ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು

ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು

ಬರಹ

ಪ್ರತಿ ವರ್ಷ ಯುಗಾದಿ ಹಬ್ಬ ಬಂದಾಗ ನನಗೆ ಅನಂತ ಕಲ್ಲೋಳರ ಒಂದು ಹಾಸ್ಯ ಲೇಖನ ನೆನಪಾಗುತ್ತದೆ. ಅವರು ಚಿಕ್ಕವರಿದ್ದಾಗ ಯುಗಾದಿ ಪೂಜೆಗೆ ಅವರ ಅಜ್ಜಿ ಪೂಜಾಕೋಣೆಯಲ್ಲಿ ಪೂಜಾಸಾಮಗ್ರಿಗಳನ್ನು ಅಣಿಮಾಡುತ್ತಿರುವಾಗ ' ಬೇವು ಬೆಲ್ಲದೊಳಿಡಲೇನು ಫಲ ?' ಎಂದು ಪುರಂದರದಾಸರ ಹಾಡನ್ನು ಹಾಡುತ್ತಾ ಅಲ್ಲೇ ಠಳಾಯಿಸುತ್ತಿದ್ದರಂತೆ. ' ಹಬ್ಬದ ದಿನ ಏನು ಅಪದ್ಧ ಹಾಡ್ತೀರೋ? ' ಎಂದು ಬೈಸಿಕೊಂಡರೆ 'ಅಪದ್ಧ ಏನು ಅದರಾಗ, ಮೊನ್ನೆ ಮೊನ್ನೆ ನೀವೆ ಪುರಂದರದಾಸರ ಪುಣ್ಯತಿಥಿ ಮಾಡಿದ್ರಲ್ಲ , ಅವರದS ಹಾಡು ಇದು' ಎಂದು ಮಾರುತ್ತರ ನೀಡುತ್ತಿದ್ದರಂತೆ. ಅಜ್ಜಿ ಸೋತು ಒಂದಿಷ್ಟು ಗೋಡಂಬಿಯನ್ನೋ ದ್ರಾಕ್ಷಿಯನ್ನೋ ಲಂಚ ಕೊಟ್ಟು ಸಾಗಹಾಕುತ್ತಿದ್ದರಂತೆ. ಆ ಹಾಡಿನ ಎರಡನೇ ಸಾಲು ' ಹಾವಿಗೆ ಹಾಲೆರೆದೇನು ಫಲ?' ನಾಗಪಂಚಮಿಗೆ ಮೀಸಲಾಗಿತ್ತು!

ಊಟದ ಕಾಲಕ್ಕೆ ಒಂದು ಪ್ರಹಸನವೇ ನಡೆಯುತ್ತಿತ್ತು. ಮಕ್ಕಳಿಗೆ ತಿನ್ನಲು ಊಟದಲ್ಲಿ ಬೇವು-ಬೆಲ್ಲ ಒಂದು ಬಟ್ಟಲಲ್ಲಿ ಕೊಟ್ಟಿರುತ್ತಿದ್ದರು. ಬೇವು ಕಹಿ. ಸಣ್ಣ ಹುಡುಗ ಕಹಿ ತಿನ್ನಲಾರದೆ 'ಕಹಿ, ನಾ ಒಲ್ಲೇ' ಅನ್ನುತ್ತಿದ್ದ. 'ಹಂಗನ್ನಬಾರದು , ಹಬ್ಬದ ದಿನ ಬೇವು-ಬೆಲ್ಲ ತಿನ್ನಬೇಕು' ಎಂದು ಅಪ್ಪ ತಾಕೀತು ಮಾಡುತ್ತಿದ್ದರು. 'ನೋಡು , ನಿಮ್ಮಣ್ಣ ಹೆಂಗ ಸುಮ್ಮನ ತಿಂದಾನ' ಅನ್ನುತ್ತಿದ್ದರು. ಇವನು 'ಅಣ್ಣಾ, ಹೆಂಗ ತಿಂದ್ಯೋ?, ಎಷ್ಟು ಕಹಿ ಅದ' ಅಂದರೆ ದೊಡ್ಡವನು ' ಅಪ್ಪ ತಿಂದಂಗS ತಿಂದೆ' ಎನ್ನುತ್ತಿದ್ದಂತೆ ಎಲ್ಲರ ಗಮನ ಅವನತ್ತ . ' ಅಪ್ಪ ಬೇವು ಬಟ್ಟಲ ಹಿಂದ ಸರಿಸ್ಯಾನ. ನಾನೂ ಹಂಗS ಮಾಡಿದೆ' ಎನ್ನಬೇಕೆ? ಆವಾಗ ಅಪ್ಪ ' ಸುಮ್ಮನ ಮುನ್ನೋಡಿ ಊಟ ಮಾಡ್ರಿ' ಅಂತ ಬಾಯಿ ಮುಚ್ಚಿಸುತ್ತಿದ್ದರು!.