ಅಪ್ಪ ಆಕಾಶ- ಅಮ್ಮ ಭೂಮಿ

ಅಪ್ಪ ಆಕಾಶ- ಅಮ್ಮ ಭೂಮಿ

ಕವನ

ಅಪ್ಪನ ತ್ಯಾಗವು

ಕಂಡಷ್ಟು ನಮಗೆ

ಅಮ್ಮನ ಒಡಲ ಉರಿ

ಕಾಣಲಾಗುವುದಿಲ್ಲ.

 

ಅಪ್ಪನ ವೈಶಾಲ್ಯತೆಯಲ್ಲಿ

ಅಮ್ಮನ ನಿಟ್ಟುಸಿರು

ಹಂಬಲಗಳನ್ನು ಎಂದು

ನಾವು ನೋಡಲಾಗುವುದಿಲ್ಲ!

 

ಅಪ್ಪನ ಕರ್ತವ್ಯದಲ್ಲಿ

ಅಮ್ಮನ ಸಹನೆ,ತಾಳ್ಮೆ

ಸದ್ಗುಣಗಳನ್ನೆಂದೂ

ನಾವು ಅರಿಯಲಾಗಲಿಲ್ಲ.

 

ಅಪ್ಪನ ಧೀಮಂತಿಕೆಯಲ್ಲಿ

ಅಮ್ಮನ ಸಿಟ್ಟು, ಸೆಡವು

ಕೋಪದ ಅರ್ಥವನ್ನು

ನಾವು ಮಾಡಿಕೊಳ್ಳಲೇ ಇಲ್ಲ.!

 

ಅಪ್ಪನ ಧೃಡತೆಯಲ್ಲಿ

ಅಮ್ಮನ ಪ್ರೀತಿ- ಅನುಕಂಪ

ತ್ಯಾಗಗಳನ್ನು ನಾವು....

ಗುರುತಿಸಲೇ ಇಲ್ಲ !

 

ಅಪ್ಪ ನೋವು ನುಂಗುವನಾದರೆ

ಅಮ್ಮ ನೀರು ಕುಡಿದು ನೋವು

ಅನುಭವಿಸುವುದು....

ನಮಗರ್ಥವಾಗಲೇ ಇಲ್ಲ.!

 

ಅಪ್ಪನೆಂದರೆ ಆಕಾಶ

ಅಮ್ಮ ಹಕ್ಕಿಯಾಗಳು

ಅಮ್ಮನ ತುಡಿತಗಳಿಗೆ

ನಾವು ಮಿಡಿಯಲೇ ಇಲ್ಲ!

 

ಅಪ್ಪನಿಗೆ ಸಂಸಾರ ಸಾಗರ

ಅಮ್ಮ ಅದರ ಹಾಯಿ....

ಗೃಹದ ದೀಪ ಅಮ್ಮ

ಅಮ್ಮನ ತ್ಯಾಗ ಗಣನೆಗಿಲ್ಲ!

 

ಅಪ್ಪನ ಹೊರಗಿನ ದುಡಿಮೆ

ಅಮ್ಮನೇನು ಕಡಿಮೆಯೇ?

ತೇಪೆ ಹಚ್ಚಿದ ಉಟ್ಟ ಸೀರೆ

ಗಮನಿಸುವವರಾರು?

 

ಅಪ್ಪ ಮನೆಯ ಯಜಮಾನ

ಅಮ್ಮ ಸಂಬಳವಿಲ್ಲದ ರಾಣಿ!!

ಅಮ್ಮನ ಸಂಕಟಗಳನ್ನು....

ಅರ್ಥ ಮಾಡಿಕೊಳ್ಳುವರಾರು?

 

ಕುಡುಕ ಅಪ್ಪನಾಗಿದ್ದರೆ ..

ಅಮ್ಮನ ಕಥೆ... ಗೋವಿಂದ

ಬಾಳ ತುಂಬಾ ಬರೀ ವ್ಯಥೆ

ಸಹನಾಶೀಲತೆಗೆ ಬೆಲೆ ಎಲ್ಲಿ?

 

ಅಪ್ಪ ಅಪ್ಪನೇ- ಆಕಾಶ

ಅಮ್ಮ ಅಮ್ಮನೇ - ಭೂಮಿ

ಇಬ್ಬರಿಗೂ ನೋವಿದೆ,ನಲಿವಿದೆ

ಯಾರೂ ಹೆಚ್ಚಲ್ಲ- ಯಾರೂ ಕಡಿಮೆಯಲ್ಲ.!

 

-ವೀಣಾ ಕೃಷ್ಣಮೂರ್ತಿ,  ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ               

 

ಚಿತ್ರ್