ಅಪ್ಪನೆಂಬ ಅದ್ಭುತ

ಅಪ್ಪನೆಂಬ ಅದ್ಭುತ

ಕವನ

ಅಮ್ಮನ ಕಂಬನಿ 

ಕಂಡಷ್ಟು ನಮಗೆ 

ಅಪ್ಪನ ಬೆವರಹನಿ 

ಕಾಣುವುದೇ ಇಲ್ಲ..! 

 

ಅಪ್ಪನೆಂದರೆ ನಮ್ಮ 

ಮನೆಯ ಕಾಮಧೇನು ! 

ಬೇಡಿದ್ದೆಲ್ಲ ನೀಡಲೇ 

ಬೇಕಾದ ಕಲ್ಪವೃಕ್ಷ ! 

 

ಅಪ್ಪ ಅತ್ತಿದ್ದು.. 

ಕಂಡವರು ಕಡಿಮೆ ! 

ಅಪ್ಪ ನೋವುಗಳಿಲ್ಲದ 

ಸಮಚಿತ್ತ ಸರದಾರ ! 

 

ಹಬ್ಬ ಸಂತಸಗಳಲಿ 

ರೇಷ್ಮೆಸೀರೆ ಹೊಸಬಟ್ಟೆ 

ತೊಡಿಸಿ ಸಂಭ್ರಮಿಸುವ 

ಅಪ್ಪನುಡುಗೆ ಗಮನಿಸಿದವರಾರು?! 

 

ಧರೆಯ ನಿತ್ಯ ಪೊರೆವ 

ಅಂಬರದಂತೆ ತಂದೆ 

ಸತಿಸುತರ ಹಗಲಿರುಳು 

ಕಾಯ್ವ ವಾತ್ಸಲ್ಯಧಾರೆ ! 

 

ಅಮ್ಮನ ಮಡಿಲಿಂದ 

ಕೈಹಿಡಿದು ನಮ್ಮನ್ನೆಲ್ಲ 

ಹೆಗಲಿಗೇರಿಸಿ ಲೋಕ 

ತೋರಿಸಿದ ಮಾರ್ಗದರ್ಶಕ ! 

 

ನೋವು-ಬೇವು ನಿರಾಸೆ 

ಸಂಸಾರದೊತ್ತಡಗಳ.. 

ಹಾಲಾಹಲವನೆಲ್ಲ ನುಂಗಿ 

ನಗುವ ನೀಲಕಂಠ ! 

 

ಅಮ್ಮನೆಂದರೆ ಮಮತೆ ! 

ಅಪ್ಪನೆಂದರೆ ಭದ್ರತೆ ! 

ಸದಾ ಮಡದಿ-ಮಕ್ಕಳ 

ಭವಿಷ್ಯಕಾಗಿ   

ಮುಡುಪಿಟ್ಟು ಬೆಳಗುವ 

ಕರ್ಪೂರದ ಹಣತೆ !

ಹಬ್ಬಕ್ಕೆ  ಹೊಸ ಬಟ್ಟೆ ಕೊಡಿಸಿ

ಸಂಬ್ರಮಿಸುತಿದ್ದ ಅಪ್ಪನ ತೊಗಲ ಮೇಲಿದ್ದ

ಹರಿದ ಬನಿಯನ್    

ಯಾರಿಗೂ ಕಾಣಲೇಯಿಲ್ಲ

 

ಹೊಸ ಚಪ್ಪಲಿ ಶೂ ಹಾಕಿಸಿ 

ಶಾಲೆಗೆ ಕಳಿಸುವಾಗ

ಅಪ್ಪನ ಅವಾಯಿ ಚಪ್ಪಲಿ 

ಎಂದೋ ಹರಿದು ಹೋದದ್ದು 

ಗೊಚರಿಸಲೇ ಇಲ್ಲ

 

ಕೂಡಿ ಉಣುವಾಗ ಎಲ್ಲರಿಗೂ ತೃಪ್ತಿಯಾಗಲಿ 

ಎಂದು ಅರ್ಧ ಹೊಟ್ಟೆಯಲ್ಲೇ ಕೈತೊಳೆದ 

ಅಪ್ಪನ ಹಸಿವು ತಿಳಿಯಲೇ ಇಲ್ಲ

 

ಮಗಳು ತವರು ಬಿಡುವಾಗ

ಅಮ್ಮನ ಕಣ್ಣೀರ ಮುಂದೆ

ಅಪ್ಪನ ಗಟ್ಟಿ ಎದೆ ಬಿರಿದು ಮೌನವಾದದ್ದು 

ಗೊತ್ತಾಗಲೇ ಇಲ್ಲ 

 

ಅವ್ವನ ಮಮತೆಯ ಹೊರತೆಯಲಿ 

ಅಪ್ಪನ ಬೆವರು ಉಕ್ಕಿದ್ದು 

ತಿಳಿಯಲೇ ಇಲ್ಲ 

ಎದೆಯಾಳದ ಬಿಗಿತ

ಗೊಚರಿಸಲೇ ಇಲ್ಲ.

-‘ಇಬ್ಬನಿ’

ಚಿತ್ರ : ಇಂಟರ್ನೆಟ್ ತಾಣ

ಚಿತ್ರ್