ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೧)

ಅನ್ನದಾತನಿಗೆ ಅನಾಥ ಭಾವ ಕಾಡುವುದೇಕೆ? (ಭಾಗ-೧)

ಅನುಕಂಪದ ಮಾತುಗಳಿಂದ, ದೂಷಣೆಗಳಿಂದ, ಸರಕಾರದ ಪ್ಯಾಕೇಜುಗಳಿಂದ, ಬರಹಗಾರ ಬರವಣಿಗೆಗಳಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನಿಲ್ಲಿಸಲಾರ. ರೈತರ ಆತ್ಮಹತ್ಯೆ ತಡೆಯಲು ಬೇಕಾಗಿದೆ, ಅವನ ಕುಟುಂಬಕ್ಕೆ ಜೀವನ ಭದ್ರತೆ. ಮುಂದಿನ ದಿನಗಳಲ್ಲಿ ಹತಾಶಾ ಮನೋಭಾವನೆಯಿಂದ ರೈತರ ಆತ್ಮಹತ್ಯೆಗಳು ಗಣನೀಯವಾಗಿ ಹೆಚ್ಚಿ ಸಾಮಾಜಿಕ ಆಶಾಂತಿ ತಲೆದೋರಿದರೂ ಅಚ್ಚರಿ ಇಲ್ಲ. ಹಿಂದಿನ ವರ್ಷಗಳಲ್ಲಿ ಈಗಾಗಲೇ ಹಲವರು ಆತ್ಮಹತ್ಯೆಯ ಮೂಲಕ ತಮ್ಮ ಜೀವನದ ಜಿಗುಪ್ಸೆಯನ್ನು ತೋರ್ಪಡಿಸಿದ್ದರೆ ಅದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಜನ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ!  

ರೈತ ಎಂಬ ಬಡತನ ಸೂಚಕ ಪದದ ಬದಲು, ಅನ್ನದಾತ ಎಂಬ ಹೊಸ ಹೆಸರು ಸೂಚಿಸಲ್ಪಟ್ಟು ಈಗ ಅದು ರೂಢಿಯ ಪದವಾಗಿದೆ. ಇಷ್ಟೊಂದು ಸುಂದರವಾದ ಹೆಸರು, ಅದಕ್ಕೆ ಅದೆಷ್ಟೋ ಅರ್ಥಗಳು. ಕೇಳುಗರಿಗೆ ಬಹಳ ಸೌಮ್ಯವಾದ ಪದ. ಹೊಸ ನಾಮಕರಣವಾದರೂ ಅನ್ನದಾತನೆನಿಸಿಕೊಂಡವನು ಅದೇ ರೈತನಾಗಿಯೇ (ಬಡ) ಉಳಿದುಕೊಂಡ. ಅನ್ನದಾತ ಎಂಬ ಪದ ಇರಲಿ, ರೈತ ಪದ ಇರಲಿ ಇವೆಲ್ಲವೂ ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸುವಂತದ್ದೇ ಹೊರತು ಅವನ ಸ್ಥಿತಿ ಗತಿ ಸುಧಾರಣೆಗೆ ನೆರವಾಗುವಂತದ್ದಲ್ಲ. ಅನ್ನಧಾತ ಸುಖೀ ಭವಃ, ಅನ್ನದಾತನೇ ದೇಶದ ಬೆನ್ನೆಲುಬು, ಅನ್ನದಾತನೇ ಭಾರತದಲ್ಲಿ ಅತ್ಯಧಿಕ ಪ್ರಮಾಣದ ಉದ್ಯೋಗದಾತ ಎಂಬುದಾಗಿ ಹೇಳಲಾಗುತ್ತಿದ್ದರೂ ಅವನ ಜೀವನ ಭದ್ರತೆ ಏನು ಎಂಬುದು ಅವನ ಆತ್ಮಹತ್ಯೆ ಪ್ರಕರಣಗಳಲ್ಲಿ ತಿಳಿಯುತ್ತದೆ.

ಮನುಷ್ಯನ ಮನಶಾಸ್ತ್ರದಂತೆ ಅವನು ತನ್ನನ್ನು ತಾನೇ ಕೊಂದು ಕೊಳ್ಳಲು ಇಚ್ಚೆಪಡಲಾರ. ಮನುಷ್ಯ ಸಾವಿಗೆ ಅಂಜುತ್ತಾನೆ. ಸಾವು ಸಂಭವಿಸಬಹುದಾದ ಯಾವುದೇ ಅಚಾತುರ್ಯವನ್ನೂ ಅವನು ಮಾಡಲು ಬಯಸಲಾರ. ನೇಣಿನ ಶಿಕ್ಷೆಗೆ ಗುರಿಯಾಗಿ ಸಾವಿಗೆ ಶರಣಾಗುವಾಗಲೂ ಕೊನೇ ಕ್ಷಣದಲ್ಲಿ ಏನಾದರೂ ಅನುಕಂಪದ ಆಧಾರದ ಮೇಲೆ ಬದುಕಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಹತಾಶಾ ಭಾವನೆ, ಇನ್ನೇನು ಯಾವುದೇ ರೀತಿಯಲ್ಲಿ ಸರಿಪಡಿಸುವುದು ಕಷ್ಟ ಎಂಬ ಸಂಧಿಗ್ಧತೆ ಉಂಟಾದಾಗ ಮಾತ್ರ ನಿರ್ವಾಹವಿಲ್ಲದೆ ಸಾವಿನಲ್ಲಾದರೂ ಅದು ಕೊನೆಗಾಣಲಿ ಎಂದು ಆತ್ಮಹತ್ಯೆಗೆ ಶರಣಾಗುತ್ತಾನೆ. ಆತ್ಮಹತ್ಯೆಗೆ ಮನಸ್ಸು ಮಾಡಿದವನಲ್ಲಿ ಬದುಕಬೇಕು ಎಂಬ ಆಶೆ ಅತೀ ಹೆಚ್ಚು ಇರುತ್ತದೆ. ಕೊನೇ ಕ್ಷಣದವರೆಗೂ ಆತ ಪರಿಹಾರ ಏನಾದರೂ ದೊರೆಯುತ್ತದೆಯೇ ಎಂಬ ನಿರೀಕ್ಷೆಯಲ್ಲಿರುತ್ತಾನೆ. ಅದನ್ನು ಗೌಪ್ಯವಾಗಿ ಇಟ್ಟಿದ್ದರೂ ಅದನ್ನು ಸೂಚ್ಯವಾಗಿ ತನ್ನ ಮಿತ್ರರ ಸಂಗಡ ಹೊರ ಹಾಕಿರುತ್ತಾನೆ.

ಇಂಥಃ ಮನೋಸ್ಥಿತಿ ಉಳ್ಳ ಮನುಷ್ಯ ಆತ್ಮಹತ್ಯೆಗೆ ಶರಣಾಗುವುದೆಂದರೆ ಅವನ ಸ್ಥಿತಿ ಗತಿ ಯಾವ ಮಟ್ಟಕ್ಕೆ ಮುಟ್ಟಿರಬಹುದು ಎಂದು ಯೋಚಿಸಲೇ ಬೇಕು. ಸಾಮಾನ್ಯವಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಮನೋ ಸಾಧ್ಯತೆ ತುಂಬಾ ಕಡಿಮೆ. ಅವನಿಗೆ ತನ್ನ ಹೊಟ್ಟೆ ಹೊರೆಯಲು ಮತ್ತು ತನ್ನ ಕುಟುಂಬದವರ ಹೊಟ್ಟೆ ಹೊರೆಸಿಕೊಳ್ಳಲು ಇರುವ ಆಧಾರ ಅವನ ಭೂಮಿ. ಅದರಲ್ಲಿ  ಸಾಮಾನ್ಯವಾಗಿ ತನ್ನ ಕನಿಷ್ಟ ಅವಶ್ಯಕತೆಗೆ ಬೇಕಾದ ಧಾನ್ಯ, ಮುಂತಾದ ಅಗತ್ಯ ಸಾಮಾಗ್ರಿಗಳನ್ನು  ಬೆಳೆಯುತ್ತಾನೆ. ಊಟ ಮಾಡುವ ಬದಲಿಗೆ ಗಂಜಿ ಕುಡಿದಾದರೂ ಬದುಕುವಷ್ಟು ಸಮರ್ಥನಿದ್ದಾನೆ. ಆದರೂ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದರೆ ಅವನ ಆದಾಯ ಮೂಲಕ್ಕಿಂತ  ಆಕಾಂಕ್ಷೆ ದೊಡ್ದದಾಗಿರಬೇಕು. ಆಕಾಂಕ್ಷೆಯ ಈಡೇರಿಕೆಯಲ್ಲಿ ಸೋತು ಕೈಲಾಗದೇ ಅವನು ಆತ್ಮಹತ್ಯೆಗೆ ಶರಣಾಗಿರಬೇಕು. ಸಮಾಜದ ಇತರ ವರ್ಗ ತನ್ನ ಆಶೆ ಆಕಾಂಕ್ಷೆಗಳನ್ನು ನಿರಾಯಾಸವಾಗಿ ಪಡೆದುಕೊಳ್ಳುತ್ತಿರುವಾಗ ರೈತ ಮಾತ್ರ ಹರ ಸಾಹಸ ಪಟ್ಟರೂ ಅದನ್ನು  ಪಡೆದುಕೊಳ್ಳಲು ಆಶಕ್ತನಿರುತ್ತಾನೆ.

ಬಹುತೇಕ ಆತ್ಮಹತ್ಯೆ ಮಾಡಿಕೊಂಡ ರೈತರುಗಳ ಕಾರಣಗಳನ್ನು ನೋಡಿದರೆ ಅವರು ಸಾಲದ ಹೊರೆಯಿಂದ ಹೊರಬರಲಾರದೆ ಸತ್ತಿರುವುದು ಕಂಡು ಬರುತ್ತದೆ. ಬೆಳೆ ಬೆಳೆಸಲು, ಕುಟುಂಬ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಸಾಲ ಮಾಡುತ್ತಾನೆ.

ಕೃಷಿಕ ಯಾಕೆ ಸಾಲ ಮಾಡಬೇಕು?: ಸಾಲ ಯಾಕೆ ಮಾಡಬೇಕು ಎಂಬುದು ಕೆಲವು ಪ್ರಜ್ಞಾವಂತರ ಪ್ರಶ್ನೆ. ಅಷ್ಟೇ ಅಲ್ಲ. ಅವನು ಕೃಷಿಕನಾದರೆ ಕೃಷಿಗೆ ಬ್ಯಾಂಕುಗಳಾದ ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರೀ ಸಂಘಗಳಿಂದ ಬೇಕಾದಷ್ಟು ಸಾಲ ಸಿಗುತ್ತದೆ. ಈ ಸಾಲಗಳನ್ನು ಒತ್ತಾಯದಲ್ಲಿ ವಸೂಲಿ ಮಾಡಬಾರದು ಎಂದಿದೆ. ಹೀಗಿರುವಾಗ ಇವನು ಖಾಸಗಿ ಗಿರವಿದಾರರಲ್ಲಿ ಯಾಕಾಗಿ ಸಾಲ ಮಾಡಬೇಕು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಮಾತು. ಕೃಷಿಕ್ಷೇತ್ರವನ್ನು ಹೊರಗಿನಿಂದ ನೋಡಿದವರು, ಕೃಷಿಯೊಂದೇ ಅಲ್ಲದೆ ಬೇರೆ ಆದಾಯ ಮೂಲ ಹೊಂದಿದವರು ಈ ಮಾತನ್ನು ಹೇಳುವುದು ಸಾಮಾನ್ಯ. ಇವರಿಗೂ ಪೂರ್ಣಾವಧಿ ಕೃಷಿಕನಿಗೂ ವ್ಯತ್ಯಾಸ ಇರುತ್ತದೆ. ಪೂರ್ಣಾವಧಿ ಕೃಷಿಕನ ಒಟ್ಟಾರೆ ಆದಾಯದಲ್ಲಿ ಗರಿಷ್ಟ ಲಾಭಾಂಶ ಕೇವಲ ೨೫% ಮಾತ್ರ. ಇದು ಪ್ರಾಕೃತಿಕ ಅನುಕೂಲಗಳು ಕೂಡಿ, ಎಲ್ಲವೂ ಸರಿಯಾಗಿ ಇದ್ದರೆ ಮಾತ್ರ. ಉಳಿದವು ಬೆಳೆ ಬೆಳೆಸುವ ಖರ್ಚಿಗೆ ವ್ಯಯವಾಗುತ್ತದೆ. ಈ ೨೫ % ಲಾಭದಲ್ಲಿ ಅವನು ಸಮಾಜದ ಇತರ ಜನರಂತೆ ಬದುಕು ಸಾಗಿಸುವುದು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ.

ಒಬ್ಬ ಕೆಲಸದ ಆಳು ದಿನಕ್ಕೆ ೩೦೦ ರೂ. ಸಂಬಳ ಪಡೆದರೆ ಅವನ ವಾರ್ಷಿಕ ಆದಾಯ ೧ ಲಕ್ಷ ದಾಟುತ್ತದೆ. ಇದರಲ್ಲಿ ಖರ್ಚು ಇರುವುದು ಅಲ್ಪ. ಮನೆಯಲ್ಲಿ ಒಬ್ಬನೇ ದುಡಿಯುವುದಾದರೆ ಇದು ಕಡಿಮೆಯಾಗಬಹುದಾದರೂ, ಅವನಿಗೆ ಇರುವ ಸವಲತ್ತುಗಳೊಂದಿಗೆ ತುಲನೆ ಮಾಡಿದಲ್ಲಿ ಅದೂ ಕಷ್ಟವಾಗಲಾರು. ಕೃಷಿಕ ಒಂದು ಲಕ್ಷ ಲಾಭ ಮಾಡಿಕೊಳ್ಳಬೇಕಾದರೆ ಎಷ್ಟು ಕಷ್ಟ ಇದೆ ಎಂಬುದು ಕೃಷಿ ಮಾಡಿದವನಿಗೆ ಮಾತ್ರ ಗೊತ್ತಾದೀತು.

ಕೃಷಿಕ  ಮತ್ತು ಸಾಲ ವ್ಯವಸ್ಥೆ: ಕೃಷಿಕನಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ, ಸಾಲ ಮನ್ನಾ ಆಗುತ್ತದೆ. ಕೃಷಿಗೆ ಸಾಕಷ್ಟು ಸಾಲ ಕೊಡಲಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ. ಕೃಷಿಗೆ ಕಡಿಮೆ ಬಡ್ಡಿ ದರದಲ್ಲಿ  ಸಾಲ ಸಿಗುವುದಿಲ್ಲ. ಬರೇ ಬೆಳೆ ಸಾಲಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ. ಇದು ಎಕ್ರೆಗೆ ೨೫,೦೦೦ ದಿಂದ ೫೦,೦೦೦ ತನಕ ಮಾತ್ರ. ಬೆಳೆ ಸಾಲ ಹೊರತಾಗಿ ಉಳಿದೆಲ್ಲಾ ಅಭಿವೃದ್ದಿ ಸಾಲಗಳಿಗೆ ೧೨% ಬಡ್ಡಿ ಇದೆ. ಕೇವಲ ೧೫-೨೦ % ಲಾಭಾಂಶ ಇರುವ ಕೃಷಿ ಉತ್ಪಾದನೆಗೆ ೧೨ % ಬಡ್ಡಿ ಕಡಿಮೆ ಬಡ್ಡಿಯೇನಲ್ಲ. ಇಷ್ಟಕ್ಕೂ  ಬ್ಯಾಂಕುಗಳೂ ಸಹ ಕೃಷಿಕ ಅಥವಾ ಅನ್ನದಾತ ಎಂದ ಮಾತ್ರಕ್ಕೆ ಅವನ ಪೂರ್ವಾಪರ ನೋಡಿಕೊಳ್ಳದೇ ಸಾಲ ಕೊಡುವುದಿಲ್ಲ. ಅವನ  ಮೂಲ ಬಂಡವಾಳ ಎಷ್ಟಿದೆ, ಅದನ್ನು ನೊಡಿಕೊಂಡು ಸಾಲ ನೀಡುತ್ತವೆ.  ಸಹಕಾರೀ ಬ್ಯಾಂಕುಗಳು ಸಾಲ ನೀಡುತ್ತವೆ. ಅದಕ್ಕೆ ಅದರದ್ದೇ ಆದ ಇತಿ ಮಿತಿಗಳಿವೆ. ಸಹಕಾರಿ ಸಂಘದ ಒಬ್ಬ ಸದಸ್ಯನಿಗೆ ಎಷ್ಟು ಸಾಲ ನೀಡಬಹುದು ಎಂಬುದನ್ನು ಅಂದಾಜು ಮಾಡಿಯೇ ಸಾಲ ಕೊಡಲಾಗುತ್ತದೆ. ಸ್ಥಳೀಯ ಸಹಕಾರೀ ಸಂಘದ ಸಾಲ ಸೌಲಭ್ಯಗಳು ನೈಜ ಕೃಷಿಕನಿಗೆ ಅನುಕೂಲಕರವಾಗಿ ಇಲ್ಲ.

ಹೆಚ್ಚಿನ ಕೃಷಿಕನ ಹಣಕಾಸು ಅಗತ್ಯಗಳಿಗೆ  ಬ್ಯಾಂಕುಗಳು ಸ್ಪಂದಿಸುವುದಕ್ಕಿಂತ ಹೆಚ್ಚಾಗಿ ಖಾಸಗಿ ಲೇವಾದೇವಿದಾರರು ಸ್ಪಂದಿಸುತ್ತಾರೆ. ಕಾರಣ ರೈತನಿಗೆ ಕಷ್ಟಗಳು ಯಾವಾಗಲೂ ಬರಬಹುದು. ಅದಕ್ಕೆ ರಾತ್ರಿ ಹಗಲು ರಜೆ ಇತ್ಯಾದಿ ಇಲ್ಲ. ಅನಾರೋಗ್ಯ ಅಥವಾ ಇನ್ನಿತರ ಅಸೌಖ್ಯಗಳು ಬ್ಯಾಂಕಿನ ಸಾಲ ಮಾಂಜುರಾತಿಯನ್ನು ನಂಬಿ ಬರುವುದೂ ಇಲ್ಲ. ಬೆಳೆದು ನಿಂತ ಫಸಲು ಇರುತ್ತದೆ, ಕೊಳವೆ ಬಾವಿ ಒಮ್ಮೆಲೇ ಬತ್ತುತ್ತದೆ, ರಾತ್ರಿ ಬೆಳಗಾಗುವುದರೊಳಗೆ ಮತ್ತೊಂದು ನೀರಿನ ವ್ಯವಸ್ಥೆ ಆಗಬೇಕು. ಆಗ ಬ್ಯಾಂಕುಗಳಿಗೆ ಹೋಗಿ ಸಾಲ ಪಡೆದು ಮತ್ತೊಂದು ಕೊಳವೆ ಬಾವಿ ತೋಡುವಷ್ಟರಲ್ಲಿ ಹೊಲದ ಬೆಳೆ ಒಣಗಿ ಹೋಗುತ್ತದೆ. ಆಗ ರಾತ್ರಿ, ಹಗಲು ರಜೆ ಮುಂತಾದವುಗಳನ್ನೂ ಮೀರಿ ಹಣಕಾಸು ನೀಡುವವರು ಖಾಸಗಿ ಲೇವಾದೇವಿದಾರರು. ಅದಕ್ಕಾಗಿಯೇ ಗ್ರಾಮೀಣ ಪ್ರದೇಶದ ಜನ ಆ ಹಣಕಾಸಿನ ಮೂಲವನ್ನೇ ಆಶ್ರಯಿಸುತ್ತಾರೆ.  

ಬ್ಯಾಂಕುಗಳು, ಸಹಕಾರೀ ಬ್ಯಾಂಕುಗಳು ರೈತನ ಹತ್ತಿರಕ್ಕೆ ತಲುಪಿದ್ದು ಸಾಲದು. ರೈತನಿಗೆ ಹಣಕಾಸು ಯಾವಾಗ ಬೇಕು ಆಗ ಬಳಸಿಕೊಳ್ಳುವಂತೆ ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬ ಯೋಜನೆಯನ್ನು ಮಾಡಲಾಗಿದೆಯದರೂ, ಅದರಲ್ಲಿ ನಿಗದಿಪಡಿಸಲಾದ ಮೊತ್ತ ಯಾವುದಕ್ಕೂ ಸಾಲದು. ಎಕ್ರೆಯೊಂದರ ಗರಿಷ್ಟ ೫೦,೦೦೦ ಮೊತ್ತ ತೀರಾ ಕಡಿಮೆ ಮೊತ್ತವಾಗುತ್ತದೆ. ಇದನ್ನು  ಕನಿಷ್ಟ ೧ ಲಕ್ಷದ ತನಕವಾದರೂ ಏರಿಕೆ ಮಾಡುವುದು ಸ್ವಲ್ಪ ಮಟ್ಟಿಗೆ ಅನುಕೂಲವಾದೀತು.

(ಮುಂದುವರೆಯುತ್ತದೆ)

ಮಾಹಿತಿ ಸಹಕಾರ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ