ಅಡಿಕೆಯಲ್ಲಿ ಸುಳಿ ತಿಗಣೆ ನಿಯಂತ್ರಣ



ಒಂದು ಅಡಿಕೆ ಸಸಿಯ ಉತ್ಪಾದಕತೆ ಈಗಿನ ಲೆಕ್ಕಾಚಾರದಲ್ಲಿ ಸುಮಾರು ರೂ.೪೦೦-೪೫೦. ಸುಮಾರು ೧೦ ಚದರ ಅಡಿ ವಿಸ್ತೀರ್ಣದಲ್ಲಿ ಇಷ್ಟು ಆದಾಯ ಕೊಡುವ ಬೆಳೆಯ ಪ್ರತೀ ಸಸಿಯ ಆರೈಕೆಯೂ ಅತೀ ಪ್ರಾಮುಖ್ಯ. ಅಡಿಕೆಯ ಎಳೆ ಪ್ರಾಯದ ಸಸಿ ಮತ್ತು ಮರಗಳ ಬೆಳವಣಿಗೆಯ ಮೇಲೆ ತೊಂದರೆ ಮಾಡುವ ಕೀಟದಲ್ಲಿ ಪ್ರಮುಖವಾದುದು ಸುಳಿ ತಿಗಣೆ. ಇದನ್ನು ಇಂಗ್ಲೀಷಿನಲ್ಲಿ Spindle Bug (Carvalhoa arecae) ಎನ್ನುತ್ತಾರೆ. ಇದು ಮೂಡುತ್ತಿರುವ ಎಳೆ ಸುಳಿಯ ಭಾಗದಲ್ಲಿ ವಾಸಿಸಿಸುತ್ತಾ, ಅಲ್ಲೇ ಸಂತಾನಾಭಿವೃದ್ದಿಯಾಗಿ ಅದರ ರಸ ಹೀರಿ ಬೆಳವಣಿಗೆಯನ್ನು ಧಮನಿಸುತ್ತದೆ. ಮೊದಲಾಗಿ ಈ ಕೀಟವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಅಡಿಕೆ ತೋಟಗಳಲ್ಲಿ ಕಂಡು ಬಂತು. ೧೯೫೬ ರಲ್ಲಿ ಅಡಿಕೆ ಬೆಳೆಯಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಗುರುತಿಸಲಾಯಿತು. ಈಗ ಅಡಿಕೆ ಬೆಳೆಯಲಾಗುವ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಇದು ಇದ್ದೇ ಇದೆ. ಅಡಿಕೆ ಸಸ್ಯವು ಇದರ ಬೆಳವಣಿಗೆಯ ಆಶ್ರಯ ಸಸ್ಯವಾಗಿದ್ದು, ಅದರ ಸುಳಿಯಲ್ಲಿಯೇ ಇದರ ಸಂತಾನಾಭಿವೃದ್ದಿಯಾಗಿ ಒಂದು ತಿಂಗಳಲ್ಲಿ ಹೊಸ ತಲೆಮಾರು ಉಂಟಾಗುತ್ತದೆ. ಹಿಂದೆ ಈ ಕೀಟವನ್ನು ಸಾಮಾನ್ಯ ಪ್ರಮಾಣದಲ್ಲಿ ಹಾನಿ ಮಾಡುವ ಕೀಟವೆಂದು ವರ್ಗೀಕರಿಸಲಾಗಿತ್ತಾದರೂ ಈಗ ಇದು ಹೆಚ್ಚಿನ ಪ್ರಮಾಣದಲ್ಲಿ ತೊಂದರೆ ಮಾಡುವ ಕೀಟವಾಗಿದೆ.
ನಿಮ್ಮ ತೋಟದಲ್ಲಿನ ಎಳೆಸಸಿಯ ಎಲೆಗಳು ಗಿಡ್ಡವಾಗುವುದು, ಮತ್ತು ಬಿಡಿಸಿದ ಎಲೆಗಳಲ್ಲಿ ತೂತು ತೂತುಗಳು ಇರುವುದನ್ನು ಕಂಡಿರಬಹುದು. ಅಷ್ಟೇ ಅಲ್ಲದೆ ಬೆಳೆದು ಫಸಲು ನೀಡುವ ಮರಗಳ ಎಲೆಗಳಲ್ಲೂ ಇದೇ ರೀತಿ ತೂತುಗಳು ಇರುವುದನ್ನೂ ಗಮನಿಸಿರಬಹುದು. ಕೆಲವು ಫಲ ಬಿಡುತ್ತಿರುವ ಅಡಿಕೆ ಸಸಿಗಳ ಎಲೆಗಳು ಮೂಡುತ್ತಿರುವಾಗ ಹಿಂದಿನ ಎಲೆಗಿಂತ ಸಣ್ಣದಾಗಿ ಮತ್ತು ಗರಿಗಳು ಪರಸ್ಪರ ಅಂಟಿ ಕೊಂಡಂತೆ ಹೊರ ಬರುವುದನ್ನೂ ನಾವೆಲ್ಲಾ ಗಮನಿಸಿದ್ದೇವೆ. ಇದನ್ನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ತುಳು ಭಾಷೆಯಲ್ಲಿ ಕುಂಟಿ ತಿರಿ (ಬೆಳವಣಿಗೆ ಕುಂಠಿತ ಸುಳಿ) ಎನ್ನುತ್ತಾರೆ.
ಸುಳಿಯ ಬೆಳವಣಿಗೆ ಕುಂಠಿತವಾಗಲು ಆ ಭಾಗದಲ್ಲಿ ಕೀಟವು ವಾಸಿಸಿ ರಸ ಹೀರಿ ಹಾನಿ ಮಾಡಿದ್ದೇ ಆಗಿರುತ್ತದೆ. ಎಲೆ ಭಾಗಕ್ಕೆ ಉಂಟಾಗುವ ಘಾಸಿಯಿಂದಾಗಿ ಆ ಸುಳಿಯ ಭಾಗ ಮತ್ತು ನಂತರ ಬರುವ ಸುಳಿಗಳು ಕುಬ್ಜ ಕುಬ್ಜವಾಗುತ್ತಾ ಬಂದು ಕೊನೆಗೆ ಆ ಭಾಗದಲ್ಲಿ ಸುಳಿಕೊಳೆ ಉಂಟಾಗಿ ಸುಳಿಯೇ ಸತ್ತು ಹೋಗುವ ಸಾಧ್ಯತೆಯೂ ಇದೆ. ಆದ ಕಾರಣ ಈ ಕೀಟದ ಭಾಧೆ ಇದ್ದಲ್ಲಿ ಇದನ್ನು ನಿರ್ಲಕ್ಷ್ಯ ಮಾಡದೆ ನಿವಾರಣೋಪಾಯ ಕೈಗೊಳ್ಳಬೇಕು. ಬರೇ ಎಳೆ ಎಲೆಗಳ ರಸ ಹೀರುವುದೇ ಅಲ್ಲದೆ ಹೂ ಗೊಂಚಲಿನ ರಸವನ್ನೂ ಹೀರಿ ತೊಂದರೆ ಮಾಡುತ್ತವೆ. ಇದರಿಂದ ಹೂ ಗೊಂಚಲು ಒಣಗುತ್ತದೆ.
ಎಳೆಯ ತಿಗಣೆಗೆ ಅಪ್ಸರೆ (ರೆಕ್ಕೆ ಬಾರದ) ಎಂಬುದಾಗಿಯೂ , ಬೆಳೆದ ತಿಗಣೆಗೆ ಪ್ರೌಡ ತಿಗಣೆ ಎಂಬುದಾಗಿಯೂ ಕರೆಯುತ್ತಾರೆ. ಎರಡೂ ರಸ ಹೀರುತ್ತವೆ. ಅಪ್ಸರೆಯು ಹಸುರು ಮೈ ಬಣ್ಣದಲ್ಲಿ ತುದಿ ಮತ್ತು ಶರೀರದ ಅಲಗುಗಳಲ್ಲಿ ಕೆಂಪು ಬಣ್ಣದಲ್ಲಿರುತ್ತದೆ. ಪ್ರೌಢ ಕೀಟದ ಮೀಸೆ, ಭುಜ ಮತ್ತು ಮೂತಿ ಭಾಗ ಕಪ್ಪಗಿದ್ದು ಉಳಿದ ಭಾಗ ಕೆಂಪಾಗಿರುತ್ತದೆ. (ಚಿತ್ರ ೧)
ನಿವಾರಣೋಪಾಯ: ಸಿಪಿಸಿಆರ್ಐ ಹಾಗೂ ಕೃಷಿ ವಿಶ್ವ ವಿಧ್ಯಾನಿಲಯಗಳ ಮಾಹಿತಿಯಲ್ಲಿ ಈ ಕೀಟ ಸಮಸ್ಯೆಗೆ ಕ್ವಿನಾಲ್ಫೋಸ್ (ಎಕಾಲಕ್ಸ್) ಅಥವಾ ಮೋನೋಕ್ರೋಟೋಫಾಸ್ ಕೀಟ ನಾಶಕವನ್ನು ಸಿಂಪಡಿಸಬೇಕು ಮತ್ತು ಸುಳಿ ಭಾಗಕ್ಕೆ ಸಣ್ಣ ಪಾಲಿಥೀನ್ ಚೀಲದಲ್ಲಿ ಪೋರೇಟ್ ಹರಳನ್ನು ಹಾಕಿ ಅದಕ್ಕೆ ತೂತನ್ನು ಮಾಡಿ ಸುಳಿ ಭಾಗದಲ್ಲಿ ಇದಬೇಕೆಂಬ ಸಲಹೆಯನ್ನು ನೀಡುತ್ತಾರೆ. ಸಿಂಪರಣೆಗೆ ಈ ಕೀಟನಾಶಕ ಬಳಸಿದಲ್ಲಿ ಸುಮಾರು ೨೦ ದಿನಗಳ ಕಾಲ ಅಡಿಕೆ ಹಾಳೆಗಳನ್ನು ಪಶು ಆಹಾರವಾಗಿ ಬಳಕೆ ಮಾಡಬಾರದು. ತೋಟದ ಹುಲ್ಲಿನ ಮೇಲೆ ಕೀಟನಾಶಕ ಬಿದ್ದಲ್ಲಿ ಅದನ್ನೂ ಸಹ ಅಷ್ಟೇ ದಿನ ಪಶು ಮೇವಾಗಿ ಬಳಕೆ ಮಾಡಬಾರದು. ಆದರೆ ಪಾಲಿಥೀನ್ ಚೀಲದಲ್ಲಿ ಮರದ/ ಸಸಿಯ ಯಾವುದೇ ಭಾಗಕ್ಕೆ ನೇರ ಸ್ಪರ್ಶವಾಗದಂತೆ ಫೋರೇಟ್ ಹರಳನ್ನು ಇಟ್ಟಲ್ಲಿ ಅದನ್ನು ಬಳಕೆ ಮಾಡಬಹುದು.(ಚಿತ್ರ ೩) ಫೋರೇಟ್ ಹರಳಿನ ಘಾಟು ವಾಸನೆಗೆ ಕೀಟಗಳು ದೂರವಾಗುತ್ತವೆ. ಸುರಕ್ಷತೆಯ ದೃಷ್ಟಿಯಿಂದ ಈ ಪರಿಹಾರ ಉತ್ತಮ. ತೀವ್ರ ಹನಿ ಇದ್ದಲ್ಲಿ ಮಾತ್ರ ಒಮ್ಮೆ ಸಿಂಪರಣೆ ಕೈಗೊಂಡು ನಂತರ ಮೇಲಿನ ವಿಧಾನವನ್ನು ಅನುಸರಿಸಿರಿ.
ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ.