ಅಡುಗೆ ಮನೆಗೆ ಕೈತೋಟದ ತರಕಾರಿ

ಅಡುಗೆ ಮನೆಗೆ ಕೈತೋಟದ ತರಕಾರಿ

ಮಾರುಕಟ್ಟೆಯಿಂದ ಕೊಂಡು ತಂದು ಬಳಕೆ ಮಾಡುವ ತರಕಾರಿಗಳಲ್ಲಿ ಎಷ್ಟೆಂದರೂ ನಮಗೆಲ್ಲಾ ವಿಶ್ವಾಸ ಕಡಿಮೆ. ಯಾವ ನಮೂನೆಯ ಕೀಟನಾಶಕ ಬಳಸಲಾಗಿದೆ, ಯಾವ ರಕ್ಷಕಗಳಲ್ಲಿ ಅದ್ದಿ ತಾಜಾತನ ಬರುವಂತೆ ಮಾಡಲಾಗಿದೆ. ಇದು  ಯಾವುದೂ ತಿಳಿದಿರುವುದಿಲ್ಲ. ಇದನ್ನು ತಿಳಿಯುವುದೂ ಅಸಾಧ್ಯ. ನಮ್ಮಲ್ಲಿ ಕಿಡ್ನಿ ತೊಂದರೆ, ಕ್ಯಾನ್ಸರ್, ಅಜೀರ್ಣ ಹಾಗೂ ಇನ್ನಿತರ ಅನಾರೋಗ್ಯಕ್ಕೆ ನಾವು ಬಳಕೆ ಮಾಡುವ ವಿಷ ರಾಸಾಯನಿಕ ಬಳಕೆ ಮಾಡಿದ ತರಕಾರಿಗಳೂ ಒಂದು ಕಾರಣ. ಸಂಶಯದ ಮೇಲೆ ಅದನ್ನು ಬಳಸುವ ಬದಲಿಗೆ ನಾವೇ ಬೆಳೆಸಿ ಬಳಸಿದರೆ ಯಾವ ಅಂಜಿಕೆಯೂ ಇಲ್ಲ. ನಮ್ಮ ಹಿರಿಯರು ಕೊಂಡು ತರಕಾರಿ ತಂದವರಲ್ಲ. ಅವರವರೇ ಬೆಳೆಸಿ, ಬಳಸಿದವರು. ನಾವು ಬೆಳೆಸುವುದಕ್ಕೆ ಬಿಡುವಿಲ್ಲವೆಂದು ಕೊಂಡು ತರಲು ಪ್ರಾರಂಭಿಸಿದ್ದೇವೆ. ಒಂದೆರಡು ದಶಕಗಳ ಖರೀದಿಯಲ್ಲಿ ನಮಗೆ ನಮ್ಮ ಹಿರಿಯರು ಮಾಡುತ್ತಿದ್ದ ಕ್ರಮವೇ ಉತ್ತಮ ಎಂಬ ತಿಳುವಳಿಕೆ ಬಂತು. ಇದರ ಫಲಶ್ರುತಿಯೇ ಈಗ ಕ್ರಾಂತಿ ರೂಪದಲ್ಲಿ ಆಗುತ್ತಿರುವ ಅಡುಗೆ ಮನೆಗೆ ಕೈತೋಟದ ತರಕಾರಿ ಎಂಬ ಯೋಜನೆ.

ಅವರವರ ಕುಟುಂಬಕ್ಕೆ ಬೇಕಾಗುವ ಬೇರೆ ಬೇರೆ ನಮೂನೆಯ ತರಕಾರಿಗಳನ್ನು ಎಷ್ಟು ಸಣ್ಣ ನಿವೇಶನ ಇದ್ದರೂ ಬೆಳೆಸಬಹುದಾದ ತಾಂತ್ರಿಕತೆ ಈಗ ಇದೆ. ಅದಕ್ಕೆ ಬೇಕಾದ ಸಲಕರಣೆಗಳೂ ಇವೆ. ಇದನ್ನು ಬಳಕೆ ಮಾಡಿಕೊಂಡು ಎಲ್ಲಾ ನಮೂನೆಯ ತರಕಾರಿಗಳನ್ನೂ ಬೆಳೆಸಬಹುದು.

ಸ್ಥಳದ ಆಯ್ಕೆ: ಎಲ್ಲಾ ನಮೂನೆಯ ತರಕಾರಿಗಳಿಗೂ ಬಿಸಿಲು  ಬೇಕು. ೫೦% ಕ್ಕಿಂತ ಹೆಚ್ಚಿನ ಬಿಸಿಲು ಬೀಳುವ ಮನೆಯ ಟ್ಯಾರೀಸಿನ ಮೇಲೆ, ಕಂಪೌಂಡ್ ಗೋಡೆಯಲ್ಲಿ, ಮನೆಯ ಅಂಗಳ ತರಕಾರಿ ಬೆಳೆಸಲು ಸೂಕ್ತ ಸ್ಥಳ.

ಸಲಕರಣೆಗಳು: ನಿರುಪಯುಕ್ತ ಬಾಲ್ದಿ, ಪ್ಲಾಸ್ಟಿಕ್ ಪಾತ್ರೆ, ಪ್ಲಾಸ್ಟಿಕ ಗೋಣಿ ಚೀಲ ಇವುಗಳಲ್ಲಿ ಬೆಳೆಸುವ ಮಾಧ್ಯಮ ತುಂಬಿ ಅದರಲ್ಲಿ ಬೀಜ ಬಿತ್ತಿ ಬೆಳೆಸಬಹುದು. ಬೀಜ ಬಿತ್ತಿ ಬೆಳೆಸಲು ಬೇಕಾಗುವ ಅಲಂಕಾರಿಕ ಚಟ್ಟಿಗಳೂ ಲಭ್ಯವಿದೆ. ಅದಲ್ಲದೆ ಪಾಲಿಥೀನ್ ಚೀಲಗಳೂ ಸಹ ಲಭ್ಯವಿದೆ.

ಬಿತ್ತನೆ ಕ್ರಮ: ಯಾವುದೇ ಬೀಜವನ್ನು  ನೇರವಾಗಿ ಬಿತ್ತನೆ ಮಾಡುವ ಬದಲಿಗೆ ಅದನ್ನು ಟ್ರೇಗಳಲ್ಲಿ  ಬಿತ್ತಿ, ಅದನ್ನು ಇರುವೆ ಇತ್ಯಾದಿ ತಿನ್ನದಂತೆ ಎತ್ತರದಲ್ಲಿ ಇಟ್ಟು, ಮೊಳಕೆ ಬಂದ ನಂತರ ನೆಡುವುದು ಉತ್ತಮ. ಇಂಥ ಮೊಳಕೆ ಬರಿಸುವ ಟ್ರೇಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ. ಅದನ್ನು ಮನೆಯ ಪೋರ್ಟೀಕೋದಲ್ಲಿ ಇಟ್ಟು ಸಹ ಮೊಳಕೆ ಬರಿಸಬಹುದು. ಬೆಳೆಸುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಸಿ ಮೊಳೆಯುವಾಗ ಸಧೃಢವಾಗಿ ಮೊಳೆತರೆ ನಂತರದ ಕೆಲಸ ಸುಲಭ. ಅದಕ್ಕೆ ಮೊಳಕೆ ಬರಿಸಲು ಬೇಕಾಗುವ ಪೋಷಕಾಂಶ ಸೇರಿಸಲ್ಪಟ್ಟ ನಾರಿನ ಹುಡಿ ಲಭ್ಯ. ನಾರಿನ ಹುಡಿಯ ಬದಲಿಗೆ ಒಣ ಸಗಣಿಯ ಹುಡಿಯನ್ನು ನೆನೆಸಿಯೂ ಬಳಕೆ ಮಾಡಬಹುದು. ಇದಲ್ಲದೆ ಬೀಜ ಮೊಳಕೆ ಬರಿಸುವ ನಾರಿನ ಪೆಲ್ಲೆಟ್ ಸಹ ಲಭ್ಯ.

ಎಲ್ಲಾ ನಮೂನೆಯ ಸಸ್ಯಗಳಿಗೂ ಬೆಳಕು ಬೇಕಾದ ಕಾರಣ ಅಂಥ ಸ್ಥಳದಲ್ಲಿ ನಾಟಿ ಮಾಡಬೇಕು. ಹಬ್ಬಿ ಬೆಳೆಯುವ ಬಳ್ಳಿ ಸಸ್ಯಗಳನ್ನು ಗೋಡೆ ಬದಿಯಲ್ಲಿ ಬೆಳೆಸಿ ಬಳ್ಳಿಯನ್ನು ಕೆಳಕ್ಕೆ ಇಳಿಯುವಂತೆ ಮಾಡಬೇಕು. ಈ ರೀತಿ ಬಳ್ಳಿ ಕೆಳಕ್ಕೆ ಇಳಿದಾಗ ಅದು ಗೋಡೆಗೆ ಮತ್ತು ಮನೆಗೆ ತಂಪನ್ನೂ  ನೀಡುತ್ತದೆ. ಸಸ್ಯಗಳಾದ ಟೊಮಾಟೋ, ಹರಿವೆ, ನವಿಲು ಕೋಸು, ಶುಂಠಿ, ಬದನೆ, ಬೆಂಡೆ ಇತ್ಯಾದಿಗಳನ್ನು ಮಧ್ಯ ಜಾಗದಲ್ಲಿ ಬೆಳೆಸಬೇಕು. ಬಳ್ಳಿ ಸಸ್ಯಗಳನ್ನು ತುದಿ ಚಿವುಟುವ ಮೂಲಕ ಉದ್ದಕ್ಕೆ ಬಳ್ಳಿ ಬೆಳೆಯಲು ಬಿಡಬಾರದು.

ಟೆರೇಸ್ ಮೇಲೆ ತರಕಾರಿ ಬೆಳೆಸುವ ಇಚ್ಚೆ ಉಳ್ಳವರು ಮೇಲ್ಭಾಗಕ್ಕೆ ಯು ವಿ ನಿರೋಧಕ ಪಾಲಿಥೀನ್ ಹೊದಿಕೆ ಹಾಕಿ ಬೆಳೆಸಿದರೆ ಸಸ್ಯ ಬೆಳವಣಿಗೆಗೆ ಬಹಳ ಅನುಕೂಲವಾಗುತ್ತದೆ. ಇದರಲ್ಲಿ ತೇವಾಂಶದ ಆವೀಕರಣವೂ ಕಡಿಮೆಯಾಗುತ್ತದೆ. ಸುತ್ತಲೂ ಸೊಳ್ಳೆ ಪರದೆಯನ್ನು ಹಾಕುವುದರಿಂದ ಕೀಟ ಸೋಂಕು ಬಾರದೆ ಯಾವುದೇ ಬೆಳೆ ಸಂರಕ್ಷಕಗಳ ಸಿಂಪರಣೆ  ಬೇಕಾಗುವುದಿಲ್ಲ. ಇದು ಗ್ರೀನ್‌ ಹೌಸ್ ತರಹ ಆಗುತ್ತದೆ. ಟಾರೇಸಿನ ಬಾಳ್ವಿಕೆಯೂ ಹೆಚ್ಚಳವಾಗುತ್ತದೆ.

ಅಡುಗೆ ಮನೆಯ ತರಕಾರೀ ತೋಟಕ್ಕೆ ನೀರಾವರಿಗೆ ಹನಿ ನೀರಾವರಿಯ ವ್ಯವಸ್ಥೆಯನ್ನು ಮಾಡಿಕೊಂಡರೆ ತುಂಬಾ  ಅನುಕೂಲ. ದಿನಂಪ್ರತಿ ನೀರು ಹಾಕುವ ಕೆಲಸ ಕಡಿಮೆಯಾಗುತ್ತದೆ. ಮನೆಯ ಓವರ್ ಹೆಡ್ ಟ್ಯಾಂಕಿನ ಸಂಪರ್ಕದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಬಹುದು. ನೀರು ಸೋಸು ವ್ಯವಸ್ಥೆಗೆ ಬೇಕಾಗುವ ಓನ್ ಲೈನ್ ಫಿಲ್ಟರ್ ಸಹ ಈಗ ಲಭ್ಯವಿದೆ.

ಸಸ್ಯ ಸಂರಕ್ಷಣೆ: ಸಾಮಾನ್ಯವಾಗಿ ಎಲ್ಲಾ ತರಕಾರಿಗಳಿಗೂ ಕೀಟ ಸಮಸ್ಯೆ ಇಲ್ಲದಿಲ್ಲ. ರಸ ಹೀರುವ ಕೀಟಗಳು, ಹೇನು, ಜಿಗಿ ಹುಳ, ಬಿಳಿ ನೊಣ, ಥ್ರಿಪ್ಸ್ ನುಶಿ, ಶಲ್ಕ ಕೀಟಗಳು, ವಜ್ರಾಕೃತಿಯ ಬೆನ್ನಿನ ಪತಂಗ, ಎಲೆ ತಿನ್ನುವ ಕೀಟ, ಹಿಟ್ಟು ತಿಗಣೆಗಳು, ಸಾಮಾನ್ಯ. ಇದಕ್ಕೆ ಜೈವಿಕ ಕೀಟ ನಿಯಂತ್ರಕಗಳನ್ನು ಬಳಕೆ ಮಾಡಿದರೆ ಸುರಕ್ಷಿತ. ವರ್ಟಿಸೀಲಿಯಂ ಲೇಕಾನಿ, ಬವೇರಿಯಾ ಬೆಸ್ಸಿಯಾನ ಜೀವಾಣುಗಳುಳ್ಳ ಜೈವಿಕ ಕೀಟ ನಾಶಕ ಬಳಕೆ ಮಾಡಿರಿ. ಬೇರು ತಿನ್ನುವ ಹುಳ ಇದ್ದಲ್ಲಿ, ಮೆಟರಿಜಿಯಂ ಅನಿಸೋಪೆಲ್ಲಿಯೆ, ಪೆಸಿಲೋಮೈಸಿಸ್ ಲೆಕ್ಯಾನೀ, ಕೊಳೆಯುವ ರೋಗ ಬರದಂತೆ ತಡೆಯಲು ಟ್ರೈಕೋಡರ್ಮಾ ಮುಂತಾದ ತಯಾರಿಕೆಗಳನ್ನು ಬಳಕೆ ಮಾಡಿ.,

ಇದಲ್ಲದೆ ಮಾರುಕಟ್ಟೆಯಲ್ಲಿ ಬೇವಿನ ಮೂಲದ ಅಜಡಿರಕ್ಟಿನ್ ಅಂಶ ಉಳ್ಳ ಕೀಟನಾಶಕ ಲಭ್ಯವಿದ್ದರೆ ಅದನ್ನು ಬಳಕೆ ಮಾಡಿ. ಇದಲ್ಲದೆ ಸಾವಯವ ಮೂಲದಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ತಯಾರಿಸಲ್ಪಟ್ಟ ಕೀಟನಾಶಕ Pongamia Soap, Neem Soap ಬಳಕೆ ಮಾಡಿ. ಜೈವಿಕ ಕೀಟ ನಿಯಂತ್ರಕಗಳೂ ಇಲ್ಲಿ ಲಭ್ಯವಿದೆ.

ಬೆಳೆ ಪೊಷಣೆ: ಸಾಮಾನ್ಯವಾಗಿ ಮನೆ ಬಳಕೆಗೆ ಬೆಳೆಸಲ್ಪಡುವ ತರಕಾರಿಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಕೊಡಲು ನಮ್ಮ ಮನಸ್ಸು ಒಗ್ಗದು. ಆದ ಕಾರಣ ಸಾವಯವಕ್ಕೆ ನಾವು ಮೊರೆ ಹೋಗಬೇಕು. ಸಾರಜನ ಮೂಲ ಒದಗಿಸಿಕೊಡುವ ನೆಲಕಡ್ಲೆ ಹಿಂಡಿ, ಹರಳು ಹಿಂಡಿ, ಬೇವಿನ ಹಿಂಡಿ, ರಂಜಕಕ್ಕಾಗಿ ಲಭ್ಯವಿದ್ದರೆ ಹುಡಿ ಎಲುಬಿನ ಗೊಬ್ಬರ ಇಲ್ಲವೇ ಶಿಲಾ ರಂಜಕ ಅಥವಾ ಜಂಬಿಟ್ಟಿಗೆ ಕಲ್ಲಿನ ಹುಡಿ, ಪೊಟ್ಯಾಶಿಯಂ ಸತ್ವಕ್ಕಾಗಿ ಮರದ ಬೂದಿಯನ್ನು ಬಳಕೆ ಮಾಡಿ. ಒಣಗಿಸಿ ಮಾರಾಟಕ್ಕೆ ಲಭ್ಯವಾಗುವ ಸಗಣಿ, ಉತ್ತಮ ಗೊಬ್ಬರ. ಹಿಂಡಿಯನ್ನು ಮೂರು ನಾಲ್ಕು ದಿನಕ್ಕೊಮ್ಮೆ ೧೦ ಗ್ರಾಂ ಒಂದು ಗಿಡಕ್ಕೆ ಬಳಕೆ ಮಾಡುತ್ತಿರಬೇಕು. ಅಡುಗೆ ಮನೆಯ ಕೈತೋಟ ಮಾಡುವಾಗ ಹೇರಳ ಮಾಧ್ಯಮ ಇಲ್ಲದ ಕಾರಣ, ಪದೇ ಪದೇ ಪೋಷಕಾಂಶಗಳನ್ನು ಕೊಡುತ್ತಲೇ ಇರಬೇಕು. ಜೈವಿಕ ಸಾರಜನಕ ರಂಜಕ ಮತ್ತು ಪೊಟ್ಯಾಶಿಯಂ ಸತ್ವ ಕೊಡುವ ತಯಾರಿಕೆಯನ್ನು ಬಳಕೆ ಮಾಡಿ. ಅನುಕೂಲ ಉಳ್ಳವರು ಕಾಂಪೋಸ್ಟು ಮಾಡಬಹುದು.

ಹೆಚ್ಚಿನೆಲ್ಲಾ ಮನೆ ಮಂದಿ ತಮ್ಮ ಮನೆಯ ಸುತ್ತಮುತ್ತ ಹೂವಿನ ಸಸಿ ಬೆಳೆಸಲು ಬಹಳ ಆಸ್ಥೆ ವಹಿಸುತ್ತಾರೆ. ಅಷ್ಟೇ ಆಸ್ಥೆಯನ್ನು ವಹಿಸಿ ತರಕಾರಿ ಬೆಳೆದರೆ, ಮನೆ ಮಂದಿಗೆ ಆರೋಗ್ಯಕರ ಅಡುಗೆಗೆ ತರಕಾರಿಗಳನ್ನು ಪಡೆಯಬಹುದು. ಖರ್ಚೂ ಉಳಿಸಬಹುದು.

ಮಾಹಿತಿ ಮತ್ತು ಚಿತ್ರಗಳು: ರಾಧಾಕೃಷ್ಣ ಹೊಳ್ಳ