ಅಣು ಯುದ್ಧದ ಅಂಚಿನಲ್ಲಿ…(ಭಾಗ ೧)
ಪ್ರಪಂಚ ಈಗಾಗಲೇ ಎರಡು ಮಹಾಯುದ್ಧಗಳನ್ನು ಕಂಡಿದೆ. ಎರಡನೇ ಮಹಾಯುದ್ಧದ ನಿಟ್ಟುಸಿರು ಅಳಿಯುವ ಮೊದಲೇ ಮೂರನೇ ಮಹಾಯುದ್ಧದ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ.
ಇತಿಹಾಸ ಅನೇಕ ಮಹಾಯುದ್ಧಗಳನ್ನು ಕಂಡಿದೆಯಾದರೂ ಕಳೆದ ಶತಮಾನದ ಎರಡು ಮಹಾಯುದ್ಧಗಳು ಮಾತ್ರ ಪ್ರಪಂಚದ ಇತಿಹಾಸದಲ್ಲಿ ಅಚ್ಚಳಿಯದೇ ನಿಂತು ಬಿಟ್ಟಿದೆ. ಅದರಲ್ಲೂ ಎರಡನೇ ಮಹಾಯುದ್ಧ ಇನ್ನೂ ಮಹತ್ವದ್ದು. ಏಕೆಂದರೆ ಈ ಮಹಾಯುದ್ಧ ಕೊನೆಗೊಂಡದ್ದೇ ಭೀಕರ ಪರಮಾಣು ಬಾಂಬ್ ಗಳ ದಾಳಿಯ ನಂತರ. ಕೇವಲ ಎರಡೇ ಪರಮಾಣು ಬಾಂಬ್ ಗಳ ದಾಳಿ ಇಡೀ ಮನುಕುಲಕ್ಕೇ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ಮೂರನೇ ಮಹಾಯುದ್ಧವೇನಾದರೂ ಸಂಭವಿಸಿದರೆ ಅದನ್ನು ‘ಮೂರನೇ ಪರಮಾಣು ಮಹಾಯುದ್ಧ' ಎಂದೇ ಕರೆಯಬಹುದೇನೋ?
ಹಿರೋಷಿಮಾ ಮತ್ತು ನಾಗಾಸಾಕಿಗಳ ಮೇಲೆ ಪರಮಾಣು ಬಾಂಬ್ ದಾಳಿ: ಅದು ೧೯೪೫ನೇ ಇಸವಿ. ಎರಡನೇ ಮಹಾಯುದ್ಧದ ಕೊನೆಯ ಹಂತ. ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಜಪಾನ್ ಗೆ ಕೊನೆಯ ಎಚ್ಚರಿಕೆ ನೀಡಿ ಶರಣಾಗಲು ತಿಳಿಸಿದರು. ಜಪಾನ್ ಈ ಬೆದರಿಕೆಗೆ ಸೊಪ್ಪು ಹಾಕಲಿಲ್ಲ. ನಂತರ ನಡೆದದ್ದು ಇತಿಹಾಸ. ಅಮೇರಿಕಾದ ಅಧ್ಯಕ್ಷ ಟ್ರೂಮನ್, ಬ್ರಿಟೀಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹಾಗೂ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಅಂದೇ ಜಪಾನ್ ನ ಹಣೆಬರಹವನ್ನು ಪರಮಾಣು ಅಸ್ತ್ರಗಳಿಂದ ಬರೆದು ಬಿಟ್ಟಿದ್ದರು !
ಅಂದು ೧೯೪೫ನೇ ಇಸವಿ ಆಗಸ್ಟ್ ೬ರ ಬೆಳಗಿನ ಸಮಯ. ಜಪಾನ್ ನ ಹಿರೋಷಿಮಾ ನಗರದ ಜನತೆ ಆಗಷ್ಟೇ ತಮ್ಮ ದೈನಂದಿನ ದಿನಚರಿಗಳನ್ನು ಆರಂಭಿಸಿದ್ದರು. ಸರಿಯಾಗಿ ೮.೧೫ಕ್ಕೆ ಯುದ್ಧ ವಿಮಾನ ಬಿ-೨೯ ಎಂಬ ಪರಮಾಣು ಬಾಂಬ್ ಅನ್ನು ಹಾಕಿಯೇ ಬಿಟ್ಟಿತು. ನೆನಪಿರಲಿ, ಅದು ಸೇನಾ ನೆಲೆ ಅಥವಾ ಯುದ್ಧನೆಲೆಯಾಗಿರಲಿಲ್ಲ. ಅದೊಂದು ನಾಗರಿಕರ ನೆಲೆ ! ಅದು ಪ್ರಪಂಚದ ಮೊಟ್ಟಮೊದಲ ಪರಮಾಣು ಬಾಂಬ್ ! ಅದು ಅದುವರೆಗೂ ಪ್ರಪಂಚದಲ್ಲಿ ಉಪಯೋಗಿಸಿದ್ದ ಅತ್ಯಂತ ಭಯಾನಕ ಸ್ಪೋಟಕದ ಎರಡು ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿ ಸ್ಫೋಟವಾಗಿತ್ತು. ಇಡೀ ಹಿರೋಷಿಮಾ ನಗರವೇ ನಾಯಿಕೊಡೆಯಂತಹ ಧೂಮದಿಂದ ಮುಚ್ಚಿಹೋಯಿತು.
ಬೆಂಕಿಯ ಕೆನ್ನಾಲಿಗೆಗಳು ಇಡೀ ನಗರವನ್ನು ವ್ಯಾಪಿಸಿಕೊಂಡವು. ಆ ಭೀಕರ ಸ್ಫೋಟದ ಸದ್ದಿಗೆ ಕ್ಷಣಮಾತ್ರದಲ್ಲಿ ಇಡೀ ಹಿರೋಷಿಮಾ ನಗರವೇ ಸ್ತಬ್ಧಗೊಂಡು ಕಿವುಡಾಯಿತು. ಇಡೀ ಜೀವಸಂಕುಲ ಕ್ಷಣಮಾತ್ರದಲ್ಲಿ ಭಸ್ಮಗೊಂಡು ಹಿರೋಷಿಮಾ ನಗರ ಸ್ಮಶಾನಸದೃಶವಾಯಿತು. ಈ ಸ್ಫೋಟ ಒಂದು ಲಕ್ಷದ ಅರವತ್ತಾರು ಸಾವಿರ ಜನರನ್ನು ಬಲಿ ತೆತೆದುಕೊಂಡಿತು. ದುರದೃಷ್ಟವೆಂದರೆ ಸತ್ತವರು ಬಹುತೇಕ ನಾಗರಿಕರು. ಈ ಘಟನೆಯಲ್ಲಿ ಆ ತಕ್ಷಣ ಸಾಯದೇ ಇದ್ದವರು ಸ್ಫೋಟದ ವಿಷವರ್ತುಲದಲ್ಲಿ ಬಂಧಿಯಾಗಿ ಸುಟ್ಟಗಾಯದಿಂದ, ವಿಕಿರಣಗಳಿಂದ, ಭಯಾನಕ ಕಾಯಿಲೆಗಳಿಂದ ನರಳಿ ನರಳಿ ಪ್ರಾಣ ಬಿಟ್ಟರು. ತಕ್ಷಣದ ಸ್ಫೋಟದ ಪರಿಮಿತಿ ಒಂದು ಚದರ ಕಿಲೋಮೀಟರ್ ಆದರೂ ಅದು ನಂತರ ೪ ರಿಂದ ೫ ಪಟ್ಟು ಹೆಚ್ಚು ಜಾಗವನ್ನು ಆಕ್ರಮಿಸಿತ್ತು. ಕೇವಲ ೩ ದಿನಗಳ ಅಂತರದಲ್ಲಿ ಅಮೇರಿಕಾ ಮತ್ತೊಂದು ಪರಮಾಣು ಬಾಂಬ್ ಅನ್ನು ಜಪಾನಿನ ಮೇಲೆ ಹಾಕಿತು. ಜಪಾನ್ ನ ಇನ್ನೊಂದು ರೇವು ಪಟ್ಟಣವಾದ ನಾಗಾಸಾಕಿಯ ಮೇಲೆ ೯ ಆಗಸ್ಟ್ ೧೯೪೫ರಂದು ಇನ್ನೊಂದು ಪರಮಾಣು ಬಾಂಬ್ ಅನ್ನು ಹಾಕಿತು. ಇದರಿಂದ ಆ ನಗರದಲ್ಲಿ ಪ್ರಾಣ ಕಳೆದುಕೊಂಡವರ ಸಂಖ್ಯೆ ೮೦ ಸಾವಿರವನ್ನು ಮೀರಿತ್ತು.
(ಇನ್ನೂ ಇದೆ)
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ