ಅಡುಗೆ ಮನೆಗೆ ಸುರಕ್ಷಿತ ತರಕಾರಿ ತನ್ನಿ...!

ಅಡುಗೆ ಮನೆಗೆ ಸುರಕ್ಷಿತ ತರಕಾರಿ ತನ್ನಿ...!

ಸರ್ವ ರೋಗಕ್ಕೆ ಬೂದಿ ಮದ್ದು ಎಂಬ ಮಾತನ್ನು ಕೇಳಿರಬಹುದು. ಇದು ಬಹುತೇಕ ಸತ್ಯವಾದ ಮಾತು. ಮಾರಾಟ ಉದ್ದೇಶಕ್ಕಾಗಿ ಮತ್ತು ನಮ್ಮ ಬಳಕೆಗೆ ಬೆಳೆಯುವ ತರಕಾರಿಗಳಿಗೆ ನಾವು ಹಾನಿ ಇಲ್ಲದ ಕೀಟ ನಿಯಂತ್ರಕವನ್ನು ಬಳಕೆ ಮಾಡಿ ಬೆಳೆಯಲು ಸಾಧ್ಯವಿದೆ.

ಯಾವಾಗಲೂ ಕೈಯಲ್ಲಿ ಕೊಯ್ಯುವುದನ್ನು  ಕೊಕ್ಕೆಯಲ್ಲಿ ಕೊಯ್ಯುವ ಕೆಲಸ ಮಾಡಬಾರದು ಎಂಬುದಾಗಿ ಹಿರಿಯರು ಹೇಳುತ್ತಾರೆ. ಕೆಲವು ಸುಲಭದಲ್ಲಿ ಆಗುವ ಕೆಲಸವನ್ನು ನಾವು ಬಹಳ ಕಷ್ಟ ಪಟ್ಟು ಮಾಡುತ್ತೇವೆ. ತರಕಾರಿ ಬೆಳೆಸುವಾಗ ಕಿಟಗಳು ಬರುವುದು ಸಹಜ. ಹಾಗೆಂದು ಅವುಗಳ ನಿಯಂತ್ರಣಕ್ಕೆ  ರಾಸಾಯನಿಕ  ವಿಷ ಕೀಟನಾಶಕ ಒಂದೇ ಪರಿಹರಾವಲ್ಲ. ಯೋಚನೆ ಮಾಡಿದರೆ ನಮ್ಮಲ್ಲೇ ಹಲವಾರು ಕೀಟ ನಿಯಂತ್ರಣ ಉಪಾಯಗಳಿವೆ. ಕೀಟಗಳು ಎಲ್ಲಿ ವಾಸವಾಗಿರುತ್ತವೆ, ಏನು ಮಾಡುತ್ತವೆ ಎಂಬುದನ್ನು  ಮೊದಲಾಗಿ ತಿಳಿಸುಕೊಳ್ಳಬೇಕು. ನಿರಂತರ ಪರಿಶೀಲನೆಯಿಂದ ಇದನ್ನು ಪತ್ತೆ ಹಚ್ಚಲು ಸಾಧ್ಯ.

ಕೀಟಗಳನ್ನು ವಿಕರ್ಷಿಸಲು ಸಾಬೂನು ದ್ರಾವಣ ಫಲಕಾರಿ. ಸಾಬೂನು ದ್ರಾವಣದಲ್ಲಿ ಕಡಿಮೆ ಸಾಂದ್ರತೆಯಲ್ಲಿ ಕಾಸ್ಟಿ ಸೋಡಾ, ಬ್ಲೀಚಿಂಗ್ ಪೌಡರ್ , ಎಣ್ಣೆ ಮುಂತಾದ ರಾಸಾಯನಿಕಗಳು ಸೇರಿರುತ್ತವೆ. ಇದು ತಕ್ಕಮಟ್ಟಿಗೆ ಕೀಟಗಳನ್ನು ದೂರ ಮಾಡುತ್ತವೆ. ಸಾಬೂನು ನೀರು ಉತ್ತಮ ಮಾರ್ಜಕ. ಇದನ್ನು ಸಿಂಪಡಿಸಿದಾಗ ಅದು ಕೀತದ ಮೇಲೆ ತಗಲಿದರೆ ಅದರ ರೆಕ್ಕೆ  ಒದ್ದೆಯಾಗಿ ಅಥವಾ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಸಾಬೂನು ದ್ರಾವಣವನ್ನು  ಸಿಂಪಡಿಸಿದಾಗ ಅದು ಎಲೆ ಕಾಂಡದ ಮೇಲೆ ತೆಳುವಾಗಿ ಲೇಪಿತವಾಗುತ್ತದೆ. ಇದು ಕೀಟಗಳಿಗೆ  ಅಸಹಜ ಮೇಲ್ಮೈಯಂತೆ ಕಂಡುಬಂದು ರಸ ಹೀರುವಿಕೆಯಿಂದ ದೂರವಾಗುತ್ತದೆ. ಕೆಲವು ರೈತರ ಅನುಭವದಂತೆ, ಮೆಣಸಿನ ಕಾಯಿಯ ಎಲೆ ಮುರುಟುವಿಕೆ,  ಬದನೆಯ ಎಲೆ ಮುರುಟುವಿಕೆ, ಹರಿವೆಯ ಎಲೆ ತಿನ್ನುವ ಹುಳ ಇವುಗಳನ್ನು ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಸಾಬೂನು ನೀರು ಸಿಂಪರಣೆ  ಮಾಡುವುದರಿಂದ ಕಡಿಮೆ ಮಾಡಬಹುದಂತೆ.

ತರಕಾರಿ ಬೆಳೆಗಳಲ್ಲಿ ಬರುವ ಬಿಳಿ ಹಿಟ್ಟು ತಿಗಣೆಯಿಂದ ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಇದು ಎಳೆ ಭಾಗದಲ್ಲಿ  ಚಿಗುರು ಸಂದುಗಳಲ್ಲಿ ರಸ ಹೀರಿ ಸಸ್ಯ ಬೆಳವಣಿಗೆಗೆ ತೊಂದರೆ ಮಾಡುತ್ತವೆ. ಇದನ್ನು ಯಾವುದೇ ಕೀಟ ನಾಶಕ ಇಲ್ಲದೆ ನಿವಾರಿಸಲು ಸಾಧ್ಯ. ಇರುವೆಗಳು ಸುಳಿ ಭಾಗದಲ್ಲಿ ಅಥವಾ ತರಕಾರಿ ಸಸ್ಯದ ಯಾವುದಾದರೂ ಭಾಗದಲ್ಲಿ ಕಂಡು ಬಂದರೆ ಅಲ್ಲಿ ಹಿಟ್ಟು ತಿಗಣೆ ಇದೆ ಎಂದರ್ಥ. ಆಗ ಎಲ್ಲಿ ಇದು ಇದೆ ಎಂದು ಪರೀಕ್ಷಿಸಿ ಆ ಭಾಗವನ್ನು ಕತ್ತರಿಸಿ ತೆಗೆದು ಸುಡಿ. ಸಾಯದ ಎಲೆಗಳು ಅಥವಾ ಎಳೆ ಚಿಗುರು ಸ್ವಲ್ಪ ತುಂಡು ಮಾಡಿ ತೆಗೆಯಬೇಕಾಗಿ ಬಂದರೂ ಚಿಂತಿಸ ಬೇಡಿ. ಆ ಕೀಟದ ಉಪಟಳ ಮುಕ್ತವಾದರೆ ಮತ್ತೆ ಬೇಗನೆ ಚಿಗುರಿಕೊಳ್ಳುತ್ತದೆ. ಬಾಧಿತ ಭಾಗವನ್ನು ತೆಗೆದ ಮೇಲೆ ಸಸ್ಯಕ್ಕೆ ಒಮ್ಮೆ ಸಾಬೂನಿನ ದ್ರಾವಣ ಸಿಂಪರಣೆ ಮಾಡುವುದು ಉತ್ತಮ. ಇರುವೆಯ ಗೂಡನ್ನು  ಹುಡುಕುವುದು ಉತ್ತಮ ಪರಿಹಾರ. ಇರುವೆಗಳಲ್ಲಿ  ಹೆಚ್ಚಾಗಿ ಕೆಂಪಿರುವೆಯೇ ಇದಕ್ಕೆ ತೊಂದರೆ ಮಾಡುವಂತದ್ದು. ಅದರ ಗೂಡು ಇರುವ ಜಾಗವನ್ನು  ಹುಡುಕಿ ಅದಕ್ಕೆ ಮೆಲಾಥೀಯನ್ ಧೂಳೀಕರಣ ಮಾಡಿದರೆ ಅದರ ಮೂಲಕವೇ ಪ್ರಸಾರವಾಗುವ ಹಿಟ್ಟು ತಿಗಣೆ ತೊಂದರೆಯನ್ನು ನಿವಾರಿಸಬಹುದು.

ಮುನ್ನೆಚರಿಕೆಯ ಸಿಂಪರಣೆ: ಸೊಪ್ಪು ತರಕಾರಿಯಾಗಿ ಬಳಸದೆ ಇರುವ ತರಕಾರಿಗಳಿಗೆ ಬರುವ ಕೀಟಗಳ ನಿಯಂತ್ರಣಕ್ಕೆ ಜೇಡಿ ( ಸೇಡಿ) ಮಣ್ಣಿನ ದ್ರಾವಣವನ್ನು ಎಲೆಗಳಿಗೆ ಸಿಂಪರಣೆ  ಮಾಡುವುದು ಫಲಕಾರಿ. ಎಲೆಯ ಅಡಿ ಭಾಗಕ್ಕೆ ಬೀಳುವಂತೆ ಇದನ್ನು ಸಿಂಡಿಸಿದರೆ ಕೀಟಗಳಿಗೆ ಇಲ್ಲಿ ಏನೋ ಇದೆ ಎಂಬ ಭಾವನೆ ಉಂಟಾಗುತ್ತದೆ. ಅದು ಅಲ್ಲಿ  ಕುಳಿತುಕೊಳ್ಳುವುದಕ್ಕೆ ಅಂಜಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಜೇಡಿನ (Clay) ಕೆಲವು ತಯಾರಿಕೆಗಳು ಇವೆ. ಇವುಗಳು ಜೇಡಿ ಮಣ್ಣಿನಿಂದ ಮಾಡಿದ ತಯಾರಿಕೆಯಾಗಿದ್ದು ಇದನ್ನು ಸಿಂಪರಣೆ ಮಾಡಿದರೆ ಅದು ಎಲೆ ಭಾಗದಲ್ಲಿ ಅಂಟಿಕೊಂಡು ಪ್ರಯೋಜನವಾಗುತ್ತದೆ.

ಹರಿವೆ ಸೊಪ್ಪು, ಮೆಂತೆ ಸೊಪ್ಪು, ಪಾಲಕ್ ಸೊಪ್ಪು, ಮೂಲಂಗಿ, ಪುದಿನ ಸೊಪ್ಪು, ಬದನೆ, ತೊಂಡೆ ಮುಂತಾದ ತರಕಾರಿಗಳ ಎಲೆಯಲ್ಲಿ ಕುಳಿತು ಎಲೆ ಭಕ್ಷಿಸುವ ಹುಳ ತೊಂದರೆ ಮಾಡುತ್ತದೆ. ಮೊದಲಾಗಿ ಇದರ ಪತಂಗ ಒಂದು ಕಡೆ ಮೊಟ್ಟೆ ಇಟ್ಟು ಹೋಗುತ್ತದೆ. ಇದು ಹುಳವಾಗಿ ಎಲೆಯನ್ನು ಭಕ್ಷಿಸಲು ಪ್ರಾರಂಭಿಸುತ್ತದೆ. ನಾವು ಬೆಳೆಸಿದ ತರಕಾರಿ ಸಸ್ಯಗಳನ್ನು ದಿನಾ ಇಲ್ಲವೇ ಎರಡು ದಿನಕ್ಕೊಂದಾವರ್ತಿಯಾದರೂ ಗಮನಿಸುತ್ತಿರಿ, ಎಲೆಯ ಮೇಲೆ ಏನಾದರೂ ಹಿಕ್ಕೆಗಳು ಕಂಡು ಬಂದರೆ  ಅಲ್ಲಿ ಎಲೆ ತಿನ್ನುವ ಹುಳ ಇದೆ ಎಂದರ್ಥ. ಎಲೆ ಎಲ್ಲಾದರೂ ಮಡಚಿ ಕೊಂಡಿದೆಯೋ ನೋಡಿ. ಎಲೆ ಅಡಿ ಭಾಗದಲ್ಲಿ  ಮಡಚಿಕೊಂಡು ಇದ್ದರೆ ಅದನ್ನು ಬಿಡಿಸಿ ನೋಡಿ ಅಲ್ಲಿ ಸಣ್ಣ ಗಾತ್ರದ ಹುಳು ಇದ್ದರೆ ಪ್ರಾರಂಭಿಕ ಹಂತದಲ್ಲಿದೆ ಎಂದರ್ಥ. ಆ ಎಲೆಯನ್ನೇ ತೆಗೆದು ಸುಟ್ಟು ಬಿಡಿ ಉಳಿದ ಎಲೆಗಳಲ್ಲಿ ಮಡಚಿದ ಚಿನ್ಹೆ ಇದೆಯೇ ಎಂದು ಗಮನಿಸಿ. ಇದ್ದರೆ ಅದನ್ನು ಬಿಡಿಸಿ ನೋಡಿ. ಅಲ್ಲಿ ಹುಳ ಇದ್ದರೆ ಅದನ್ನು ಕೊಂದು ಬಿಡಿ. ಎಲೆ ಮಡಚಿದ ಭಾಗವನ್ನು ಕತ್ತರಿಸಿ ತೆಗೆದರೆ ಬರೇ ಎಲೆ ತಿನ್ನುವ ಹುಳ ಮಾತ್ರವಲ್ಲ ಜೇಡರ ನುಸಿಯೂ ಸಹ ನಾಶವಾಗುತ್ತದೆ.

ಜೇಡಗಳೂ ತರಕಾರಿ ಬೆಳೆಗೆ ತೊಂದರೆ ಮಾಡುತ್ತವೆ. ಇವು ಎಲೆಯನ್ನು ಒಳಮುಖ ಬಗ್ಗಿಸಿ ಅಲ್ಲಿ ಬಲೆ ಕಟ್ಟಿ ವಾಸಿಸಿ ಎಲೆಯ ರಸ ಹೀರುತ್ತವೆ. ಅದನ್ನು ಗಮನಿಸಿ ಎಲೆ ತೆಗೆದು ಸುಟ್ಟು ಹಾಕಿರಿ. ಯಾವುದೇ ಕಾರಣಕ್ಕೂ ಕತ್ತರಿಸಿ ತೆಗೆದ ಭಾಗಗಳನ್ನು ಕಾಲಿನಿಂದ ಹಿಚುಕಿ ಅಲ್ಲೇ ಬಿಸಾಡಬೇಡಿ. ಹುಳ ಸತ್ತಿದ್ದರೂ ಅಲ್ಲಿ ಮೊಟ್ಟೆಗಳು ಉಳಿದು ಮತ್ತೆ ತೊಂದರೆ ಆಗಬಹುದು. ಆದ ಕಾರಣ ಸುಡುವುದು ಸೂಕ್ತ.

ಸಸ್ಯಹೇನುಗಳ ನಿಯಂತ್ರಣಕ್ಕೆ  ಬೂದಿಯೇ ಉತ್ತಮ. ಬೂದಿ ಎರಚುವುದರಿಂದ ಸಸ್ಯ ಹೇನುಗಳಿಗೆ ಸಂತಾನಾಭಿವೃದ್ದಿಗೆ ಅಡ್ಡಿಯಾಗುತದೆ. ಬೂದಿಯನ್ನು ತೆಳುವಾಗಿ ದ್ರವೀಕರಿಸಿ ಎಲೆ ಅಡಿ ಭಾಗಕ್ಕೆ ಸಿಂಪರಣೆ ಮಾಡಬಹುದು. ಕೆಲವರು ಕೆಂಪು ಇರುವೆ ಬಂದರೆ ಸಸ್ಯ ಹೇನುಗಳು ಕಡಿಮೆಯಾಗುತ್ತದೆ ಎಂದು ತಿಳಿಯುತ್ತಾರೆ.ಆದರೆ ಸಸ್ಯ ಹೇನುಗಳನ್ನು ಇರುವೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾಯಿಸುತ್ತವೆ.

ಎಲೆಯ ರಸ ಹೀರುವ ನೊಣಗಳಾದ ಬಿಳಿ ನೊಣ, ಬಿಳಿ, ಕೆಂಪು ತಿಗಣೆ  ಬದನೆ, ಮೆಣಸು, ಮುಂತದವುಗಳಿಗೆ  ತೊಂದರೆ ಮಾಡುವುದು ಜಾಸ್ತಿ. ಇದರ ನಿಯಂತ್ರಣಕ್ಕೆ ಗಾಢ ವಾಸನೆ ಹೊರ ಸೂಸುವ ಸಸ್ಯ ಔಷದಿಗಳನ್ನು ಸಿಂಪರಣೆ ಮಾಡಬೇಕು. ಬೇವಿನ ಮೂಲದ ಕೆಲವು ತಯಾರಿಕೆಗಳು ಇದನ್ನು ನಿಯಂತ್ರಿಸುತ್ತವೆ. ಬೆಳ್ಳುಳ್ಳಿ -ಸಾಸಿವೆಗಳನ್ನು ಜಜ್ಜಿ ಸೋಸಿ ಮಾಡಿದ ಸಸ್ಯ ಜನ್ಯ ಔಷಧಿ ನುಸಿ ನಿಯಂತ್ರಣಕ್ಕೆ ಪರಿಣಾಮಕಾರಿಯಾಗುತ್ತದೆ. ಹೆಚ್ಚಾಗಿ ಬದನೆ ಸಸ್ಯದಲ್ಲಿ ಎಳೆ ಚಿಗುರಿಗೆ ಬಿಳಿ ಮತ್ತು ಕೆಂಪು ತಿಗಣೆ (ಮೈಟ್) ಬಾಧಿಸುವುದು ಜಾಸ್ತಿ. ಇದರಿಂದಾಗಿ ನಂತರ ಬೆಳವಣಿಗೆ ಕುಂಠಿತವಾಗುತ್ತದೆ. ಹೆಚ್ಚಾದಂತೆ ಅದು ಕೆಳ ಎಲೆಗಳಿಗೂ  ವ್ಯಾಪಿಸುತ್ತದೆ. ಅಂತಹ ಸಂಧರ್ಭಗಳಲ್ಲಿ ಅದರ ನಿಯಂತ್ರಣಕ್ಕೆ ತುದಿಯ ಮೂರು ನಾಲ್ಕು ಎಲೆ ಸಮೇತ ಕತ್ತರಿಸಿ ತೆಗೆದು ಅದನ್ನು ಸುಟ್ಟು ಹಾಕಿ. ನಂತರ ಸಸ್ಯಗಳಿಗೆ ಗಂಧಕ ( ನೀರಿನಲ್ಲಿ ಕರಗುವ  ಗಂಧಕ ೨ ಗ್ರಾಂ-೧ ಲೀ. ನೀರು) ಸಿಂಪರಣೆ  ಮಾಡಿ. ಗಂಧಕ ಅತಿಯಾದ ವಿಷವಸ್ತು ಅಲ್ಲ. ಇದು ಒಂದು ಪೋಷಕವಾಗಿಯೂ  ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಎಲ್ಲಾ ನಮೂನೆಯ ತಿಗಣೆಗಳನ್ನು ಇದು ನಾಶ ಮಾಡುತ್ತದೆ.

ಸಸ್ಯಗಳು ಕೊಳೆಯುವಿಕೆಗೆ, ಒಣಗುವಿಕೆಗೆ ಒಂದು ಕಾರಣ ಅತಿಯಾದ ನೀರು. ಮತ್ತೊಂದು ಕಾರಣ ನೀರೊತ್ತಾಯ. ನೀರನ್ನು ಉಣಿಸುವಾಗ ಹೆಚ್ಚಗದಂತೆ ನೋಡಿಕೊಳ್ಳಿ. ಈಗ ಗ್ರೋವ್ ಬ್ಯಾಗುಗಳಲ್ಲಿ  ಸಸಿ ಬೆಳೆಸುತ್ತಾರೆ. ಅದರಲ್ಲಿ ಅಡಿ ಭಾಗದಲ್ಲಿ ತೂತು ಇರುವುದಿಲ್ಲ  ಬುಡದಿಂದ ೩-೪ ಇಂಚು ಮೇಲೆ ತೂತು. ಅಲ್ಲಿಯ ತನಕ ಹೆಚ್ಚಾದ ನೀರು ಬಸಿಯಲ್ಪಟ್ಟರೆ  ನಂತರದ್ದು ಅಲ್ಲೇ ಶೇಖರಣೆ ಆಗುತ್ತದೆ. ಇದರಿಂದ ಸಸಿ ಸಾಯುತ್ತದೆ. ಅದಕ್ಕೆ ಮೊದಲು ಅಡಿ ಭಾಗದಲ್ಲೂ ಒಂದು ತೂತು ಮಾಡಬೇಕು. ಕುಂಡದಲ್ಲಿ ಅಥವಾ ಬ್ಯಾಗುಗಳಲ್ಲಿ ಬೆಳೆಸಿದ ಸಸಿಗಳಿಗೆ  ಹೆಚ್ಚು ನೀರು ಬೇಡ. ಅದೇ ರೀತಿ ನೀರು ಕಡಿಮೆಯಾದರೂ ತಕ್ಷಣ ಗಿಡ ಒಣಗಬಹುದು. ಆದ ಕಾರಣ ಕಡಿಮೆ ಪ್ರಮಾಣದಲ್ಲಿ ದಿನಾ ನೀರು ಹಾಕುತ್ತಾ ಇರಬೇಕು. ನಾಟಿ ಮಾಡುವ ಮಾಧ್ಯಮ ಉತ್ತಮ ಗುಣಮಟ್ಟದ್ದಾಗಿರಬೇಕು. ಅಂಟು ಮಣ್ಣು, ಅಥವಾ ಕಲುಷಿತ ಮಣ್ಣು  ಹಾಕಬಾರದು. ಸಗಣಿ ಇಲ್ಲವೇ ಉತ್ತಮ ಗುಣಮಟ್ಟದ ಕುರಿ, ಆಡಿನ ಗೊಬ್ಬರದಲ್ಲಿ  ಮಣ್ಣು ಜನ್ಯ ಜಂತು ಹುಳ, ದುಂಡಾಣು ಇರುವುದಿಲ್ಲ. ಮಣ್ಣಿನ ಬದಲಿಗೆ ಅದನ್ನೇ ಉಪಯೋಗ ಮಾಡುವುದು ಒಳ್ಳೆಯದು. ಇದು ಸ್ವಲ್ಪ ನೀರು ಹೆಚ್ಚಾದರೂ ಸಹ ಅದನ್ನು  ಹಿಡಿದಿಟ್ಟುಕೊಳ್ಳುತ್ತದೆ. ಸಗಣಿಗೆ ಉತ್ತಮ ಶಿಲೀಂದ್ರ ನಿರೋಧಕ ಶಕ್ತಿ ಇದೆ.ಆದ ಕಾರಣ ಸಗಣಿ ಗೊಬ್ಬರ ಬಳಕೆ ರೋಗ ರಹಿತ ಕೃಷಿಗೆ ಸೂಕ್ತ. ಗೋ ಮೂತ್ರ ಮತ್ತು ಮಾನವ ಮೂತ್ರವನ್ನು ಕೆಲವು ತರಕಾರಿಗಳಿಗೆ ಬಳಕೆ ಮಾಡಿದರೆ ಅದಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ. ನೆಕ್ಕಿ ಸೊಪ್ಪಿನ ರಸ, (೧ ಕಿಲೋ ನೆಕ್ಕಿ ಸೊಪ್ಪನ್ನು ಜಜ್ಜಿ ಒಂದು ದಿನ  ನೀರಿನಲ್ಲಿ ನೆನೆಸಿ ಇಟ್ಟು ಅದರ ರಸವನ್ನು ಸೋಸಿ ಅದನ್ನು ೧ ಲೀ. ಗೆ ೫ ಲೀ. ನೀರು ಸೇರಿಸಿ ಸಿಂಪರಣೆ ಮಾಡಿದರೆ ನುಸಿಗಳು, ಬಿಳಿ ಹಾತೆಗಳು, ತಿಗಣೆ (ಮೈಟ್) ಕಡಿಮೆಯಾಗುತ್ತದೆ. ಇದು ಬಂದ ನಂತರ ಸಿಂಪರಣೆಗೆ ಅಲ್ಲ. ಮುನ್ನೆಚ್ಚರಿಕೆಗಾಗಿ. ಅದೇ ರೀತಿ ಸಿಟ್ರನೆಲ್ಲಾ ಹುಲ್ಲಿನ (ಎಣ್ಣೆ ಹುಲ್ಲು, ಮಜ್ಜಿಗೆ ಹುಲ್ಲು) ಸೊಪ್ಪನ್ನು ಜಜ್ಜಿ ನೆನೆಸಿ ಅದರ ರಸವನ್ನೂ ಸಿಂಪರಣೆ  ಮಾಡಬಹುದು. ಹಿಂಡಿ ಗೊಬ್ಬರಗಳಾದ ಬೇವಿನ ಹಿಂಡಿ, ಹರಳು ಹಿಂಡಿಯನ್ನು ಬಳಕೆ ಮಾಡಿದರೆ ದುಂಡಾಣು ಹುಳ ಕಡಿಮೆಯಗುತ್ತದೆ.

ನಮ್ಮ ಪೂರ್ವಿಕರು ತರಕಾರಿ ಬೆಳೆಸುವಾಗ ಕೀಟನಾಶಕಗಳೇ ಇರಲಿಲ್ಲ. ಆಗ ಅದಿಲ್ಲದೆಯೇ ತರಕಾರಿ ಬೆಳೆಸುತ್ತಿದ್ದರು. ಆಗಲೂ ಕೀಟ ರೋಗಗಳಿತ್ತು. ಅವರ ಬೇಸಾಯ ಕ್ರಮ ಮತ್ತು ಸರಳ ಪರಿಹಾರಗಳೇ ಅವರ ಬೆಳೆಯನ್ನು ರಕ್ಷಿಸುತ್ತಿತ್ತು. ಅವರಲ್ಲಿ ಇದ್ದ ಬೆಳೆ ಸಂರಕ್ಷಕ ಎಂದರೆ ಬೂದಿ ಮತ್ತು ಕಾಡು ಸೊಪ್ಪುಗಳು ಮಾತ್ರ. ಸೊಳ್ಳೆ ಪರದೆಯ ಮನೆಯನ್ನು ಮಾಡಿ  ಅದರೊಳಗೆ ತರಕಾರಿ ಬೆಳೆಸಿದರೆ ಕೀಟದ ಹಾವಳಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯ.   

ಮಾಹಿತಿ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ