ್ಲೇ ಹೆಂಡದ ಅಂಗಡಿ ಇತ್ತು. ಹೀಗೆ ಒಂದಲ್ಲಾ ಒಂದು ಕಾರಣದಿಂದ ಸರಿಯೇ ಹೋಗುತ್ತಿರಲಿಲ್ಲ.

ಅದೂ ಅಲ್ಲದೇ ತೀರಾ ತರಾತುರಿ ಇಲ್ಲದಿದ್ದುದರಿಂದ ಸಾವಕಾಶವಾಗಿ ಮನೆ ಹುಡುಕುತ್ತಿದ್ದರು. ಪರಿಚಿತರೂ ತಮಗೆ ತಿಳಿದಿರೋ ಕಡೆ ಮನೆಯ ಬಗ್ಗೆ ಹೇಳುತ್ತಿದ್ದರು. ಹೀಗಿರುವಾಗ ಒಂದು ಮಧ್ಯಾನ್ನ, ಕಛೇರಿಯಲ್ಲಿದ್ದಾಗ ಪರಂಧಾಮಯ್ಯನವರಿಂದ ಕರೆ ಬಂತು. ಅಗ್ರಹಾರದ ಹತ್ತಿರ ಒಂದು ಒಳ್ಳೆಯ ವಿಶಾಲವಾದ ಮನೆ ಮಾರಾಟಕ್ಕೆ ಸಿದ್ದವಿದೆ. ಇನ್ನೊಂದು ತಿಂಗಳಲ್ಲಿ ಆ ಮನೆಯವರು ವಿದೇಶಕ್ಕೆ ತೆರಳಲಿದ್ದರೆ, ಹಾಗಾಗಿ ಚೌಕಾಸಿ ಮಾಡಬಹುದು ಎಂದೂ ತಿಳಿಸಿದರು. ಜೊತೆಗೆ ಇನ್ನರ್ಧ ಘಂಟೆಗೆ ಕಾರ್ ತೆಗೆದುಕೊಂಡು ಬರ್ತೀನಿ ಎಂದೂ ತಿಳಿಸಿದ್ದರು.

ಪರಂಧಾಮಯ್ಯನವರು ಬಹಳ ಸಾವಧಾನದ ಮನುಷ್ಯ. ಜಗನ್ನಾಥ-ಸಾವಿತ್ರಿಯವರ ಸಾವಧಾನಕ್ಕೆ ಸರಿಯಾಗಿ ಸಿಕ್ಕಿದ್ದರು. ಅದೂ ಅಲ್ಲದೇ ಜಗನ್ನಾಥನ ತಂದೆಯವರಿಗೆ ಪರಿಚಯದವರು ಕೂಡ.

ಸಾವಿತ್ರಿಗೆ ಕರೆ ಮಾಡಿ ವಿಷಯ ತಿಳಿಸಲು ಫೋನ್ ಕೈಗೆ ಎತ್ತಿಕೊಂಡವನು ಹಾಗೆ ಇಟ್ಟ. ಸ್ನೇಹಿತೆಯರ ಜೊತೆ ಸಿನಿಮಾಕ್ಕೆ ಹೋಗಿ ಬರ್ತೀನಿ ಎಂದು ತಿಳಿಸಿದ್ದಳು. ಹೊರಗೆ ಕೆಲಸವಿದೆ ಎಂದು ಬಾಸ್’ಗೆ ತಿಳಿಸಿ ಹೊರಗೆ ಬರುವಷ್ಟರಲ್ಲಿ ಕಾರು ಸಿದ್ದವಾಗಿತ್ತು !

ಸದಾ ನಿಧಾನಸ್ತರಾದವರು ಇಂದೇನೋ ಬಹಳ ತರಾತುರಿಯಲ್ಲಿದ್ದಾರಲ್ಲ? ದೊಡ್ಡ ಮನೆ, ಪರದೇಶಕ್ಕೆ ಹೋಗೋ ಗಿರಾಕಿ, ಬೇಗ ಮನೆ ಬಿಕರಿ ಆದರೆ ಇವರಿಗೂ ಲಾಭ ಅಲ್ಲವೇ? ಅದೂ ಅಲ್ಲದೆ, ಅವರ ಮಗಳ ಮದುವೆ ಬೇರೆ ಹತ್ತಿರಕ್ಕೆ ಬಂತು... ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಹೋದಾಗ, ಆ ಸೀಟಿನಲ್ಲಿ ಯಾವುದೋ ದೊಡ್ಡ ಡಬ್ಬ ಇಟ್ಟುಕೊಂಡಿದ್ದರಿಂದ ಹಿಂದಿನ ಸೀಟಿನಲ್ಲಿ ಕೂರಬೇಕಾಯ್ತು.

ಸ್ವಲ್ಪ ಹೊತ್ತು ಮತ್ತೆ ತಿಳಿದಿರೋ ವಿಷಯವನ್ನೇ ಮಾತನಾಡಿದ ಮೇಲೆ, ಅವರೂ ಸುಮ್ಮನಾದರು. ಸ್ವಲ್ಪ ದೂರ ಟ್ರಾಫಿಕ್ ಗಲಭೆ ಇಲ್ಲದುದರಿಂದ ಕಾರು ಅರಾಮವಾಗಿ ಓಡುತ್ತಿತ್ತು. ಊಟ ಆಗಿದ್ದರ ಪ್ರಭಾವ, ಕಣ್ಣು ಎಳೆಯಲು ತೊಡಗಿತ್ತು. ನಿದ್ರಾದೇವಿ ಆಲಂಗಿಸಿದ್ದಳು.

ಕಣ್ಣು ಬಿಟ್ಟಾಗ ಅಚ್ಚರಿಯಾಯ್ತು ! ಹೊರಗೆ ಕತ್ತಲಾವರಿಸಿತ್ತು ! ಬೀಸು ಗಾಳಿಯ ಜೊತೆ ಮಳೆ ಸುರಿಯುತ್ತಿತ್ತು. ತಾನು ಕುಳಿತ ಸೀಟಿನಲ್ಲೇ ಇದ್ದರೂ ಮುಂದಿನ ಸೀಟಿನಲ್ಲಿ ಪರಂಧಾಮಯ್ಯ ಇರಲಿಲ್ಲ ! ಪಕ್ಕದ ಸೀಟಿನಲ್ಲಿ ಡಬ್ಬವೂ ಇರಲಿಲ್ಲ. ಕಾರ್ ಆಫ್ ಆಗಿತ್ತು. ಮಳೆ ಬರುವ ವಿಷಯ ಗೊತ್ತಿದ್ದರೆ ಮತ್ತೊಂದು ದಿನ ಮನೆ ನೋಡಬಹುದಿತ್ತು. ಈ ಕತ್ತಲಲ್ಲಿ, ಮಳೆಯಲ್ಲಿ ಮನೆ ಸುತ್ತಮುತ್ತಲೂ ನೋಡೋದಾದರೂ ಹೇಗೆ?

ಕೊನೇ ಪಕ್ಷ ಮನೆ ಒಳಗೆ ಹೇಗಿದೆ ಎಂದು ನೋಡಿಕೊಂಡು ಹೋಗಿದ್ದು ಇನ್ನೊಮ್ಮೆ ಬಂದು ಸುತ್ತುಮುತ್ತಲೂ ಹೇಗೆ, ಏನು ಎಂದು ನೋಡಬಹುದು. ಅದೂ ಅಲ್ಲದೇ, ಸಾವಿತ್ರಿ ಒಪ್ಪಿದ ಮೇಲೆ ತಾನೇ ಮನೆ ಕೊಳ್ಳೋ ಮಾತು. ತನಗಿಂತ ಹೆಚ್ಚು ಅವಳು ಮನೆಯಲ್ಲಿರೋದ್ರಿಂದ ಅವಳ ಭದ್ರತೆ ಮುಖ್ಯ.

ಈ ಪರಂಧಾಮಯ್ಯನವರು ತನ್ನನ್ನು ಒಬ್ಬನ್ನೇ ಇಲ್ಲಿ ಬಿಟ್ಟು ಹೋಗಿದ್ದೇಕೆ? ಬಹುಶ: ಈಗಲೇ ತಲುಪಿದ್ದೇವೋ ಏನೋ? ಡಬ್ಬ ಒಳಗಿಟ್ಟು ಬಂದು ಎಬ್ಬಿಸೋಣ ಎಂದುಕೊಂಡಿದ್ದರೂ ಇರಬಹುದು.  ಇರಲಿ, ಎಂದುಕೊಂಡು ಕೆಳಗಿಳಿದ ಜಗನ್ನಾಥ ಸುರಿವ ಮಳೆಯಲ್ಲಿ ಓಡಿ ಮನೆಯ ಬಾಗಿಲಲ್ಲಿ ನಿಂತ.

ಬಾಗಿಲು ಹಾಕಿತ್ತು ! ಮೆಲ್ಲನೆ ನೂಕಲು, ಸಣ್ಣಗೆ ಕಿರ್ರ್ ಎಂದು ಶಬ್ದ ಮಾಡುತ್ತ ತೆರೆದುಕೊಂಡಿತು !!

ಒಳಗೆ ಅಡಿ ಇಟ್ಟರೆ ಎಲ್ಲೆಡೆ ಕತ್ತಲು ! ಒಳಗೆಲ್ಲೋ ಒಂದು ಮೋಂಬತ್ತಿ ಬೆಳಕು ಅಷ್ಟೇ ! ಮಳೆ-ಗಾಳಿಗೆ ಕರೆಂಟ್ ಹೋಗಿರಬೇಕು.

"ಸ್ವಾಮೀ, ಪರಂಧಾಮಯ್ಯನವರೇ, ಇದ್ದೀರೋ ಒಳಗೆ?" ಎಂದು ಕೂಗಿದ ... ಒಮ್ಮೆಲೇ ನೂರಾರು ಘಂಟೆಗಳು ಜೋರಾಗಿ ಬಡಿದಂತೆ ಉಂಟಾಯಿತು ಸದ್ದು ! ತನ್ನ ದನಿಗೇ ಬೆಚ್ಚಿದ ಜಗನ್ನಾಥ ... ಅಂದರೇ ಈ ಮನೆ ಸಂಪೂರ್ಣ ಖಾಲಿ ! ಒಳಗೆಲ್ಲೋ ಸಣ್ಣ ಸದ್ದು ಕೇಳಿತು !!

ಕೇಳಿತೋ ಇಲ್ಲಾ ತನ್ನ ಭ್ರಮೆಯೋ ಒಟ್ಟಿನಲ್ಲಿ ಸದ್ದಿನ ದಿಕ್ಕಿನಲ್ಲಿ ನೆಡೆದ ಜಗನ್ನಾಥ !

ಮಂದ ಬೆಳಕಿನಲ್ಲಿ, ತೆರೆದ ಡಬ್ಬದ ಮುಂದೆ ನಿಂತು, ಪರಂಧಾಮಯ್ಯನವರು ಯಾವುದೋ ಕಾಗದ ಪತ್ರ ಹುಡುಕುತ್ತಿದ್ದಂತೆ ಕಾಣಿಸಿತು. ತಾನು ಕೂಗಿದ್ದಕ್ಕೆ ಇಡೀ ಮನೆ ಅಲುಗಾಡಿದೆ, ಇವರಿಗೆ ಮಾತ್ರ ಕೇಳಿಸಲಿಲ್ಲವೇ? ಥತ್! ಎಂದುಕೊಂಡು ಆ ರೂಮಿನೊಳಗೆ ಅಡಿಯಿಡುತ್ತ "ಏನೋ ಹುಡುಕುತ್ತಿರುವ ಹಾಗಿದೆ?" ಎಂದ ...

"ಈ ಮನೆಯ ಕಾಗದ ಪತ್ರಗಳು" ಅಂದ ಪರಂಧಾಮಯ್ಯನವರ ಮಾತುಗಳು ಗುಹೆಯಿಂದ ಹೊರಬಂದಂತಿತ್ತು! ಸಂಪೂರ್ಣವಾಗಿ ಬೇರೆಯೇ ದನಿ ಅದು. ನಿದ್ದೆಯಿಂದ ಎದ್ದಾಗಿನಿಂದ ಈವರೆಗೂ ಕಂಡ ವೈಚಿತ್ರ್ಯಗಳಿಗೆ ವಿಚಲಿತವಾಗದ ಧೈರ್ಯ, ಈಗ ಕೇಳಿದ ದನಿಯಿಂದ ಸಂಪೂರ್ಣ ಉಡುಗಿತ್ತು !!

ಮೊದಲ ಬಾರಿಗೆ ಭೀತಿ ಮನೆ ಮಾಡಿತ್ತು ! ತಾನು ಬೇರೆ ಯಾವುದೋ ಜಾಗಕ್ಕೆ ಬಂದಿದ್ದೇನೆ ಎಂದು ಮನ ಸಾರಿ ಸಾರಿ ಕೂಗಿತ್ತು ! ಅಷ್ಟರಲ್ಲಿ ಪರಂಧಾಮಯ್ಯ ಇವನತ್ತ ತಿರುಗಿದರು .... ಅಲ್ಲಲ್ಲ ಪರಂಧಾಮಯ್ಯನವರಂತೆ ಕಂಡಿದ್ದ ಆತ ... ಅಲ್ಲಲ್ಲ ’ಅದು’ ತಿರುಗಿತ್ತು !!!

ಸುತ್ತಲೂ ಕಗ್ಗತ್ತಲು ಮೂಡಿದ್ದರೆ ಈ ದೇಹದ ಮೇಲೆ ಮಾತ್ರ ಮಿಂಚಿನಂತಹ ಬೆಳಕು !

ಆ ಕಡೆ ತಿರುಗಿ ನಿಂತಿದ್ದಾಗ ಇದ್ದ ಪ್ಯಾಂಟು-ಶರಟು ಇವನತ್ತ ತಿರುಗುತ್ತಿದ್ದಂತೆ ಬಿಳೀ ನಿಲುವಂಗಿಯಾಗಿತ್ತು ! ಮುಖದ ಮೇಲೆ ಬಿಳೀ ಕೂದಲು ಹರಡಿತ್ತು! ಆ ಕಂಗಳು ! ಓ!  ಅವು ಕಂಗಳೋ ಬೆಂಕಿಯ ಉಂಡೆಗಳೋ ಅರಿಯದಾಗಿತ್ತು!! ಮುಖವು ಕ್ರೋಧದ ಪ್ರತಿ ರೂಪವೇ ಆಗಿತ್ತು!!

ದುರು ದುರು ಎಂದು ಜಗನ್ನಾಥನನ್ನೇ ನುಂಗುವಂತೆ ನೋಡುತ್ತಿತ್ತು! ಜೋರಾಗಿ ಕೂಗಿದ ಜಗನ್ನಾಥನ ಕೂಗು ಗಂಟಲನ್ನೇ ದಾಟಲಿಲ್ಲ !! ಇವನ ಪರಿಸ್ಥಿತಿ ನೋಡಿ ಗಟ್ಟಿಯಾಗಿ ಗಹಗಹಿಸಿ ನಗುತ್ತಿತ್ತು ಆ ಆಕೃತಿ !!!

"ಲೋ ! ಈ ಊರು ನಂದು ! ಮನೆ ನಂದು !! ಕಾಗದ ಪತ್ರ ನಂದು ! ನಿನಗೆ ಮನೆ ಬೇಕೇನೋ !! ನನ್ ಮನೆ ನನ್ನಿಂದ ಕಿತ್ಕೋತೀಯಾ? ಬಾರೋ ಕೊಡ್ತೀನಿ ! ಕೊಂಡ್ಕೋತೀಯಾ? ನನ್ ಏರಿಯಾದಲ್ಲಿ ನನ್ ಪರ್ಮಿಷನ್ ಇಲ್ದೆ ನೀನು ಮನೆ ತೊಗೋತೀಯಾ? ಬಾ! ಬಾರೋ ! ಬಾ!!" ಎಂದು ಅವನತ್ತ ಕೈ ಚಾಚಿತ್ತು !

ಇಲ್ಲೇ ಇದ್ದರೆ ಒಂದು ನಿಮಿಷಕ್ಕೇ ಈ ದೆವ್ವಕ್ಕೆ ಬಲಿಯಾಗೋದು ಖಚಿತ ಎಂದು ಮನಸ್ಸಿಗೆ ಬಂದ ಕೂಡಲೆ, ಅದಾವ ಶಕ್ತಿ ಬಂತೋ ಕಾಲ್ಗಳಿಗೆ, ಹೊರಗೆ ಓಡಿದ !!

ಹೊರಗೆ ನಿಂತಿದ್ದ ಕಾರು ಕೆಟ್ಟು ನಿಂತ ತುಕ್ಕು ಹಿಡಿದ ಕಾರು !! ಅದು ತಾನು ಬಂದಿಳಿದ ಕಾರ್ ಅಂತೂ ಅಲ್ಲವೇ ಅಲ್ಲ !! ಅಲ್ಲೆಲ್ಲೋ ಗುಡುಗು, ಮಿಂಚು ... ಮತ್ತೆಲ್ಲೋ ಸಿಡಿಲಿನ ಸದ್ದು ... ಜೊತೆಗೆ ಆಕಾಶಕ್ಕೇ ತೂತು ಬಿದ್ದಂತೆ ಮಳೆ ...  ಇನ್ನು ಅಲ್ಲಿ ನಿಂತು ಆಲೋಚನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ನಿರ್ಧರಿಸಿ ....

ಜಗನ್ನಾಥ ಒಂದೇ ಸಮನೆ ಓಡುತ್ತಿದ್ದಾನೆ ... ಕಾಲುಗಳು ಇನ್ನು ಓಡಲಾರೆ ಎಂದು ನಿಶ್ಯಕ್ತಿಯಿಂದ ಕುಸಿಯುತ್ತಿದ್ದರೂ ಲೆಕ್ಕಿಸದೆ ಓಡುತ್ತಿದ್ದಾನೆ ... ಏದುಸಿರು ಬಿಡುತ್ತ ಓಡುತ್ತಲೇ ಇದ್ದಾನೆ ... ಮಳೆಯಿಂದಾದ ಕೊಚ್ಚೆಯಾದ ನೆಲವನ್ನು ಲೆಕ್ಕಿಸದೆ ಓಡುತ್ತಿದ್ದಾನೆ ... ಚಳಿಗಾಳಿ ಕಣ್ಣು-ಮೂಗಿಗೆ ಬಡಿಯುತ್ತ ನೀರು ಸುರಿಸುತ್ತಿದ್ದರೂ ಓಡುತ್ತಿದ್ದಾನೆ ...

ಭೀತಿಯಿಂದ ಓಡುತ್ತಿದ್ದರೂ ಮನದ ತುಂಬ ಉತ್ತರವೇ ಅರಿಯದ ನೂರೆಂಟು ಪ್ರಶ್ನೆಗಳು "ಪರಂಧಾಮಯ್ಯನ ರೂಪದಲ್ಲಿ ಬಂದವನಾರು? ಆ ಕಾರು ಯಾವುದು? ನಂತರ ಎಲ್ಲಿ ಹೋಯಿತು? ಮತ್ತು ..." ... ಹೀಗೇ ...

-------

ಬಡ ಹಾಗೂ ಮಧ್ಯಮ ವರ್ಗದವರ ಮನೆಗಳನ್ನು ಅಕ್ರಮವಾಗಿ, ಹೆಚ್ಚಿನ ಬಾರಿ ಒತ್ತಾಯಪೂರ್ವಕವಾಗಿ ಕಸಿದುಕೊಂಡು, ತನಗಿಷ್ಟ ಬಂದ ಬೆಲೆಗೆ ಮಾರಾಟ ಮಾಡಿ, ಕೋಟ್ಯಾಂತರ ರುಪಾಯಿ ಆಸ್ತಿ ಮಾಡಿಕೊಂಡಿದ್ದು, ಒಂದು ಶುಭ ದಿನ ಪೋಲೀಸರ ಅತಿಥಿಯಾಗಿ ಸಕಲ ಆಸ್ತಿ ಕಳೆದುಕೊಂಡು, ಹೃದಯಾಘಾತದಿಂದ ನಿಧನ ಹೊಂದಿ, ಇಂದಿಗೂ ಮನೆ ಕೊಳ್ಳುವವರಿಗೆ ದೆವ್ವದ ರೂಪದಿ ಕಾಡುತ್ತಿದ್ದಾನೆ ’ಭೂತಯ್ಯ’ ಎಂಬ ಮಾತು ಅಗ್ರಹಾರದಲ್ಲಿದೆ.

 

Comments