ಅಡುಗೆಯಾತ ಮತ್ತು ಕೊಕ್ಕರೆ ಹಕ್ಕಿ
ಒಂದಾನೊಂದು ಕಾಲದಲ್ಲಿ ಉತ್ತರ ಇಟೆಲಿಯಲ್ಲಿ ಕಾರ್ಲೋ ಎಂಬ ರಾಜ ರಾಜ್ಯವಾಳುತ್ತಿದ್ದ. ಅವನ ಪ್ರಜೆಗಳು ಎಲ್ಲರಿಗೂ ಅವನೆಂದರೆ ಅಚ್ಚುಮೆಚ್ಚು. ಯಾಕೆಂದರೆ ಆತ ಕಠಿಣ ಆಡಳಿತಗಾರನಾದರೂ ಉಲ್ಲಾಸದ ವ್ಯಕ್ತಿ. ಅವನನ್ನು ನಗುವಂತೆ ಮಾಡಿದ ಯಾರೊಂದಿಗೂ ಅವನು ಸಿಟ್ಟಾಗುತ್ತಿರಲಿಲ್ಲ.
ರಾಜನ ಅರಮನೆಯಲ್ಲೊಬ್ಬ ಅಲೆಸ್ಸಾಂಡ್ರೋ ಎಂಬಾತ ಅಡುಗೆ ಮಾಡುತ್ತಿದ್ದ. ಇತರರು ಅವನನ್ನು ಸಾಂಡ್ರೋ ಎಂದು ಕರೆಯುತ್ತಿದ್ದರು. ಅವನ ವಯಸ್ಸು ಇಪ್ಪತ್ತು ಆಗಿದ್ದರೂ ಅಡುಗೆಯಲ್ಲಿ ಪಳಗಿದ್ದ. ಕಾರ್ಲೋ ರಾಜನಿಗೆ ಖುಷಿ ಕೊಡುವ ಖಾದ್ಯಗಳು ಯಾವುವೆಂದು ಅವನಿಗೆ ಚೆನ್ನಾಗಿ ತಿಳಿದಿತ್ತು.
ಸಾಂಡ್ರೋನದ್ದು ಒಂದೇ ಸಮಸ್ಯೆ. ಅವನು ಅರಮನೆಯ ಸೇವಕಿ ಬ್ರುನೆಟ್ಟಾಳನ್ನು ಪ್ರೀತಿಸುತ್ತಿದ್ದ. ಅವಳು ಕಂದು ಕಣ್ಣುಗಳ ಮತ್ತು ಕಂದು ತಲೆಗೂದಲಿನ ಸುಂದರಿ. ದಿನವಿಡೀ ಅವನು ಬ್ರುನೆಟ್ಟಾಳಿಗಾಗಿ ರುಚಿಕರ ಖಾದ್ಯಗಳನ್ನೂ ಕೇಕುಗಳನ್ನೂ ತಯಾರಿಸುತ್ತಿದ್ದ. ಆದರೆ ಬ್ರುನೆಟ್ಟಾ ಅವೆಲ್ಲವೂ ಸಾಮಾನ್ಯ ತಿನಿಸುಗಳೆಂದೇ ಭಾವಿಸುತ್ತಿದ್ದಳು. ಅವನಿತ್ತ ತಿನಿಸುಗಳನ್ನು ತಿಂದ ಬಳಿಕ ಅವಳು “ಚೆನ್ನಾಗಿತ್ತು. ಆದರೆ ಇದನ್ನು ನಾನೇ ಸುಲಭವಾಗಿ ತಯಾರಿಸುತ್ತಿದ್ದೆ” ಎನ್ನುತ್ತಿದ್ದಳು. “ನೀನು ತಿನ್ನಲಿಕ್ಕಾಗಿ ವಿಶೇಷ ಖಾದ್ಯವೊಂದನ್ನು ತಯಾರಿಸಿದರೆ ನನ್ನನ್ನು ಮದುವೆಯಾಗುತ್ತೀಯಾ?” ಎಂದು ಕೇಳುತ್ತಿದ್ದ ಸಾಂಡ್ರೋ. "ನೋಡೋಣ" ಎನ್ನುತ್ತಿದ್ದಳು ಬ್ರುನೆಟ್ಟಾ. ಅವಳನ್ನು ಖುಷಿ ಪಡಿಸುವ ತಿನಿಸು ಯಾವುದೆಂಬುದೇ ಸಾಂಡ್ರೋನ ಸಮಸ್ಯೆ.
ಅದೊಂದು ದಿನ ರಾಜ ಕಾರ್ಲೋ ಜವುಗು ಪ್ರದೇಶಕ್ಕೆ ಬೇಟೆಯಾಡಲು ಹೋಗಿ ಒಂದು ಕೊಕ್ಕರೆಯನ್ನು ಕೊಂದು ಮಧ್ಯಾಹ್ನ ತಂದ. ಅದನ್ನು ಸಾಂಡ್ರೋನಿಗೆ ಕೊಟ್ಟು, “ಇದರಿಂದ ಭಾರೀ ಚೆನ್ನಾಗಿರುವ ಖಾದ್ಯ ತಯಾರಿಸು. ಇವತ್ತು ರಾತ್ರಿಯ ಭೋಜನಕ್ಕೆ ನಾನು ಆಮಂತ್ರಿಸಿರುವ ಅತಿಥಿಗಳಿಗೆ ಅದನ್ನು ವಿಶೇಷ ಖಾದ್ಯವಾಗಿ ಬಡಿಸಬೇಕು” ಎಂದ.
ಅನಂತರ ನಾಲ್ಕು ಗಂಟೆಗಳ ಹೊತ್ತು ಸಾಂಡ್ರೋ ಅಡುಗೆಮನೆಯಲ್ಲಿ ಚುರುಕಾಗಿ ಅತ್ತಿತ್ತ ಓಡಾಡುತ್ತಾ ಅದರಿಂದ ಅದ್ಭುತ ಸಾಸ್ ತಯಾರಿಸಿದ. ಆತನು ಒಲೆಯಿಂದ ಬೇಯಿಸಿದ ಆ ಕೊಕ್ಕರೆಯ ಮಾಂಸ ಹೊರತೆಗೆದಾಗ ಅದು ಚಿನ್ನದ ಬಣ್ಣದಿಂದ ಆಕರ್ಷಕವಾಗಿತ್ತು. “ಇದು ರಾಜನಿಗೆ ತಕ್ಕ ಖಾದ್ಯ” ಎಂದುಕೊಂಡ ಸಾಂಡ್ರೋ.
ಅದನ್ನು ಒಂದು ಬೆಳ್ಳಿಯ ತಟ್ಟೆಯಲ್ಲಿಟ್ಟು ಅತಿಥಿಗಳಿಗೆ ಬಡಿಸಲು ಸಿದ್ಧಪಡಿಸಿದ ಸಾಂಡ್ರೋ. ಆಗ ಅದನ್ನು ಅತಿಥಿಗಳಿದ್ದ ಭೋಜನಾಲಯಕ್ಕೆ ಒಯ್ಯಲು ಬ್ರುನೆಟ್ಟಾ ಅಡುಗೆಮನೆಗೆ ಬಂದಳು. ಆ ಖಾದ್ಯವನ್ನು ಕಾಣುತ್ತಲೇ ಅವಳ ಕಣ್ಣುಗಳು ಅರಳಿದವು. “ಓ, ಇದುವೇ ನನಗೆ ಬೇಕಾದ ಖಾದ್ಯ. ಈ ಕೊಕ್ಕರೆಯ ಒಂದು ಕಾಲಿನ ಮಾಂಸವೆಲ್ಲ ನಾನೊಬ್ಬಳೇ ತಿನ್ನುವಂತಿದ್ದರೆ … “ ಎಂದು ಉದ್ಗರಿಸಿದಳು ಬ್ರುನೆಟ್ಟೋ.
ಸಾಂಡ್ರೋ ಕೆಲವು ಕ್ಷಣ ಹಿಂಜರಿದ. ಆದರೆ ಬ್ರುನೆಟ್ಟಾಳನ್ನು ಖುಷಿ ಪಡಿಸಲು ಅವನೆಷ್ಟು ಕಾತುರನಾಗಿದ್ದ ಎಂದರೆ, ಆ ಕೊಕ್ಕರೆಯ ಒಂದು ಹುರಿದ ಕಾಲನ್ನು ಕಿತ್ತು ಅವಳಿಗೆ ಕೊಟ್ಟ. "ಈಗಲೇ ತಿನ್ನು ಬ್ರುನೆಟ್ಟಾ. ನಾನು ಉಳಿದ ಖಾದ್ಯವನ್ನು ಬಿಸಿಯಾಗಿಡುತ್ತೇನೆ” ಎಂದ. ಬ್ರುನೆಟ್ಟಾ ಅಲ್ಲೇ ಕುಳಿತು ಅದನ್ನು ತಿಂದಳು. ಅವಳಿಗೆ ತೃಪ್ತಿಯಾಯಿತು. “ಅಬ್ಬಾ, ಇದು ನಿಜಕ್ಕೂ ನಾನು ತಿಂದ ವಿಶೇಷ ಖಾದ್ಯ, ಸಾಂಡ್ರೋ. ಈಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಾನು ಹೇಳಬಲ್ಲೆ" ಎಂದಳು.
ಅನಂತರ ಬ್ರುನೆಟ್ಟಾ ಬೆಳ್ಳಿಯ ತಟ್ಟೆಯಲ್ಲಿ ಉಳಿದಿದ್ದ ಕೊಕ್ಕರೆ ಸಾಸನ್ನು ರಾಜನ ಭೋಜನಾಲಯಕ್ಕೆ ಒಯ್ದಳು. ಕೊನೆಗೂ ಬ್ರುನೆಟ್ಟಾಳನ್ನು ಖುಷಿ ಪಡಿಸಿದ ಅವನಿಗೆ ಅಲ್ಲೇ ಕುಣಿದಾಡಬೇಕು ಎನಿಸಿತ್ತು. ಅಷ್ಟರಲ್ಲಿ, “ಸಾಂಡ್ರೋ, ಇಲ್ಲಿ ಬಾ" ಎಂದು ರಾಜ ಕೂಗಿದ್ದು ಅವನಿಗೆ ಕೇಳಿಸಿತು. ಅವನು ನಡುಗುತ್ತಾ ರಾಜನ ಎದುರು ಹೋಗಿ ನಿಂತ.
“ಇದರ ಅರ್ಥ ಏನು? ಕೊಕ್ಕರೆಯ ಒಂದು ಕಾಲು ಯಾಕೆ ಕಾಣೆಯಾಗಿದೆ?” ಎಂದು ಅಬ್ಬರಿಸಿದ ರಾಜ ಕಾರ್ಲೋ. ಸಾಂಡ್ರೋ ತೊದಲುತ್ತಾ ಉತ್ತರಿಸಿದ, “ದೊರೆಯೇ, ಅದಕ್ಕೇನೂ ಆಗಿಲ್ಲ. ಎಲ್ಲ ಕೊಕ್ಕರೆಗಳಿಗೂ ಇರೋದು ಒಂದೇ ಕಾಲು" ಎಂದು ಬಿಟ್ಟ.
ರಾಜ ಕಾರ್ಲೋಗೆ ಒಮ್ಮೆ ಗೊಂದಲವಾಯಿತು. "ಏನಂದೆ? ಕೊಕ್ಕರೆಗೆ ಒಂದೇ ಕಾಲು ಇರೋದು ಎಂದೆಯಾ?” ಎಂದು ಪುನಃ ಕೇಳಿದ ರಾಜ ಕಾರ್ಲೋ. "ಹೌದು ದೊರೆಯೇ, ನಾಳೆ ಬೆಳಗ್ಗೆ ಜವುಗು ಪ್ರದೇಶಕ್ಕೆ ನೀವು ನನ್ನೊಂದಿಗೆ ಬಂದರೆ ತೋರಿಸುತ್ತೇನೆ” ಎಂದ ಸಾಂಡ್ರೋ. "ಸರಿ. ಆದರೆ ನೀನು ಹೇಳಿದ್ದು ಸತ್ಯವಲ್ಲ ಎಂದಾದರೆ ನಿನಗೆ ಕಠಿಣ ಶಿಕ್ಷೆ ಕಾದಿದೆ. ಬಹುಶಃ ನಿನ್ನ ಉಳಿದ ಜೀವಮಾನವನ್ನೆಲ್ಲ ಸೆರೆಮನೆಯಲ್ಲೇ ಕಳೆಯಬೇಕಾದೀತು” ಎಂದು ಎಚ್ಚರಿಸಿದ ರಾಜ ಕಾರ್ಲೋ.
ಬ್ರುನೆಟ್ಟಾ ತನ್ನನ್ನು ಮದುವೆಯಾಗಲು ಒಪ್ಪಿರುವ ಕಾರಣ ಸಾಂಡ್ರೋಗೆ ಅಂತಹ ಶಿಕ್ಷೆ ಬೇಕಾಗಿರಲಿಲ್ಲ. ಹೇಗಾದರೂ ಮಾಡಿ ಮರುದಿನ ರಾಜ ಕಾರ್ಲೋ ನಗುವಂತೆ ಮಾಡಿ, ಶಿಕ್ಷೆಯಿಂದ ಬಚಾವಾಗಬೇಕೆಂದು ಯೋಚಿಸುತ್ತಾ ಆತ ಮಲಗಿದ.
ಮರುದಿನ ಸೂರ್ಯ ಮೂಡುವಾಗಲೇ ರಾಜ ಕಾರ್ಲೋ ಮತ್ತು ಸಾಂಡ್ರೋ ಅರಮನೆಯಿಂದ ಹೊರಟರು. ಜವುಗು ಪ್ರದೇಶದಲ್ಲಿ ಒಂದು ನೀರಿನ ಹೊಂಡ ತಲಪುವ ತನಕ ಅವರಿಬ್ಬರೂ ಮಾತಾಡಲಿಲ್ಲ. ಅಲ್ಲಿ ಒಂದು ಕಾಲಿನಲ್ಲಿ ನಿಂತು ನಿದ್ದೆ ಮಾಡುತ್ತಿದ್ದ ಕೊಕ್ಕರೆಗಳನ್ನು ತೋರಿಸುತ್ತಾ ಸಾಂಡ್ರೋ ಹೇಳಿದ, “ನೋಡಿ ದೊರೆಯೇ, ಕೊಕ್ಕರೆಗಳಿಗೆ ಇರೋದು ಒಂದೇ ಒಂದು ಕಾಲು.”
ಆ ಕ್ಷಣದಲ್ಲಿ ರಾಜನ ಮುಖ ಟೊಮೆಟೋದಂತೆ ಕೆಂಪುಕೆಂಪಾಯಿತು. ಸಿಟ್ಟಿನಿಂದ ಸ್ಫೋಟಿಸುವಂತಾದ ಆತ ಹೊಂಡದ ನೀರಿನ ಹತ್ತಿರ ಹೋಗಿ, ಚಪ್ಪಾಳೆ ತಟ್ಟಿ “ಹೇ, ಹೋ, ಹೂ, ಹಾ!" ಎಂದು ಬೊಬ್ಬೆ ಹಾಕಿದ. ಅಚಾನಕ್ ನುಗ್ಗಿ ಬಂದ ಈ ಸದ್ದಿನಿಂದ ಎಚ್ಚರವಾದ ಕೊಕ್ಕರೆಗಳು ತಮ್ಮ ಮಡಚಿದ್ದ ಎರಡನೆಯ ಕಾಲನ್ನು ಕೆಳಕ್ಕೆ ಹಾಕಿ, ಅಲ್ಲಿಂದ ಒಮ್ಮೆಲೇ ಹಾರಿ ಹೋದವು.
ಸಾಂಡ್ರೋನತ್ತ ತಿರುಗಿದ ರಾಜ ಕಾರ್ಲೋ ಕೋಪದಿಂದ ಕೇಳಿದ, “ದುರಾಸೆಯ ಅಡುಗೆಯವನೇ, ಈಗ ಕೊಕ್ಕರೆಗಳಿಗೆ ಎರಡು ಕಾಲುಗಳು ಇರೋದು ನಿನಗೆ ಕಾಣಿಸೋದಿಲ್ಲವೇ?" ಸಾಂಡ್ರೋ ತಣ್ಣಗೆಯ ಧ್ವನಿಯಲ್ಲಿ ಉತ್ತರಿಸಿದ, "ಹೌದು ದೊರೆಯೇ, ಅದು ನೀವು ಮಾಡಿದ ಚಮತ್ಕಾರ. ನಿನ್ನೆ ರಾತ್ರಿ ಭೋಜನ ಮೇಜಿನೆದುರು ಕುಳಿತಿದ್ದಾಗ, ನೀವು ಚಪ್ಪಾಳೆ ತಟ್ಟಿ “ಹೇ, ಹೋ, ಹೂ, ಹಾ!" ಎಂದು ಯಾಕೆ ಕೂಗಲಿಲ್ಲ?”
ಮೊದಲು ಮುಗುಳಕ್ಕ ರಾಜ, ಅನಂತರ ಸಾಂಡ್ರೋನ ಜಾಣ್ಮೆಯ ಉತ್ತರಕ್ಕೆ ತಲೆದೂಗುತ್ತಾ ಹೊಟ್ಟೆ ಹಿಡಿದುಕೊಂಡು ನಗ ತೊಡಗಿದ. ಅರಮನೆಗೆ ಹಿಂತಿರುಗುವ ತನಕ ರಾಜ ಕಾರ್ಲೋ ನಗುತ್ತಲೇ ಇದ್ದ. ನಕ್ಕುನಕ್ಕು ಅವನ ಕಣ್ಣುಗಳಿಂದ ಅಶ್ರುಗಳು ಉದುರಿದವು. ರಾಜ ಕಾರ್ಲೋ ಸಾಂಡ್ರೋನನ್ನು ಕ್ಷಮಿಸಿದ. ಅನಂತರ ಸಾಂಡ್ರೋ ಮತ್ತು ಬ್ರುನೆಟ್ಟಾ ಮದುವೆಯಾದರು. ಸಾಂಡ್ರೋನ ಸಂತೋಷಕ್ಕೆ ಪಾರವೇ ಇಲ್ಲವಾಯಿತು.
ಅನಂತರವೂ ರಾಜ ಕಾರ್ಲೋನಿಗಾಗಿ ರುಚಿರುಚಿಯಾದ ಖಾದ್ಯಗಳನ್ನು ಸಾಂಡ್ರೋ ತಯಾರಿಸುತ್ತಲೇ ಇದ್ದ. ಅದೊಂದು ದಿನ ಭಾರಿ ರುಚಿಯಾದ ಖಾದ್ಯವನ್ನು ಬಡಿಸಿದ ಬ್ರುನೆಟ್ಟಾಳಿಗೆ ರಾಜ ಕಾರ್ಲೋ ಮುಗುಳ್ನಗುತ್ತಾ ಹೇಳಿದ, “ನಿನ್ನನ್ನು ಮದುವೆಯಾದ ನಂತರ ಸಾಂಡ್ರೋನ ಅಡುಗೆ ಇನ್ನೂ ಚೆನ್ನಾಗಿದೆ. ನಾನು ಇನ್ನೊಮ್ಮೆ ಕೊಕ್ಕರೆಯನ್ನು ತಂದು ಅವನಿಗೆ ಕೊಟ್ಟು, ಅಂದಿನಂತೆಯೇ ರುಚಿಯಾದ ಸಾಸ್ ತಯಾರಿಸಲು ಹೇಳುತ್ತೇನೆ.” ನಾಚಿ ನೀರಾದ ಬ್ರುನೆಟ್ಟಾ, ಆ ದಿನ ತನ್ನನ್ನು ಖುಷಿ ಪಡಿಸಲಿಕ್ಕಾಗಿ ಕೊಕ್ಕರೆಯ ಒಂದು ಕಾಲನ್ನು ಸಾಂಡ್ರೋ ತನಗೆ ಕೊಟ್ಟಿದ್ದನೆಂದು ರಾಜ ಕಾರ್ಲೋ ಊಹಿಸಿದ್ದಾನೆ ಎಂದುಕೊಂಡಳು.