ಅಟಿಯ ಸುತ್ತ ಮುತ್ತ - ಭಾಗ 1
ಆಟಿಯೆಂದರೆ ಸಂಭ್ರಮವಲ್ಲ, ಆಚರಣೆಯಲ್ಲ. ವರ್ಷದ ಉಳಿದ ಹನ್ನೊಂದು ತಿಂಗಳಿನಂತೆ ಒಂದು ಕಾಲಮಾನ. ಪ್ರಕೃತಿಯ ನಿಯಮದಂತೆ ಎಲ್ಲ ತಿಂಗಳುಗಳಿಗೂ ಅದರದರದೇ ಆದ ಗುಣ ಮತ್ತು ಲಕ್ಷಣಗಳಿವೆ. ಆಟಿ ಪ್ರಕೃತಿಯ ನಿಯಮದಿಂದ ಹೊರಗಿಲ್ಲ.
ಜನವರಿಯಿಂದ ದಶಂಬರ ತನಕದ ಗ್ರೆಗೋರಿಯನ್ ಕಾಲಮಾನವನ್ನು ಕಾಲ ಮತ್ತು ಸಮಯಗಣನೆಗೆ ಪ್ರಪಂಚವೇ ಒಪ್ಪಿದೆ. ಕಾಲಮಾನದಲ್ಲಿ ವರ್ಷವೆಂದರೆ 12 ತಿಂಗಳುಗಳ ಹೆಸರು ಮತ್ತು ದಿನಗಳ ಹಂಚಿಕೆ. ಭಾರತವು ಗ್ರೆಗೋರಿಯನ್ ಕಾಲಮಾನವನ್ನು ಒಪ್ಪಿದೆ. ಆದರೆ ನಮ್ಮಲ್ಲಿ ನಮ್ಮದೇ ಆದ ನೂರಕ್ಕೂ ಅಧಿಕ ಕಾಲಮಾನಗಳಿವೆ. ಭಾಷೆ ಮತ್ತು ಪ್ರಾದೇಶಿಕತೆಯ ಆಧಾರದಲ್ಲಿ ಭಾರತೀಯರು ತಿಂಗಳುಗಳನ್ನು ಹೇಳುತ್ತಾರೆ. ಒಂದು ವರ್ಷವನ್ನು ಸಂವತ್ಸರ ಎಂದು ಹೇಳುತ್ತೇವೆ. ಪ್ರಭವದಿಂದ ಆರಂಭಗೊಂಡು (ಅ)ಕ್ಷಯದ ವರೆಗೆ ಅರುವತ್ತು ಸಂವತ್ಸರಗಳಿವೆ. ಈಗ ಕ್ರೋಧಿಯೆಂಬ ಹೆಸರಿನ ಮೂವತ್ತೆಂಟನೇ ಸಂವತ್ಸರ ನಡೆಯುತ್ತಿದೆ. ಮುಂದಿನ ಯುಗಾದಿಗೆ ಹೊಸ ಸಂವತ್ಸರ ವಿಶ್ವಾವಸು ಸಂವತ್ಸರ ಆರಂಭಗೊಳ್ಳಲಿದೆ. ಜನರು ಅರುವತ್ತು ಸಂವತ್ಸರ ಕಾಲ ಬದುಕಿದ ಮೇಲೆ ಅವರಿಗೆ ಸಂವತ್ಸರದ ಎರಡನೇ ಆವೃತ್ತಿ ಆರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ಭಾರತೀಯರು ಷಷ್ಟ್ಯಬ್ದಿ ಆಚರಣೆ ಮಾಡುವ ಸಂಪ್ರದಾಯವಿದೆ.
ಭಾರತದಲ್ಲಿ ಚಂದ್ರನ ಪ್ರಭಾವ ಮತ್ತು ಸೂರ್ಯನ ಪ್ರಭಾವ ಆಧರಿಸಿ ಕಾಲಗಣನೆಯಿದೆ. ಚಾಂದ್ರಮಾನ ಯುಗಾದಿಯಿಂದ ಚಾಂದ್ರಮಾನ ಕಾಲಗಣನೆ ಆರಂಭಗೊಳ್ಳುತ್ತದೆ. ಚಾಂದ್ರಮಾನದಲ್ಲಿ ಪಕ್ಷ ನಿರ್ಣಯಕ್ಕೆ ಹುಣ್ಣಿಮೆ ಮತ್ತು ಅಮಾವಾಸ್ಯೆ ಪ್ರಮುಖ ದಿನಗಳು. ಹುಣ್ಣಿಮೆಯ ಮರುದಿನದಿಂದ ಕೃಷ್ಣ ಪಕ್ಷ ಮತ್ತು ಅಮಾವಾಸ್ಯೆಯ ಮರುದಿನದಿಂದ ಶುಕ್ಲಪಕ್ಷ ಎಂಬ ವಿಭಾಗಗಳಿವೆ. ಹಬ್ಬಗಳ ಆಚರಣೆಯಲ್ಲಿ ಚಾಂದ್ರಮಾನ ಪಕ್ಷದ ತಿಥಿಗಳು ಪರಿಗಣನೆಗೆ ಬರುತ್ತವೆ. ಪಕ್ಷದ ದಿನಗಳಿಗೆ ತಿಥಿ ಎನ್ನುವರು. ತಿಥಿಗಳು ಪಾಡ್ಯದಿಂದ ಚತುರ್ದಶಿ ತನಕ ಹದಿನಾಲ್ಕು. ಪ್ರತೀ ತಿಂಗಳಿಗೆ ಎರಡು ಬಾರಿ ತಿಥಿಗಳ ಆವೃತ್ತಿಯಾಗಿ ಒಟ್ಟು ಇಪ್ಪತ್ತೆಂಟು ದಿನಗಳು ಮತ್ತು ಹುಣ್ಣಿಮೆ ಅಮಾವಾಸ್ಯೆ ಎರಡು ದಿನ ಸೇರಿ ಚಾಂದ್ರಮಾನ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಚೈತ್ರ , ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ (ಆಶ್ಲೇಷ), ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಮತ್ತು ಪಾಲ್ಗುಣ ಇವು ಚಾಂದ್ರಮಾನ ತಿಂಗಳುಗಳ ಹೆಸರು. ಇಸ್ಲಾಂ ಮತದಲ್ಲಿ ಮುಹರಮ್, ಸಫರ್, ರಬೀ ಅಲ್-, ರಬಿಅತ್-, ಜುಮಾದಾ ಅಲ್-ಅವ್ವಲ್, ಜುಮಾದಾ ಅತ್-ಥಾನಿಯಾ, ಜುಮಾದಾ ಅಲ್-ಆಖಿರಾ, ರಜಬ್, ಶಾಬಾನ್, ರಾಮಾನ್, ಶವ್ವಾಲ್, ಝು ಅಲ್-ಖಾದಾ, ಝು ಅಲ್-ಹೈಜ್ಜಾ ಎಂದು ತಿಂಗಳಿಗೆ ಹೆಸರುಗಳಿವೆ. ಸೂರ್ಯನ ಪ್ರಭಾವ ಆಧರಿಸಿದ ಭಾರತೀಯ ಕಾಲಮಾಪನವನ್ನು ಸೌರಮಾನ ಎನ್ನುವರು. ಭೂವಾರ್ಷಿಕ ಚಲನೆಯ ಕಾರಣದಿಂದ ಸೂರ್ಯನು ಪ್ರತೀ ಮೂವತ್ತು ಯಾ ಮೂವತ್ತೊಂದು ದಿನಗಳಲ್ಲಿ ಹೊಸ ರಾಶಿಯನ್ನು ಸೇರುತ್ತಾನೆ. ರಾಶಿ ಬದಲಾದೊಡನೆ ತಿಂಗಳಿಗೆ ಆ ರಾಶಿಯ ಹೆಸರು ಬರುತ್ತದೆ. ಸೌರಮಾನದ ಮೊದಲ ತಿಂಗಳು ಸೌರಯುಗಾದಿಯ ದಿನ ಎಂದರೆ ವಿಷು(ಬಿಸು)ವಿನಿಂದಾರಂಭವಾಗುತ್ತದೆ. ಪ್ರತೀ ಸೌರ ತಿಂಗಳ ಮೊದಲ ದಿನವನ್ನು ತುಳುವಿನಲ್ಲಿ ಸಿಂಗೊಡೆಯೆನ್ನುವರು. ಮಲಯಾಳಂ ಭಾಷೆಯಲ್ಲಿ ತಿಂಙಳ್ ತೊರಕ್ ಎನ್ನುವರು. ಸೌರಮಾನ ಮತ್ತು ಚಾಂದ್ರಮಾನ ತಿಂಗಳುಗಳ ದಿನ ವ್ಯತ್ಯಾಸಗಳು ಹಬ್ಬದ ಮೇಲೂ ಪರಿಣಾಮ ಬೀರುವುದಿದೆ. ಕೆಲವೊಮ್ಮೆ ಚಾಂದ್ರಮಾನ ಕಾಲದಲ್ಲಿ ಆಚರಿಸುವ ಕೆಲವು ಹಬ್ಬಗಳು ಸೌರಮಾನದಲ್ಲಿ ಪುನಹ ಆಚರಣೆ ಕಾಣುವುದಿದೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಕುಂಭ, ಮಕರ ಮತ್ತು ಮೀನ ಎಂಬುದು ಸೌರ ತಿಂಗಳುಗಳಿಗೆ ಹೆಸರು. ಈ ತಿಂಗಳುಗಳು ಪ್ರತೀ ಸಂಕ್ರಾತಿಯ ಮರುದಿನದಿಂದ ಬದಲಾಗುತ್ತವೆ. ತುಳು ನಾಡಿನಲ್ಲಿ ಸೌರಮಾನ ತಿಂಗಳುಗಳಿಗೆ ಪಗ್ಗು, ಬೇಶ, ಕಾರ್ತೆಲ್, ಆಟಿ, ಸೋಣ, ನಿರ್ನಾಲ(ಕನ್ಯಾ), ಬೊಂತೆಲ್, ಜಾರ್ದೆ, ಪೆರಾರ್ದೆ, ಪೊನ್ನಿ(ಪುಯಿಂತೆಲ್), ಮಾಯಿ ಮತ್ತು ಸುಗ್ಗಿ ಎಂದು ಹೆಸರಿಸಿದ್ದಾರೆ. ಚಾಂದ್ರಮಾನದ ಆಷಾಢ, ಸೌರಮಾನದ ಕರ್ಕಾಟಕ ತಿಂಗಳು ತುಳುವಿನ ಆಟಿಗೆ ಸಂವಾದಿಯಾದ ತಿಂಗಳೆಂದು ಹೇಳಬಹುದು
ತುಳುವಿನಲ್ಲಿ ಪ್ರಮುಖವಾಗಿ ಮರ್ಯಾಲ ಮತ್ತು ಅರೆಗಾಲ ಎಂದು ಎರಡು ಕಾಲಘಟ್ಟಗಳಿವೆ. ಚಳಿಗಾಲದ ಹೆಸರು ಉಲ್ಲೇಖಗೊಳ್ಳುವುದಿಲ್ಲ. ಮರ್ಯಾಲದಲ್ಲಿ ಆಟಿ ತಿಂಗಳು ಸೇರುತ್ತದೆ. ಪಗ್ಗು ಅರೆಗಾಲದ ಕೊನೆಯ ತಿಂಗಳು. ಅದಕ್ಕಾಗಿಯೇ ರೈತರು ವಿಷುವಿನ ದಿನ ಬೇಸಾಯದ ಮುಹೂರ್ತ ಮಾಡುವರು. ಪಗ್ಗುವಿನ ನಂತರ ಯಾವ ದಿನ ಬೇಕಾದರೂ ಮಳೆ ಬರಬಹುದು ಎಂಬುದು ಅವರ ಅನಿಸಿಕೆ ಮತ್ತು ಕೆಲವೊಮ್ಮೆ ಅನುಭವ. ಆದರೆ ಪ್ರಕೃತಿಯ ನಾಶದಿಂದ ಮಳೆಯು ತನ್ನ ಆಗಮನವನ್ನು ಹಿಂದೂಡುವುದು ಮತ್ತು ಮುಂದೂಡುವುದನ್ನು ನಾವು ಅನುಭವಿಸುತ್ತೇವೆ. ನಮ್ಮ ಹಿರಿಯರ ಕಾಲಮಾನದ ಲೆಕ್ಕಾಚಾರಗಳು ಬಹಳ ನಿಖರ. ಬೇಶ ಹತ್ತನೇ ದಿನವನ್ನು ಪತ್ತನಾಜೆ (ಹತ್ತನಾವಧಿ) ಎನ್ನುವರು. ಈ ದಿನದ ನಂತರ ಕೋಲ, ನೇಮ, ಉತ್ಸವ, ತಂಬೂಲಗಳು ಇರುವುದಿಲ್ಲ. ಯಕ್ಷಗಾನದ ಕುಣಿತ ಮಾಡುವುದಿಲ್ಲ. ಹತ್ತನಾವಧಿಗೆ ಕುಣಿತದ ಗೆಜ್ಜೆ ಕಳಚಿಡಬೇಕು ಎಂದು ನಿಯಮ ಮಾಡಿದ್ದಾರೆ. ಎಲ್ಲರೂ ಬೇಸಾಯದತ್ತ ಮುಖಮಾಡಬೇಕು ಎಂಬುದೇ ಇದರ ಪ್ರಧಾನ ಆಶಯ.
(ಇನ್ನೂ ಇದೆ)
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ