ಅನುಮಾನ ಪರಿಹರಿಸಿ
ಸರಕಾರದ ವಿರುದ್ಧ ಶೇ ೪೦ ಕಮಿಷನ್ ಆರೋಪ. ಬೆಳಗಾವಿಯ ಗುತ್ತಿಗೆದಾರ, ೩೬ ವಯಸ್ಸಿನ ಸಂತೋಷ್ ಪಾಟೀಲ್ ಎಂಬವರು ಉಡುಪಿಯ ಹೋಟೆಲ್ ಒಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮಂಗಳವಾರ (ಎಪ್ರಿಲ್ ೧೨) ಪತ್ತೆಯಾಗಿದ್ದಾರೆ. ತಮ್ಮ ಈ ಆತ್ಮಹತ್ಯೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರೇ ನೇರ ಕಾರಣ ಎಂದು ಮಾಧ್ಯಮಗಳಿಗೆ ವಾಟ್ಸಾಪ್ ಸಂದೇಶ ಕಳಿಸಿರುವುದರಿಂದ ಪ್ರಕರಣವು ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮೃತ ಗುತ್ತಿಗೆದಾರರು ಈ ಹಿಂದೆ ಸಚಿವ ಈಶ್ವರಪ್ಪ ವಿರುದ್ಧ ಶೇ.೪೦ ಕಮಿಷನ್ ಆರೋಪ ಹೊರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಸಂಬಂಧ ಪತ್ರ ಬರೆದಿದ್ದು ಭಾರೀ ಸುದ್ದಿಯಾಗಿತ್ತು. ಹಾಗಾಗಿ, ಈ ಆತ್ಮಹತ್ಯೆ ಪ್ರಕರಣವು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಈ ಪ್ರಕರಣದಲ್ಲಿ ತಪ್ಪು ಯಾರದ್ದು ಎಂಬುದು ತನಿಖೆಯಿಂದ ಗೊತ್ತಾಗಬಹುದು. ಆದರೆ, ಈ ಘಟನೆಯ ಹಿನ್ನಲೆಯಲ್ಲಿ ನಾವು ಮತ್ತೊಂದು ಆಯಾಮದಲ್ಲೂ ವಿಮರ್ಶಿಸಬೇಕಾಗಿದೆ. ಪ್ರಸ್ತುತ ರಾಜ್ಯ ಸರ್ಕಾರ ವಿರುದ್ಧ ಶೇ.೪೦ ಕಮೀಷನ್ ಆರೋಪವು ಹಲವು ದಿನಗಳಿಂದಲೂ ಕೇಳಿ ಬರುತ್ತಿದೆ. ವಾಸ್ತವದಲ್ಲಿ ಶೇ ೪೦ ಕಮಿಷನ್ ಆರೋಪವನ್ನು ಮೊದಲಿಗೆ ಮಾಡಿದ್ದು -ರಾಜ್ಯ ಗುತ್ತಿಗೆ ಸಂಘ. ಈ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಅವರು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದು ಗಮನಕ್ಕೆ ತಂದಿದ್ದರು. ಆ ಬಳಿಕ ಮಾಧ್ಯಮಗಳ ಮೂಲಕ ರಾಜ್ಯದ ಜನರಿಗೂ ತಿಳಿಸುವ ಪ್ರಯತ್ನ ಮಾಡಿದ್ದರು. ಆರೋಪ ಎದುರಾದಾಗಲೇ ರಾಜ್ಯ ಸರಕಾರ ತನಗಂಟಿರುವ ಕಳಂಕವನ್ನು ತೊಳೆದುಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಆದರೆ, ಆ ಕೆಲಸವನ್ನು ಮಾಡಲು ಹೋಗಿಲ್ಲ. ಬದಲಿಗೆ ದಿವ್ಯ ನಿರ್ಲಕ್ಷ್ಯ ತಾಳಿತು. ಪರಿಣಾಮ ಸಾರ್ವಜನಿಕರಲ್ಲಿ ಶೇ.೪೦ ಕಮಿಷನ್ ಬಗ್ಗೆ ಅನುಮಾನಗಳು ಹೆಚ್ಚಾದವು. ಈಗ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಕೂಡ ಸಾರ್ವಜನಿಕರ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಯಾವುದೇ ಗುತ್ತಿಗೆ ಕಾಮಗಾರಿಯನ್ನು ಪಾರದರ್ಶಕವಾಗಿ ನಡೆಸುವ ಹೊಣೆಗಾರಿಕೆಯು ಆಡಳಿತದ ಮೇಲಿರುತ್ತದೆ. ಆದರೆ ಗುತ್ತಿಗೆ ಕೆಲಸ ಮಾಡುವ ಗುತ್ತಿಗೆದಾರರು, ಶಾಸಕರು -ಸಚಿವರ ನಡುವೆ ಒಂದು ವಿಚಿತ್ರ ಸಂಬಂಧ ಏರ್ಪಟ್ಟಿರುತ್ತದೆ. ಇಲ್ಲಿ ಯಾವುದೇ ನಿಯಮಗಳು ಪಾಲನೆಯಾಗುವುದಿಲ್ಲ. ಎಂಬುದು ಆ ಕ್ಷೇತ್ರದಲ್ಲಿರುವ ಅನುಭವಿಗಳ ಅಭಿಪ್ರಾಯ. ಹೀಗಾದಾಗ, ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಹೊರಟು ಹೋಗುತ್ತದೆ ಮತ್ತು ಸರಕಾರದ ಮೇಲೆ ಅನುಮಾನಗಳು ಹೆಚ್ಚಾಗುತ್ತವೆ. ಈಗ ಶೇ ೪೦ ಕಮೀಷನ್ ವಿಷಯದಲ್ಲಿ ಇದೇ ಆಗಿರುವುದು.
ಇನ್ನು ಪ್ರತಿಪಕ್ಷಗಳಾದರೂ ಈ ವಿಷಯವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬಹುದಿತ್ತು. ಕಮಿಷನ್ ಬಗ್ಗೆ ಗುತ್ತಿಗೆದಾರ ಸಂಘ ಆರೋಪ ಮಾಡಿದ ಬಳಿಕ ಮೂರು ಅಧಿವೇಶನಗಳು ನಡೆದಿವೆ. ಆದರೆ, ಪ್ರತಿಪಕ್ಷಗಳು ಈ ವಿಷಯವನ್ನು ಆದ್ಯತೆಯ ವಿಷಯವನ್ನಾಗಿ ಮಾಡಿಕೊಳ್ಳಲಿಲ್ಲ. ಬದಲಿಗೆ ನಾಮಕೇವಾಸ್ತೆ ಎಂಬಂತೆ ಪ್ರಸ್ತಾಪಿಸಿದವು. ಈ ಆರೋಪದ ಬಗ್ಗೆ ಸರಕಾರದಿಂದ ಸ್ಪಷ್ಟವಾದ ಉತ್ತರವನ್ನು ಬಯಸಿದ್ದರೆ, ಒಂಚೂರಾದರೂ ಅನುಮಾನ ಬಗೆಹರಿಸುತ್ತಿತ್ತು. ಎಲ್ಲರೂ ಗಾಜಿನ ಮನೆಯಲ್ಲಿ ಕುಳಿತಿರುವಾಗ ಕಲ್ಲು ಹೊಡೆಯುವವರು ಯಾರು?
ಈಗಲೂ ಕಾಲ ಮಿಂಚಿಲ್ಲ. ಶೇ.೪೦ ಕಮಿಷನ್ ಆರೋಪ ಕುರಿತು ಜನರಲ್ಲಿ ಎದ್ದಿರುವ ಅನುಮಾನಗಳನ್ನು ದೂರ ಮಾಡಬೇಕು. ವಾಸ್ತವ ಸ್ಥಿತಿ ಏನಾಗಿದೆ, ಯಾವ ರೀತಿಯಲ್ಲಿ ಗುತ್ತಿಗೆ ಕಾರ್ಯಗಳು ನಡೆಯುತ್ತಿವೆ, ಕಮಿಷನ್ ವ್ಯವಸ್ಥೆಯ ಆರೋಪಗಳೇನು ಎಂಬ ಮಾಹಿತಿಯನ್ನು ಜನರ ಮುಂದಿಡಬೇಕು ಮತ್ತು ಇದು ರಾಜ್ಯ ಸರಕಾರದ ಜವಾಬ್ದಾರಿಯೂ ಹೌದು. ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತೆಯೇ ಇಲ್ಲ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೩-೦೪-೨೦೨೨
ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ