ಅನುಮಾನ

ಅನುಮಾನ

ರಾಜ್ಯದಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಅಲ್ಲಲ್ಲಿ ಮಕ್ಕಳ ಸಂಖ್ಯೆಗನುಗುಣವಾಗಿ ಮುಚ್ಚುವ ತೀರ್ಮಾನ ಈಗಿನ  ಸರಕಾರ ತೆಗೆದುಕೊಂಡಿರುವುದು ನಿಜಕ್ಕೂ ಶೋಚನೀಯ.  ಇದಕ್ಕೆ ಬಲಿಯಾಗುವುದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇರುವ ಶಾಲೆಗಳು.  
ಬಹಳ ಬಹಳ ದುಃಖವಾಗುತ್ತಿದೆ. 
 
ಕಾರಣ ನಾನೂ ಕೂಡಾ ಸರಕಾರಿ ಕನ್ನಡ ಶಾಲೆಯಲ್ಲಿ ಓದಿದವಳೆ.  ಒಂದು ಕಾಲದಲ್ಲಿ ಅಂದರೆ ನಾನು ನಾಲ್ಕನೇ ಕ್ಲಾಸು ಮುಗಿಸಿದ ವರ್ಷ ನಾನು ಓದುತ್ತಿರುವ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ, ಟೀಚರ್ ಕೂಡಾ ಕಡಿಮೆ ಇದ್ದಾರೆ ಎಂದು ಆ ಶಾಲೆಯಲ್ಲಿ ಕೇವಲ ನಾಲ್ಕನೇ ಈಯತ್ತೆಯವರೆಗೆ ಮಾತ್ರ ಈ ಶಾಲೆಯಲ್ಲಿ ಕಲಿಯಬಹುದು.  ನಂತರ ಓದುವ ಮಕ್ಕಳು ಈ ಶಾಲೆಯಿಂದ ಸುಮಾರು ಎರಡು ಮೈಲಿ ದೂರದಲ್ಲಿರುವ ಇನ್ನೊಂದು ಕನ್ನಡ ಶಾಲೆಯಲ್ಲಿ ಕಲಿಯಬಹುದೆಂಬ ಸರಕಾದ ಆದೇಶದನ್ವಯ ನಮ್ಮ ಹಳ್ಳಿಯ ಹತ್ತಿರವಿರುವ ಶಾಲೆಯಲ್ಲಿ ಓದುವ ಭಾಗ್ಯ ಕಳೆದುಕೊಂಡೆ.  
 
ಐದನೆಯ ಈಯತ್ತೆ ಮುಗಿಸಿದ ನನ್ನಕ್ಕ ಮತ್ತು ನಾಲ್ಕನೆ ಈಯತ್ತೆ ಮುಗಿಸಿದ ನಾನು ಇವರನ್ನು ಯಾವ ಶಾಲೆಗೆ ಕಳಿಸುವುದು? ಎಂಬ ಚಿಂತೆ ಹೆತ್ತವರದ್ದಾಯಿತು.  ಎರಡು ಮೈಲಿ ನಡೆದು ಈ ಮಕ್ಕಳು ಕಲಿಯುವುದುಂಟೆ?  ಕಾರಣ ಹೋಗುವ ದಾರಿ ಕಾಲು ಹಾದಿ.  ಇನ್ನು ಬಳಸಿಕೊಂಡು ದಾರಿಯಲ್ಲಿ ನಡೆದು ಹೋಗಲು ಮೂರೂವರೆ ಮೈಲಿ.  ಬಸ್ಸಿನ ಸೌಲಭ್ಯ ಇಲ್ಲವೇ ಇಲ್ಲ.  ಕಾಲು ಹಾದಿನೊ, ಅದು ನಿರ್ಜನ ಪ್ರದೇಶ.  ಅರ್ಧ ಕಿ.ಮೀ. ಹಳ್ಳದಲ್ಲಿ (ಹೊಳೆ) ನಡೆಯಬೇಕು.  ಬೆಟ್ಟ, ಬೇಣದಲ್ಲಿ ಸಾಗುವಾಗ ಹೆದರಿಕೆ ಆಗುವುದು ಸಹಜ.  ಇವೆಲ್ಲ ಯೋಚಿಸಿ ಹತ್ತಿರದ ಸಂಬಂಧಿಕರ ಮನೆಯಲ್ಲಿ ವಿಚಾರಿಸಿ ಅವರ ಒಪ್ಪಿಗೆಯ ಮೇರೆಗೆ ನಮ್ಮಿಬ್ಬರನ್ನೂ ಬೇರೆ ಬೇರೆ ಮನೆಯಲ್ಲಿ ಇರುವ ವ್ಯವಸ್ಥೆ ಮಾಡಿ ಬೇರೆ ಬೇರೆ ಶಾಲೆಗೆ ಸೇರಿಸಲಾಯಿತು.   
 
ಸಾಮಾನ್ಯ ಸಣ್ಣ ಸಿಟಿಯಾಗಿತ್ತು.  ಶಾಲೆನೂ ದೊಡ್ಡದಾಗೇ ಇತ್ತು.  ಅದರಲ್ಲೂ ನಾನು ಸೇರಿದ ಶಾಲೆಯಲ್ಲಿ ತುಂಬಾ ಮಕ್ಕಳಿದ್ದರು.  ಹಾಗೆ ಟೀಚರ್ಗಳೂ ತುಂಬಾ ಇದ್ದರು.  ಆಟ ಪಾಠ ಎಲ್ಲಾ ಜೋರಾಗೇ ಇತ್ತು.  ಹಳ್ಳಿಯಿಂದ ದಿಲ್ಲಿಗೆ ಬಂದಷ್ಟು ಸಂತೋಷ.  ನಮ್ಮ ಹವ್ಯಕ ಭಾಷೆ ಮಾತಾಡುವವರು ಬೆರಳೆಣಿಕೆಯಷ್ಟು.  ಪೇಟೆಯ ಮಾತು.  ಬಹಳ ಹೆದರಿಕೆ ಹೊಸ ವಾತಾವರಣ.  ಹೊಂದಿಕೊಳ್ಳದೆ ಬೇರೆ ದಾರಿ ಇರಲಿಲ್ಲ.   ಹೊಸದರಲ್ಲಿರುವ ಸಂತೋಷ  ಬರ್ತಾ ಬರ್ತಾ ನನಗಿನ್ನೂ ನೆನಪಿದೆ ಮನೆ ವಾತಾವರಣ ಬಂಧನದಂತೆ ಭಾಸವಾಗತೊಡಗಿತು.  ಆಯಿ ಅಪ್ಪನ ಜೊತೆ ಅಕ್ಕ ಅಣ್ಣ ತಂಗಿಯರ ಜೊತೆ ಆಟ ಆಡ್ತಾ, ಜಗಳ ಆಡ್ತಾ ಬಯ್ಸಿಕೊಳ್ತಾ ಊರ ಮಕ್ಕಳೊಂದಿಗೆ ಬೆಟ್ಟ ಗುಡ್ಡ ತಿರುಗಿಕೊಂಡು ಇರೊ ದಿನಗಳ ನೆನಪು ಬಹಳ ಬಹಳ ಕಾಡಲು ಶುರುವಾಯಿತು.  ನಾನಿರುವ ದೂರದ ಸಂಬಂಧಿ ಅಜ್ಜಿಯ ಮನೆ ಬಹಳ ಶ್ರೀಮಂತ ಕುಟುಂಬ.  ದೊಡ್ಡ ಮನೆ,ಆಳು ಕಾಳು,ಬೇಕಾದಷ್ಟು ಪ್ರೀತಿ ಮಾಡಿಕೊಳ್ಳುವ ಅಜ್ಜ ಅಜ್ಜಿ, ಮಾವಂದಿರು,ಹಾಲು ಮೊಸರು ತುಪ್ಪ ಏನಿಲ್ಲಾ?  ಎಲ್ಲವೂ ಇತ್ತು.  ಆದರೆ ನನ್ನ ಮನಸ್ಸು ಆಯಿ ಅಪ್ಪನನ್ನು ಸದಾ ಬಯಸುತ್ತಿತ್ತು.  ನನಗೆ ನೆನಪಾದಾಗಲೆಲ್ಲ ಅವರಲ್ಲಿಗೆ ಓಡಿ ಹೋಗಿ ಬಿಡಲೆ ಅನಿಸುತ್ತಿತ್ತು.  ಕಾರಣ ಅಲ್ಲಿ ನನಗೆ ಸ್ವಾತಂತ್ರ್ಯ ಇತ್ತು.  ನನ್ನದು, ನಂದು ಅನ್ನುವ ವಾಂಚಲ್ಯ ಇತ್ತು.  ಎಲ್ಲಿ ನಂದೇ ಅನ್ನುವ ಭಾವನೆ ಇರುತ್ತದೊ ಅಲ್ಲಿ ಸುಃಖ ಜಾಸ್ತಿ.  ಈ ಅರಿವು ಅಷ್ಟು ಚಿಕ್ಕಂದಿನಲ್ಲೆ ಮನೆ ಮಾಡಿತ್ತು ಅನಿಸುತ್ತದೆ.  ಒಂಬತ್ತು ವರ್ಷ ನನಗೆ.  ತಿಳುವಳಿಕೆ ಏನೂ ಇರಲಿಲ್ಲ.  ಬರೀ ತಿನ್ನೋದು, ಆಡೋದು, ಶಾಲೆಯಲ್ಲಿ ಹೇಳಿಕೊಟ್ಟಿದ್ದು ಮನೆಗೆ ಬಂದು ವರದಿ ಒಪ್ಪಿಸೋದು.   ಮನೆ ಪಾಠ ಕಲಿಯೋದು.  ಬೇರೆ ಯಾವ ಚಿಂತೆನೆ ಇರಲಿಲ್ಲ.  ಆದರೆ ಬೇರೆಯವರ ಮನೆಯಲ್ಲಿ ಹಾಗಾಗೋದಿಲ್ಲ.  ಏನೊ ಒಂದು ರೀತಿ ಬಂಧನ.  ಮಕ್ಕಳ ಮನಸ್ಸು ಅತೀ ಸೂಕ್ಷ್ಮ.  ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಅಗಲಿರುವುದು ತುಂಬಾ ತುಂಬಾ ಕಷ್ಟ.  ಆಗೆಲ್ಲ ಮೌನವಾಗಿ ಅಳುವುದೊಂದೆ ಸಂಗಾತಿ.  ಅದರಲ್ಲೂ ಹಬ್ಬಗಳಲ್ಲಿ ಪರೀಕ್ಷೆ ಕಾರಣಕ್ಕೆ ಹೆತ್ತವರ ಹತ್ತಿರ ಹೋಗಲಾಗದ್ದು ಇನ್ನೂ ಮನಸ್ಸು ಘಾಸಿಗೊಳಿಸುತ್ತಿತ್ತು.  ಸ್ವಲ್ಪ ಹುಷಾರಿಲ್ಲದಿದ್ದರೂ ಅಮ್ಮ ಬೇಕು ನನಗೆ ಎಂದು ಹೇಳಿಕೊಳ್ಳಲಾಗದು.  ಬೇಕೆಂದರೂ ಸಿಗುತ್ತಿರಲಿಲ್ಲ.  ಇಂಥ ಪರಿಸ್ಥಿತಿ ಈಗ ಶಾಲೆ ಮುಚ್ಚುತ್ತಿರುವುದರಿಂದ ಯಾವ ಮಕ್ಕಳಿಗೂ ಬಾರದಿರಲಿ!!
 
ಈಗ ಹಳ್ಳಿಯ ಶಾಲೆಗಳಲ್ಲಿ ಗಣನೀಯವಾಗಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದು ನಿಜ.  ಏಕೆಂದರೆ ಉತ್ತರ ಕನ್ನಡದ ಎಷ್ಟೋ ಹಳ್ಳಿಗಳಲ್ಲಿ ಜನ ಸಂಖ್ಯೆ ಸಾಕಷ್ಟು ಕಡಿಮೆ ಆಗುತ್ತಿದೆ.  ಕಲಿತು ಪಟ್ಟಣ ಸೇರಿದವರು ಅಲ್ಲಿಯೆ ಕೆಲಸಕ್ಕೆ ಸೇರಿ ಮದುವೆ ಮಕ್ಕಳು ಅಂತ ನಗರದಲ್ಲಿಯೆ ವಾಸ್ತವ್ಯ ಹೂಡಿದ್ದಾರೆ.  ಇನ್ನು ಹಳ್ಳಿಯಲ್ಲಿ ಇರುವ ಗಂಡು ಮಕ್ಕಳಿಗೆ ಎಷ್ಟೇ ಶ್ರೀಮಂತರಾಗಿರಲಿ, ಸೌಲಭ್ಯಗಳು ಇರಲಿ ಮದುವೆಗೆ ಹೆಣ್ಣು ಸಿಗದೆ ಸಂಸಾರ ಸಂತಾನವಿಲ್ಲದೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ.  ಇರುವ ನಾಲ್ಕಾರು ಮಕ್ಕಳಿದ್ದರೂ ಈ ರೀತಿ ಶಾಲೆಗಳನ್ನು ಮುಚ್ಚುವುದರಿಂದ ಗತ್ಯಂತರವಿಲ್ಲದೆ ನನ್ನಂತೆ ಬೇರೆಯವರ ಮನೆಯಲ್ಲಿ ಇದ್ದು ಓದಬೇಕು.  ಇಲ್ಲಿ ಬಾಲ್ಯದ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಬರಬರುತ್ತಾ ಒಬ್ಬಂಟಿ ವ್ಯಕ್ತಿತ್ವ ಬೆಳೆಯುವುದು ಖಂಡಿತಾ.  
 
ಮಕ್ಕಳಿಗೆ ಆಯಾ ವಯಸ್ಸಿನಲ್ಲಿ ಸಿಗುವ ಸೌಲಭ್ಯ, ಸ್ವಾತಂತ್ರ್ಯ ಸಿಗದಾಗ ಅವರ ವರ್ತನೆ ಬದಲಾಗಿ ಓದಿನಲ್ಲೂ ಗಮನ ಕೊಡಲಾಗದೆ ಉತ್ತಮ ಪ್ರಜೆಯಾಗಿ ಬೆಳೆಯುವುದಾದರೂ ಹೇಗೆ?  ಈಗಲೂ ಹಳ್ಳಿಗಳಲ್ಲಿ ಸರಕಾರಿ ಶಾಲೆ ಬಿಟ್ಟರೆ ಬೇರೆ ಶಾಲೆಗಳಿಲ್ಲ.  ಅಲ್ಲಿ ಆಚಾರ್ಯ ದೇವೋ ಭವ ಅನ್ನುವ ಮಾತು ಅಕ್ಷರಶಃ ಎದ್ದು ಕಾಣುತ್ತದೆ.  ಅಲ್ಲಿ ಕಲಿಸುವ ಮಾಸ್ತರು, ಅಕ್ಕೋರು(ಟೀಚರ್) ಎಲ್ಲರಿಗೂ ಅಚ್ಚು ಮೆಚ್ಚು.  ತುಂಬಾ ಸಲುಗೆಯಿಂದ ತಮ್ಮ ಮನೆ ಊರಿನ ಸಮಾಚಾರ ಎಲ್ಲ ಹೇಳಿಕೊಂಡು ನಲಿಯುವ ವಾತಾವರಣ ಅಲ್ಲಿಯ ಶಾಲೆಗಳ ಮಕ್ಕಳಲ್ಲಿ.  ಊರಿನಲ್ಲಿ ಆಗುವ ವಿಶೇಷ ಸಮಾರಂಭಗಳಲ್ಲಿ ಒಮ್ಮೊಮ್ಮೆ ಶಾಲೆಗೆ ರಜಾ ಕೊಟ್ಟು ತಾವೂ ಭಾಗವಹಿಸುವ ಪರಿ ಕಲಿಸುವ ವರ್ಗದವರಲ್ಲಿ ಕಾಣಬಹುದು.  ಅವರ ಮನೆಗಳು ದೂರವಿದ್ದಲ್ಲಿ ಪ್ರತಿ ನಿತ್ಯ ಮಧ್ಯಾಹ್ನದ ಊಟ  ವ್ಯವಸ್ಥೆ ಊರಿನ ಒಬ್ಬರ ಮನೆಯಲ್ಲಿ ಮಾಡುತ್ತಿದ್ದರು.  ಇದು ಈಗಲೂ ಇದೆ.  ಹಳ್ಳಿಯ ಜನರೂ ಅಷ್ಟೆ ತಮ್ಮ ಸಮಸ್ಯೆ ಮಕ್ಕಳ ಓದಿನ ಕುರಿತು ಸಾಕಷ್ಟು ಚರ್ಚೆ, ಶಾಲೆಯಲ್ಲಿ ಏನಾದರೂ ಕೊರತೆ ಇದ್ದರೆ ತಮ್ಮ ಕೈಲಾದ ಸಹಾಯ ಮಾಡುವುದು ಹೀಗೆ ಒಬ್ಬರನ್ನೊಬ್ಬರು ಅರಿತು ಒಂದು ರೀತಿ ಕುಟುಂಬದ ವಾತಾವರಣ ಅಲ್ಲಿ ಸೃಷ್ಟಿಯಾಗಿರುತ್ತದೆ.  
 
ತದನಂತರದ ದಿನಗಳಲ್ಲಿ ನಾನು ಓದಿದ್ದ ಶಾಲೆಯನ್ನು  ಊರಿನ ಮುಖಂಡರು ಸ್ಥಳೀಯ ಅಧಿಕಾರಿಗಳ ಮನವೊಲಿಸಿ ಮತ್ತೆ ಆ ಶಾಲೆಯಲ್ಲಿ ಏಳನೇ ತರಗತಿಯವರೆಗೆ ಶುರುವಾದರೂ ನಾವು ಮಾತ್ರ ಆ ಶಾಲೆಯಲ್ಲಿ ಓದಲೇ ಇಲ್ಲ.  ಈಗೊಂದು ನಾಲ್ಕಾರು ವರ್ಷಗಳ ಹಿಂದೆ ಈಗಿರುವ ಸರಕಾರಿ ಸೌಲತ್ತುಗಳನ್ನೆಲ್ಲ ಉಪಯೋಗಿಸಿಕೊಂಡು ಹೊಸದಾಗಿ ಬಂದ ಮಾಸ್ತರೊಬ್ಬರು ಆ ಶಾಲೆಯನ್ನು ಸುತ್ತಮುತ್ತಲಿನ ಶಾಲೆಗಳಿಗೆ ಮಾದರಿ ಶಾಲೆಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು.   ಕಟ್ಟಡ ನವೀಕರಣ,  ಟೀಚರಿಗೊಂದು ಶಾಲೆಯ ಪಕ್ಕದಲ್ಲಿ ಮನೆ, ಭಾವಿ, ಸುತ್ತ ಕೈತೋಟ ಎಲ್ಲಾ ನಿರ್ಮಾಣಗೊಂಡವು.  ಆಗಾಗ ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯುತ್ತಿದ್ದವು.  ಮಕ್ಕಳ ಸಂಖ್ಯೆಯೂ ಜಾಸ್ತಿ ಆಗುತ್ತ ಬಂದಿತು.  ಇದು ಆ ದೇವರಿಗೂ ಇಷ್ಟ ಆಗಲಿಲ್ಲವೊ ಏನೊ! ಒಂದಿನ ಆಕ್ಸಿಡೆಂಟಲ್ಲಿ ಮಾಸ್ತರು ತೀರಿಕೊಂಡರು ಎಂಬ ಸುದ್ದಿ ಬಂದಾಗ ಮಕ್ಕಳೇನು ಊರಿಗೆ ಊರೇ ಕಣ್ಣೀರಿಟ್ಟಿತು.    ಇದನ್ನು ಬರೆಯಲು ಕಾರಣ ಇವರು ಪ್ರತಿನಿತ್ಯ ನನ್ನಪ್ಪನ ಮನೆಯಲ್ಲಿ ಮಧ್ಯಾಹ್ನದ ಊಟಕ್ಕೆ ಬರುತ್ತಿದ್ದರು.  ಮನೆಯ ಒಬ್ಬ ಸದಸ್ಯರಂತಿದ್ದ ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
 
ಒಂದು ಶಾಲೆಗೆ ಮಕ್ಕಳು ಬಂದು ಓದಲು ಮೊದಲು ಶಾಲೆಯ ವಾತಾವರಣ ಸರಿಯಾಗಿರಬೇಕು.  ಸ್ವಚ್ಛತೆ, ಕಲಿಸುವ ವರ್ಗ, ವ್ಯವಸ್ಥೆ ಎಲ್ಲವೂ ಸರಿಯಾಗಿದ್ದಲ್ಲಿ ಆ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ಸೇರಿಸುವ ಮನಸ್ಸು ಮಾಡುತ್ತಾರೆ.  ಇಂದಿಗೂ ನಾನು ಕಲಿತ ಹೈಸ್ಕೂಲ್ ಸರಕಾರಿ ಶಾಲೆಯಾದರೂ ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ನನಗೆ ಹೆಮ್ಮೆಯ ವಿಷಯ.   ಹಳೆಯ ಕಟ್ಟಡ ದುರಸ್ತಿ ಮಾಡಲೆಂದು ಸ್ಥಳೀಯರೊಂದಿಗೆ ನಾವು ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಿದ್ದೇವೆ.  ಹಾಗೂ ಸ್ಥಳೀಯ ಜನರ ಸಹಕಾರದೊಂದಿಗೆ ನಿವೃತ್ತ ಶಿಕ್ಷಕರು ಎಲ್ಲ ಸೇರಿ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಸಹಿತ ಈಗ ಐದು ವರ್ಷಗಳಿಂದ  ಶುರು ಮಾಡಿದ್ದಾರೆ. ಅದೂ ಕೂಡ ಚೆನ್ನಾಗಿ ನಡೆಯುತ್ತಿದೆ.  ಇಲ್ಲಿ ಕೂಡಾ ನಮ್ಮ ಸಹ ಭಾಗಿತ್ವವಿದೆ.  
 
ಆದರೆ ಇದೆ ವಾತಾವರಣ ಸಿಟಿಗಳಲ್ಲಿ ನಿರ್ಮಾಣವಾಗುತ್ತಿಲ್ಲ.  ಕಾರಣ ಇಲ್ಲಿ ಸಾಕಷ್ಟು ಇಂಗ್ಲೀಷ್ ಮೀಡಿಯಂ ಶಾಲೆಳು ತಲೆಯೆತ್ತಿವೆ.  ಸರಕಾರಿ ಶಾಲೆಗಳಲ್ಲಿ ಸರಿಯಾದ ಸೌಲತ್ತುಗಳಿಲ್ಲವೆಂಬ ದೂರು.  ಹೀಗೆ ಮುಂದುವರೆಯುತ್ತ ಹೋದರೆ ಒಂದಿನ ಕನ್ನಡ ಸರ್ಕಾರಿ ಶಾಲೆಗಳೆ ಇಲ್ಲದಂತಾಗಬಹುದೆ??
 
13-10-2017. 10.27pm
 
 

Comments

Submitted by Priyanka.B Mon, 11/27/2017 - 14:52

ನಿಮ್ಮದು ಒಂದು ಉತ್ತಮ ಬರಹ ಗೆಳತಿ. ಕನ್ನಡ ಶಾಲೆಗಳನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು.

Submitted by Sangeeta kalmane Mon, 12/11/2017 - 16:28

In reply to by Priyanka.B

ನಿಜ. ಈ ನಿಟ್ಟಿನಲ್ಲಿ ಜನಾಂದೋಲನ ಆಗಬೇಕೆನೊ ಅನಿಸುತ್ತದೆ.

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.