ಅತಿಯಾಸೆ ದುಃಖಕ್ಕೆ ಮೂಲ

ಅತಿಯಾಸೆ ದುಃಖಕ್ಕೆ ಮೂಲ

ಬರಹ

recession, depression, credit crunch, financial turmoil, ಆರ್ಥಿಕ ಹಿಂಜರಿತ, ಹೀಗೆ ಸಾಗುತ್ತವೆ ಇಂದಿನ ಪರಿಸ್ಥಿತಿಯ ಬಣ್ಣನೆ. ಯಾವಾಗ ಬೇಕುಗಳು ನಮ್ಮ ಜೇಬಿನ ಅಳತೆಯನ್ನೇ ಮೀರಿ ಭಸ್ಮಾಸುರನ ಅವತಾರ ತಾಳಿದವೋ ಎರಗಿ ಬಂತು ಎಡವಟ್ಟು. ಎಲ್ಲೆಲ್ಲೂ ವಿಹ್ವಲ, ಗೊಂದಲ. ನಾಳೆಯ ಬಗ್ಗೆ ಚಿಂತೆ. ಕಾಲವೊಂದಿತ್ತು ಈ ಹಾಡಿನ ಹಾಗೆ; ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ, ಅಂಗೈ ಅಗಲ ಜಾಗಾ ಸಾಕು ಹಾಯಾಗಿರೋಕೆ. ವೆಲ್ಕಮ್ ಟು ನ್ಯೂ ಏಜ್. ಸ್ವಲ್ಪ wardrobe ತೆರೆದು ನೋಡಿ, ಎಷ್ಟು ಬಟ್ಟೆಗಳನ್ನು ನೇತು ಹಾಕಿದ್ದೀರೆಂದು. ಅವುಗಳಲ್ಲಿ ಎಂದೂ ಧರಿಸದ ಬಟ್ಟೆಗಳೆಷ್ಟು? ಶೂ ರಾಕ್ ಹತ್ತಿರ ಸ್ವಲ್ಪ ನಿಂತು ನೋಡಿ, ಎಷ್ಟು ಜೋಡಿಗಳನ್ನು ಸಾಲಾಗಿ ಜೋಡಿಸಿದ್ದೀರೆಂದು. nike, reebok, ಇವೆಲ್ಲಾ ಹೆಸರುಗಳನ್ನು ನಮ್ಮ ತಾತ ಮುತ್ತಾತಂದಿರು ಕೇಳಿರಬಹುದೇ? go back to dressing table, ಮುಖದ ಮೇಲಿನ ಚಿಂತೆಯ ( ಆಥಿಕ?) ಗೆರೆಗಳನ್ನು ಓಡಿಸಲು ಒಂದು ಕ್ರೀಮಾದರೆ, ಫೌಂಡೇಶನ್ ಕ್ರೀಂ ಬೇರೆ, ಮಾರುಕಟ್ಟೆಯ ಎಲ್ಲಾ temptation ಗಳ ಶೋ ಕೇಸ್ ನಮ್ಮ ಮನೆ. ನಾನು ನನ್ನ ಮೊದಲ ಜೀನ್ಸ್ ಧರಿಸಿದ್ದು ಹತ್ತನೇ ತರಗತಿಯಲ್ಲಿರುವಾಗ. ನನ್ನ ೫ ವರ್ಷದ ಮಗ ಡಜನ್ಗಟ್ಟಲೆ, ಎಲ್ಲಾ ಬಣ್ಣದ ಜೀನ್ಸ್ ಹಾಕಿ ಆಯಿತು. ಮೊದಲು ಸೈಕಲ್ ಕೊಂಡರೆ ಅದಕ್ಕೆ ಒಂದು ನಿಂಬೆ ಹಣ್ಣು ಒಂದೆರಡು ಮೆಣಸಿನಕಾಯಿ ಸಿಕ್ಕಿಸಿ ಊರೆಲ್ಲಾ ತಿರುಗಿ ತೋರಿಸುವ ಉತ್ಸಾಹ ಇತ್ತು. ಈಗ brand new ಕಾರ್ ಕೊಂಡು ತಂದರೂ ಅದಕ್ಕೆ ತಿರುಗಿ ನೋಡುವವರಿಲ್ಲ. ಎಲ್ಲಾ ಕಾಮನ್ ಈಗ. ನಮ್ಮ ಹೆಣ್ಣು ಮಕ್ಕಳು ಆರೋಗ್ಯಕ್ಕೆ ಎಷ್ಟೇ ಕಷ್ಟ ಆದರೂ ನಮ್ಮನ್ನು ಹೊರಗೆ ಹೋಗಿ ತಿನ್ನಲು ಹೇಳುತ್ತಿರಲಿಲ್ಲ. ಈಗ ತಿನ್ನೋದಕ್ಕೂ ಒಂದು outing. mcdonalds, KFC, TGI FRIDAY, RUBY TUESDAY, TACO BELL. ಛತ್ರಗಳ ಹೆಸರಲ್ಲ ಇವು, ಆಧುನಿಕ ಕಾಯಿಲೆಗಳನ್ನು, CHOLESTEROL elevate ಮಾಡೋ ತಾಣಗಳು.
ಮೊದಲು ಒಳ್ಳೆಯ ಕೆಲಸ ಸಿಗುವುದು ಅಪರೂಪ. ಈಗ ಕೆಲಸ ಸಿಕ್ಕ ಕೂಡಲೇ ಬೇರೆ ಕಂಪೆನಿಗಳ ಮೇಲೆ ಕಣ್ಣು, ಅಲ್ಲಿ ಎಷ್ಟು ಕೊಡುತ್ತಿರಬಹುದು? ಸರಿ ಸ್ವಲ್ಪ ಹೆಚ್ಚೇ ಕೊಡುತ್ತಿದ್ದರೆ ಎಂದು ಗಾಳಿ ಸುದ್ದಿ ಸಿಕ್ಕರೂ resume ಉತ್ಪಾದಿಸಲು ತೊಡಗಿಸಿಕೊಂಡು ಬಿಡುತ್ತೇವೆ. ಕೆಲಸ ಮಾಡುತ್ತಿರುವ ಕಂಪೆನಿ ಸಮಯ, ಸಂಪನ್ಮೂಲ ಉಪಯೋಗಿಸಿ ಬೇರೆ ಕಂಪೆನಿಗಳಿಗೆ C V ರವಾನೆ. ಆಧುನಿಕ ಯುಗದಲ್ಲಿ ಆಹಾರಕ್ಕೆ ಬರ ಇಲ್ಲದಿದ್ದರೂ ethics ಗೆ ಬಂತು ಬರ.

ದಿನಸಿ ಕೊಳ್ಳಲು ಹೋಗೋ ಮುನ್ನ ಅಡುಗೆ ಮನೆಗೆ ತೆರಳಿ ಎಲ್ಲ ಡಬ್ಬ, ದಬರಿ ಅಲ್ಲಾಡಿಸಿ ಬೇಕಾದನ್ನು ಮಾತ್ರ ತರುತ್ತಿದ್ದೆವು. ಈಗ? impulsive shopping. ಕಣ್ಣಿಗೆ ಕಂಡದ್ದನ್ನೆಲ್ಲ shopping cart ಗೆ ಲೋಡ್ ಮಾಡ್ಬೇಕು. ಆಗಲೇ ಸಮಾಧಾನ. ಫ್ರಿಜ್ ತೆರೆದು ನೋಡಿದರೆ ತಿಳಿಯುತ್ತದೆ ತಿನ್ನದೇ ಬಿಟ್ಟ ತಿನಿಸುಗಳು ಎಷ್ಟು ಎಂದು. ಈ ರೀತಿ ಭ್ರಾಂತಿ ಹಿಡಿದವರಂತೆ ಕಣ್ಣಿಗೆ ಕಂಡದ್ದನ್ನೂ, ಬೇಡದ್ದನ್ನೂ ಕೊಳ್ಳಲು ಹಣ ಇಲ್ಲದಿದ್ದರೆ ಚಿಂತೆ ಏಕೆ, plastic (credit card) ಇರುವಾಗ?

we are driven by greed, not need. ಎಲ್ಲೋ ಓದಿದ ನೆನಪು

ಸಂಬಂಧಗಳನ್ನು ಹಿಂದಕ್ಕೆ ಹಾಕಿ ಹಣದ ಹಿಂದೆ ಹೋಗುತ್ತಿರುವ ಬಗ್ಗೆ ಈ ಕತೆ ಓದಿ.

ಇದನ್ನು ನನ್ನ ಪರಿಚಿತರೊಬ್ಬರು ಹೇಳಿದ್ದು. ಒಮ್ಮೆ ತಮ್ಮ ಸೋದರಿಯನ್ನು ಕಾಣಲು ದೂರದ ನಗರವೊಂದಕ್ಕೆ
ಅವರು ಹೋದರು. ಫೋನ್ ಮಾಡಿದಾಗ ಬನ್ನಿ ಮನೆಗೆ ಎಂದು ಸೋದರಿ ಉತ್ತರಿಸಿದಳು. ಇಬ್ಬರೂ ಕೆಲಸದಲ್ಲಿದ್ದುದರಿಂದ ಆಫೀಸ್ ಸಮಯದ ನಂತರ ಅವರು ಮನೆಗೆ ಹೋದರೆ ಮನೆಗೆ ಬೀಗ. ಪಕ್ಕದಲ್ಲಿ ವಿಚಾರಿಸಿದಾಗ ಈಗ ಬರುವ ಹೊತ್ತು ಎನ್ನುವ ಉತ್ತರ ಸಿಕ್ಕಿತು. ಅಲ್ಲೇ ಕಾದು ಕುಳಿತರು ತಂಗಿಯ ಬರುವಿಕೆಯನ್ನು ನೋಡಿ. ಸ್ವಲ್ಪ ದೂರದಲ್ಲಿ ಅವರಿಗೆ ತಂಗಿ ಮತ್ತು ಆಕೆಯ ಗಂಡ ಹಾದು ಹೋಗಿದ್ದು ಕಂಡಿತು. ಇನ್ನೇನು ಬರಬಹುದು ಎಂದು ಕಾದರೆ ಅವರ ಸುಳಿವಿಲ್ಲ. ದೂರದಲ್ಲಿ ಸ್ಕೂಟರ್ ನಿಲ್ಲಿಸಿ ಇವರು ಯಾವಾಗ ಜಾಗ ಖಾಲಿ ಮಾಡಬಹುದು ಎಂದು ಗಂಡ ಹೆಂಡತಿ ಕಾಯುತ್ತಿದ್ದನ್ನು ಕಂಡ ಇವರು ಬೇಸರದಿಂದ ಅಲ್ಲಿಂದ ಕಾಲ್ತೆಗೆದರು. ಅವರು ಮರೆಯಾದ ಕೂಡಲೇ ಸ್ಕೂಟರ್ ಮನೆ ಕಡೆ ಸವಾರಿ ಹೊರಟಿತು. ಎಲ್ಲಿ ಅಣ್ಣ ಬಂದರೆ ಒಂದು ಚಹಾ ಕಾಯಿಸ ಬೇಕಾಗಬಹುದೋ, ರಾತ್ರಿ ಊಟಕ್ಕೆ ನಿಲ್ಲಲು ಹೇಳಬೇಕಾಗಬಹುದೋ ಎಂದು ಹೆದರಿ ಪತಿ ಪತ್ನಿ ಈ ಕಳ್ಳ ಆಟ ಆಡಿದರು. ಇದನ್ನು ಹೇಳುವಾಗ ಅವರ ಧ್ವನಿಯಲ್ಲಿ ನೋವನ್ನು ಕಾಣಬಹುದಿತ್ತು. ಕೆಲಸ ನಿಮಿತ್ತ ನಗರಕ್ಕೆ ಬಂದಿದ್ದ ಅವರು ತಂಗಿಯನ್ನು ನೋಡಿ ಕೊಂಡು ಹೋಗೋಣ ಎನ್ನುವ ಆಸೆಯಿಂದ ಬಂದಿದ್ದರೆ ಅವರನ್ನು ಉಪಚರಿಸಿ ಕಳಿಸಲು ಜಿಪುಣತನ ಅಡ್ಡ ಬಂದಿತು. ಇಬ್ಬರೂ ಕೈ ತುಂಬಾ ಸಂಪಾದಿಸುವವರೇ. "ಪಟ್ಟಣದ ಜೀವನವೇ ಹೀಗೆ ಕಣೋ, ನಾವು ಸಂಬಂಧ ಅದೂ ಇದೂ ಅಂತ ಆಸೆಯಿಂದ ಹೋಗ್ತೀವಿ, ಆದ್ರೆ ನಮಗೆ ಸಿಗುವುದು ಈ ರೀತಿಯ ಉಪಚಾರ" ಎಂದು ಬೇಸರದಿಂದ ಹೇಳಿದಾಗ ನನಗನ್ನಿಸಿತು ಸ್ವಂತ ಸೋದರನಿಗೆ ಈ ಉಪಚಾರವಾದರೆ ಇನ್ನು ಬೇರೆಯವರ ಪಾಡು ಹೇಗಿರಬೇಕು ಎಂದು. ಎಂಜಲು ಕೈಯಿಂದ ಕಾಗೆಯನ್ನೂ ಓಡಿಸದ ಇಂಥ ಜನ ದಾನ ಧರ್ಮ ಮಾಡಿಯಾರೆ?

ಇಷ್ಟೆಲ್ಲಾ ರಾಧಾಂತ ಮಾಡಿದ ನಮಗೆ ದೇವರು ಸಂಕಷ್ಟವನ್ನಲ್ಲದೆ ಸಂತೃಪ್ತಿಯನ್ನು ಕೊಡುವನೆ?