ಅಪ್ಪನೊಟ್ಟಿಗೆ ಅಮ್ಮ
ಕವನ
ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು
ಹನಿನೀರು ಸಿಗಲೆಂದು ನೆಲವನ್ನು ಅಗೆದವರು
ಕೃಷಿಭೂಮಿಲೆ ಬದುಕು ಜೀವನವ ನಡೆಸಿದರು
ಸಂಸಾರ ನೇಗಿಲನು ಬಾಗುತಲೆ ಎಳೆದವರು
ಅಪ್ಪನಾ ಜೊತೆಯಲ್ಲೆ ಅಮ್ಮಾ
ನೋವಿನಲೆ ಸಾಗುತ ಪ್ರೀತಿಯನು ತೋರಿದರು
ಬೆಲೆಯಿದ್ದ ತೋಟಗಳ ತಮ್ಮನಿಗೆ ನೀಡಿದರು
ಬೆಟ್ಟೆ ಜಾಗವ ಪಡೆದು ಮಕ್ಕಳನು ಸಲಹಿದರು
ತಿನಲನ್ನ ಇರದಿರಲು ಹಪ್ಪಳವ ತಿನಿಸಿದರು
ಅಪ್ಪನಾ ಜೊತೆಯಲ್ಲೆ ಅಮ್ಮಾ
ಹಳತಾದ ಚಪ್ಪಲಿಯ ಧರಿಸುತ್ತ ತಿರುಗಿದರು
ಹರಿದಿರುವ ಪಂಚೆಯಲೆ ಊರೆಲ್ಲ ಸುತ್ತಿದರು
ಕಷ್ಟದಲಿ ಮಕ್ಕಳಿಗೆ ವಿದ್ಯೆಯನು ಕಲಿಸಿದರು
ಬಾರದಿಹ ನೆಂಟರಾ ನೋಡದೆಯೆ ಬದುಕಿದರು
ಅಪ್ಪನಾ ಜೊತೆಯಲ್ಲೆ ಅಮ್ಮಾ
ತಪ್ಪದುವು ಬೇಡವೊ ಬುದ್ಧಿಯನು ಹೇಳಿದರು
ಸ್ವಾಭಿಮಾನದ ಜೊತೆಗೆ ಸಾಗೆಂದು ತಿಳಿಸಿದರು
ಊರವರ ಪ್ರೀತಿಯನು ಗಳಿಸುತ್ತ ಬಾಳಿದರು
ನಮ್ಮನ್ನು ಹರಸುತಲಿ ಕಾಯವನು ತೊರೆದರು
ಅಪ್ಪನಾ ಜೊತೆಯಲ್ಲೆ ಅಮ್ಮಾ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್