ಅಪ್ಪನ ನೆನಪಿನಲ್ಲಿ…

ಅಪ್ಪನ ನೆನಪಿನಲ್ಲಿ…

ಕವನ

ನೆನಪಾಗಿ ಉಳಿದವ

ಅಪ್ಪನೆಂದರೆ ನನಗೆ ಜೀವಕ್ಕೆ ಜೀವ ನೀಡಿದ ಸರದಾರ

ಆಗಸದಷ್ಟು ವಿಶಾಲವಾದ ರಣಧೀರ

ಅಳತೆ ಮಾಡಲಾಗದ ಹಮ್ಮೀರ

ನೋವು ನಲಿವುಗಳಿಗೆ ಹೆಗಲು ನೀಡಿದ ಗುರಿಕಾರ//

 

ಬಡತನದ ಬೇಗೆಯಲಿ ಬೆಂದು ನೊಂದವ

ಒಂಬತ್ತು ಕುಡಿಗಳ ಸಾಕಿದವ

ಸಂಸ್ಕೃತಿ ಸಂಸ್ಕಾರಗಳ ಅರೆದು ಕುಡಿಸಿದವ

ಸತ್ತರೂ ಸಟೆಯಾಡದಿರಿ ಎಂದವ//

 

ಹೆಣ್ಣು ಮಕ್ಕಳ ಕಲಿಕೆಗೆ ಒತ್ತು ನೀಡಿದವ

ಇದ್ದುದರಲ್ಲೇ ಸಂತೃಪ್ತಿ ಜೀವನ ಸಾಗಿಸಿದವ

ಅಮ್ಮನ ಹೃದಯ ಸಾಮ್ರಾಜ್ಯದಿ ನೆಲೆ ನಿಂತವ

ಬದುಕನ್ನು ಸವಾಲಾಗಿ ಸ್ವೀಕರಿಸಿ ಗೆದ್ದವ//

 

ಹೆಗಲ ಮೇಲೆ ಕುಳ್ಳಿರಿಸಿ ಮೆರೆದವ

ಬೆನ್ನಿಗಾನಿಸಿ ಉಪ್ಪು ಮೂಟೆ  ಹೇಳಿದವ

ಪೆಟ್ಟು ಬೈಗುಳಗಳ ಜೊತೆ ಪ್ರೀತಿ ಶರಧಿಯ ಸುರಿಸಿದವ

ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎಂದವ//

 

ವಿಶಾಲವಾದ ಆಲದ ಮರದಂತೆ  ನೆರಳಾದವ

ಹೆತ್ತ ಹೊತ್ತ ತಾಯಿಯರ ಋಣವ ತೀರಿಸಲಾಗದು ಎಂದವ

ದುಡಿಮೆಯ ಸಾರವ ಕಲಿಸಿ ಮರೆಯಾದವ

ಅಕಾಲದಿ ಅಗಲಿ ಮನದಲಿ ನೆನಪಾಗಿ ಉಳಿದವ//

***

ಅಪ್ಪ--ಟಂಕಾ

     ಅಪ್ಪನೆಂದರೆ

   ಹೃದಯ ವೈಶಾಲ್ಯತೆ

      ಹೆಗಲಭಾರ

ತೋಳ ಬಂಧಿಯಾಸರೆ

   ಮೌನದ ಪ್ರತಿರೂಪ

***

ಗಝಲ್

*ಚೆಲುವಿನ ಬದುಕನ್ನು ರೂಪಿಸಿದವನು ಅಪ್ಪ*

*ಒಲವಿನ ಶರಧಿಯಲಿ ತೋಯಿಸಿದವನು ಅಪ್ಪ*

 

*ತನ್ನವರ ಒಳಿತಿಗಾಗಿ  ಬದುಕನ್ನು ಮುಡಿಪಾಗಿಟ್ಟನಲ್ಲವೇ*

*ಕಣ್ಣರೆಪ್ಪೆಯಂತೆ ಮಕ್ಕಳನ್ನು ಸಲಹಿದವನು ಅಪ್ಪ*

 

*ಒಡೆತನವ ಎಂದೆಂದೂ ಆಶಿಸದ ಮನಸ್ಸಾಗಿತ್ತು*

*ಬಡತನದ ಕುಲುಮೆಯಲಿ ಬೆಂದವನು ಅಪ್ಪ*

 

*ಸತ್ಯ ನ್ಯಾಯ ಧರ್ಮವು ಅಡಿಪಾಯಗಳೆಂದನು*

*ಪಥ್ಯವಾಗದಿರೆ ದೂರವಿದ್ದು ಸಾಧಿಸೆಂದವನು ಅಪ್ಪ*

 

*ಹುಟ್ಟುಆಕಸ್ಮಿಕ ಸಾವು ನಿಶ್ಚಿತ ರತ್ನ*

*ಹೊಟ್ಟೆ ಹಸಿವನ್ನು ನೀಗಿಸಿದವನು ಅಪ್ಪ*

***

ಮುಕ್ತಕ

ಅಪ್ಪನೆಂದರೆ ಜೀವ ನೀಡುತಲಿ ಸಲಹಿದನು

ತಪ್ಪನ್ನು ಮಾಡಿದರೆ ಬುದ್ಧಿ ಪೇಳಿದನು/

ತುಪ್ಪನ್ನ ತಿನ್ನಿಸುತ ದಿನದಿನವು ಬೆಳೆಸಿದನು

ಅಪ್ಪುತಲಿ ಗೌರವಿಸು-ಕೃಷ್ಣಕಾಂತೆ//

***

ಚುಟುಕು- ಅಪ್ಪ

ಬಾಳ ದಾರಿ ಪಯಣಕೆ ನೀನಾದೆ ಮರದ ನೆರಳು

ಕೂಳನಿತ್ತು ಸಲಹಲು ಕಷ್ಟಗಳ ಸಹಿಸಿದೆ ಹಗಲು ಇರುಳು

ಹೇಳಲಾರೆ ಹೊಗಳಲಾರೆ ಅಪ್ಪ ನಿನ್ನನು ಬಾಯಿ ಮಾತಿನೊಳು 

ಸೋಲದಿರು ಭಗವಂತನ ಹಸ್ತವಿರಲು ಬಾಳ ಹಾದಿಯೊಳು

-ರತ್ನಾ ಕೆ ಭಟ್ ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್