ಅಪರೂಪದ ಶಿವಪಾರ್ವತಿ ವಿಗ್ರಹ

ಅಪರೂಪದ ಶಿವಪಾರ್ವತಿ ವಿಗ್ರಹ

ಬರಹ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಅನೇಕ ಪಾಳೇಗಾರರು ಆಳಿರುವ ಪ್ರದೇಶವಾಗಿದೆ. ತಾಲೂಕಿನಲ್ಲಿರುವ ಗುಡೇಕೋಟೆ ಗ್ರಾಮ ಪಾಳೆಗಾರರ ಕೋಟೆ-ಕೊತ್ತಲಗಳಿಂದ ಕಂಗೊಳಿಸುತ್ತದೆ. ಇಲ್ಲಿಯೇ ದಕ್ಷಿಣ ಭಾರತದಲ್ಲಿಯೇ ಅಪರೂಪದ್ದೆನಿಸುವ ಸುಂದರ ಶಿವಪಾರ್ವತಿಯ ವಿಗ್ರಹವಿದೆ. ಶಿವಪಾರ್ವತಿಯ ವಿಗ್ರಹವಿರುವ ದೇವಸ್ಥಾನವಿರುವುದೂ ವಿಶೇಷವೇ! ವಿಗ್ರಹವು ಏಕಶಿಲಾ ವಿಗ್ರಹವಾಗಿದ್ದು, ಕಪ್ಪುಶಿಲೆಯಿಂದ ಕಂಡರಿಸಲ್ಪಟ್ಟಿದೆ. ಹೊರಗಡೆ ಸಾಮಾನ್ಯ ದೇವಸ್ಥಾನದಂತೆ ಕಂಡರೂ ಗರ್ಭಗುಡಿಯಲ್ಲಿನ ಶಿವಪಾರ್ವತಿ ವಿಗ್ರಹದಿಂದ ಈ ದೇವಸ್ಥಾನಕ್ಕೆ ಮಹತ್ವ ಬಂದಿದೆ. ಇಲ್ಲಿ ಶಿವನು ಪಾರ್ವತಿಯನ್ನು ತೊಡೆಯ ಮೇಲೆ ಕೂಡಿಸಿಕೊಂಡಿರುವುದು ಅಪರೂಪದ್ದಾಗಿದೆ. ಶಿವನು ಎಡಕೈಯಲ್ಲಿ ತ್ರಿಶೂಲವನ್ನು ಹಿಡಿದಿದ್ದು, ತ್ರಿಶೂಲದ ಮೇಲ್ಭಾಗದಲ್ಲಿ ಮಾನವನ ರುಂಡವನ್ನು ಕೆತ್ತನೆ ಮಾಡಲಾಗಿದೆ. ಶಿವನು ಬಲಗೈಯಲ್ಲಿ ಡಮರುಗವನ್ನು ಹಿಡಿದಿದ್ದಾನೆ. ಪಾರ್ವತಿಯ ತೋಳು ಶಿವನನ್ನು ಬಳಸಿದೆ. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಶಿವನ ತಲೆಯಲ್ಲಿ ಜಟೆಯಿಲ್ಲ, ಗಂಗೆಯಿಲ್ಲ, ಅರ್ಧಚಂದಿರನೂ ಇಲ್ಲ. ಶಿವಪಾರ್ವತಿಯರಿಬ್ಬರೂ ಕಿರೀಟವನ್ನು ಧರಿಸಿರುವುದು ಈ ಮೂರ್ತಿಯ ಮತ್ತೊಂದು ವಿಶೇಷವಾಗಿದೆ. ಈ ರೀತಿಯ ಶಿವಪಾರ್ವತಿಯ ಮೂರ್ತಿ ಎಲ್ಲಿಯೂ ನೋಡಸಿಗುವುದಿಲ್ಲವೆಂಬುದು ಗ್ರಾಮಸ್ಥರ ಹೇಳಿಕೆ. ಶಿವನ ಹಣೆಗಣ್ಣನ್ನು ವಿಶೇಷವಾಗಿ ಕೆತ್ತನೆ ಮಾಡಲಾಗಿದೆ. ಕಿರೀಟ, ಮೂರ್ತಿಯ ಮುಖ, ತಲೆಕೂದಲು, ಒಟ್ಟಾರೆ ಇಡೀ ಆಕೃತಿ ಹೊಯ್ಸಳರ ಕಾಲದ ಕೆತ್ತನೆಯ ಶೈಲಿಯನ್ನು ನೆನಪಿಸುತ್ತದೆ. ಗರ್ಭಗುಡಿಯ ಹೊರಭಾಗದಲ್ಲಿ ಎಡಗಡೆ ಗಣಪನ ವಿಗ್ರಹ, ಬಲಗಡೆ ದುರ್ಗೆಯ ವಿಗ್ರಹಗಳಿವೆ. ಎದುರಿಗೆ ನಂದಿಯ ವಿಗ್ರಹವಿದೆ.

ಗುಡೇಕೋಟೆ ಗ್ರಾಮಸ್ಥರು ಕಳೆದ ೩೬ ವರ್ಷಗಳಿಂದಲೂ ನಿರಂತರವಾಗಿ ಶಿವರಾತ್ರಿಯಂದು ಈ ವಿಗ್ರಹಕ್ಕೆ ರುದ್ರಾಭಿಷೇಕ ನಡೆಸುತ್ತ ಬಂದಿದ್ದಾರೆ. ವಿಶೇಷ ಪೂಜೆಯನ್ನು ನಡೆಸುತ್ತಾರೆ. ಶಿವರಾತ್ರಿಯಂದು ರಾತ್ರಿ ೧೦ಕ್ಕೆ ನಂದಿಧ್ವಜ, ಸಮಾಳ, ವಿವಿಧ ವಾದ್ಯಗಳೊಂದಿಗೆ ಗೊಂಬೆ ಕುಣಿತವೂ ಇರುತ್ತದೆ. ಶಿವರಾತ್ರಿಯ ಮರುದಿನ ಬೆಳಿಗಿನ ಜಾವ ೫ಕ್ಕೆ ಮೆರವಣಿಗೆಯಲ್ಲಿ ಗಂಗೆಯನ್ನು ತರುತ್ತಾರೆ. ನಂತರ ಶಿವಪಾರ್ವತಿಯರಿಗೆ ಮಹಾರುದ್ರಾಭಿಷೇಕ ನಡೆಸುತ್ತಾರೆ. ನಂತರ ಭಕ್ತರಿಗೆ ಸೇವಾದರ್ಶನ, ಪ್ರಸಾದ ವಿನಿಯೋಗ ನಡೆಸಲಾಗುತ್ತದೆ. ಸಂಶೋಧಕರು ವಿಗ್ರಹದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬಹುದಾಗಿದೆ.
-ಸಿದ್ಧರಾಮ ಹಿರೇಮಠ.