ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್

ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್

ಅಣ್ಣಿ ನಾಯ್ಕ' ಹಳ್ಳಿಯ ನಡೆದಾಡುವ ಬಜಾರ್

 

 

 

ಹಳ್ಳಿಯ ದೈನಂದಿನ ಕಾರ್ಯ ಚಟುವಟಿಕೆಗೂ ಪಟ್ಟಣದಲ್ಲಿನ ಚಟುವಟಿಕೆಗಳಿಗೂ ತುಂಬಾ ಅಂತರವಿದೆ. ಪಟ್ಟಣದಲ್ಲಿ ಧಾವಂತವೇ ಮುಖ್ಯವಾಗಿದ್ದರೆ ಹಳ್ಳಿಯ ವಾತಾವರಣದಲ್ಲೇ ಮುಗ್ಧತೆ ಮನೆ ಮಾಡಿದೆ, ಸರಳತೆಯ ಶಾಂತತೆಯ ಬಿಂಬವಿದೆ. ನಿಧಾನ ಅಲ್ಪ ಸಂತೋಷ, ಚೇತೋಹಾರೀ ವಾತಾವರಣದ ಬೆಡಗಿದೆ,  ಹರಿಯುತ್ತಿದ್ದ ಬೆವರಲ್ಲಿ ಪಟ್ಟಣದಲ್ಲಿಯಾದರೆ ಒಂದು ನಿಮಿಷ ನಿಲ್ಲಲಾರದಾದರೆ ಹಳ್ಳಿಯಲ್ಲಿನ ಜನರು ಬೆವರು ಸುರಿಸಿ ಆಯಾಸವೆನಿಸದೇ ಕೆಲಸ ಮಾಡಬಲ್ಲರು. ಅಲ್ಲಿನ ಅನಿವಾರ್ಯತೆಯೇ ಇದಾದರೂ ಅಲ್ಲಿನ ಕೆಲಸದ ಜತೆಗೆ ಒಬ್ಬರನ್ನೊಬ್ಬರ ಅರ್ಥೈಸುವಿಕೆ ಹೊಂದಾಣಿಕೆ ಮತ್ತು  ಪ್ರೀತಿತುಂಬಿದ ಸಮಾನತಾ ಮನೋಭಾವನೆಯ ಬದುಕೇ ಇದಕ್ಕೆ ಕಾರಣೀಭೂತವೆಂದರೂ ತಪ್ಪಾಗಲಾರದು.  ಇವೆಲ್ಲವೂ ಪಟ್ಟಣವಾಸಿಗಳಿಗೆಲ್ಲಿ ಸಿಗಬೇಕು?.ಹಳ್ಳೀಯಲ್ಲಿ ಯಾರದ್ದಾದರೂ ಮನೆಯಲ್ಲಿ ಸಮಾರಂಭವಿದ್ದರೆ ಊರಿಗೆ ಊರೇ ಹೆಗಲು ಕೊಡುವುದು, ಸುಖ ದುಖದಲ್ಲಿ ಕೆಲಸ ಕಾರ್ಯಗಳಲ್ಲಿ. ನನ್ನ ತಂದೆಯವರು ಬದುಕಿ ಬಾಳಿದ ಮನೆ ( ಅವಿಭಕ್ತ ಕುಟುಂಬ) ಯಲ್ಲಿರುವಾಗ ಪ್ರತಿ ಹಬ್ಬ ಹರಿದಿನಗಳಲ್ಲಿ ನಮ್ಮ ತಿಂಡಿ, ಸಿಹಿ ಗಳೆಲ್ಲಾ ವಿನಿಮಯಿಸಿಕೊಳ್ಳುತ್ತಾ ಬರ ಹೋಗುವ ನೆಂಟರ ಮಧ್ಯದ ಆ ಮಾತುಕಥೆ ' ಹಬ್ಬ ಹರಿದಿನಗಳ ಸಂಭ್ರಮ, ಅಷ್ಟೇಕೆ, ನಮ್ಮ ಹಳ್ಳಿಯಲ್ಲೊಮ್ಮೆ ಹಂದಿ ಹಿಡಿಲು ನಮ್ಮ ಹೊಲದಲ್ಲಿಯೇ  ಅಟ್ಟ ಕಟ್ಟಿ ಬೇಟೆಯಾಡಿದಾಗ ನಮ್ಮ ಮನೆಯ ನಾಯಿ ಕೂರನೂ ಅದಕ್ಕೆ ಸಹಾಯ ಮಾಡಿದ್ದು, ಆ ಹಂದಿಯನ್ನು ಬೇಟೆಯಾಡಿದ ನಂತರ ಊರವರೆಲ್ಲಾ ಹಂಚಿಕೊಂಡದ್ದೂ ನಾವು ಮಾಂಸಾಹಾರಿಗಳಲ್ಲವಾದುದರಿಂದ ನಮಗೆ ಕೊಟ್ಟ ಪಾಲನ್ನು ನಮ್ಮ ಕೆಲಸಗಾರ ಕುಟುಂಬ ಹಂಚಿಕೊಂಡದ್ದೂ ನೆನಪಿಗೆ ಬರುತ್ತಿದೆ. ಅಲ್ಲಿ ಶ್ರಮ ಕ್ಕಿಂತ ಹೆಚ್ಚಾಗಿ ಹಂಚಿ ತಿನ್ನುವ ಗುಣ ಮತ್ತು ಆತರಹದ ಕಾರ್ಯಗಳು ತಮ್ಮ ಹಕ್ಕು ಮತ್ತು ಕರ್ತವ್ಯ ಎಂಬಂತೆ ಬಿಂಬಿತವಾದ ಆ ನಡವಳಿಕೆ ಹೆಚ್ಚು ಸಮಾಧಾನವನ್ನೂ ಹೆಚ್ಚು ಹೆಚ್ಚು ಗರ್ವವನ್ನು ಕೊಡತಕ್ಕಂತಹ ವಿಷಯಗಳು. ನಮಗೆ ಹಾಗೆಯೇ ಯಾರಾದರೂ ನೆಂಟರು ಬರಲೀ ಎಂದು ಹಾರೈಸುತ್ತಾ ಕಾಲ ಕಳೆದ ದಿನಗಳು ಈಗಲೂ ನನಗೆ ನೆನಪಿಗೆ ಬರುತ್ತಿದೆ. ಕೆಲಸ ಕಾರ್ಯಗಳಲ್ಲಿಯೂ ಅಷ್ಟೇ ಹಣಕ್ಕಿಂತ ವಿನಿಮಯವೇ ಜಾಸ್ತಿ ಪ್ರಾಧಾನ್ಯ ಪಡೆದುಕೊಳ್ಳುತ್ತಿತ್ತು. ಅದರಿಂದ ಏನಾಗುತ್ತಿತ್ತು ಎಂದರೆ ಸಣ್ಣ ಪುಟ್ಟ ಜಗಳಗಳೇರ್ಪಟ್ಟರೂ ಅದು ಜಾಸ್ತಿ ಸಮಯ ಉಳಿಯುತ್ತಿರಲ್ಲಿಲ್ಲ. 

 

ಮೇಲಿನದು ದೊಡ್ದವರ ಕೆಲಸ ಕರ್ಯಗಳಾದರೆ ಮಕ್ಕಳಲ್ಲೂ ಅಷ್ಟೇ, ಈಗಿನ ಮಕ್ಕಳಿಗೆ ದೇವಾಲಯದ ಓಟ, ಸಿಟ್ಟಿನ ಹಕ್ಕಿಗಳು ಮಾರಿಯಾ, ಮುಂತಾದ ಆಟಗಳಿದ್ದರೆ ನಮಗೆಲ್ಲಾ ಹಳ್ಳೀಯಲ್ಲಿ ಹಳೆಯ ಸೈಕಲ್ ಟಯರೇ ರೇಸಿಗೆ ಆಹ್ವಾನವಾಗಿತ್ತು. ಹಳೇಯ ಗೆರಟೆಗಳನ್ನು ಹಿಂದಿನಿಂದ ಒಂದಕ್ಕೊಂದು ತಂತಿಯಿಂದ ಕಟ್ಟಿ ಗಾಡಿಯಾಟ ಆಡುತ್ತಿದ್ದೆವು, ಕಬ್ಬಡ್ಡಿ, ಕೋಕೋಮುಂತಾದ ಆಟಗಳು ಸರ್ವೇ ಸಾಮಾನ್ಯ, ಇನ್ನು ಮದುವೆ ಮುಂಜಿ ಮತ್ತಿತರ ದಿನಗಳಿಗಾಗಿ ಕಟ್ಟಿದ ಚಪ್ಪರದಲ್ಲಿ ಕಂಬಗಳನ್ನು ಒಬ್ಬೊಬ್ಬರು ಹಿಡಿದು ಮುಟ್ಟಾಟ ಆಡುತ್ತಿದ್ದೆವು ರಜೆ ಬಂದರೆ ಸಾಕು ಎಲ್ಲಿಂದಲ್ಲಿ , ಹೊಳೆಯನ್ನರಸಿ ಕಾಡಿನ ಹಣ್ಣನ್ನರಸಿ, ಮಳೆಗಾಲದಲ್ಲಿ ಮರ ಕೆಸವನ್ನರಸಿ ಹೊರಡುತ್ತಿದ್ದೆವು. ತೆಂಗಿನ ಹಸಿ ಓಲೆಯಿಂದ ತರಹೇವಾರಿ ಆಭರಣ, ಗಾಳಿಯಲ್ಲಿ ಗಿರಗಿರನೆ ತಿರುಗುವ ಗಿರಗಿಟ್ಲೆ ಇವೆಲ್ಲದರ ಮಜಾ ಕಲಿಯುವಿಕೆ ಮತ್ತು ಆಟ ಸೇರಿಸಿದ ಅದೊಂದು ವಿಶಿಷ್ಟ ಅನುಭವ.ಇನ್ನು ಪೈರು ಬೆಳೆದು ಕತ್ತರಿಸಿದ ಮೇಲೆ ಆ ಗದ್ದೆಯಲ್ಲಿ ನಾವೆಲ್ಲಾ ಸಂಜೆ ಬೆಳಗಿನ ಹೊತ್ತು ನಮ್ಮದೇ ತರಹೇವಾರಿ ಹೊಸ ಹೊಸ ಆಟಗಳನ್ನು ಉತ್ಪತ್ತಿ ಮಾಡಿಕೊಂಡು ನಿರ್ವಹಿಸುತ್ತಿದ್ದೆವು.  ಪಕ್ಕದ ಮಂಜರ ಮನೆಯಲ್ಲೊಮ್ಮೆ ಬೆಂಕಿ ಬಿದ್ದಾಗ ಅವರ ಮನೆಯ ಮಕ್ಕಳೆಲ್ಲವೂ ನಮ್ಮ ಮನೆಯಲ್ಲಿಯೇ ಇದ್ದರು ಹೊಸ ಮನೆ ಕಟ್ಟುವ ವರೆಗೆ, ಇಡೂ ಊರೇ ಸಹಾಯ ಮಾಡಿತ್ತು ಅವರಿಗೆ ಆಗ. ಇವನ್ನೆಲ್ಲವನ್ನೂ  ಮಾತುಗಳಲ್ಲಿ ಅಥವಾ ಬರೇ ಶಬ್ದಗಳಲ್ಲಿ ಕಟ್ಟಿಡಲಾಗದು.

 

 

ಅರೇ ಎಲ್ಲಿಂದ ಎಲ್ಲಿಗೆ ಹೋಗ್ತಾ ಇದೆ ಅಂದ್ಕೊಂಡ್ರಾ ಇಲ್ಲ ಇಲ್ಲ, ಅಲ್ಲಿಗೇ ಬರ್ತಾ ಇದ್ದೇನೆ ಬಿಡಿ. ಇವೆಲ್ಲದರ ಜತೆ ಅಗಿನ ನಮ್ಮ ಹಳ್ಳಿಯ ಜೀವನದ ಅವಿಭಾಜ್ಯ ಅಂಗ ಎಂದರೆ ನಡೆದಾಡುವ ಬಾಜಾರ್ ಉರ್ಫ್ ಅಣ್ಣೀ ನಾಯ್ಕ. ಆರರಿಂದ ಹತ್ತು ಕಿಲೋಮೀಟರ್ ದೂರ ವಾರಕ್ಕೊಮ್ಮೆ ಜರಗುವ ಸಂತೆಗೆ ಹೋಗದವರಿಗಾಗಿ, ೧೦-೧೫ ಕಿ ಮೀ ದೂರದಲ್ಲಿರುವ ಪೇಟೆಗೆ ಹೋಗದವರಿಗಾಗಿ, ಅಲ್ಲಿಂದ ತರಲಾಗದ, ದಿನ ನಿತ್ಯದ ಅಥವಾ ವಿಶಿಷ್ಟ ಸಮಾರಂಭಕ್ಕೇ ಅಂತ  ಅಪರೂಪಕ್ಕೊಮ್ಮೆ ಉಪಯೋಗಿಸಿವ ವಸ್ತುಗಳಿಗಾಗಿ, ಹೀಗೆ ಎಲ್ಲಾ ತರಹದ ತರಹೇವಾರಿ ಉಪಯುಕ್ತ ವಸ್ತುಗಳು ಅವನಿಂದಲೇ ಹಳ್ಳೀಯವರಿಗೆ ಸರಬರಾಜಾಗುತ್ತಿರುತ್ತದೆ. ಹಲಕೆಲವೊಮ್ಮೆ ಟೆಲಿಗ್ರಾಮ್ ತಾರ್, ಮತ್ತು ಅಂಚೆಯಲ್ಲಿ ಬರುವ ಪತ್ರ ಗಳನ್ನೂ ಸಹಾ ಆತನೇ ಬಟವಾಡೆ ಮಾಡುವುದೂ ಇತ್ತು . 

 

 

 

ಅವನು ಅಲ್ಲಿಂದ ತಂದು ಕೊಡುವ/ ಕೊಟ್ಟ ವಸ್ತುಗಳನ್ನು  ತೆಗೆದು ಕೊಳ್ಳಲೇ ಬೇಕೆಂತ ಏನೂ ಇಲ್ಲ, ತೆಗೆದುಕೊಂಡ ಸಮಾಧಾನ ಸಂತೃಪ್ತಿ ಸಿಕ್ಕರೆ ಮಾತ್ರ , ಇಲ್ಲವಾದರೆ ಅವನೇನೂ ಅಂದು ಕೊಳ್ಳುವುದಿಲ್ಲ, ಇವರಲ್ಲವಾದರೆ ಮತ್ತೊಬ್ಬರು, ಮಗದೊಬ್ಬರು ಅಂತ ಹಳ್ಳೀಯಲ್ಲಿ ಅದೆಲ್ಲವೂ ಮಾರಾಟ ಅಥವಾ ವಿನಿಮಯವಾಗುತ್ತಿರುತ್ತವೆ, ಶಾನುಭಾಗರ ಮಗಳಿಗೆ ಪರಕಾರ, ಮೊಮ್ಮಗಳಿಗೆ ರಿಬ್ಬನ್ನು,ಅಂಡಾಲಜ್ಜಿಗೆ ಪಿನ್ನು , ಸೀತಕ್ಕನ ಹೇರ್ ಪಿನ್, ರಾಮಕ್ಕನ ತಲೆ ಕೂದಲಲ್ಲಿ ಇಟ್ಟುಕೊಳ್ಳುವ ತುರುಬಿನ ಚೆಂಡು, ಮಂಗಕ್ಕನ ತುರುಬು ( ಈಗಿನ ಭಾಷೆಯಲ್ಲಿನ ವಿಗ್). ಪಟೇಲರ ಮಗಳ ಮೇಲುದೆ, ಒಳ ವಸ್ತ್ರ, ಮುಖ್ಯ ಅಧ್ಯಾಪಕರ ತಲೆಕೂದಲಿಗೆ ಹಾಕುವ ಕಪ್ಪು ಬಣ್ಣ, ಸೀನನ ಹೆಂಡತಿ ಲಕ್ಷ್ಮಿಗೆ ಮಲ್ಲಿಗೆ ದಂಡೆ, ಹೊಸ ಸೀರೆ, ಲಂಗ , ಶೆಟ್ರು ಮಾಶ್ಟ್ರಿಗೆ ಅಂಗ್ರೇಜೀ ಸೋಡಾ ( ಚಿಕ್ಕವನಿರುವಾಗ ನಾನು ಅದನ್ನ ತಪ್ಪು ತಿಳಕೊಂಡು ಮಾಷ್ಟ್ರು ಶ್ಯಾಯಿ ಕುಡೀತಾರೆ ಅಂತ ಮನೆಯಲ್ಲಿ ಹೇಳಿ ಪೆಟ್ಟೂ ತಿಂದಿದ್ದೆ), ಹೀಗೆ ಅವನ ವ್ಯಾಪಾರದ ಹರಹಿನ ಕಬಂಧ ಬಾಹುಎಲ್ಲಿಯವರೆಗೆ ಚಾಚಿತ್ತು ಅಂತ ನನಗೆ ಅದು ಯೋಚಿಸಿದರೆ  ಈಗಲೂ ಸೋಜಿಗವೇ .ಹೀಗೆ ಅತ ನಮ್ಮ ಹಳ್ಳಿಯ ಚಲ್ತಾ ಫಿರ್ತಾ ದೂಕಾನ್ ಅರ್ಥಾತ್ ಬಿಗ್ ಬಜಾರ್.  ಅಂದರೆ ಆತ ಮಾಡುವುದು ಸಕಲ ಗೃಹೋಪಯೋಗೀ ವಸ್ತುಗಳ ವಿನಿಮಯ. ಅದಕ್ಕೇ ಆತನನ್ನು ಆಗಿನ ಕಾಲದ  ಅಲೆದಾಡುವ ಮಾಲ್ ಅಥವಾ ಬಾಜಾರ್ ಅಂದುಕೊಳ್ಳಬಹುದು.

 

 

 ಇಡೀ ಊರೂರುಗಳನ್ನೇ ತನ್ನ ಕೈಯ್ಯಲ್ಲಿಟ್ಟುಕೊಂಡು ವ್ಯಾಪಾರ ಮಾಡುತ್ತಿರುವ ಈ ಅಣ್ಣಿ ನಾಯ್ಕ ಎಂಬ ಜಂಗಮ ಬಜಾರ್ ನ ವ್ಯವಹಾರ ಕುಶಲತೆಯ ಮುಖ್ಯ ಕಾರ್ಯ ರೂಪೀ ವಿಧಾನದ ಅವಶ್ಯಕ ಸಾಮಗ್ರಿಗಳು ಎಷ್ಟಿರಬಹುದೆಂದುಕೊಂಡಿರಿ. ನೀವು.? ಇಲ್ಲಿನ ಹಾಗೆ ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳನ್ನೆಂದುಕೊಂಡರೆ ಕೆಟ್ಟಿರಿ ನೀವು, ಯಾಕೆಂದರೆ ಯಾವುದೇ ದೊಡ್ಡ ಎರಡು ಚಕ್ರದ ವಾಹನ ನೋಡಬೇಕಾದರೂ ೧೦ ೧೨ ಕಿ ಮೀ ದೂರ ನಡೆದುಕೊಂಡೇ ಹೋಗ ಬೇಕಾದ ಆ ಕುಗ್ರಾಮಗಳಲ್ಲಿ ಇವೆಲ್ಲಾಎಲ್ಲಿಂದ ಬಂದಾವು? ಅಸಲು ರಸ್ತೆಯೂ ಇರಬೇಕಲ್ಲ ಆ ನಾಲ್ಕು ಚಕ್ರದ ವಾಹನಗಳನ್ನು ಹೊತ್ತು ಸಾಗಲು. ನಾನು ಚಿಕ್ಕವನಿರುವಾಗ ನೋಡಿದಂತೆ ಒಂದು ಗೋಣೀ ಚೀಲ ಅದೂ ಆತನ ಹಳೇ ಸೈಕಲ್ ನಲ್ಲಿನ ಹಿಂದಿನ ಕ್ಯಾರಿಯರ್ ನಲ್ಲಿ ಮಡಚಿಟ್ಟದ್ದು ಮತ್ತು ಒಂದು ತಕ್ಕಡಿ. ತಕ್ಕಡಿಯೆಂದರೆ ಅಂತಿಂಥ ತಕ್ಕಡಿ  ಅಲ್ಲ ಮರಾಯರೇ, ನೀವು ಸೀದಾ ಪೇಟೆಯಲ್ಲಿ ಈಗೀಗ ಕಾಣ ಸಿಗುವ ಡಿಜಿಟಲ್ ಬ್ಯಾಲೆನ್ಸ್ ತರಹದ್ದೂ ಅಲ್ಲ , ಅದು ಹೀಗಿದೆ ನೋಡಿ: ಒಂದು ತೋರ ಬೆರಳು ಗಾತ್ರದ ಮಾರುದ್ದದ ಬಿದಿರಿನ ಕೋಲಿನ ಎರಡೂ ತುದಿಗೆ  ಕಟ್ಟಿದ ಮೂರು ಮೂರು ಹಗ್ಗಗಳು ಕೆಳಗಿಳಿದು ಹೊರ  ಬದಿಯಲ್ಲಿ ಮೂರು ತೂತು ಮಾಡಿ ಕಟ್ಟಿಟ್ಟ ಚಪ್ಪಟೆಯಾದ ಹಳೆಯ ಎರಡು ಅಲ್ಯುಮಿನಿಯಮ್ ಊಟದ ತಟ್ಟೆಗಳು. ಆ ಕೋಲಿನ ಸರೀ ಮಧ್ಯ ಭಾಗದಲ್ಲಿ ಇನ್ನೊಂದು ಮೇಲಿನಿಂದ ಮುಷ್ಟಿಯಲ್ಲಿ ಹಿಡಿದುಕೊಳ್ಳುವಷ್ಟೇ ಹಗ್ಗ  ಕಟ್ಟಿದ್ದು ತೂಗುವಾಗ ಹಿಡಿದು ಕೊಳ್ಳಲು ಸಹಾಯಕ್ಕಾಗಿ. ಇನ್ನು ತೂಕದ ಬಟ್ಟುಗಳೋ ಅಥವಾ ತೂಕದ ಕಲ್ಲುಗಳು.... ಹೌದು ತೂಕ ಎನ್ನುವುದನ್ನು ನುಂಗಿದರೆ ಉಳಿಯುವದೇ ಕಲ್ಲುಗಳು. ಉರುಟುರುಟಾದ ಎರಡು ಮೂರು ಬೇರೆ ಬೇರೆ ಗಾತ್ರದ ಬೆಣಚು ಕಲ್ಲುಗಳೇ ಅವುಗಳು. ಒಂದು ಅರ್ಧಕೇಜಿ ಇನ್ನೊಂದು ಕಾಲು, ಮತ್ತೊಂದು ನೂರು ಗ್ರಾಂ ಇದು ಆತನೇ ಹೇಳುವ ಹಾಗೆ. ಪ್ರತಿ ವರ್ಷ ಅದರ ಕೆಲಿಬ್ರೇಷನ್ ಮಾಡೋ ಅಗತ್ಯವೇ ಇಲ್ಲ. ಅಲ್ಲ ಹಳ್ಳೀಗಳಲ್ಲಿ ಅಷ್ಟೊಂದು ತಿಳಿದವರಾರಿರಲಿಲ್ಲ, ಅಲ್ಲದೇ ಇನ್ನೊಂದು ವಿಷಯವೆಂದರೆ ಹಳ್ಳೀಯ ಎಲ್ಲರಿಗೂ ಅವರವರಿಗೆ ಬೇಕಾದ ಅಗತ್ಯದ ವಸ್ತುಗಳು ಬೇಕಾದ ಸಮಯದಲ್ಲಿ ಪೂರೈಸುತ್ತಾ ಇರುವ ಅತನ ಕ್ಲಪ್ತತೆಯಲ್ಲದೇ ಇನ್ನೊಂದು ಮುಖ್ಯವಾದ  ವಿಷಯವೂ ಇದ್ದು.... ಅದು......ಆತುರ ಬೇಡ ಮುಂದೆ ಗೊತ್ತಾಗುತ್ತೆ.

 

 

 

"ಸೀತಕ್ಕಾ ಹ್ಯಾಂಗಿದ್ದೀರಾ, ತಗೊಳ್ಳಿ ನಿಮ್ಮ ಹ್ಯಾರ್ ಪಿನ್ ಎರಡೂಡಜನ್ ತಂದಿದ್ದೇನೆ, ತುಂಬಾ ಚೆನ್ನಾಗಿದೆ, ಅದಕ್ಕಿಂತಲೂ ಹೆಚ್ಚು ನಿಮಗೆ ಒಪ್ಪುತ್ತೆ, ನೀವು ಇದನ್ನ ಹಾಕ್ಕಂಡ್ರೆ ನಿಮ್ ಗಂಡ ಬೇರೆ ಯಾರ ಹತ್ರಾನೂ ಹೋಗಲ್ಲ, ಏನೂ ದುಡ್ಡಿಲ್ಲ ಅಂದ್ರ, ಅದೆಲ್ಲಿ ಹೋಗತ್ತೆ, ನಿಮ್ಮ ಹತ್ರಾನೇ ಇರತ್ತೆ, ಈಸಲ ಅಲ್ಲ ಮುಂದಿನ ಕೊಟ್ಟರಾಯ್ತು ಬಿಡಿ. ಅಂದ ಹಾಗೇ ಈ ಸಲ ಅಡಿಕೆ ಎಷ್ಟು ಕೊಡ್ತೀರಿ, ಅಂದ ಹಾಗೇ ಬಾಳೆ ಕೊನೆ ಎಷ್ಟಿದೆ, ಕಳೆದ ಸಾರಿ ನೀವು ಕೊಟ್ಟ ಬಾಳೆ ಕೊನೆಯಲ್ಲಿ ಒಂದು ಚಿಹುರು ಕೊಯ್ದದ್ದರಿಂದ ಹಣ್ಣಾಗಲೇ ಇಲ್ಲ, ಮತ್ತೆ ವೀಳ್ಯದೆಲೆ..? ಬ್ಯಾಡ ಬಿಡಿ ಬರೇ ನೂರು ಗೇರು ಬೀಜವೋ ಅಡಿಕೇನೋ ಕೊಡಿ ಸಾಕು. ಅದೂ ಇಲ್ಲಂದ್ರೆ ಮುಂದಿನ ಸಲ ನೋಡೋಣ ಆಯ್ತಾ ನಾನು ಬರ್ತೀನಿ, ಈ ಗೋಣೀ ಚೀಲ ಇಲ್ಲಿರಲಿ ಆಮೇಲೆ ಬಂದು ತಗೋತೇನೆ.

 

ತಗೊಳ್ಳೀ ಅಣ್ಣೀ ನಾಯ್ಕರೇ ಆ ಮೂಲೆಯಲ್ಲಿ ಅಡಿಕೆ, ಪಕ್ಕದಲ್ಲೇ ಗೇರು ಬೀಜ ಕೂಡಾ ಇದೆ ನೋಡಿ ಅದರಲ್ಲಿ ಇನ್ನೂರು ಇನ್ನೂರು  ತಕೊಳ್ಳಿ ನಿಮ್ಗೆ ಇಲ್ಲ ಅನ್ನೊಕಾಗ್ತದಾ..??

ಸರಿ ಈಗ ಅಣ್ಣಿನಾಯ್ಕನ ನಿಜವಾದ ವ್ಯಾಪಾರದ ಜಾಣತನ ಇರೋದು. ಆತನ ಹಳೇ ಗೋಣೀ ಚೀಲದಲ್ಲಿ ಗೇರು ಬೀಜ ಮತ್ತು ಅಡಿಕೆ ಲೆಕ್ಕಾ ಮಾಡಿ ಹಾಕುವ ಲೆಕ್ಕಾಚಾರ!!! 

ಅಲ್ಲಿಂದ ಸೀದಾ ಅಡಿಕೆಯ ಲೆಕ್ಕಾಚಾರವೇ, ಅಂಗೈಯ್ಯಲ್ಲಿ ೫-೫ ರ ಜೋಡಿ ಲೆಕ್ಕ ಒಂದು ಒಂದು,,,, ಎರಡೂ ಎರಡು, ಅಂತ ಶುರುವಾಗತ್ತೆ,  "ಮತ್ತೆ ಸೀತಕ್ಕಾ ಯಜಮಾನರು ಎಲ್ಲ್ಗೆ ಹೋದರು ಅಂದ್ರೀ"

ಲೆಕ್ಕ ಐದು ಐದು, ಅರು ಆರು,   ಮತ್ತೆ ಮಗಳು ಚೆನ್ನಾಗಿ ಓದುತ್ತಾಳಾ ಹೇಗೆ?  ಲೆಕ್ಕಾ ಮಾತಿನ ವಿನಿಮಯದ ನಡುವೆ ಎಪ್ಪತ್ತೈದು  ಮುಂದುವರಿದಾಗ ಮತ್ತೆ ನಿಮ್ಮ ಗಂಡ ದುಗ್ಗು ಹತ್ರ ಹೋಗ್ತಾ ಇದ್ದಾನಾ ಈಗಲೂ, ... ಸೀತಕ್ಕನ ಉತ್ತರ ಬರುವಾಗ ನೋಡಿ... ಇಪ್ಪತೈದು ಇಪ್ಪತೈದು.... ಇಪ್ಪತ್ತಾರು ಇಪ್ಪತ್ತಾರು.... ಇದೇ ಆತನ ಯಶಸ್ಸಿನ ಗುಟ್ಟು. ಆದರೆ ಇದು ಗೊತ್ತಾಗಿ ಕೆಲವರು ಆತನ ಇದಿರಿಗೇ ಕುಳಿತುಕೊಂಡು ಲೆಕ್ಕ ಮಾಡಿಸುತ್ತಾರೆ, ಆದರೆ ಸಾಮಾನ್ಯವಾಗಿ ಹಳ್ಳೀಯಲ್ಲಿ ಗಂಡಸು ದಿನದಲ್ಲಿ ಹೊರಗೆ ಹೋದರೆ ಈ ಅಣ್ಣೀ ನಾಯ್ಕನಿಗೆ ಮನೆಯಲ್ಲಿ ಉಳಿಯುವ ಹೆಂಗಸರಿಂದ ಈತನ ವ್ಯಾಪರದ ಭರಾಟೆಯೂ ಲಾಭವೂ ಜಾಸ್ತಿಯೇ.

 

ಮತ್ತೆ ಆ ತಕ್ಕಡಿಯಲ್ಲಿ ತೂಗುವ ವಸ್ತುಗಳು ಆತನ ಕಾರ್ಯಕ್ಷಮತ್ವತೆ ಮತ್ತು ಇದಿರಿನಲ್ಲಿರುವವರ ವ್ಯವಹಾರ ಕುಶಲತೆಯನ್ನವಲಂಬಿಸಿ ಏರು ಪೇರಾಗುತ್ತಲೇ ಇರುತ್ತದೆ. ಆ ತಕ್ಕಡಿಯನ್ನೆತ್ತಿ ಹಿಡಿದ ಅವನ ಮುಷ್ಟಿ ಮತ್ತು ಎರಡೂ ಕಡೆಯ ತಟ್ಟೇಗಳನ್ನು ನೋಡುತ್ತಾ ನೀವು ಅವನೊಂದಿಗೆ ವ್ಯಾಪಾರ ನಡೆಸಿದಿರಾದರೆ ನೀವು ಕೆಟ್ಟಿರಿ. ಯಾಕೆಂದರೆ ಆತನ ಮುಷ್ಟಿಯಿಂದ ಕೆಳಗಿಳಿವ ಆತನತೋಳು ತೂಕದ ಬಟ್ಟನ್ನಿಟ್ಟಿರುವ ಕಡೆಗೇ ಜಾಸ್ತಿ ಒತ್ತಡವನ್ನು ಕೊಡುತ್ತಾ ಪಕ್ಕದ ತಟ್ಟೆಯಲ್ಲಿನ ವಸ್ತುಗಳ ನಿಜವಾದ ತೂಕ ಐದು ಕೇಜಿ ಆದರೂ ಈ ತೂಕದ ಬಟ್ಟುಗಳಿಟ್ಟಿರುವ ತಟ್ಟೆ  ಅರ್ಧ ಕೇಜಿಗಿಂತ ಯಾವುದೇ ಸಂದರ್ಭದಲ್ಲೂ ಮೇಲೇರದು. ಒಮ್ಮೆ ಈ ರೀತಿಯ ವ್ಯಾಪಾರ ಮಾಡಿ ಜಯಶೀಲನಾದರೆ ( ಅಂದರೆ ಇದಿರಿನವರಿಗೆ ಆತನ ಮೋಸದ ಸುಳಿವು ಗೊತ್ತಾಗದೇ ಹೋದರೆ) ಮತ್ತೆ ಈ ಬಟ್ಟನ್ನು ಆತ ಉಪಯೋಗಿಸದೇ ಅದೇ ವಸ್ತುಗಳನ್ನೇ ಎರಡೂ ಕಡೆ ಇಟ್ಟುಕೊಳ್ಳುತ್ತಾ ತನ್ನ ಪ್ರಾಮಾಣಿಕತೆ ಮೆರೆದು ತನ್ನ ವ್ಯವಹಾರದ ಲಾಭ ಪಡೆಯುವ. 

 

ಆದರೆ ಈತನ- ಎಲ್ಲರಿಗೂ  ಸಹಾಯ ಮಾಡುವ ಮನೋಭಾವ, ಮಾತನಾಡುವ ಚಾಲೂಕುತನ, ಪಕ್ಕದ  ಊರುಗಳನ ವಿಶೇಷ ಸಮಾಚಾರ ಗಳನ್ನೆಲ್ಲಾ ತಿಳಿದುಕೊಳ್ಳುವ ಆಸಕ್ತಿ, ಮತ್ತು ಮಾರಾಟದ ಕೊಡ ಕೊಳ್ಳುವ ವ್ಯವಹಾರದ ಅಪೇಕ್ಷೆ, ದಿನ ನಿತ್ಯದ ದಿನಸಿ ಸಾಮಾನುಗಳ ಬೇಡಿಕೆಯ ಮರು ಪೂರಣ,  ಹಣದ ಅವಶ್ಯಕಥೆಯೂ ಇಲ್ಲದ ವಿನಿಮಯ ಮನೋಭಾವ ಇರೋದ್ರಿಂದ ಆತನ ಈ ವ್ಯಾಪಾರೀ ಮನೋಭಾವದ ಲಾಭಂಶ ಕೂಡಾ ಹಳ್ಳಿಗರ ಮನಸ್ಸಿನಲ್ಲಿ ಕಡೆಗಣಿಸಬಹುದಾದಂತಹ ಅತೀ ಚಿಕ್ಕ ವಿಷಯ.

 

ನನಗೆ ಈಗಲೂ ಅಚ್ಚರಿಯಾಗುತ್ತದೆ, ಅಲ್ಲ ಗುಡ್ಡ ಬೆಟ್ಟಗಳನ್ನು ದಾಟಿ ಗದ್ದೆ ಬಯಲು ತೋಟಗಳನ್ನೂ ಕ್ರಮಿಸುತ್ತಾ ಬಂದು ಅದೇ ಹಳೇ ಸೈಕಲ್ ಮತ್ತು ಗೋಣೀ ಚೀಲ ಹೊತ್ತು ಬರುವ ಆತ ಈ ವ್ಯಾಪಾರದಲ್ಲಿ ಎಷ್ಟು ಲಾಭ ಮಾಡಿಕೊಂಡಾನು..?ಅಷ್ಟೇಲ್ಲಾ ಮಾಡಿದ್ದರೂ ಆತನ ಮನೆಯಲ್ಲೂ ನಾಗರೀಕ ಜೀವನದ ಕುರುಹುಗಳಿಲ್ಲ, ಕಾರಣ ಆತನಲ್ಲಿ ಧೂರ್ತತೆಯಿಲ್ಲ, ಆಸೆ ಬುರುಕತನವಿಲ್ಲ,  ತನ್ನ ದುಡಿಮೆ ತನ್ನ ಇಂದಿಗೆ ಮಾತ್ರ ಎನ್ನುವ ಧ್ಯೇಯ ವಾಕ್ಯದ ಗುಣವಿದೆ . ಮಹಡಿಯ ಮೇಲೆ ಮಹಡಿ ಕಟ್ಟುತ್ತಾ ತಾನು ಮಾತ್ರ ಶ್ರೀಮಂತನಾಗ ಬೇಕು,  ತನ್ನ ಮಕ್ಕಳು ಐಷಾರಾಮೀ ಕಾರುಗಳಲ್ಲೇ ಶೋಕೀಲಾಲರಂತೆ ತಿರುಗಾಡ ಬೇಕೂ ಎನ್ನುವ ಹಪಹಪಿಯಿಲ್ಲ.  ಈಗಿನ ಜೀವನದಲ್ಲಿ ಬರೇ ಬಣ್ಣದ ನೀರಿಗೇ ಮಣ ಗಟ್ಟಲೆ ಸುರಿಯುವ ನಾವು..... ಇದನ್ನು ಅರ್ಥ ಮಾಡಿಕೊಳ್ಲಬಲ್ಲೆವಾ..??

 

ನಮ್ಮ ರಾಜ್ಯದಲ್ಲಿ ಸುಮಾರು ಹಳ್ಳಿಗಳಲ್ಲಿ ವಿಧ್ಯುತ್ ಮತ್ತು ರಸ್ತೆಯಂತಹ ಸಾಮಾನ್ಯ ಅವಶ್ಯಕಥೆಯೂ ಇರದಂತಹ ಹಳ್ಳಿಗಳಲ್ಲಿ ಅಣ್ಣಿ ನಾಯ್ಕರಂತವರೇ ನಾಗರೀಕ ಮತ್ತು ಹಳ್ಳಿಯ ಜೀವನದ ಸೇತುವೆಗಳು. ಹಳ್ಳಿಯ ಅವಿಭಾಜ್ಯ ಅಂಗವಾದ ಈ ಅಣ್ಣೀ ನಾಯ್ಕನಂತವರು  ಪಟ್ಟಣವಾಗುತ್ತಿರುವ ಈಗೀಗಿನ ಬೆಳೆದ ಹಳ್ಳಿಗಳಲ್ಲಿ ಅಪರೂಪವೇ ಮಾತ್ರವಲ್ಲ  ಇಲ್ಲವೇ ಇಲ್ಲ ವೆನ್ನಲೂ ಬಹುದು. ಪೇಟೆಯ ಸ್ವಾರ್ಥೀ ಮುಖವಾಡದ, ವಿದೇಶೀ ವಸಾಹತು ವ್ಯಾಪಾರ ವ್ಯವಹಾರಗಳಲ್ಲಿ ದುಂದು ಖೋರರಿಗೆ ಮಣೆ ಹಾಕುವ ರಾಜಕೀಯ ಮುತ್ಸದ್ದಿಗಳಿರುವ ವರೆಗೂ ಅಣ್ಣಿ ನಾಯ್ಕನಂತವರು ಪಳೆಯುಳಿಕೆಗಳೇ. ಈಗಲೂ. 

 

ಈಗಲೂ ಕಳೆದ ಸಾರಿ ಹಳ್ಳಿಗೆ ಹೋದಾಗ ಸೈಕಲ್ಲಿನ ಪೊಂ ಪೊಂ ಶಬ್ದ, ಟ್ರಿಣ್ ಟ್ರಿಣ್ ಕಿವಿಗೆ ಬಿದ್ದು ಅಣ್ಣೀ ನಾಯ್ಕನೇ ಬಂದ ಹಾಗಾಗಿ ಮೈಯೆಲ್ಲಾ ಕಣ್ಣಾಗಿಸಿ ಆತನ ಸಂದರ್ಶನಕ್ಕೆ ಕಾಯುತ್ತಿದ್ದೆ. ಆ ಸುಸಂದರ್ಭ ಎಂದು ಸಿಗುವುದೋ ನೋಡಬೇಕು.

 

ಬೆಳ್ಳಾಲ ಗೋಪೀನಾಥ ರಾವ್

 

Comments

Submitted by kavinagaraj Wed, 08/14/2013 - 14:46

:) ಪರಸಂಗದ ಗೆಂಡೆತಿಮ್ಮನ ನೆನಪಾಯಿತು. ಅಣ್ಣಿನಾಯ್ಕನನ್ನು ಗೆಂಡೆತಿಮ್ಮನಿಗೆ ಹೋಲಿಸುತ್ತಿಲ್ಲ. ನೆನಪಂತೂ ಆಯಿತು! ಗೆಂಡೆತಿಮ್ಮನೂ ನಡೆದಾಡುವ ಬಜಾರ್ ಆಗಿದ್ದರಿಂದ!
Submitted by nageshamysore Fri, 08/16/2013 - 03:26

ಗೋಪಿನಾಥರೆ, ಬೆಳವಣಿಗೆಯ ನಾಗಾಲೋಟದಲ್ಲಿ ಅಣ್ಣಿನಾಯ್ಕನಂತಹವರು ಪಳೆಯುಳಿಕೆಗಳಾಗಿಬಿಡುವ ವ್ಯವಸ್ಥೆ, ಇಂದಿನ ದುರಂತಗಳಲ್ಲಿ ಒಂದು. ಏಕೆಂದರೆ ಬದಲಾದ ಸಂತುಲಿತ ವ್ಯವಸ್ಥಾ ಪರಿಸರಗಳಿಗೆ ಅವನಂತವರು ತಮ್ಮನ್ನು ತಾವೆ ಬದಲಿಸಿಕೊಳ್ಳುವ ಸಾಧ್ಯತೆ ಕಮ್ಮಿ (ಅಂತ ಅನಿವಾರ್ಯವೂ ಅವರಿಗಿರುವುದಿಲ್ಲವೇನೊ?). ಕಾಲಶೇಷನಡಿಯ ತುಳಿತಕ್ಕಿ ಸಿಕ್ಕಿಯೂ ಉಳಿದುಕೊಂಡವರೂ ಸಹ ಮುಂದಿನ ಪೀಳಿಗೆಯಲ್ಲಿ ಅದೃಶ್ಯವಾಗಿಬಿಟ್ಟಿರುತ್ತಾರೆ. ನನಗೆ ಓದುವ ಮುನ್ನ ಚಿತ್ರ ನೋಡಿ ಯಾಕೊ 'ಅಪರಿಚಿತ' ನೆನಪಾಯ್ತು :-) ಆದರೆ ನಿಮ್ಮ ಕಥಾನಕ - ಸಸ್ಪೆನ್ಸ್ ಸ್ಟೋರಿ ಅಲ್ಲ.   ಧನ್ಯವಾದಗಳೊಂದಿಗೆ ನಾಗೇಶ ಮೈಸೂರು