ಅನುಭವದ ಮಾತುಗಳು
ಬದುಕಿನ ಗತಿ ಯಾವಾಗಲೂ ನಿಂತ ನೀರಾಗಬಾರದು. ಅದು ನದಿ ತರ ಯಾವಾಗಲು ಹರಿತಾ ಇರಬೇಕು. ಅಲ್ಲಿ ಸುಂದರವಾದ ಜುಳು ಜುಳು ನಾದವಿರಬೇಕು. ತಂಗಾಳಿಯ ಸ್ಪರ್ಶಕ್ಕೆ ಮೈ ಮನವೆಲ್ಲ ತುಳುಕುವ ಭಾವನೆ ಹೊರ ಹೊಮ್ಮಬೇಕು. ನಗೆಯ ಕಡಲು ಆಗಾಗ ದಡಕಪ್ಪಳಿಸುತ್ತಿರಬೇಕು. ರಾತ್ರಿ ಹಗಲು ಆಗೋದು ನಿರಂತರ. ಹಾಗೆಯೆ ಈ ಜೀವನ. ಸುಃಖ ದುಃಖ ಎಲ್ಲರ ಜೀವನದಲ್ಲೂ ಇದ್ದಿದ್ದೆ. ಅಯ್ಯೋ ಹೀಗಾಗಿ ಹೋಯಿತಲ್ಲ ಅಂತ ಕೊರಗುತ್ತ ಕೂಡುವುದರಲ್ಲಿ ಯಾವ ಅಥ೯ವೂ ಇಲ್ಲ. ಒಂದಾ ದೇವರನ್ನು ದೂರೋದು ಇಲ್ಲ ಜ್ಯೋತಿಷಿ ಹತ್ರ ಹೋಗೋದು. ಹರಕೆ ಅದು ಇದೂ ಅಂತ ದುಡ್ಡೂ ಹಾಳು, ಸಮಯವೂ ಹಾಳು. ಇದರಿಂದ ಯಾವ ಪ್ರಯೋಜನವೂ ಇಲ್ಲ. ನಾವು ಮಾಡಿದ ಖಮ೯ದ ಫಲ ಆಗಾಗ ನಮ್ಮನ್ನು ಕಾಡುತ್ತದೆ.
ಒಮ್ಮೆ ಶಾಂತವಾಗಿ ಕುಳಿತು ನಿಧಾನವಾಗಿ ಯೋಚಿಸಿ ಎಲ್ಲಿ ತಪ್ಪಾಗಿದೆ, ಯಾವ ರೀತಿ ಪರಿಹಾರ ಮಾಡಿಕೊಳ್ಳಬೇಕು, ಯಾರಿಂದ ನನಗೆ ಸಹಾಯವಾಗಬಹುದು, ನನ್ನವರು ಅಂತ ನಿಜವಾದ ವ್ಯಕ್ತಿ ಯಾರು, ನಾನು ಅವರನ್ನು ನಂಬಬಹುದಾ ಹೀಗೆ ಹಲವಾರು ವಿಷಯದ ಕುರಿತು ವಿಚಾರ ಮಾಡಬೇಕು. ಏಕೆಂದರೆ ಆ ಪರಮಾತ್ಮ ಯಾವತ್ತೂ ಕೈ ಬಿಡೋದಿಲ್ಲ. ಎಲ್ಲಾದರು ಒಂದು ದಾರಿ ತೋರಿಸಿಯೆ ತೋರಿಸುತ್ತಾನೆ. ಜಗತ್ತು ಎಷ್ಟು ವಿಶಾಲವಾಗಿದೆ. ಎಷ್ಟು ಜನ ಕಷ್ಟ ಅನುಭವಿಸುತ್ತಿಲ್ಲ. ದುಃಖ ಕಷ್ಟ ಬಂದಾಗ ನಮಗಿಂತ ಕೆಳಗಿನವರನ್ನು ನೋಡಬೇಕು. ಆಗ ನಮ್ಮ ತೊಂದರೆ ಏನೂ ಅಲ್ಲ. ಮುಕ್ತ ಮನಸ್ಸಿನಿಂದ ಭಗವಂತನ ಮುಂದೆ ಎಲ್ಲವನ್ನೂ ಹೇಳಿಕೊಂಡು ಬಿಡಿ. ಮನಸ್ಪೂತಿ೯ ಅತ್ತು ಬಿಡಿ. ಮನಸ್ಸು ಹಗುರವಾಗುವವರೆಗೂ ಪರಮಾತ್ಮನ ಧ್ಯಾನ, ಜಪ ಮಾಡಿ. ಎಷ್ಟು ನಿಮ೯ಲವಾಗುತ್ತದೆ ಮನಸ್ಸು! ಮನಸ್ಸು ಗಟ್ಟಿ ಗೊಂಡಂತೆಲ್ಲ ಹತಾಷೆ ದೂರವಾಗುತ್ತದೆ. ನಮ್ಮ ದಾರಿ ಗೋಚರಿಸುತ್ತದೆ.
ಬದುಕಿನ ಬಂಡಿ ಸಾಗಿದಂತೆಲ್ಲ ಅನುಭವದ ಚೀಲ ತುಂಬುತ್ತಾ ಬರುತ್ತದೆ. ತಿಳುವಳಿಕೆಯ ಹಗ್ಗ ಹೊಸೆಯುತ್ತ ಮುಂದೆ ಸಾಗುವ ಈ ಬಾಳೆಂಬ ಪಯಣದಲ್ಲಿ ಒಳಿತು ಕೆಡುಕು ಸಮ ಭಾವದಲ್ಲಿ ಸ್ವೀಕರಿಸುವ ಪೃವೃತ್ತಿ ತನ್ನಿಂದ ತಾನೆ ಉದ್ಭವಿಸುವ ಮಹಾನ್ ಶಕ್ತಿ.
ಒಮ್ಮೆ ಹಿಂದಿರುಗಿ ನೋಡಿದಾಗ ಕೆಲವು ಸಾರಿ ನಮ್ಮ ನಡೆ ನಮಗೆ ತಪ್ಪಾಗಿ ಕಾಣುತ್ತದೆ. ಪಶ್ಚಾತ್ತಾಪವಾಗುತ್ತದೆ. ಬೇಜಾರಾಗುತ್ತದೆ. ಹಣದ ವಿಷಯ ಬಂದಾಗ ಛೆ! ನಾ ಹೀಗೆ ಮಾಡಬೇಕಿತ್ತು. ನಷ್ಟ ಆಗೋಯ್ತಲ್ಲಾ. ಕೈ ಕೈ ಹಿಸುಕಿಕೋಳ್ಳುವಂತಾಗುತ್ತದೆ. ಎರಡು ದಿನ ನಿದ್ದೆ ಇಲ್ಲದೆ ಒದ್ದಾಟ.
ಎಲ್ಲ ಬಿಟ್ಟಾಕಿ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ. ನನಗಿಷ್ಟೆ ಫಲ ಇರೋದು. ಇರೋದರಲ್ಲೆ ಸಂತೃಪ್ತಿ ಕಾಣೋಣ. ಆಸೆಯ ಹಿಂದೆ ಪಯಣ ಹೋದಂತೆಲ್ಲ ದುಃಖವೆ ಜಾಸ್ತಿ. ದುಃಖದ ಮೂಲ ಆಸೆ. ಬಯಕೆ. ಇನ್ನೂ ಬೇಕು ಅನ್ನುವ ಹಂಬಲ. ಮನಸ್ಸು ಸಾಕು ಸಾಕು ಅನ್ನುತ್ತಿರಬೇಕೆ ಹೊರತು ಬೇಕು ಬೇಕು ಅಂತಲ್ಲ. ಮನಸ್ಸು ಮಾ.... ಮಕ೯ಟ. ಅದನ್ನು ಬುದ್ಧಿಯ ಕೈಯಲ್ಲಿ ಆಗಾಗ ಬಂದಿಸಿಡಬೇಕು. ನಮಗೆ ನಾವೇ ಮಾತಾಡಿಕೊಳ್ಳುವ ರೂಢಿ ಬಲು ಸಹಾಯವಾಗುತ್ತದೆ. ಉದಾ: ಎನೊ ಸಿಗಲಾರದ್ದು ಮನಸ್ಸು ಬಯಸುತ್ತದೆ. ಆಗ ನಮಗೆ ನಾವೇ ತಿಳುವಳಿಕೆ ಮಾತು ಹೇಳಿಕೊಳ್ಳಬೇಕು. ಬೇಡಾ ಸುಮ್ಮನಿರು. ಒಂದತ್ತು ಸಾರಿ ಹೇಳಿಕೊಂಡರೆ ಆಗ ಮನಸ್ಸು ಅದಕ್ಕೆ ಒಗ್ಗಿಕೊಳ್ಳುತ್ತದೆ. ಇಲ್ಲವಾದರೆ ಸಿಗಲಾರದ್ದಕ್ಕೆ ಆಸೆ ಪಟ್ಟು ಪಟ್ಟು ನಿರಾಸೆಯಲ್ಲಿ ದುಃಖ, ಅಳು, ಸಿಟ್ಟು ಆಮೇಲೆ ದ್ವೇಷ. ಅದು ಕೊನೆಗೆ ಯಾವ ಹಂತ ಬೇಕಾದರೂ ತಲುಪಬಹುದು.
ಬದುಕಲ್ಲಿ ಆಸೆಯಿಂದ ದೂರ ಇದ್ದಷ್ಟೂ ಜೀವನ ಸುಃಖವಾಗಿ ಇರುತ್ತದೆ. ಮಹಡಿ ಮನೆ ಇದ್ದವನೂ ಮಲಗೋದು ಆರಡಿ ಮೂರಡಿಯಲ್ಲೆ; ಗುಡಿಸಲಲ್ಲಿ ಇದ್ದವನೂ ಮಲಗೋದು ಆರಡಿ ಮೂರಡಿಯಲ್ಲೆ. ಅವನು ಮೃಷ್ಟಾನ್ನ ತಿನ್ನಬಹುದು ಇವನೂ ಅನ್ನನೆ ತಿನ್ನೋದು. ಆದರೆ ಇಬ್ಬರೂ ಹೊಟ್ಟೆಗೆ ಎಷ್ಟು ಬೇಕೊ ಅಷ್ಟೆ ತಿನ್ನೋದು ತಾನೆ. ಊಟ ಇದೆ ಅಂತ ಎರಡೊಟ್ಟೆ ಅನ್ನ ತಿನ್ನೋದಕ್ಕೂ ಸಾಧ್ಯ ಇಲ್ಲ ; ಮನೆ ದೊಡ್ಡದಾಗಿದೆ ಅಂತ ಮನೆ ತುಂಬ ಮಲಗೋದಕ್ಕೂ ಅಗೋದಿಲ್ಲ. ಇಬ್ಬರೂ ತಮಗೆ ದಕ್ಕಿದ್ದಷ್ಟೆ ಅನುಭವಿಸೋದಕ್ಕೆ ಆಗೋದು. ಆದುದರಿಂದ ಇಲ್ಲಾ ಎಂದು ಕೊರಗುವ ಬದಲು ನನಗೆ ಇಷ್ಟು ಇದೆಯಲ್ಲ ಅನ್ನುವ ಸಂತೃಪ್ತಿ ಪಡೋದರಲ್ಲಿ ಹೆಚ್ಚಿನ ಸುಃಖ ಇದೆ.
ಯಾರೊಂದಿಗೂ ಮನಸ್ಥಾಪ ಬೇಡ. ಬದುಕಲ್ಲಿ ಆಗೊಂದು ಈಗೊಂದು ಮಾತು ಬರುತ್ತದೆ. ಆ ಒಂದು ಗಳಿಗೆಯಲ್ಲಿ ಮಾತಾಡಿದ್ದು ಆಯಿತು. ಮತ್ತೆ ಕೆಣಕಿ ದ್ವೇಷ ಬೇಡ. ಬಿಟ್ಟಾಕಿ. ದ್ವೇಷ ಸಾಧಿಸಿದಷ್ಟೂ ಎದುರಾಳಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದರಿಂದ ನಮ್ಮ ಮನಸ್ಸಿಗೆ ಕಿರಿ ಕಿರಿ. ಆದುದರಿಂದ ದ್ವೇಷ ಎಂಬ ಸ್ಥಾನದಲ್ಲಿ ಪ್ರೀತಿ ಬೆಳೆಯಲು ನೀವೆ ಮುಂದಾಗಿ ಅವಕಾಶ ಮಾಡಿಕೊಡಿ. ಆಗ ನಿಮ್ಮ ಮನಸ್ಸು ಎಷ್ಟು ಹಗುರಾಗುತ್ತದೆ ನೋಡಿ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವುದರಿಂದ ಮನಸ್ಸು ಸದಾ ಹಗುರಾಗಿರುತ್ತದೆ. ಹೃದಯ ಯಾವಾಗಲು ಪ್ರೀತಿಯ ನೆರಳಲ್ಲಿ ಸಂತೋಷವಾಗಿರುತ್ತದೆ.
ಕಾಲ ಚಕ್ರ ಉರುಳುತ್ತಲೆ ಇರುತ್ತದೆ. ಜೀವನ ಇವತ್ತು ಇದ್ದ ಹಾಗೆ ನಾಳೆ ಇರೋದಿಲ್ಲ. ಮನಸ್ಸು ಅಷ್ಟೆ ಇವತ್ತು ಇದ್ದ ಹಾಗೆ ನಾಳೆ ಇರೋದಿಲ್ಲ. ಅದಕ್ಕೆ ನಾಳೆಯ ಕುರಿತು ಚಿಂತಿಸುವ ಬದಲು ಇಂದಿನ ದಿನ ನನ್ನದು. ಈ ದಿನ ಸಿಕ್ಕಿರುವ ಗಳಿಗೆ ಯಾವ ತಪ್ಪಿಲ್ಲದೆ, ಯಾವ ಅಹಿಂಸೆ, ಅಪವಾದಕ್ಕೆ ಗುರಿಯಾಗದೆ ನಾನು ಮಾಡುವ ಇಂದಿನ ಕೆಲಸ, ಕಾಯ೯ ಅತ್ಯಂತ ಸಮಪ೯ಕವಾಗಿ ಮಾಡಿ ಮುಗಿಸಬೇಕು. ಸಂತೃಪ್ತಿಯಿಂದ ಕಳೆಯಬೇಕು. ಪರಮಾತ್ಮ ಈ ದಿನ ಯಾವ ಅಡೆ ತಡೆ ಇಲ್ಲದೆ ಇಂದಿನ ದಿನ ಸುಃಖಮಯವಾಗಿಸು ಅನ್ನುವ ಭಾವನೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಏಳುವ ರೂಢಿ ರೂಪಿಸಿಕೊಂಡಲ್ಲಿ ಮನಸ್ಸು ಕ್ರಮೇಣ ತನ್ನಷ್ಟಕ್ಕೆ ದೃಡ ಸಂಕಲ್ಪಕ್ಕೆ ಬಂದಿಯಾಗಲು ನೆರವಾಗುತ್ತದೆ. ಇದಕ್ಕೆ ಪೂರಕವಾಗಿ ದೇಹವನ್ನು ದಿನವೂ ಹದ ಗೊಳಿಸಬೇಕು. ಬೆಳಗಿನ ವಾಯು ವಿಹಾರ, ಯೋಗ, ವ್ಯಾಯಾಮ ಮನಸನ್ಸಿನ ದೃಢತೆ ಹೆಚ್ಚಿಸುತ್ತದೆ. ದೇಹವೂ ಇಡೀ ದಿನ ಲವಲವಿಕೆಯಿಂದ ತುಂಬಿರುತ್ತದೆ.
ಇಂದಿನ ದಿನನಗಳಲ್ಲಿ ಸಾಮಾನ್ಯವಾಗಿ ಜನ ಹೇಳುವುದು. "ಅಯ್ಯೋ ನನಗೆ ಪೂಜೆ ಮಾಡೋಕೆ ಟೈಮೇ ಇರೋದಿಲ್ಲ. ಶ್ಲೋಕ ಹೇಳೋಕೆ ಟೈಮ್ ಇರೋದಿಲ್ಲ". ಇದು ಶುದ್ಧ ಸುಳ್ಳು; ಆಳಸಿಗಳ ಜಾಣತನದ ಮಾತು.
ಬೆರೆಲ್ಲ ಕೆಲಸಕ್ಕೆ ಟೈಮಿರುತ್ತದೆ. ಆದರೆ ಭಗವಂತನಿಗೆ ಕೈ ಮುಗಿಯಲು ಟೈಮಿರೋದಿಲ್ಲ. ಯಾಕೆ? ಮನಸ್ಸಿಲ್ಲ. ಯಾಕಂದ್ರೆ ಆ ಭಗವಂತ ಬಂದು ಕೇಳೋದೇ ಇಲ್ಲ ನನ್ನ ಯಾಕೆ ಪೂಜೆ ಮಾಡೋಲ್ಲ? ಆದರೆ ಹೊಟ್ಟೆ ಕೇಳುತ್ತೆ. ಹಸಿವೆ ಆಗುತ್ತಿದೆ ಊಟ ಹಾಕು. ದೇಹ ಕೇಳುತ್ತದೆ ಒಳ್ಳೊಳ್ಳೆ ಬಟ್ಟೆ ಹಾಕು. ಕಣ್ಣು ಕೇಳುತ್ತದೆ ತಾಸುಗಟ್ಟಲೆ ಟೈಮಾದರೂ ಪರವಾಗಿಲ್ಲ, ಟೀವಿ ನೋಡು, ಸಿನೇಮಾ ನೋಡು. ಗಾಡಿ ಕೈ ಬೀಸಿ ಕರೆಯುತ್ತದೆ ಎಲ್ಲಾದರೂ ಸುತ್ತಾಡೋಣ ಬಾ. ಹೀಗೆ ನಮ್ಮ ಇಂದ್ರಿಯಗಳ ಬೇಡಿಕೆಗೆ ಲಗಾಮೇ ಇಲ್ಲ. ಅಷ್ಟು ದಾಸರಾಗಿಬಿಟ್ಟಿದ್ದೇವೆ. ಇದರಲ್ಲಿ ಯಾವುದೂ ಬಿಡೋದೂ ಬೇಡ. ಆದರೆ ಆ ಭಗವಂತನ ಪ್ರಾಥ೯ನೆ ಹೀಗೇ ಮಾಡಬೇಕೆನ್ನುವ ಕಂಡೀಷನ್ ಇಲ್ಲ. ನೀವು ಎದ್ದಾಗ ಹಾಸಿಗೆಯಲ್ಲೆ ಕುಳಿತು ಸ್ಮರಿಸಿ. ಸ್ನಾನ ಮಾಡುತ್ತ ಭಗವಂತನ ಶ್ಲೋಕನೊ ಇಲ್ಲ ನಾಮವನ್ನೊ ಹೇಳುತ್ತಿರಿ. ಮನೆಯಿಂದ ಹೊರಗೆ ಹೋಗುವಾಗ ಒಂದು ಉದ್ದಂಡ ನಮಸ್ಕಾರ ದೇವರಿಗೆ ಹಾಕಿ ಹೊರಡಿ. ನೀವು ಮಾಡುವ ಕೆಲಸದಲ್ಲೆ ಪರಮಾತ್ಮನ ಧ್ಯಾನ ಮಾಡಬಹುದು. ಮನಸ್ಸು ಎಷ್ಟು ಉಲ್ಲಾಸದಿಂದ ತುಂಬಿರುತ್ತದೆ. ಅದಕ್ಕೆ ಹಿರಿಯರು ಹೇಳಿರೋದು; ಈ ದೇಹವೆ ದೇಗುಲ. ದೇವಸ್ಥಾನಕ್ಕೇ ಹೋಗಬೇಕು, ಇಲ್ಲ ದೇವರ ಮನೆಯಲ್ಲಿ ಕುಳಿತು ಗಂಟೆಗಟ್ಟಲೆ ಪೂಜೆ ಮಾಡಬೇಕು ಅಂತಿಲ್ಲ. ಭಕ್ತಿಯಿಂದ ದಿನವೂ ಸ್ಮರಿಸಿ. ಒಂದು ನಾಲ್ಕು ಶ್ಲೋಕ ಪಠಣ ಮಾಡಿ. ಮನಸ್ಸು ಶುದ್ದಿ ಮಾಡಿಕೊಳ್ಳಿ. ದಿನದ ಕೆಲಸವೆಲ್ಲವೂ ಸಂತೋಷವಾಗಿ ಮುನ್ನಡೆಯುತ್ತದೆ ನಗುವಿನ ಅಲೆ ಜೀವನದಲ್ಲಿ ಅಪ್ಪಳಿಸುತ್ತಿರುತ್ತದೆ. ಜೀವನ ನಿಂತ ನೀರಂತಾಗೋದಿಲ್ಲ.
ಸದಾ ಒಂದಿಲ್ಲೊಂದು ಕೆಲಸ ಕಾಯ೯ದಲ್ಲಿ ತೊಡಗಿ ನಾಲ್ಕು ಜನರೆದುರಿಗೆ ಆದಶ೯ವಾಗಿ ಬದುಕೋಣ. ಸಮಾಜಕ್ಕೆ ನಮ್ಮ ಕೈಲಾದ ಕೆಲಸ, ಸಹಾಯ ಮಾಡುತ್ತ ಆರೋಗ್ಯವಂತರಾಗಿ ಬದುಕಲು ಪ್ರಯತ್ನಿಸೋಣ.
Comments
ಉ: ಅನುಭವದ ಮಾತುಗಳು
ಈ ಲೇಖನ ದಿನಾಂಕ 30-4-2016ರ ವಿಜಯ ಕನಾ೯ಟಕ "ಬೋಧಿವೃಕ್ಷ" ಪುರವಣಿಯಲ್ಲಿ "ಬದುಕು ನಿಂತ ನೀರಾಗದಿರಲಿ"ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ.
ನನ್ನ ಬರಹ ಓದಿ ಪ್ರೋತ್ಸಾಹಿಸಿ ಈ ಮಟ್ಟಕ್ಕೆ ಬೆಳೆಯಲು ಅನುವು ಮಾಡಿಕೊಟ್ಟ ಎಲ್ಲ ಓದುಗರಿಗೂ ಧನ್ಯವಾದಗಳು.
ಉ: ಅನುಭವದ ಮಾತುಗಳು
ಅಭಿನಂದನೆಗಳು.