ಅಚಲ ಕಥಾಲೋಕ

ಅಚಲ ಕಥಾಲೋಕ

ಪುಸ್ತಕದ ಲೇಖಕ/ಕವಿಯ ಹೆಸರು
ಪದ್ಮಾಲಯ ನಾಗರಾಜ್
ಪ್ರಕಾಶಕರು
ಆಕಾರ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ೨೦೨೨

ಪದ್ಮಾಲಯ ನಾಗರಾಜ್ ಅವರ ಸಣ್ಣ ಕಥೆಗಳ ಸಂಕಲನವೇ “ಅಚಲ ಕಥಾಲೋಕ". ಈ ಕೃತಿಯಲ್ಲಿ ಸೊಗಸಾದ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸವುಳ್ಳ ದಾರ್ಶನಿಕ ಕೃತಿ ಎಂದಿದ್ದಾರೆ ಮುನ್ನುಡಿ ಬರೆದ  ಸಾಹಿತಿ ರಹಮತ್‌ ತರೀಕೆರೆ. ಆ ಮುನ್ನುಡಿಯಲ್ಲಿ...

“ನಮಗೆ ನಮ್ಮೂರ ಬದಿಯಲ್ಲಿ ಹರಿವ ಹೊಳೆಗಳ ಪರಿಚಯ ವಿರುತ್ತದೆ. ಆದರೆ ಆ ಹೊಳೆಗಳ ಜಲಮೂಲವಾಗಿರುವ ಆಗಸದ ಮೋಡ, ಪರ್ವತದಗರ್ಭ, ದಟ್ಟಕಾಡು ಮತ್ತು ಹಿಮಗಡ್ಡೆಗಳ ಬಗ್ಗೆ ಅಷ್ಟಾಗಿ ಆಸ್ಥೆಯಿರುವುದಿಲ್ಲ. ಈ ವಿಸ್ಮೃತಿ ಅಥವಾ ಅಸಡ್ಡೆ ಭಾರತದ ಗುರುಪಂಥಗಳ ವಿಷಯದಲ್ಲಿಯೂ ನಿಜ. ಗುರುಪಂಥದ ಅನೇಕ ಧಾರೆಗಳ ಹಿನ್ನೆಲೆಗಳನ್ನು ತಡಕುತ್ತ ಹೋದರೆ, ಅವು ಬುದ್ಧ ಗುರುವಿನ ಧಮ್ಮದ ಮೂಲಕ್ಕೆ ಹೋಗಿ ಮುಟ್ಟುತ್ತವೆ. ಈ ಕಾರಣದಿಂದ ಬಹುತೇಕ ಗುರುಪಂಥಗಳು ವೇಷಮರೆಸಿಕೊಂಡು ಊರ ಬೀದಿಯಲ್ಲಿ ಹಾಡುತ್ತ ಅಡ್ಡಾಡುತ್ತಿರುವ ತಥಾಗತನ ರೂಪಾಂತರಗಳು. ಅದರಲ್ಲೂ ಕರ್ನಾಟಕ-ಆಂಧ್ರಪ್ರದೇಶ- ತಮಿಳುನಾಡು-ಒರಿಸ್ಸಾ ಮುಂತಾದ ರಾಜ್ಯಗಳಲ್ಲಿ ಹರಡಿರುವ ಅಚಲ ಗುರುಪಂಥವು ಈಗಲೂ ನಮ್ಮ ಜತೆ ಬದುಕಿರುವ ಧಮ್ಮದ ಆಧುನಿಕ ಅವತರಣಿಯಾಗಿದೆ.

ಬುದ್ಧನು ತನ್ನ ತಿರುಗಾಟ ಧ್ಯಾನ ಅನುಭವ ಲೋಕಹಿತಗಳ ನೆಲೆಯಿಂದ ಆಳವಾದ ದಾರ್ಶನಿಕ ಮಾಡಿದವನು; ಅದನ್ನು ತಾನು ಹೋದ ಪ್ರದೇಶದ ಸ್ಥಳೀಕರಿಗೂ ಜನಸಾಮಾನ್ಯರಿಗೂ ರ‍್ಥವಾಗುವಂತೆ ಉಜ್ವಲವಾದ ರೂಪಕ ಮತ್ತು ಮಟ್ಟಕತೆಗಳ ಮೂಲಕ ನಿರೂಪಿಸಿದವನು. ಇದು ಕಡಲನ್ನು ನೀರ ಹನಿಯೊಳಗೆ ಮರದ ಸಮಸ್ತ ಸಾರವನ್ನು ಒಂದು ಹೂವಿನೊಳಗೆ ಅಡಗಿಸಿಕೊಡುವ ಕುಶಲತೆ ಮತ್ತು ಉಪಾಯ: ಮಾತನ್ನು ಸೂತಕಗೊಳ್ಳದಂತೆ ಉಪಯೋಗಿಸುವ ಎಚ್ಚರ ಕೂಡ. ಇಂತಹ ಕುಶಲತೆ-ಉಪಾಯ- ಎಚ್ಚರಗಳ ಝಲಕನ್ನು 'ಧಮ್ಮಪದ'ದ ಗಾಹೆಗಳಲ್ಲಿ ಕಾಣಬಹುದು. ಈ ಗಾಹೆಯ ಪದ್ಧತಿ ಜೈನರ‍್ಶನಗಳಲ್ಲೂ ಇದೆ. ಕನ್ನಡದ 'ವಡ್ಡಾರಾಧನೆ'ಯ ಕಥೆಗಳು, ಪ್ರಾಕೃತ ಗಾಥೆಗಳ ವಿಸ್ತರಣ ರೂಪಗಳಾಗಿವೆ ಎಂಬುದು ಗಮನಾರ್ಹ.

`ಬುದ್ಧನ ನಂತರ ಬಂದ ಅನೇಕ ದಾರ್ಶನಿಕ ಪಂಥಗಳು ಮತ್ತು ಗುರು ಮಾರ್ಗಗಳು ಅಭಿವ್ಯಕ್ತಿಯ ಈ ಉಪಾಯವನ್ನು ಅನುಸರಿಸಿದವು. ಇದನ್ನು ನಾಥ ಕಬೀರ್ ಬಾವುಲ್ ಸೂಫಿ ಝನ್ ಮಹಾನುಭಾವ ಪಂಥಿಗಳಲ್ಲಿ ವಿಶೇಷವಾಗಿ ಕಾಣಬಹುದು. ಈ ಹಿನ್ನೆಲೆಯಲ್ಲಿ ಈ ಕೃತಿಯಲ್ಲಿರುವ ಕಥನಗಳನ್ನು ಗಮನಿಸಬೇಕು. ಇವುಗಳಲ್ಲಿ ಸಾಧಕರಿಗೆ ಗುಪ್ತವಿದ್ಯೆಯ ಸೂಚನೆಗಳಿವೆ. ಸಾಮಾನ್ಯ ಓದುಗರಿಗೆ ತಾವು ಕಟ್ಟಿಕೊಂಡಿರುವ ಸಂಕುಚಿತ ಕಟ್ಟುಪಾಡುಗಳನ್ನು ತೊರೆದು ನಿರ‍್ಗದ ಭಾಗವಾಗಿ ಬದುಕುವಂತೆ ಪ್ರೇರಿಸುವಂತಹ ಹೊಳಹುಗಳಿವೆ. ಮನುಕುಲವು ನಿರಂಕುಶಮತಿಯಾಗಲು ಹಿಡಿಯಬಹುದಾದ ಹಾದಿಗಳಿವೆ. ಈ ದೃಷ್ಟಿಯಿಂದ ಇಲ್ಲಿರುವ ತತ್ವರ‍್ಶನವನ್ನು ದೈನಿಕದಲ್ಲಿ ಅಡಗಿರುವ ಆನುಭಾವಿಕತೆ ಎನ್ನಬಹುದು. ಸ್ಥಳೀಯತೆಯನ್ನು ಬಿಟ್ಟುಕೊಡದೆ ಅರಳಿರುವ ವಿಶ್ವಮಾನವತೆ ಎಂದೂ ಕರೆಯಬಹುದು.

ಇಲ್ಲಿ ಸಂಕಲಿಸಲಾಗಿರುವ ಕಥನಗಳಲ್ಲಿ ಅಚಲ ತತ್ವದರ್ಶನವನ್ನು ಹಲವು ವಿನ್ಯಾಸಗಳಲ್ಲಿ ಹಿಡಿಯಲಾಗಿದೆ. ಇಲ್ಲಿ ಸಣ್ಣಸಣ್ಣ ಕತೆಗಳಿವೆ. ಸುಭಾಷಿತಗಳಂತಹ ಹೇಳಿಕೆಗಳಿವೆ. ಕವಿತೆಯಂತಹ ವಚನಗಳಿವೆ. ಘಟನೆಯ ನಿರೂಪಣೆಗಳಿವೆ. ಮಾತುಕತೆಯ ಭಾಗಗಳಿವೆ. ಇದೊಂದು ಬಹುನಿರೂಪಣ ವಿನ್ಯಾಸವುಳ್ಳ ದಾರ್ಶನಿಕ ಕೃತಿ. ಈ ಕಾರಣದಿಂದಲೇ ಆಸಕ್ತಿಯಿಂದ ಓದಿಸಿಕೊಂಡು ಹೋಗುವ ಕೃತಿ, ಇಲ್ಲಿರುವ ಚೆಂಚುದಾಸರು, ವೆಲಗಲಬುರೆ ಬೋಧಾನಂದ, ಶಿವರಾಮ ದೀಕ್ಷಿತ, ಬಂಡಾರು ಸುಬ್ಬಯರ‍್ಯ, ಬೇರಿಕೆ ಬುಟ್ಯಪ್ಪ, ಬುರುದೆ ರಾಮಚಂದ್ರಪ್ಪ, ದೊಡ್ಡಿ ವೆಂಕಟಗಿರೆಪ್ಪ ಮುಂತಾದ ಜನತೆಯ ಸಂತರ ಬಾಳಿನ ಪ್ರಸಂಗಗಳು, ಕೃತಿಯನ್ನು ಅವಧೂತ ಚರಿತ್ರೆಯನ್ನಾಗಿಸಿವೆ. ಇಲ್ಲಿರುವ ಎಷ್ಟೋ ಸಂತರ ಸೀಮೆಯನ್ನು ಪದ್ಮಾಲಯ ಅವರ ಜತೆ ತಿರುಗಾಟ ಮಾಡುವ ಅಪರ‍್ವ ಅವಕಾಶವು ನನಗೆ ಒದಗಿಬಂದಿತ್ತು.

ಈ ಕೃತಿಯನ್ನು ಅಚಲವನ್ನು ಝನ್ ಶರಣ ಒಳಗೊಂಡಂತ ಬೇರೆಬೇರೆ ಗುರುಪಂಥದ ದಾರ್ಶನಿಕಸಾಹಿತ್ಯದ ಜತೆ ಇಟ್ಟುನೋಡುವ ವಿನ್ಯಾಸದಲ್ಲಿ ಕಟ್ಟಲಾಗಿದೆ. ಕೃತಿಯ ಕೊನೆಯ ಭಾಗದಲ್ಲಿರುವ, ಅಚಲವನ್ನು ಶರಣಸಾಹಿತ್ಯದ ಜತೆಗಿಟ್ಟು ಮಾಡಿರುವ ವಿಶ್ಲೇಷಣೆ ಹೊಸತಾಗಿದೆ. ಪದ್ಮಾಲಯ ಅವರು ಅಚಲ ಗುರುಮರ‍್ಗದ ಪ್ರಸಿದ್ಧ ಪ್ರವಚನಕಾರರೂ ಆಗಿದ್ದು, ಬೆಡಗಿನ ವಚನಗಳಿಗೆ ಕೊಟ್ಟಿರುವ ವ್ಯಾಖ್ಯಾನವು ಹೊಸನೋಟಗಳಿಂದ ಕೂಡಿದೆ. ಕರ್ನಾಟಕ ಜನಮಾನಸವನ್ನು ಹೊಸದಿಕ್ಕಿನಲ್ಲಿ ಕಟ್ಟುವ ಕಾಯಕವನ್ನು ನಟರಾಜ ಬೂದಾಳು, ಲಕ್ಷ್ಮೀಪತಿ ಕೋಲಾರ ಮೊದಲಾದ ಚಿಂತಕರು ಅನವರತವಾಗಿ ಮಾಡುತ್ತಿದ್ದಾರೆ. ಅವರ ಜತೆ ಪದ್ಯಾಲಯ ಅವರ ಅಚಲದರ್ಶನದ ಕೃತಿಸರಣಿಯೂ ಸೇರುತ್ತದೆ. ಕನ್ನಡದ ಓದುಗರು ಹೇಗೆ ಇಲ್ಲಿರುವ ಕಥನ ಹಾಗೂ ಈ ವ್ಯಾಖ್ಯಾನಗಳನ್ನು ಒಳಗೆ ಬಿಟ್ಟುಕೊಳ್ಳುವರು ಹಾಗೂ ಆ ಮೂಲಕ ಲೋಕವನ್ನು ಹೊಸದಾಗಿ ಗ್ರಹಿಸುವ ದೃಷ್ಟಿಕೋನವನ್ನು ಹೇಗೆ ಪಡೆದುಕೊಳ್ಳುವರು ಎಂಬ ಬಗ್ಗೆ ನಾನು ಆಸಕ್ತನಾಗಿದ್ದೇನೆ. ಆಶಾವಾದಿಯಾಗಿದ್ದೇನೆ.

ಕರ್ನಾಟಕದ ಬೆಂಗಳೂರು ತುಮಕೂರು ಕೋಲಾರ ಸೀಮೆಗಳಲ್ಲಿ, ನೆಲದ ಮರೆಯ ನಿಧಾನದಂತೆ ಮಣ್ಣಿಗೆ ಹತ್ತಿದ ಗರುಕೆಯಂತೆ ಅಚಲಮರ‍್ಗದ ಗುರುಗಳ, ಗುರುಗಳೂ ಶಿಷ್ಯರೂ ಭೇದವಿಲ್ಲದೆ ಕೂಡಿ ಮಾಡುವ ಸತ್ಸಂಗ- ಸಮೈಕ್ಯಗಳ ಹಾಗೂ ಅವರು ಸೇರುವ ಮಠಗಳ ಅಸ್ತಿತ್ವವಿದೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಸಾಂಪ್ರದಾಯಿಕ ಹಿನ್ನೆಲೆಯ ಬಹುತೇಕ ತತ್ವಶಾಸ್ತ್ರದ ಪಂಡಿತರಿಗೆ 'ಅಚಲ'ವು ಅಜ್ಞಾತವಾಗಿಯೇ ಉಳಿದಿದೆ. ಹೀಗಿರುತ್ತ ಅಚಲ ಮರ‍್ಗದ ರ‍್ಶನ ಮತ್ತು ಚರಿತ್ರೆಯನ್ನು ಕನ್ನಡಿಗರಿಗೆ ಪರಿಚಯಿಸುವ ಕರ‍್ಯವನ್ನು ಮಾಡಿದವರು ಪದ್ಮಾಲಯ ನಾಗರಾಜ್‌, ಅವರೀಗ ಈ ಪಂಥದ ರ‍್ಶನವನ್ನು ತಮ್ಮೊಳಗೆ ಹುದುಗಿಸಿಕೊಂಡಿರುವ ಚಕಮಕಿ ಕಲ್ಲಿನ ಕಿಡಿಗಳಂತೆ ಅಥವಾ ಮಂಟೆಸ್ವಾಮಿ ಕಥನವು ಹೇಳುವ ಬೆಳಕಿನ ಹುಳಗಳಂತೆ ಇರುವ ಕಥನಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಅವಕ್ಕೆ ಮನಮುಟ್ಟುವಂತೆ ವ್ಯಾಖ್ಯಾನವನ್ನೂ ಒದಗಿಸಿದ್ದಾರೆ. ಅವರ ಈ ಕಾರ್ಯಕ್ಕಾಗಿ ತತ್ವಶಾಸ್ತ್ರದಲ್ಲಿಯೂ ಗುರುಮಾರ್ಗಗಳಲ್ಲಿಯೂ ಆಸ್ಥೆಯುಳ್ಳ ಸಮಸ್ತ ಕನ್ನಡಿಗರ ಪರವಾಗಿ ಕೃತಜ್ಞತೆ ಸಲ್ಲಬೇಕು” ಎಂದು ರಹಮತ್ ತರೀಕೆರೆ ಬರೆಯುತ್ತಾರೆ. ೧೩೮ ಪುಟಗಳ ಈ ಪುಟ್ಟ ಪುಸ್ತಕವನ್ನು ಸರಾಗವಾಗಿ ಓದಿ ಮುಗಿಸಬಹುದಾಗಿದೆ.