ಅಪಾಯದ ಅಂಚಿನಲ್ಲಿ ಹುಲಿ

ಅಪಾಯದ ಅಂಚಿನಲ್ಲಿ ಹುಲಿ

ಮಾರ್ಜಾಲ ಸಂತತಿಯಲ್ಲೇ ಅತ್ಯಂತ ದೊಡ್ಡ ಪ್ರಾಣಿ ಎಂದರೆ ಹುಲಿ. ಇದು ನಿಜಕ್ಕೂ ಅತ್ಯಂತ ಗಾಂಭೀರ್ಯವುಳ್ಳ ಪ್ರಾಣಿ. ಕಪ್ಪುಕಪ್ಪಾದ ಪಟ್ಟಿಗಳ ಹಿಂಭಾಗದಲ್ಲಿ ಹಳದಿ ಬಣ್ಣ ನೋಡಲು ಅದೆಂಥ ಸೊಗಸು ! ಹುಲಿ ತಾನಾಗಿಯೇ ಯಾರ ಮೇಲೂ ದಾಳಿ ಮಾಡುವುದಿಲ್ಲ. ಇದು ತನ್ನ ಆಹಾರಕ್ಕಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತದೆ. ಬೇಟೆಯಾಡುವುದರಲ್ಲಿ ಅತ್ಯಂತ ಚಾಣಾಕ್ಷ ಈ ಹುಲಿ ! ಹುಲಿ ನಿಜಕ್ಕೂ ತುಂಬಾ ಬುದ್ಧಿವಂತ ಪ್ರಾಣಿ. ದೊಡ್ಡ ಪ್ರಾಣಿಗಳಾದ ಆನೆ, ಕಾಡೆಮ್ಮೆ, ಕರಡಿಗಳಂಥ ಪ್ರಾಣಿಗಳಿಂದ ದೂರವಿರುತ್ತದೆ. ಆದರೆ ದನ, ಕುದುರೆ, ಕತ್ತೆ, ಕುರಿ, ಮೇಕೆ, ಜಿಂಕೆ ಮುಂತಾದ ಪ್ರಾಣಿಗಳನ್ನು ಸುಲಭವಾಗಿ ಬೇಟೆಯಾಡಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತದೆ. ಕೆಲವೊಮ್ಮೆ ಎಲ್ಲೂ ಆಹಾರ ಸಿಗದೆ ಇದ್ದಾಗ ಮಾತ್ರ ಇದು ಮನುಷ್ಯರ ಮೇಲೆ ಎರಗುತ್ತದೆ. ಗಾಯಗೊಂಡ ಹುಲಿ ಸಾಮಾನ್ಯವಾಗಿ ಸಣ್ಣ ಪ್ರಾಣಿಗಳ ಮೇಲೆ ಹಾಗೂ ಮನುಷ್ಯನ ಮೇಲೆ ದಾಳಿ ಮಾಡುವುದೂ ಉಂಟು.

ಅವ್ಯಾಹತವಾದ ಮಾನವನ ಬೇಟೆಯಿಂದಾಗಿ ಇಂದು ಹುಲಿ ವಿನಾಶದ ಅಂಚಿನಲ್ಲಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ ಹುಲಿಯ ಸಂಖ್ಯೆ ತುಂಬಾ ಕ್ಷೀಣಿಸುತ್ತಿದ್ದು ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿದೆ. ಇದ್ದುದರಲ್ಲಿ ಹುಲಿಗಳ ಸಂಖ್ಯೆ ಭಾರತದಲ್ಲೇ ಹೆಚ್ಚು. ಇಂದು ಹುಲಿಗಳ ಸಂರಕ್ಷಣೆಗಾಗಿ ಎಲ್ಲಾ ರಾಷ್ಟ್ರಗಳಲ್ಲೂ ಅನೇಕ ಮುಂಜಾಗ್ರತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.

ನಿಮಗಿದೋ ಹುಲಿಯ ಬಗ್ಗೆ ಇನ್ನೊಂದಿಷ್ಟು ಹೆಚ್ಚಿನ ಮಾಹಿತಿ: 

* ಹುಲಿ ಮನಸ್ಸಿಟ್ಟು ಸರಿಯಾಗಿ ಗರ್ಜಿಸಿದರೆ, ಅದರ ಸದ್ದು ಒಂದು ಮೈಲಿ ದೂರ ಕೇಳಿಸುತ್ತದೆ.

* ಹುಲಿ ಒಂದು ಹೊತ್ತಿಗೆ ಅಂದಾಜು ೫೦ ಕೆ ಜಿ ಮಾಂಸವನ್ನು ತಿನ್ನುತ್ತದೆ. ಈ ರಸದೌತಣದ ನಂತರ ಇದು ಹಲವು ದಿನ ಆಹಾರವಿಲ್ಲದೆಯೂ ಇರಬಹುದು.

* ಇದಕ್ಕೆ ತನ್ನ ಮಾಮೂಲಿ ಆಹಾರ ಸಿಕ್ಕದೇ ಇದ್ದಾಗ ಕಪ್ಪೆ, ಕೋತಿ, ಆಮೆ, ಮುಳ್ಳುಹಂದಿ, ಕೋಳಿಗಳನ್ನು ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ.

* ಹುಲಿಗಳಿಗೆ ಅತ್ಯಂತ ಆಕರ್ಷಕ ಹಾಗೂ ಹೊಳೆಯುವ ಕಣ್ಣುಗಳಿವೆ. ಇವು ಮನುಷ್ಯನ ಕಣ್ಣುಗಳಿಗಿಂತ ಆರು ಪಟ್ಟು ತೀಕ್ಷ್ಣ. ಆದ್ದರಿಂದಲೇ ಎಂತಹ ಕತ್ತಲಲ್ಲೂ ಇದರದ್ದು ಕರಾರುವಕ್ಕಾದ ದಾಳಿ.

* ಇವು ಉಷ್ಣವಲಯ ಮತ್ತು ಹಿಮ ಪ್ರದೇಶದ ಶೀತ ವಲಯಗಳಲ್ಲೂ ಕಂಡು ಬರುತ್ತದೆ.

* ಈಗ ಪ್ರಪಂಚದಲ್ಲಿ ಕೇವಲ ೫ ತಳಿಯ ಹುಲಿಗಳು ಮಾತ್ರ ಕಂಡು ಬರುತ್ತವೆ. ಅವೆಂದರೆ - ಸೈಬೀರಿಯನ್, ದಕ್ಷಿಣ ಚೀನಾ, ಇಂಡೋ-ಚೀನಾ, ಬಂಗಾಳ ಮತ್ತು ಸುಮೇರಿಯನ್.

* ಹುಲಿಗಳ ಇತರೆ ಸಂತತಿಗಳಾದ ಬಾಲಿ, ಜಾವನ್, ಕ್ಯಾಸ್ಪಿಯನ್ ಹುಲಿಗಳು ಕಳೆದ ೮೦ ವರ್ಷಗಳಲ್ಲಿ ಮರೆಯಾಗಿವೆ.

* ಇಂದು ಈ ಹುಲಿಗಳು ವಿನಾಶದ ಅಂಚನ್ನು ತಲುಪಿದ್ದು, ಇಡೀ ಪ್ರಪಂಚದಲ್ಲಿ ಕೇವಲ ೭,೪೦೦ ಹುಲಿಗಳು ಮಾತ್ರ ಇರಬಹುದು.

* ರಾಜಗಾಂಭೀರ್ಯ ಹೊಂದಿರುವ ಹುಲಿ ನಾಲ್ಕೂವರೆಯಿಂದ ಒಂಬತ್ತು ಅಡಿ ಉದ್ದವಿದ್ದು ೫೦೦ ಪೌಂಡ್ (ಸುಮಾರು ೨೫೦ ಕೆ ಜಿ) ತೂಗಬಲ್ಲವು. ಇದರ ಬಾಲ ೩-೪ ಅಡಿ ಉದ್ದವಿರುತ್ತದೆ.

* ಸಾಮಾನ್ಯವಾಗಿ ಗಂಡು ಹುಲಿಯು ಹೆಣ್ಣು ಹುಲಿಗಿಂತ ಹೆಚ್ಚು ಭಾರವಾಗಿರುತ್ತದೆ. ಅತ್ಯಂತ ಹೆಚ್ಚು ತೂಕದ ಹುಲಿ ಎಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿರುವ ಹುಲಿ ಎಂದರೆ ಸೈಬೀರಿಯಾದ ಗಂಡು ಹುಲಿ. ಇದರ ತೂಕ ೧೦೨೫ ಪೌಂಡ್ ಗಳು.

* ಸಾಮಾನ್ಯವಾಗಿ ಹುಲಿಗಳ ಕಾರ್ಯಕ್ಷೇತ್ರದ ವ್ಯಾಪ್ತಿಯು ಆಹಾರದ ಲಭ್ಯತೆ, ವಾತಾವರಣದ ಗುಣಲಕ್ಷಣ, ಪರಿಸರ ಮತ್ತು ಇತರೆ ಅಂಶಗಳನ್ನು ಅವಲಂಬಿಸಿದೆ. ಸಾಧಾರಣವಾಗಿ ಈ ವ್ಯಾಪ್ತಿ ೨೫ ಚದರ ಕಿ.ಮೀ ನಿಂದ ೭೮ ಚದರ ಕಿ.ಮೀ ಗಳವರೆಗೆ ಹರಡಿರುತ್ತದೆ.

* ಹುಲಿಗಳು ಸಾಮಾನ್ಯವಾಗಿ ಒಂಟಿಯಾಗಿರುತ್ತವೆ. ಇವು ತಮ್ಮ ಬೇಟೆಯ ಸರಹದ್ದನ್ನು ಗುರುತಿಸಿಕೊಂಡಿರುತ್ತದೆ. ಕೆಲವೊಮ್ಮೆ ಗಂಡು ಹುಲಿಗಳು ಹೆಣ್ಣು ಹುಲಿಗಳ ಸರಹದ್ದಿನ ಮೇಲೆ ಅತಿಕ್ರಮಣ ಮಾಡುತ್ತವೆ.

* ಹುಲಿಗಳು ತಮ್ಮ ಕಾರ್ಯಕ್ಷೇತ್ರದ ಪರಿಮಿತಿಯನ್ನು ತಮ್ಮ ಮೂತ್ರ ಹಾಗೂ ವಿಶೇಷ ಗ್ರಂಥಿಗಳು ಸ್ರವಿಸುವ ಜೊಲ್ಲನ್ನು ಪೊದೆಗಳು ಹಾಗೂ ಗಿಡಗಂಟಿಗಳ ಮೇಲೆ ಸ್ರವಿಸಿ ಗುರುತಿಸಿಕೊಂಡಿರುತ್ತವೆ. ಅಲ್ಲದೆ ಮರಗಳ ಮೇಲೆ ತಮ್ಮ ಉಗುರಿನಿಂದ ಗುರುತುಗಳನ್ನೂ ಮಾಡಿರುತ್ತವೆ.

* ಆಗ ತಾನೇ ಜನಿಸಿದ ಮರಿಗಳ ತೂಕ ಕೇವಲ ೨-೩ ಪೌಂಡ್ ಗಳಾಗಿರುತ್ತವೆ. ಹುಟ್ಟಿದಾಗ ಮರಿಗಳು ಕುರುಡಾಗಿರುವುದು ಇನ್ನೊಂದು ವಿಶೇಷ.

* ಮರಿಗಳು ೬ ರಿಂದ ೮ ವಾರಗಳವರೆಗೆ ಕೇವಲ ತಾಯಿಯ ಹಾಲಿನಲ್ಲೇ ಬದುಕುತ್ತವೆ. ೧೬ ತಿಂಗಳ ನಂತರವಷ್ಟೇ ತಮ್ಮ ಸ್ವಂತ ಬೇಟೆಯನ್ನು ಆರಂಭಿಸುತ್ತವೆ. ೩ ವರ್ಷಗಳ ನಂತರ ಸ್ವತಂತ್ರವಾಗಿ ತಮ್ಮ ಸಾಮ್ರಾಜ್ಯವನ್ನು ಗುರುತಿಸಿಕೊಳ್ಳುತ್ತವೆ.

* ಸಾಮಾನ್ಯವಾಗಿ ಹುಲಿಗಳು ಒಂಟಿಯಾಗಿ ಬೇಟೆಯಾಡಲು ಇಚ್ಛಿಸುತ್ತವೆ. ಏಕೆಂದರೆ ಅವಕ್ಕೂ ಗೊತ್ತು, ಗುಂಪಿನಲ್ಲಿ ಹೋದರೆ ಬೇಟೆ ತಪ್ಪಿಸಿಕೊಳ್ಳಬಹುದು ಎಂದು.

* ೩-೪ ಅಡಿ ಉದ್ದವಿರುವ ಬಾಲ ಓಡಾಡುವಾಗ ಅದರ ದೇಹದ ಸಮತೋಲನವನ್ನು ಕಾಪಾಡುತ್ತದೆ. ಒಡನಾಡಿಗಳು ಮತ್ತು ಮರಿಗಳೊಂದಿಗೆ ಆಟವಾಡಲು ಈ ಬಾಲ ಬಳಕೆಯಾಗುತ್ತದೆ.

* ಯಾವ ಎರಡು ಹುಲಿಗಳಿಗೂ ಒಂದೇ ರೀತಿಯ ಪಟ್ಟೆಗಳು ಇರುವುದಿಲ್ಲ ! ಪ್ರತಿಯೊಂದಕ್ಕೂ ವೈವಿಧ್ಯಮಯ ಕಪ್ಪು ಪಟ್ಟೆಗಳು ಕಂಡು ಬರುತ್ತವೆ. 

* ಸಾಮಾನ್ಯವಾಗಿ ಹುಲಿಗಳ ಆಯಸ್ಸು ೧೦ ವರ್ಷಗಳು. ಆದರೆ ಮೃಗಾಲಯದಲ್ಲಿ ಇರುವ ಹುಲಿಗಳು ಒಂದೆರಡು ವರ್ಷ ಹೆಚ್ಚಾಗಿ ಬದುಕಬಹುದು.

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ