ಅನನಾಸು ಬೆಳೆಯಲ್ಲಿ ರೋಗಗಳ ನಿರ್ವಹಣೆ
ಅನನಾಸು ಹಣ್ಣು ಯಾರಿಗೆ ತಾನೇ ಇಷ್ಟವಿಲ್ಲ? ಸರಿಯಾಗಿ ಮಾಗಿದ ಹಣ್ಣು ಸಿಹಿಯಾಗಿದ್ದರೆ ಬಹಳ ರುಚಿಕರ. ಅನನಾಸು ಹಣ್ಣು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಅನನಾಸಿನಿಂದ ಜಾಮ್, ಪುಡ್ಡಿಂಗ್, ಹಲ್ವ ಮೊದಲಾದುವುಗಳನ್ನು ತಯಾರಿಸುತ್ತಾರೆ. ಹೀಗಾಗಿ ಅನನಾಸು ಇಂದು ಪ್ರಮುಖ ತೋಟಗಾರಿಕಾ ಬೆಳೆಯಾಗಿದೆ. ಅನನಾಸಿನ ಕೆಲವೊಂದು ರೋಗ ಬಾಧೆಗಳ ನಿವಾರಣೆಗೆ ಪರಿಹಾರೋಪಾಯಗಳನ್ನು ಇಲ್ಲಿ ಸೂಚಿಸಲಾಗಿದೆ.
ಅನನಾಸು ಒಂದು ಲಾಭದಾಯಕ ತೋಟಗಾರಿಕಾ ಬೆಳೆಯಾಗಿದ್ದು, ನಮ್ಮ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಯಲ್ಲಿ ಪ್ರಮುಖ ಸಮಸ್ಯೆ, ಸಸಿಗಳನ್ನು ನಾಟಿ ಮಾಡುವಾಗ ಹಳೇ ಗಿಡದಲ್ಲಿನ ಶಿಲೀಂದ್ರ ರೋಗ ಮತ್ತು ಜಂತು ಹುಳುಗಳ ವರ್ಗಾವಣೆ. ಸಾಮಾನ್ಯವಾಗಿ ಒಂದು ಎರಡನೇ ಬೆಳೆಯ ತನಕ ಕಂದುಗಳನ್ನು ಆಯ್ಕೆ ಮಾಡಬಹುದು. ನಂತರ ಆಯ್ಕೆ ಮಾಡಿದ ಕಂದುಗಳಾದರೆ ಅದಕ್ಕೆ ಜಂತು ಹುಳ ಇಲ್ಲವೇ ಶಿಲೀಂದ್ರ ರೋಗದ ಸಮಸ್ಯೆ ಇದೆ ಎಂದೇ ಖಾತ್ರಿ. ಅದೇ ಕಾರಣಕ್ಕೆ ಇಂದಿಗೂ ಸಾವಿರಾರು ಎಕ್ರೆಗಳ ಅನನಾಸು ಬೆಳೆ ಇದ್ದರೂ ನೆಡು ಸಾಮಾಗ್ರಿಯ ಕೊರತೆ.
ಸಸಿ ಮೂಲವನ್ನು ಸರಿಯಾಗಿ ಆಯ್ಕೆ ಮಾಡಿ ಹೊಸ ಮಣ್ಣಿನಲ್ಲಿ ನಾಟಿ ಮಾಡುವವರಿಗೆ ಅಂತಹ ಸಮಸ್ಯೆ ಉಂಟಾಗದು. ಹಿಂದೆ ಕೃಷಿ ಮಾಡಿದ ಭೂಮಿ ಮತ್ತು ಹಳೆ ಸಸಿಯಾದರೆ ಅದಕ್ಕೆ ನೆಡುವ ಪೂರ್ವಬಾವಿಯಾಗಿ ಉಪಚಾರ ಅಗತ್ಯ. ಇಲ್ಲವಾದರೆ ಸಸಿಗಳು ಬೇರು ಕೊಡದೇ ಕೃಶವಾಗಿ ಬೇಸಿಗೆ ಕಾಲದಲ್ಲಿ ಸುಟ್ಟು ಹೋದಂತೆ ಕಂಡು ಬರುತ್ತವೆ. ಯಾವುದೇ ಗೊಬ್ಬರ, ನೀರಾವರಿಗೆ ಇದು ಸ್ಪಂದಿಸುವುದಿಲ್ಲ.
ಇದಕ್ಕೆ ರಾಸಾಯನಿಕ ಪರಿಹಾರವಾಗಿ ಶಿಲೀಂದ್ರ ನಾಶಕ ಬಾವಿಸ್ಟಿನ್ ಇಲ್ಲವೇ ಸೆಕ್ಟಿನ್ ಮತ್ತು ಕ್ಲೋರೋ ಫೆರಿಫೋಸ್ ಸೇರಿಸಿ ದ್ರಾವಣದಲ್ಲಿ ಸಸಿಗಳ ಬುಡ ಭಾಗವನ್ನು ಅದ್ದಿ ನಾಟಿ ಮಾಡಬೇಕೆನ್ನುತ್ತಾರೆ. ಆದರೆ ಇದರಲ್ಲಿ ಕೆಲವೊಮ್ಮೆ ಫಲಿತಾಂಶ ದೊರೆಯುತ್ತದೆಯಾದರೂ ನಿರ್ದಿಷ್ಟವಾಗಿ ಇದರ ಫಲಿತಾಂಶವನ್ನು ನಿರೀಕ್ಷಿಸುವಂತಿಲ್ಲ. ಈ ಸಮಸ್ಯೆಯ ಕಾರಣದಿಂದ ನಮ್ಮಲ್ಲಿ ಸಾಕಷ್ಟು ಜನ ಅನನಾಸು ಬೇಸಾಯದ ಸಹವಾಸವೇ ಬೇಡವೆಂದು ಹಿಂದೆ ಸರಿದವರಿದ್ದಾರೆ.
ಅನನಾಸಿನ ಈ ಸಮಸ್ಯೆಗೆ ಈಗ ಜೈವಿಕ ಪರಿಹಾರ ಇದೆ. ಎಲ್ಲಾ ಬೆಳೆಗಾರರಿಗೆ ಇದರ ತಿಳುವಳಿಕೆ ಇಲ್ಲದೆ ಬೆಳೆ ಹಾಳಾಗುತ್ತಿದೆ. ಅನನಾಸಿನಲ್ಲಿ ಶಿಲೀಂದ್ರ ಸೊಂಕನ್ನು ಯಾವುದಾರರೂ ಶಿಲೀಂದ್ರ ನಾಶಕ ಸಿಂಪರಣೆ ಮಾಡಿ ದೂರ ಮಾಡಬಹುದು ಆದರೆ ಮಣ್ಣು ಜನ್ಯ ಹಾಗೂ ಸಸ್ಯಗಳ ಮೂಲಕ ವರ್ಗಾವಣೆಯಾಗುವ ಜಂತು ಹುಳ ಮಾತ್ತು ಬೇರು ಹುಳವನ್ನು ಶಾಶ್ವತವಾಗಿ ಯಾವುದೇ ಕೀಟ ನಾಶಕಗಳ ಮೂಲಕ ದೂರ ಮಾಡುವುದು ಅಗುತ್ತಿಲ್ಲ. ಅದಕ್ಕೆ ಇರುವ ಜೈವಿಕ ಹತೋಟಿ ಮಾತ್ರ. ಜೀವಾಣು ಮೂಲದ ಜಂತು ಹುಳ ಹಾಗೂ ಬೇರು ಹುಳ ನಾಶಕವನ್ನು ಅನನಾಸು ಸಸಿ ನಾಟಿ ಮಾಡುವ ಸಮಯದಲ್ಲಿ ಪಾತಿಗೆ ಮಿಶ್ರಣ ಮಾಡುವುದು ಅಥವಾ ನಂತರ ಸಿಂಪರಣೆ ಮಾಡುವುದರಿಂದ ಈ ಜಂತು ಹುಳ ಹಾಗೂ ಬೇರು ಹುಳವನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಬಹುದು. ಇದನ್ನು ಪ್ರಾರಂಭದಲ್ಲಿ ಸಿರಸಿಯ ಬನವಾಸಿಯ ಅನನಾಸು ರಾಜ ಎಂದೇ ಖ್ಯಾತರಾಗಿದ್ದ ಅಬ್ದುಲ್ ರೌಫ್ ಸಾಹೇಬರು ಮಾಡಿ ನೋಡಿ ಯಶಸ್ವಿಯಾದರು. ನಂತರದ ದಿನಗಳಲ್ಲಿ ಬನವಾಸಿ ಸುತ್ತಮುತ್ತ ಹಲವಾರು ಅನನಾಸು ಬೆಳೆಗಾರರು ಪ್ರಯೋಗ ಕೈಗೊಂಡು ಈಗ ಜಂತು ಹುಳ ಹಾಗು ಬೇರು ಹುಳಕ್ಕೆ ಇವರು ಅಂಜುವುದೇ ಇಲ್ಲ. ಸಸಿ ಹೇಗಿದ್ದರೂ ಇರಲಿ. ಎಷ್ಟು ಬೆಳೆ ಬೆಳೆಸಿದ ಭೂಮಿಯಾಗಿರಲಿ, ಅದಕ್ಕೆ ಎಂಬ ಜಂತು ಹುಳ ನಾಶಕ Paecilomyces lilacinus ಮತ್ತು, Metarhizium anisopliae ಬೇರು ಹುಳ ನಾಶಕ ಶಿಲೀಂದ್ರವನ್ನು ಬಳಕೆ ಮಾಡಿ ಬೆಳೆಯಬಹುದು ಎಂಬ ಧೈರ್ಯಕ್ಕೆ ಬಂದಿದ್ದಾರೆ.
ಈ ಹುಳ ನಾಶಕಗಳು ಜಂತು ಹುಳ ಹಾಗೂ ಬೇರು ಹುಳದ ಮೇಲೆ ಪರಾವಲಂಬಿ ಶಿಲೀಂದ್ರವಾಗಿ ಬೆಳೆಯುತ್ತಾ ಅದನ್ನು ಕೊಂದು ತನ್ನ ಸಂತತಿಯನ್ನು ವೃದ್ದಿಸುತ್ತವೆ. ಈ ತಯಾರಿಕೆಗಳು ಕೆಲವು ಹುಡಿ ರೂಪದಲ್ಲಿ ದೊರೆಯುತ್ತವೆ. ಕೆಲವು ತಯಾರಕರು ಇದನ್ನು ನೀರಿನೊಂದಿಗೆ ಕೊಡುವಷ್ಟು ಸೂಕ್ಷ್ಮವಾಗಿ ತಯರಿಸಿ ಒದಗಿಸುತ್ತಾರೆ. ಈ ಜೈವಿಕ ಜಂತು ನಾಶಕ, ಕೀಟ ನಾಶಕಗಳು ಎಕ್ರೆಗೆ ೨೫೦ ಗ್ರಾಂ ಪ್ರಮಾಣದಲ್ಲಿ ಸಿಂಪರಣೆ ಮಾಡುವ ರೂಪದಲ್ಲಿಯೂ ಹನಿ ನೀರಾವರಿ ರೂಪದಲ್ಲಿಯೂ ಲಭ್ಯವಿರುತ್ತದೆ.
ಇದು ಕೇವಲ ಅನನಾಸು ಮಾತ್ರವಲ್ಲದೆ ಜಂತು ಹುಳ, ಬೇರು ಹುಳದ ಭಾದೆ ಇರುವ ತರಕಾರಿ, ಅಡಿಕೆ, ತೆಂಗು, ಕಬ್ಬು ಎಲ್ಲದಕ್ಕೂ ಪ್ರಯೋಜನಕಾರಿಯಾಗಿದ್ದು, ಬೇರು ಹುಳದ ಬಾಧೆ ಇರುವಲ್ಲಿ ಇದನ್ನು ಮಳೆಗಾಲ ಪೂರ್ವದಲ್ಲಿ ಮತ್ತು ಮಳೆಗಾಲ ಮುಗಿಯುತ್ತಿರುವ ಸಪ್ಟೆಂಬರ್ -ಅಕ್ಟೋಬರ್ ತಿಂಗಳಲ್ಲಿ ಸಿಂಪರಣೆ ಮಾಡಿದರೆ ತೊಂದರೆ ನಿವಾರಣೆಯಾಗುತ್ತದೆ.
ಚಿತ್ರಗಳು: ರಾಧಾಕೃಷ್ಣ ಹೊಳ್ಳ
ಚಿತ್ರ ೧ ರಿಂದ ೩ ರೋಗಬಾಧೆಗೆ ಒಳಗಾದ ಗಿಡಗಳು ಹಾಗೂ ಹಣ್ಣು
ಚಿತ್ರ ೪ ನಾಟಿ ಮಾಡಿ ವರ್ಷವಾದರೂ ಗಿಡದಲ್ಲಿ ಮೂಡದ ಬೇರು