ಅತಿಕ್ರಮಣದ ಪಿಡುಗು

ಅತಿಕ್ರಮಣದ ಪಿಡುಗು

‘ರಸ್ತೆ, ಜಲಮೂಲ, ರೈಲು ಹಳಿಗಳಂತಹ ಯಾವುದೇ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಧಾರ್ಮಿಕ ಕಟ್ಟಡ ಕಟ್ಟಿದ್ದಲ್ಲಿ ಅದನ್ನು ನೆಲಸಮಗೊಳಿಸಬೇಕು. ಅಂತಿಮವಾಗಿ ಸಾರ್ವಜನಿಕ ಸುರಕ್ಷತೆಯೇ ಮುಖ್ಯ' ಎಂದು ಸುಪ್ರೀಮ್ ಕೋರ್ಟ್ ಮಂಗಳವಾರ ಮಹತ್ವದ ಆದೇಶ ನೀಡಿದೆ. ಈ ಮೂಲಕ ರಸ್ತೆ, ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿರುವ ದೇಗುಲ, ದರ್ಗಾ, ಮಸೀದಿಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದು, ರಸ್ತೆ ಮಧ್ಯೆ ಕಟ್ಟಿದ್ದರೆ ಅದು ಅತಿಕ್ರಮಣವೇ ಎಂದು ಸ್ಪಷ್ಟಪಡಿಸಿದೆ. ದೇಶಾದ್ಯಂತ ಆಗಾಗ ಚರ್ಚೆಯಾಗುವ, ಸಂಘರ್ಷಕ್ಕೂ ಕಾರಣವಾಗುವ ಅತಿಕ್ರಮಣ ಪಿಡುಗಿನ ವಿರುದ್ಧ ಸುಪ್ರೀಂ ಕೋರ್ಟ್ ಕಠಿಣ ನಿಲುವು ತಳೆದಿರುವುದು ಉತ್ತಮ ಬೆಳವಣಿಗೆಯೇ ಹೌದು. ಸಾರ್ವಜನಿಕ ಸ್ಥಳಗಳ ಅತಿಕ್ರಮಣ ತುಂಬ ಹಳೆಯ ಸಮಸ್ಯೆಯಾಗಿದ್ದರೂ, ಈವರೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮಾತ್ರ ಆಗಿಲ್ಲ. ಅಲ್ಲದೆ, ನ್ಯಾಯಾಲಯದಿಂದಲೂ ಈ ರೀತಿಯ ಆದೇಶ ಇದೇ ಮೊದಲಲ್ಲ. ಹಿಂದೆಯೂ ಈ ರೀತಿಯ  ಆದೇಶ ಹೊರಬಿದ್ದಿತ್ತು. ಆಗೆಲ್ಲ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೆರವು ಕಾರ್ಯಾಚರಣೆಗೂ ಮುಂದಾಗಿದ್ದವು. ಆದರೆ ಆ ಕಾರ್ಯಾಚರಣೆ ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾಗಲಿಲ್ಲ ಎಂಬುದು ಗಮನಾರ್ಹ.

ಈಗ ಮತ್ತೊಮ್ಮೆ ಕೋರ್ಟ್ ನ ಆದೇಶ ಬಂದಿದೆ. ಸರ್ಕಾರಗಳು ಈ ಆದೇಶಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿಯೇ ಇದ್ದು, ಇಂಥ ಸೂಕ್ಷ್ಮ ವಿಷಯವನ್ನು ವಿವೇಚನೆಯಿಂದ ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಹರಿಸಲು ಮುಂದಾಗಬೇಕು. ಮುಖ್ಯವಾಗಿ, ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡದಂತೆ ಈ ಧಾರ್ಮಿಕ ಶ್ರದ್ಧೆಯ ಸ್ಥಳಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಇಂಥ ಕಾರ್ಯಾಚರಣೆ ಕೈಗೊಳ್ಳುವ ಮುಂಚೆ ಸಂಬಂಧಪಟ್ಟ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಥವಾ ವಾಸ್ತವ ಸ್ಥಿತಿಯ ಬಗ್ಗೆ ಅರಿವು ಮೂಡಿಸಬೇಕು. ಧಾರ್ಮಿಕ ಶ್ರದ್ಧೆಯ ಸ್ಥಳಗಳು ಸಾರ್ವಜನಿಕ ಪ್ರದೇಶದಲ್ಲಿ ನಿರ್ಮಾಣಗೊಳ್ಳದಂತೆಯೂ ನಿಗಾ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಅತಿಕ್ರಮಣದ ಸಮಸ್ಯೆ ಧಾರ್ಮಿಕ ಸ್ಥಳಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಒಟ್ಟಾರೆ ಸಮಸ್ಯೆಯ ಒಂದು ಆಯಾಮವಷ್ಟೇ. ಆದರೆ, ಸರ್ಕಾರಿ ಜಮೀನನ್ನು ವಿವಿಧ ಕಾರಣಗಳಿಗಾಗಿ ಅತಿಕ್ರಮಣ ಮಾಡಲಾಗಿದ್ದು, ಅದನ್ನು ಹಿಂಪಡೆಯಲು ಪ್ರಭಾವಿಗಳ ಒತ್ತಡ ಅಡ್ಡಿಯಾಗುತ್ತಿದೆ. ಹಾಗಾಗಿ, ಅದನ್ನು ಹಿಂಪಡೆಯಲು ಪ್ರಭಾವಿಗಳ ಒತ್ತಡ ಅಡ್ಡಿಯಾಗುತ್ತಿದೆ. ಹಾಗಾಗಿ, ನ್ಯಾಯಾಲಯದ ಪ್ರಸಕ್ತ ಆದೇಶವನ್ನು ಇರಿಸಿಕೊಂಡು ಸರ್ಕಾರಗಳು ಅತಿಕ್ರಮಣದ ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಿ. 

ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೨-೧೦-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ