ಅಡಿಕೆ ಧಾರಣೆ: ಆತಂಕ ಬೇಡ

ಅಡಿಕೆ ಧಾರಣೆ: ಆತಂಕ ಬೇಡ

ಬಹಳಷ್ಟು ಅಡಿಕೆ ಬೆಳೆಗಾರರು, ತಜ್ಞರು ಅಡಿಕೆ ಬೆಳೆಪ್ರದೇಶ ವಿಸ್ತರಣೆ ಆಗಿ ಮುಂದೇನು? ಎಂದು ಆತಂಕದಲ್ಲಿದ್ದಾರೆ. ಆದರೆ ಅಂತಹ ಆತಂಕದ ಅಗತ್ಯವಿಲ್ಲ. ಬೆಳೆ ಹೆಚ್ಚಾದರೆ ಈಗಿರುವ ಬೆಲೆ ಸ್ವಲ್ಪ ಕಡಿಮೆಯಾಗಬಹುದು. ಅಲ್ಲದೆ ಕೆಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಪ್ರಾಕೃತಿಕ ಅನುಕೂಲ ಇಲ್ಲದೆ ಬೆಳೆ ಇದ್ದರೂ ಉತ್ಪತ್ತಿ ಹೆಚ್ಚಾಗಲಾರದು. ಈ ಹಿಂದೆಯೂ ಅಡಿಕೆ ಬೆಳೆ ಪ್ರದೇಶ ವಿಸ್ತರಣೆ ಆದಾಗಲೂ ಇದೇ ಮಾತನ್ನು ಎಲ್ಲರೂ ಹೇಳುತ್ತಿದ್ದರು. ಎಲ್ಲರ ಭವಿಷ್ಯವೂ, ಉಪದೇಶವೂ ಹುಸಿಯಾಗಿದೆ. 

ಅಡಿಕೆ ಬೆಳೆ ಪ್ರದೇಶ ಎಲ್ಲೆಲ್ಲಾ ವಿಸ್ತರಿಸಲ್ಪಡುತ್ತದೆ ಎಂದರೆ ಅಚ್ಚರಿಯಾಗಬಹುದು. ನಮ್ಮ ಮಿತ್ರರೊಬ್ಬರು ಹೇಳುತ್ತಾರೆ, ಪಶ್ಚಿಮ ಬಂಗಾಲದಲ್ಲಿ ಭತ್ತ ಬೆಳೆಯುವ ಗದ್ದೆಗಳಲ್ಲಿ ಸಹ ಜನ ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರಂತೆ. ಕರ್ನಾಟಕದ ಬಹುತೇಕ ನರ್ಸರಿಗಳವರು ತಾವು ತಯಾರು ಮಾಡಿದ ಗಿಡಗಳಲ್ಲಿ ಹೆಚ್ಚಿನ ಪಾಲು ಕೇರಳದವರಿಂದ ಖರೀದಿಯಾಗಿ ತಮಿಳುನಾಡು, ಆಂದ್ರ ಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಗೆ ಹಾಗೆಯೇ ಶ್ರೀಲಂಕಾಕ್ಕೂ ಹೋಗುತ್ತದೆ ಎಂಬ ಮಾಹಿತಿ ಇದೆ. ವರ್ಷದಿಂದ ವರ್ಷಕ್ಕೆ ಅಡಿಕೆ ಸಸಿ ಮಾಡುವವರು ಹೆಚ್ಚು ಹೆಚ್ಚು ಸಸಿಗಳನ್ನು ಉತ್ಪಾದಿಸುತ್ತಿರುತ್ತಾರೆ. ಇದು ಈಗ ಅಲ್ಲ. ಸುಮಾರು ೧೦-೧೨ ವರ್ಷಕ್ಕೆ ಹಿಂದೆಯೇ ಪ್ರಾರಂಭವಾಗಿದೆ. ಇದು ನರ್ಸರಿಗಳ ವಿಚಾರ ಆದರೆ ಇನ್ನು ಬೀಜದ ಅಡಿಕೆಯನ್ನೂ ಗಿಡಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಒಯ್ದು ಅಡಿಕೆ ಸಸಿ ಮಾಡುವವರೂ ಇದ್ದಾರೆ.

ಏನೇ ಆದರೂ ಅಡಿಕೆ ಹೆಚ್ಚಾಗುವುದಿಲ್ಲ: ಎಲ್ಲಾ ಕಡೆಯಲ್ಲೂ ಅಡಿಕೆ ಸಸಿ ನೆಟ್ಟಾಕ್ಷಣ ಅದು ಉತ್ತಮ ಫಲ ಕೊಡುವುದಿಲ್ಲ. ಅಡಿಕೆ ಬೆಳೆಗೆ ಸೂಕ್ತ ಹವಾಮಾನ ೩೦-೩೨ ಡಿಗ್ರಿಗಿಂತ ಹೆಚ್ಚಾಗಬಾರದು. ಅದಕ್ಕಿಂತ ಹೆಚ್ಚಿನ ತಾಪಮಾನ ಇರುವ ಕಡೆಗಳಲ್ಲಿ ಅಡಿಕೆ ಬೆಳೆ ಚೆನ್ನಾಗಿ ಬರುವುದಿಲ್ಲ. ಕರಾವಳಿ ಭಾಗದಲ್ಲೂ ಬೆಟ್ಟದ ಇಕ್ಕೆಲಗಳಲ್ಲಿ (ಕಣಿವೆ ಜಾಗದಲ್ಲಿ) ಬೆಳೆದ ಅಡಿಕೆ ತೋಟ ಕೊಡುವಷ್ಟು ಉತ್ತಮ ಇಳುವರಿ ಬೆಟ್ಟ ಗುಡ್ಡಗಳಲ್ಲಿ ಕೊಡಲಾರದು. ಹೆಚ್ಚಿನ ತಾಪಮಾನ ಇರುವ ಕಡೆಗಳಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆಗಳು ಇದ್ದೇ ಇರುತ್ತವೆ. ಎಲೆ ಚುಕ್ಕೆ ರೋಗ, ಮೈಟ್ ಹಾವಳಿ, ಸಿಂಗಾರ ಒಣಗುವ ರೋಗ ಇವೆಲ್ಲಾ ನಿತ್ಯ ಅತಿಥಿಗಳಾಗಿರುತ್ತವೆ.

ಈಗ ವಿಸ್ತರಣೆ ಆಗುತ್ತಿರುವ ಪ್ರದೇಶಗಳ ಮಣ್ಣು ಸಹ ಅಡಿಕೆ ಬೆಳೆಗೆ ಅಷ್ಟೊಂದು ಸೂಕ್ತವಾದುದಲ್ಲ. ನೀರು ಬಸಿದು ಹೋಗುವ ಮಣ್ಣು ಇರುವಲ್ಲಿ ಅಡಿಕೆ ಸಸಿಗಳು ಚೆನ್ನಾಗಿ ಬೆಳೆಯುತ್ತವೆ. ಬಸಿಯದಿರುವ ಮಣ್ಣು ಇರುವ ಪ್ರದೇಶಗಳಲ್ಲಿ  ಸುಳಿ ಕೊಳೆ ರೋಗ, ಅಣಬೆ ರೋಗ, ವಕ್ರ ಗಂಟು ಸಮಸ್ಯೆ ಅತ್ಯಧಿಕ. ನಾವು ಹಲವಾರು ಕಡೆ ಪ್ರವಾಸ ಮಾಡಿದಾಗ ಕಂಡಂತೆ ವರ್ಷ ವರ್ಷವೂ ಸಾಕಷ್ಟು ಮರಗಳು ಈ ಸಮಸ್ಯೆಗಳಿಂದ ಹಾಳಾಗುವುದನ್ನು ಗುರುತಿಸಿದ್ದೇವೆ. ಅಂಟು ಮಣ್ಣು, ದಿನವಾದರೂ ನೀರು ಬಸಿದು ಹೋಗದ ಸ್ಥಿತಿ ಇರುವ ಕಡೆ ಬೆಳೆಸಲಾದ ಅಡಿಕೆ ತೋಟ ಉತ್ಪಾದಕ ತೋಟ ಎನ್ನಿಸುವುದಿಲ್ಲ.

ಅಡಿಕೆಗೆ ಬೇಡಿಕೆ ಇರುವಷ್ಟು ಉತ್ಪಾದನೆ ಇಲ್ಲ: ಅಡಿಕೆಯನ್ನು ಯಾರೇ ಏನೇ ಹೇಳಲಿ ೯೯ % ಬಳಕೆ ಆಗುವುದು ತಿಂದು ಉಗುಳಲು. ಪಾನ್ ಮಸಾಲ, ಗುಟ್ಕಾ, ಜರ್ಧಾ, ಸಿಹಿ ಪಾನ್ ಇತ್ಯಾದಿಗಳಿಗೆ ಇದನ್ನು ಬಳಕೆ ಮಾಡಲಾಗುತ್ತದೆ. ದೇಶೀಯ ಉತ್ಪಾದನೆ ಸಾಲದ್ದಕ್ಕೆ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಬರೇ ಅಡಿಕೆ ಅಲ್ಲದೆ ಅಡಿಕೆ ಕುಟುಂಬದ ಅಲಂಕಾರಿಕ ತಾಳೆ (Ornamental palm) ಮರಗಳಿಂದ ಸಿಗುವ ಅಡಿಕೆಯನ್ನೂ ಬಳಸಲಾಗುತ್ತದೆ. ಇದಲ್ಲದೆ ಇನ್ನೇನೇನು ವಸ್ತುಗಳನ್ನು ಬಳಕೆ ಮಾಡಲಾಗುತ್ತದೆಯೋ ತಿಳಿಯದು. ಕಾರಣ ಗುಟ್ಕಾ ಎಂಬ ಉತ್ಪನ್ನಕ್ಕೆ ಅಷ್ಟೊಂದು ಬೇಡಿಕೆ ಇದೆ. ಸುಮಾರು ೧೦ ವರ್ಷಕ್ಕೆ ಹಿಂದೆ ಮ್ಯಾಮ್ಕೋಸ್ ಅಧ್ಯಕ್ಷರಾಗಿದ್ದ ನರಸಿಂಹ ನಾಯಕ್ ಇವರು ಹೇಳಿದ್ದರು, ದಿನಕ್ಕೆ 10 ಲೋಡ್ ಗುಟ್ಕಾ ಕರ್ನಾಟಕಕ್ಕೆ ಬೇಕಾಗುತ್ತದೆ. ಉಳಿದ ರಾಜ್ಯಗಳಿಗೂ ಇದಕ್ಕಿಂತ ಹೆಚ್ಚಿನ ಪ್ರಮಾಣ ಬೇಕಾಗಬಹುದು.  ಅಡಿಕೆ ಇಲ್ಲದೆ ಗುಟ್ಕಾ ತಿನ್ನಲು ಸಾಧ್ಯವಿಲ್ಲ. (ಬರೇ ತಂಬಾಕನ್ನು ತಿನ್ನಲು ಆಗುವುದಿಲ್ಲ) ಅಡಿಕೆ ಇರುವ ಕಾರಣ ತಂಬಾಕಿನ ಜೊತೆಗೆ ಸುಣ್ಣ ಸೇರಲ್ಪಟ್ಟು ಅದರ ಖಾರ ಸಮತೋಲನ ಉಂಟಾಗುತ್ತದೆ. ಒಂದು ವೇಳೆ ತಂಬಾಕು ಮತ್ತು ಸುಣ್ಣಗಳನ್ನೇ ಜನ ಚಟಕ್ಕೆ ಸೇವಿಸಿದರೆ ಕ್ಯಾನ್ಸರ್ ನಂತಹ ಖಾಯಿಲೆ ಬರುವುದಿದ್ದರೆ ಅದು ಬೇಗ ಬರುವ ಸಾಧ್ಯತೆ ಹೆಚ್ಚು. ಇದನ್ನು ತಂಬಾಕು ಸೇರಿಸಿ ತಾಂಬೂಲ ತಿನ್ನುವವರಲ್ಲಿ ಕೇಳಬಹುದು. ಹಾಗಾಗಿ ಅಡಿಕೆ ರಹಿತವಾಗಿ ಪಾನ್ ಆಗುವುದಿಲ್ಲ. ಅಡಿಕೆ ತಂಬಾಕು ಮತ್ತು ಸುಣ್ಣಗಳಿಂದ ಮಾನವನಿಗೆ ಆಗುವ ಶಾರೀರಿಕ ತೊಂದರೆಯನ್ನು ಕಡಿಮೆ ಮಾಡುತ್ತದೆ.ಹಾಗಾಗಿ ಅಡಿಕೆಗೆ ಬೇಡಿಕೆ ಕಡಿಮೆ ಆಗುವುದಿಲ್ಲ. ಒಂದು ವೇಳೆ ಮಿಗತೆಯಾದರೆ ಅದರ ಪ್ರಮಾಣಕ್ಕನುಗುಣವಾಗಿ ದರ ಕಡಿಮೆಯಾಗುತ್ತದೆ. ಉಳಿದ ಕೃಷಿ ಬೆಳೆಗಳಿಗೆ ಹೋಲಿಸಿದರೆ ಅಡಿಕೆಗೆ ಈಗಿರುವ ಬೆಲೆಯಲ್ಲಿ ೫೦% ಕಡಿಮೆಯಾದರೂ ಅದು ನಷ್ಟದ್ದಾಗುವುದಿಲ್ಲ. ದೇಶೀಯವಾಗಿ ಕಡಿಮೆ ದರಕ್ಕೆ ಸಿಗುವುದಿದ್ದರೆ ಆಮದು ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ.

ಅಡಿಕೆ ಉತ್ಪಾದನೆ ಬಹಳ ಹೆಚ್ಚಾಗುವುದಿಲ್ಲ:  ಅಡಿಕೆ ಬೆಳೆ ಪ್ರದೇಶ ಎಷ್ಟೇ ವಿಸ್ತರಣೆ ಆದರೂ ಒಟ್ಟಾರೆ ಉತ್ಪತ್ತಿ ಈಗಿರುವುದಕ್ಕಿಂತ  ಶೇ.೫೦ ಹೆಚ್ಚಾಗಬಹುದು. ಅಡಿಕೆ ತೋಟದ ವಿಸ್ತೀರ್ಣ ಹೆಚ್ಚಾದಷ್ಟು ಅದರಲ್ಲಿ ಬರುವ ಉತ್ಪಾದನೆ ಸರಾಸರಿ ಕಡಿಮೆಯಾಗುತ್ತದೆ. ಒಂದು ಎಕ್ರೆ ತೋಟ ಇರುವವರಿಗೆ ಸರಾಸರಿ ೧೫-೧೮ ಕ್ವಿಂಟಾಲು ಅಡಿಕೆ ಉತ್ಪತ್ತಿಯನ್ನು ಪಡೆಯಲು ಕಷ್ಟವಾಗುವುದಿಲ್ಲ. ಅದೇ ೫-೧೦-೨೦ ಎಕ್ರೆ ಇದ್ದವರಿಗೆ ಸರಾಸರಿ ಹತ್ತು ಕ್ವಿಂಟಾಲು ಪಡೆಯುವುದೇ ಕಷ್ಟವಾಗುತ್ತದೆ. ಅಡಿಕೆ ತೋಟದಲ್ಲಿ ದಿನವಹಿ ಮೇಲ್ವಿಚಾರಣೆಯೂ ಕಷ್ಟವಾಗುವ ಸ್ಥಿತಿ ಇದೆ.

ಬೆಳೆ ಪ್ರದೇಶ ಹೆಚ್ಚಾಗಬಹುದು. ಇದು ತಾತ್ಕಾಲಿಕ. ಸಮಾಜದಲ್ಲಿ ಕಾಣಿಸುವಂತೆ ೪೦-೫೦ ವರ್ಷ ಪ್ರಾಯದ ಜನ ಕೃಷಿಯತ್ತ  ಒಲವು ತೋರಿದರೆ ಯುವ ಜನತೆ (೨೧-೩೦ ವಯಸ್ಸಿನವರು) ಯಾವುದೇ ಕಾರಣಕ್ಕೂ ಕೃಷಿಯತ್ತ ಮುಖ ಮಾಡುವುದಿಲ್ಲ. ಯಾವುದೇ ಹಿರಿಯರನ್ನು ಕೇಳಿ. ನಾವು ಕೃಷಿ ಮಾಡಿದ್ದು ಸಾಕು ನಮ್ಮ ಮಕ್ಕಳು ಇದರಲ್ಲಿ ನರಕ ಕಾಣುವುದು ಬೇಕಾಗಿಲ್ಲ ಎಂದು ಇಂಜಿನಿಯರ್ ಅಥವಾ ಇನ್ಯಾವುದೋ ನೌಕರಿಗೆ ಹಚ್ಚಿದ್ದೇನೆ ಎನ್ನುತ್ತಾರೆ. ನನ್ನ ಒಬ್ಬರು ಮಿತ್ರರು ಒಂದು ಎಕ್ರೆ ಭೂಮಿಯಿಂದ ಕೃಷಿ ಪ್ರಾರಂಭಿಸಿ, ನೂರು ಎಕ್ರೆ ತನಕ ಹಿಡುವಳಿ ಹೆಚ್ಚಿಸಿಕೊಂಡರು. ತನಗಿರುವ ಎರಡೂ ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಟ್ಟು ಉದ್ಯೋಗಕ್ಕೆ ಹಚ್ಚಿದರು. ಈಗ ಅವರಿಗೆ ೭೦ ದಾಟಿದೆ. ಕೃಷಿ ಇದೆ ಅಷ್ಟೇ. ಇದು ಮನೆ ಮನೆಯ ಪರಿಸ್ಥಿತಿ.

ಮುಂದಿನ ೪-೫ ವರ್ಷಗಳಲ್ಲಿ ಕೃಷಿಗೆ ವಿದಾಯ ಹೇಳುವವರೇ ಹೆಚ್ಚಾಗುತ್ತಾರೆ. ಇದು ಭವಿಷ್ಯವಲ್ಲ. ಈಗ ಆಗುತ್ತಿರುವ ವರ್ತಮಾನ ಪರಿಸ್ಥಿತಿ ಮುಂದಿನ ಭವಿಷ್ಯವನ್ನು ತಿಳಿಸುತ್ತದೆ ಅಷ್ಟೇ. ಕೆಲವೇ ಕೆಲವು ಜನ ಕೃಷಿಯಲ್ಲಿ ಉಳಿದುಕೊಳ್ಳುತ್ತಾರೆ. ಕೃಷಿ ನಿರ್ಲಕ್ಷ್ಯಕ್ಕೊಳಗಾದರೆ ಅಡಿಕೆ ಉತ್ಪಾದನೆ  ಹೆಚ್ಚುವುದು ಎಲ್ಲಿಂದ ಬಂತು? ಹೊಸ ತಲೆಮಾರಿನವರು, ಬಂಡವಾಳ ಹಾಕಿ ತೋಟ ಮಾಡಿದವರು ಹೆಚ್ಚಿನ ಇಳಿವರಿಗಾರಿ ಗರಿಷ್ಟ ಉತ್ಪಾದನಾ ವೆಚ್ಚದೊಂದಿಗೆ ಕೃಷಿ ಮಾಡುತ್ತಾರೆ. ಹಿರಿಯ ಕೃಷಿಕರು ಲೆಕ್ಕಾಚಾರ ಹಾಕಿ ಕೃಷಿ ಮಾಡುತ್ತಾರೆ. ಎಲ್ಲರದ್ದೂ ಆರಂಭ ಶೂರತನ ಸಹಜ.ಈ ಶೂರತನ ಕ್ರಮೇಣ ತಣ್ಣಗಾಗುತ್ತದೆ.  

ಕೃಷಿ ಇನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಕಷ್ಟವಾಗಲಿದೆ. ಈಗಾಗಲೇ ಎಲ್ಲಾ ಕಡೆ ಕೆಲಸದವರ ಸಮಸ್ಯೆ ಇದೆ. ನಮ್ಮ ಉರಿನಲ್ಲಿ  ಕೆಲಸಕ್ಕೆ ಜನ ಸಿಗದ ಕಾರಣ ಜಾರ್ಖಂಡ್ ಮುಂತಾದ ಕಡೆಗಳಿಂದ ಜನ ತರಲಾಗುತ್ತಿದೆ. ಜಾರ್ಖಂಡ್, ಬಿಹಾರ, ಅಸ್ಸಾಂ ಇಲ್ಲಿಂದ ಬರೇ ಕೃಷಿ ಕೆಲಸಕ್ಕೆ ಮಾತ್ರ ಜನ ಬರುವುದಲ್ಲ. ಒಮ್ಮೆ ಪಟ್ಟಣಗಳ ಕಡೆಗೆ ನೋಡಿ. ಬಹುತೇಕ ನಿರ್ಮಾಣ ಕಾಮಗಾರಿಗಳಲ್ಲಿ ಇವರೇ ಕಾರ್ಮಿಕರು. ಹೊಟೇಲುಗಳಲ್ಲೂ ಇವರೇ ತುಂಬಿದ್ದಾರೆ. ಸೆಕ್ಯೂರಿಟಿ ಗಾರ್ಡ್, ವಾಚ್ ಮೆನ್, ಸೇಲ್ಸ್ ಮೆನ್ ಹೀಗೆ ಎಲ್ಲೆಂದರಲ್ಲಿ ಇವರೇ ತುಂಬಿದ್ದಾರೆ. ಬೆಂಗಳೂರಿನ ಬಹುತೇಕ ಸೂಪರ್ ಮಾರ್ಕೆಟ್ ನೊಳಗೆ ಒಮ್ಮೆ ಹೋದಿರೆಂದಾದರೆ ಅಲ್ಲಿ ಎಲ್ಲಾ ಕಡೆ ಇವರೇ ತುಂಬಿದ್ದಾರೆ. ಕೃಷಿಕರಿಗೆ ಜೀವನಕ್ಕೆ ಕೃಷಿ ಒಂದೇ ಆಯ್ಕೆ. ಆದರೆ ಕಾರ್ಮಿಕರಿಗೆ ಎಲ್ಲಿ ಸುಲಭದ ಕೆಲಸ ಇದೆಯೋ, ಎಲ್ಲಿ ಜೀವನ ಭದ್ರತೆಯ ಶಾಶ್ವತ ಕೆಲಸ ಇದೆಯೋ, ಅಲ್ಲಿಗೆ ಯಾವಾಗಲೂ ಪರಿವರ್ತನೆ ಆಗಬಹುದಾದ ಸ್ವಾತಂತ್ರ್ಯ ಇದೆ. ಹಾಗಾಗಿ ಪರಿಸ್ಥಿತಿ ಈ ವರ್ಷ ಇದ್ದಂತೆ ಮುಂದಿನ ವರ್ಷ ಇರಲಾರದು. ಇನ್ನು ಮುಂದಿನ ೫-೧೦ ವರ್ಷಗಳಲ್ಲಿ ಎಲ್ಲವೂ ಬದಲಾಗಲೂ ಬಹುದು.  

ಅಡಿಕೆ ಬೆಳೆಗಾರರಿಗೆ ಅಂಜಿಕೆ ಹುಟ್ಟಿಸಬೇಡಿ: ಉಳಿದೆಲ್ಲಾ ಬೆಳೆಗಳ ಬೆಲೆ ಮತ್ತು ಆ ಬೆಳೆ ಬೆಳೆಯುವವರ  ಆರ್ಥಿಕ ಸ್ಥಿತಿಯನ್ನು ಒಮ್ಮೆ ನೋಡಿದರೆ ಅಡಿಕೆ ಬೆಳೆಗಾರರೇ ಎಷ್ಟೋ ವಾಸಿ. ಹತ್ತು ಎಕ್ರೆ ಭತ್ತ ಬೆಳೆಯುವ ನೈಜ ಅನ್ನದಾತ ಹೆಚ್ಚೆಂದರೆ ೨೦೦ ಕ್ವಿಂಟಾಲು ಭತ್ತ ಬೆಳೆದು ೩ ಲಕ್ಷ ಒಟ್ಟಾರೆ ಆದಾಯ ಪಡೆಯಬಹುದು. ಅದರಲ್ಲಿ ೫೦% ಖರ್ಚು ಕಳೆದರೆ  ಅವನ ನಿವ್ವಳ ಆದಾಯ ಒಬ್ಬ ಕೂಲಿ ಕೆಲಸದವನ ವಾರ್ಷಿಕ ಆದಾಯಕ್ಕಿಂತ ಕಡಿಮೆ. ಹೀಗಿರುವಾಗ ಅವನೂ ಜೀವನದಲ್ಲಿ  ದೊಡ್ಡ ಹಣ ಕಾಣಬೇಕು ಎಂಬ ಹಂಬಲಿಸುವುದು ತಪ್ಪಾಗಲಾರದು. ಅವನ ಇತಿಮಿತಿಯೊಳಗೆ ಅಧಿಕ ಆದಾಯದ ಬೆಳೆ ಎಂದರೆ ಅಡಿಕೆ ಒಂದೇ. ಹಾಗಾಗಿ ಯಾರನ್ನೂ ಅಡಿಕೆ ಬೆಳೆಯಬೇಡಿ ಎನ್ನುವುದು ನ್ಯಾಯೋಚಿತವಲ್ಲ. ಇಷ್ಟಕ್ಕೂ ಬೆಳೆಗಾರರ ಮೇಲೆ ಕಳಕಳಿ ಇದ್ದರೆ, ಅಡಿಕೆ ಬೆಳೆಯಲು ಒಬ್ಬ ರೈತನಿಗೆ ಗರಿಷ್ಟ ಮಿತಿಯಾಗಿ ಐದು ಎಕ್ರೆ ಎಂದಷ್ಟೇ  ಮಿತಿಗೊಳಿಸಿದರೆ ಎಲ್ಲರೂ ಬದುಕಲು ಸಾಧ್ಯ. ಒಂದು ವೇಳೆ ನಾಳೆ ಅಡಿಕೆಗೆ ಈಗಿನ ಬೆಲೆಗಿಂತ ೫೦% ಬೆಲೆ ಕಡಿಮೆ ಆಯಿತೆಂದಾದರೆ, ಸರಕಾರದ ಮೊರೆ ಹೋಗುವುದು, ಬೆಂಬಲ ಬೆಲೆ ಕೇಳುವುದು, ಇದೆಲ್ಲಾ ತಪ್ಪುತ್ತದೆ.

ಅಡಿಕೆಗೆ ಭವಿಷ್ಯ ಇಲ್ಲ ಎಂದಾಗಬೇಕಾದರೆ ಜನ ಪಾನ್, ಗುಟ್ಕಾ ತಿನ್ನುವುದನ್ನು ಬಿಡಬೇಕು. ಪಾನ್ ಇರುವಷ್ಟು ಸಮಯ ಅಡಿಕೆ ಬೇಕೇ ಬೇಕು. ಅಡಿಕೆ ಹೆಚ್ಚು ಹೆಚ್ಚು ಹೆಚ್ಚು ಸೇರಿಸಿದಷ್ಟೂ ಪಾನ್ ನ ಸೌಮ್ಯ ಗುಣ ಹೆಚ್ಚಾಗುತ್ತದೆ. ಬೆಳೆಗಾರರು ಅಡಿಕೆಗೆ ಬೆಲೆ ಇದೆ ಎಂದು ಮನಸೋ ಇಚ್ಛೆ ಗುಡ್ಡ ಬೆಟ್ಟಗಳಲ್ಲಿ ಕೃಷಿ ಮಾಡುವುದು ಸೂಕ್ತವಲ್ಲ. ತನ್ನ ಹಿಡುವಳಿಯಲ್ಲಿ  ಅರ್ಧ ಪಾಲು ಅಡಿಕೆ ತೋಟ  ಮಾಡಿ. ಉಳಿದ ಭಾಗದಲ್ಲಿ ಇತರ ಬೆಳೆಗಳನ್ನು ಬೆಳೆದರೆ ಯಾವಾಗಲೂ ಆತಂಕ ಉಂಟಾಗಲಿಕ್ಕಿಲ್ಲ.

ಸ್ವ-ಅನುಭವ ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ