ಅಪೆಂಡಿಕ್ಸ್ ಬಗ್ಗೆ ಕೆಲವು ಉಪಯುಕ್ತ ಮಾಹಿತಿಗಳು

ಮಾನವನ ದೇಹದಲ್ಲಿರುವ ಎಲ್ಲಾ ಅಂಗಗಳು ಒಂದಲ್ಲಾ ಒಂದು ರೀತಿಯಲ್ಲಿ ಆತನ ದೈನಂದಿನ ಚಟುವಟಿಕೆಗಳಲ್ಲಿ ಸಹಕಾರ ನೀಡುತ್ತವೆ. ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಪಿತ್ತಜನಕಾಂಗ, ಮೆದುಳು ಎಲ್ಲವೂ ತಮ್ಮ ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಾ ಇರುವುದರಿಂದ ಮನುಷ್ಯ ಲವಲವಿಕೆಯಿಂದ ಇರುತ್ತಾನೆ. ಆದರೆ ಮಾನವನ ದೇಹದಲ್ಲಿರುವ ಈ ಒಂದು ಅಂಗದ ಉಪಯೋಗ ಏನು ಎಂಬುವುದು ಇನ್ನೂ ನಿರ್ದಿಷ್ಟವಾಗಿ ಕಂಡು ಹಿಡಿಯಲಾಗಿಲ್ಲ. ಆ ಅಂಗ ಯಾವುದು ಗೊತ್ತೇ? ಅದೇ ಅಪೆಂಡಿಕ್ಸ್ ಎಂಬ ಅಂಗ.
ಅಪೆಂಡಿಕ್ಸ್ (Appendix) ಎಂಬ ಅಂಗವು ನಮ್ಮ ದೇಹದ ದೊಡ್ದ ಕರುಳಿಗೆ ಜೋಡಣೆಯಾಗಿರುವ ಬೆರಳಿನ ಆಕೃತಿಯ ಒಂದು ಅಂಗ. ಈ ಅಂಗಕ್ಕೆ ಸೋಂಕು ಉಂಟಾದರೆ ಅಪೆಂಡಿಸೈಟೀಸ್ ಎಂಬ ಸಮಸ್ಯೆ ಉಂಟಾಗುತ್ತದೆ. ಇದರಿಂದ ಸಹಿಸಲಾರದಷ್ಟು ಭಾರೀ ನೋವಿನ ಸಮಸ್ಯೆ ಉಂಟಾಗುತ್ತದೆ. ಈ ಅಂಗವು ಸುಮಾರು ಮೂರರಿಂದ ಮೂರುವರೆ ಇಂಚಿನಷ್ಟು ಉದ್ದವಿರುತ್ತದೆ. ಇದಕ್ಕೆ ಸೋಂಕಾದರೆ ತೀವ್ರವಾದ ಹೊಟ್ಟೆ ನೋವು ಕಾಡುತ್ತದೆ. ನೋವು ಹೆಚ್ಚಾದರೆ ಮಲವಿಸರ್ಜನೆಗೆ ಸಮಸ್ಯೆಯಾಗುತ್ತದೆ. ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಂಡರೆ ಗುಣವಾಗುವ ಸಾಧ್ಯತೆ ಇದೆಯಾದರೂ, ಬಹಳಷ್ಟು ವೇಳೆ ಈ ಸಮಸ್ಯೆ ತೀವ್ರವಾದಾಗ ಮಾತ್ರ ಅರಿವಿಗೆ ಬರುತ್ತದೆ. ಆದುದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ.
ಈ ಕಾಯಿಲೆಯ ಕೆಲವು ಗುಣಲಕ್ಷಣಗಳು:
* ತೀವ್ರವಾಗಿ ಕಾಡುವ ಹೊಟ್ಟೆ ನೋವು ಅಪೆಂಡಿಸೈಟೀಸ್ ಸೋಂಕಿನ ಪ್ರಮುಖ ಲಕ್ಷಣ. ಈ ನೋವು ಹೊಕ್ಕಳಿಂದ ಶುರುವಾಗಿ ಹೊಟ್ಟೆಯ ಬಲ ಬದಿಯ ಕೆಳಗಿನ ಭಾಗದಲ್ಲಿ ಜೋರಾಗಿ ಕಾಡಲು ಶುರುವಾಗುತ್ತದೆ.
* ಹೊಟ್ಟೆನೋವಿನ ಜೊತೆಗೆ ಜ್ವರ ಬರುವುದು ಅಪೆಂಡಿಸೈಟೀಸ್ ನ ಪ್ರಮುಖ ಲಕ್ಷಣ. ಜ್ವರವು ಸುಮಾರು ೧೦೨-೧೦೩ ಡಿಗ್ರಿ ವರೆಗೂ ಇರಬಹುದು.
* ಈ ಸೋಂಕಿನಿಂದ ವಾಂತಿ ಅಥವಾ ವಾಕರಿಕೆಯ ಲಕ್ಷಣಗಳು ಕಂಡು ಬರಬಹುದು. ಹೊಟ್ಟೆಯ ಕೆಳಗಿನ ಭಾಗದಲ್ಲಿ ನೋವು ಮತ್ತು ವಾಂತಿಯಾದರೆ ಇದು ಅಪೆಂಡಿಸೈಟೀಸ್ ನ ಸಮಸ್ಯೆಯಿಂದ ಆಗಿರಬಹುದು.
* ಹೊಟ್ಟೆಯ ಬಲಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಜೊತೆಗೆ ನೋವು ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಅಧಿಕವಾದರೆ ಹೊಟ್ಟೆಯು ತೀವ್ರವಾಗಿ ಊದಿಕೊಳ್ಳುತ್ತದೆ. ಹೀಗಾದಾಗ ತಕ್ಷಣ ತಡಮಾಡದೇ ವೈದ್ಯರನ್ನು ಸಂಪರ್ಕಿಸಲೇ ಬೇಕು.
* ಅಪೆಂಡಿಸೈಟೀಸ್ ಸಮಸ್ಯೆ ಇದ್ದರೆ ಹಸಿವು ಕಡಿಮೆಯಾಗುತ್ತದೆ. ಕೆಲವೊಮ್ಮೆ ವ್ಯಕ್ತಿಗೆ ಹಸಿವು ನಿಧಾನವಾಗಿ ದಿನಂಪ್ರತಿ ಕಡಿಮೆಯಾಗುತ್ತಾ ಹೋಗುತ್ತದೆ. ಹಸಿವಾಗದೇ ಇರುವುದರಿಂದ ಬಲವಂತವಾಗಿ ತಿಂದರೂ ವಾಂತಿಯಾಗಿಬಿಡುತ್ತದೆ.
* ಮೂತ್ರ ವಿಸರ್ಜನೆಯ ಸಮಯದಲ್ಲಿ ವಿಪರೀತ ನೋವಾಗುತ್ತದೆ. ಮಲಬದ್ಧತೆಯ ಸಮಸ್ಯೆ ಎದುರಾಗುತ್ತದೆ. ಅಪೆಂಡಿಕ್ಸ್ ನ ಸೋಂಕು ಅಧಿಕವಾಗಿದ್ದಲ್ಲಿ ಮತ್ತು ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಇದ್ದಲ್ಲಿ ಆ ಅಂಗ ಒಡೆದು ಹೋಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಇನ್ನಿತರ ಸಮಸ್ಯೆಗಳು ಪ್ರಾರಂಭವಾಗುತ್ತದೆ. ಇದು ಜೀವಕ್ಕೂ ಅಪಾಯಕಾರಿಯಾಗುವ ಸಾಧ್ಯತೆ ಇದೆ.
ಈ ಮೇಲಿನ ಲಕ್ಷಣಗಳು ಇದ್ದರೆ ನೀವೇ ಸ್ವತಃ ಮದ್ದು ಮಾಡಲು ಹೋಗದೆ, ವೈದ್ಯರನ್ನು ಸಂಪರ್ಕಿಸಿ ಅವರಿಂದ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು. ಅಪೆಂಡಿಸೈಟೀಸ್ ಗೆ ಸೂಕ್ತ ಚಿಕಿತ್ಸೆ ಎಂದರೆ ಶಸ್ತ್ರ ಚಿಕಿತ್ಸೆ ಮಾತ್ರ. ಹೊಟ್ಟೆಯ ಭಾಗವನ್ನು ಕೊಯ್ದು ಅಪೆಂಡಿಕ್ಸ್ ಭಾಗವನ್ನು ಕತ್ತರಿಸಿ ತೆಗೆಯುತ್ತಾರೆ. ಇದರಿಂದ ದೇಹದ ಇತರೆ ಚಟುವಟಿಕೆಗಳಿಗೆ ಭಂಗ ಬರುವುದಿಲ್ಲ.
ಈ ಸಮಸ್ಯೆ ಯಾರನ್ನು ಬೇಕಾದರೂ ಕಾಡುವ ಸಾಧ್ಯತೆ ಇದೆ. ಅದಕ್ಕಾಗಿ ನಿಮ್ಮ ಆಹಾರದಲ್ಲಿ ಹೆಚ್ಚಿನ ಫೈಬರ್ ಯುಕ್ತ ಹಣ್ಣು ತರಕಾರಿಗಳನ್ನು ಬಳಸಿಕೊಳ್ಳುವುದು ಉತ್ತಮ. ನಿಮ್ಮ ಪಚನಕ್ರಿಯೆಯು ಸರಿಯಾಗಿ ನಡೆಯುತ್ತಿದೆಯೇ ಎಂದು ಗಮನಿಸಿ. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಬಳಸಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ