ಅಧೋಗತಿಯೇ ಅವರ ಆಯ್ಕೆ !

ಸಂಪತ್ತನ್ನೂ ರಾಶಿ ಹಾಕಬೇಕು, ಪುಣ್ಯ ಸಂಪಾದನೆಯೂ ಆಗಬೇಕು ಅಂತ ತಿಳಿದವರು ಮತ್ತು ಪಾಪ-ಪುಣ್ಯದ ಬಗ್ಗೆ ತುಂಬಾ ಯೋಚಿಸುವವರು ಜೀವನೋಪಾಯಕ್ಕೆ ಹಿಂಸಾತ್ಮಕ ದಾರಿಯನ್ನೊ, ವ್ಯಾಪಾರವನ್ನೋ ಕಳ್ಳತನ, ಮೋಸದ ಬದಕಿನ ಯೋಚನೆಯನ್ನೋ ಮಾಡುವುದಿಲ್ಲ! ಆದುದರಿಂದ ಅಂತವರು ತಮಗೆ ಯಾವುದು ಬೇಕು ಎಂಬುವುದನ್ನು ಮೊದಲು ನಿರ್ಣಯಿಸಬೇಕಾಗುತ್ತದೆ! ಆ ನಂತರ ಮುಂದಿನ ಹೆಜ್ಜೆಯಿಡಬೇಕು! ಅರ್ಧ ದಾರಿಯಲ್ಲಿರುವಾಗ ಜ್ಞಾನೋದಯವಾಗಿ ತಮ್ಮ ಬದುಕಿನ ರೀತಿಯ ಬಗ್ಗೆ ವೈರಾಗ್ಯ ಮೂಡಿ ತಮ್ಮ ಹಾಳು ವೃತ್ತಿಗೇ ತಿಲಾಂಜಲಿಯಿತ್ತ ನಿದರ್ಶನಗಳೂ ಇಲ್ಲದಿಲ್ಲ.
ಎಲ್ಲೋ ಏಕಾಂತದದಲ್ಲಿರುವಾಗ ಒಂದು ಉತ್ತಮ ತಿಳುವಳಿಕೆಯ ಮಿಂಚು ಮನಸ್ಸಿನಲ್ಲಿ ಹಾದು ಹೋದಂತಹ ದರಿದ್ರ ಸಮಯದಲ್ಲಿ ನಮ್ಮನ್ನು ನಂಬಿ ನಮ್ಮೊಂದಿಗೆ ಹೆಜ್ಜೆ ಹಾಕಿ ಜೀವನದ ದಾರಿ ಕಂಡವರ ಗತಿಯೇನು ಎಂಬುದರ ಬಗ್ಗೆಯೂ ಯೋಚಿಸಬೇಕಾಗುತ್ತದೆ ಅಲ್ಲವೇ?! ಜೀವನದ ಇಂತಹ ಕೆಲವೊಂದು ಪರ್ವಕಾಲಗಳಲ್ಲಿ ಮಹಾಭಾರತದ ಕರ್ಣನ ಬದುಕಿನ ನಿದರ್ಶನಗಳು ನಿಜವಾಗಿಯೂ ಆದರ್ಶವೆನಿಸಿ ಮಾರ್ಗದರ್ಶನಗೈಯ್ಯುವುದರಲ್ಲಿ ಸಂಶಯವಿಲ್ಲ! ಎಲ್ಲಾ ಸತ್ಯಗಳು ತನ್ನ ಕಣ್ಣ ಮುಂದೆ ಅನಾವರಣಗೊಂಡು ತನ್ನನ್ನೇ ಮೂದಲಿಸುವಂತೆ ಕೇಕೇ ಹಾಕುತ್ತಿರುವಾಗ ವಿಚಲಿತನಾಗದೆ ದುರ್ಯೋಧನನ ಹಿತ ಬಯಸಿದ ಆತ ದುರ್ಯೋಧನನಿಗಿಂತ ಮೊದಲೇ ಜೀವನ ಮುಗಿಸಿದ ಕಥೆ ನಮಗೆಲ್ಲಾ ಗೊತ್ತೇ ಇದೆ.
ತಾನು ಸಾಗಿ ಬಂದ ದಾರಿ ಕೆಟ್ಟದ್ದೋ ಒಳ್ಳೆಯದೋ ಗೊತ್ತಿಲ್ಲ. ಅಥವ ಅದನ್ನು ವಿಮರ್ಶಿಸುವುದಕ್ಕಿದು ಸಕಾಲವಲ್ಲ ಅಂತ ಗಟ್ಟಿಯಾಗಿ ನಿರ್ಧರಿಸಬೇಕಾಗುತ್ತದೆ ಮತ್ತು ತನ್ನ ನಡೆಯನ್ನು ನೋಡಿ ತನ್ನನ್ನು ಹಿಂಬಾಲಿಸಿ ತನ್ನ ಹಿಂದೆ ಬರುತ್ತಿರುವರು, ತನ್ನನ್ನು ನಂಬಿ ತಮ್ಮ ಜೀವನದ ಸುಂದರ ಕನಸು ಹೊತ್ತವರು ಅನೇಕರಿದ್ದಾರೆ, ತನ್ನಿಂದ ಬಾಳಿನ ಬೆಳಕು ಕಂಡವರು ತುಂಬಾ ಮಂದಿ ಇದ್ದಾರೆ, ತನ್ನನ್ನು ನಂಬಿ ಜೀವನದ ಅದೆಷ್ಟೋ ಮಜಲುಗಳನ್ನು ದಾಟಿದವರು, ಒಂದಷ್ಟು ವಿಶ್ವಾಸವನ್ನು ಎದೆಯೊಳಗೆ ತುಂಬಿಕೊಂಡು ಎದೆಯುಬ್ಬಿಸಿಕೊಂಡು ಹೆಜ್ಜೆಯಿಡಲು ಮುಂದಾದವರು ಬಹಳಷ್ಟು ಮಂದಿಯಿದ್ದಾರೆ ಎಂಬ ಬಗ್ಗೆಯೂ ಯೋಚಿಸಿ ತಾನೂ ಅಳುಕದೆ, ಹೆಜ್ಜೆಯನ್ನು ಮುಂದಿಡುವ ಗಟ್ಟಿ ನಿರ್ಧಾರ ಮಾಡಬೇಕಾಗುತ್ತದೆ! ಕೆಲವರು ತಮ್ಮ ಸಾವಿನವರೆಗೂ ಕೆಟ್ಟವರಾಗಿದ್ದುಕೊಂಡೇ ಬದುಕನ್ನು ಸಾಗಿಸುವುದಕ್ಕೆ ಮತ್ತು ಆ ಬದುಕನ್ನೇ ಇಷ್ಟಪಡುವುದರ ಹಿಂದೆ ಇಂತಹ ಪ್ರಬಲ ನೈತಿಕ ನಿರ್ಬಂಧಗಳಿರುವುದು ಕಾರಣವೇ ಹೊರತು ಅವರೇನು ತಮ್ಮ ಜೀವನದ ಯಾವ ಘಟ್ಟದಲ್ಲೂ ಜ್ಞಾನದ ಬೆಳಕನ್ನು ಕಾಣದಿದ್ದವರಲ್ಲ! ಜೀವನದ ಹಾದಿಯಲ್ಲಿ ಒಂದು ಬಾರಿಯೂ ತಿಳಿವಳಿಕೆಯ ದೋಣಿಯೇರುವ ಅವಕಾಶ ಸಿಗದಿದ್ದವರಲ್ಲ! ಅವರಿಗೆ ಆ ಅಸಂಬದ್ದವೆನಿಸುವ ಅವರ ಜೀವನ ಶೈಲಿಯ ಅನಿವಾರ್ಯತೆಯೇ ಅವರನ್ನು ಅಧೋಗತಿಗೆ ನೂಕಿರುತ್ತದೆ. ಆ ಅಧೋಗತಿಯೇ ಅವರ ಆಯ್ಕೆಯಾಗಿರುತ್ತದೆ! ಅಷ್ಟೆ. ಜೀವನಾರಣ್ಯದಲ್ಲಿ ಮಾನವೀಯ ಗುಣಗಳನ್ನು ಅರಸುವವರಿಗೆ ಸಂಸ್ಕೃತಿಯ ಶಿಕಾರಿ ನಿರಂತರ ಅಲ್ಲವೇ?!
-ಮೌನಮುಖಿ
(ಆತ್ರಾಡಿ ಪೃಥ್ವಿರಾಜ ಹೆಗ್ಡೆ, ನ್ಯಾಯವಾದಿ & ನೋಟರಿ - ಉಡುಪಿ)
ಚಿತ್ರಕೃಪೆ: ಗೂಗಲ್