ಅಬ್ಬಾ! ನಮ್ಮ ಜೇಡ ಇಂದು ಬೆಳಿಗ್ಗೆ ನೆಕ್ಲೇಸ್ ಹೆಣೆದ..ನಿಮಗೆ ಬೇಕೆ?

ಅಬ್ಬಾ! ನಮ್ಮ ಜೇಡ ಇಂದು ಬೆಳಿಗ್ಗೆ ನೆಕ್ಲೇಸ್ ಹೆಣೆದ..ನಿಮಗೆ ಬೇಕೆ?

ಬರಹ

ಅಣ್ಣ ಚಾಮರಾಜ್ ಸವಡಿ ಧಾರವಾಡದಲ್ಲಿ ಪತ್ರಕರ್ತರಾಗಿದ್ದಾಗ ನುಡಿಚಿತ್ರದ ಹಲವಾರು ಪಟ್ಟುಗಳನ್ನು ಪ್ರಯೋಗಿಸಿ ನಮ್ಮಲ್ಲಿ ಬೆರಗು ಮೂಡಿಸಿದ್ದರು. ವಿಶೇಷವೆಂದರೆ ಜೇಡನ ಈ ಕರರೂಪಿ ಕಾಲುಗಳ ಕುಶಲತೆಯಿಂದ ರೂಪುಗೊಂಡ ನಕ್ಲೇಸ್ ಬಗ್ಗೆ ಬೆಳಕು ಚೆಲ್ಲಿದವರು ಅವರೇ.

ಹಾಗಾಗಿ ನಮ್ಮ ಸಂಪದಿಗರಿಗಾಗಿ ನಾನು ಹೆಣೆದಿರುವ ಈ ಲೇಖನಕ್ಕೆ ಸ್ಫೂರ್ತಿ ಅವರು ಹಾಗು ಮಗಳು ಗೌರಿ.

ಮನೆಯ ತಾರಸಿಯ ಮೇಲಿದ್ದ ಸಿಂಟೆಕ್ಸ್ ನೀರಿನ ಟಾಕಿಗೆ ಕಟ್ಟಿದ್ದ ಜೇಡನ ಬಲೆಗೆ ಬೆಳಗಿನ ಇಬ್ಬನಿಯು ತೋರಣಕಟ್ಟಿತ್ತು. ಇದನ್ನೇ ನಾನು ಚಾಮರಾಜ್ ಅವರ ಸೃಜನಶೀಲತೆ ಎನ್ನುವುದು. ಅಭಿಮಾನ ಪಡುವುದು. ಅವರ ನಿರ್ದೇಶನದನ್ವಯ ಚಾಕಚಕ್ಯತೆಯಿಂದ ಛಾಯಾಪತ್ರಕರ್ತ ಬಿ.ಎಂ. ಕೇದಾರನಾಥ್ ಆ ವಿಶೇಷ ಮೆರುಗಿನ ನಕ್ಲೇಸ್ ಗಳನ್ನು ಅಷ್ಟೇ ಸೃಜನಶೀಲತೆಯಿಂದ ಸೆರೆ ಹಿಡಿದು ನುಡಿಚಿತ್ರಕ್ಕೆ ಕಳಸವಿಟ್ಟಿದ್ದರು.

ಹಾಗೆಯೇ ನಾವು ನಂಬಿರುವ ‘ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ’ ಎಂಬ ಪ್ರಮೇಯವನ್ನು ಪ್ರಾಯೋಗಿಕವಾಗಿ ಅವರು ಸಾಧಿಸಿದ್ದರು.

ಈ ಬಾರಿ ನನ್ನ ತಂಗಿ ದಿವ್ಯಾಳ ಸ್ಕೂಟಿಗೆ ಗಂಟು ಬಿದ್ದಿದ್ದ ಜೇಡ- ‘ಬಿಗ್ ಬಾಸ್’ ಆಕೆಯ ರಂಪಕ್ಕೆ ಮನಸೋತು, ತ್ರಾಸು ಕೊಡುವುದು ಬೇಡ ಎಂದುಕೊಂಡು ಬಟ್ಟೆ ಒಣಗಿಸುವ ತಂತಿಗೆ ತಲೆಕೆಳಗಾಗಿ ಜೋತುಬಿದ್ದ. ರಾತ್ರಿಯೆಲ್ಲ ಪುಷ್ಕಳವಾದ ಭೂರಿ ಭೋಜನ ಸವಿದಿದ್ದ ಆತ ಬೆಳಿಗ್ಗೆ ನನ್ನ ತಂಗಿ ಮನೆಯ ಮುಂದೆ ರಂಗೋಲಿ ಹಾಕುವಾಗಲೂ ‘ಕ್ಯಾರೆ’ ಎನ್ನದೇ ಮಲಗಿದ್ದ. ಬೆಳಗಿನ ಹದವಾದ, ನಯವಾದ ಸೂರ್ಯ ರಶ್ಮಿಗೆ ಮಿರಿ ಮಿರಿ ಮಿಂಚುತ್ತ ಆಕೆಯನ್ನೂ ಆಕರ್ಷಿಸಿದ್ದ.

ಆ ಧಾವಂತದಲ್ಲಿಯೇ ಓಡಿ ಬಂದು ನನ್ನನ್ನು ಎಬ್ಬಿಸಿದ ತಂಗಿ, ಆ ಜೇಡರ ಬಲೆಯ ಸೊಬಗನ್ನು ನೋಡಲು ಎಳೆದೊಯ್ದಳು. ನಿಜಕ್ಕೂ ಬೇಂದ್ರೆ ಮಾಸ್ತರ್ ನೆನಪಾದರು. ಸಾಧನಕೇರಿಯ ವರಕವಿಯ ಸಾಧನೆಗಳೆಲ್ಲ ಒಂದು ಕ್ಷಣದಲ್ಲಿ ಕಣ್ಣಮುಂದೆ ಸುಳಿದು ಹೋದವು. ‘ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೋಯ್ದಾ..ನುಣ್ಣನೇ ಎರಕವ ಹೋಯ್ದಾ..’ ಭಾವ ಪರವಶ ಗೊಳಿಸಬಹುದಾದ ಹಾಡು ನನಗೆ ಅರಿವಿಲ್ಲದಂತೆಯೇ ತುಟಿಯ ಮೇಲೆ ನುಸುಳಿದವು! ಬಹುಶ: ನಮ್ಮ ಜೇಡ ಹೆಣೆದ ನಕ್ಲೇಸ್ ಕೇಡಿಯಂ ಲೋಹದ್ದು..ಹಾಗ್ಯೇ ೨೪ ಕ್ಯಾರೆಟ್ ಅಪ್ಪಟ ಚಿನ್ನದ್ದು..ತುಂಬ ಕಾಸ್ಟ್ಲಿ!

ಬೆಳಗಿನ ಹೊಂಬಿಸಿಲು, ಇಬ್ಬನಿಯ ಹನಿಗಳು ಜೇಡನ ಮನೆಗೆಲ್ಲ ಆವರಿಸಿ ಮುತ್ತಿನ ತೋರಣ ಕಟ್ಟಿದ್ದವು. ಕಲೆಗಾರ ಮುತ್ತಿನ ದಂಡೆಯನ್ನೇ ಎತ್ತಿತಂದು ನಯವಾಗಿ ಪೋಣಿಸಿ, ಅಮೂಲ್ಯವಾದ ನಕ್ಲೇಸ್ ತಯಾರಿಸಿ ನಿಸರ್ಗದ ಕೊರಳಿಗೆ ತೊಡಿಸಿದಂತೆ ಭಾಸವಾಗುತ್ತಿತ್ತು. ಸರ್ವಶಕ್ತನಾದ ಆ ಭಗವಂತ ಭೂಮಿಯ ಮೇಲಿನ ಎಲ್ಲ ಕ್ರಿಮಿ-ಕೀಟಗಳಿಗೂ ಖುಷಿಯಿಂದ ಬದುಕುವ, ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುವ ವ್ಯವಸ್ಥೆ ಮಾಡಿಟ್ಟಿರುವ ಬಗ್ಗೆ ತತ್ವಜ್ನಾನಿಯಾಗುವ ಅವಕಾಶ ಈ ಇಬ್ಬನಿಯ ಮುತ್ತಿನ ಹನಿಗಳು ನಮಗೆ ಒದಗಿಸಿದ್ದವು.

ಹಿಂದಿನ ದಿನ ‘ಕಿಟಾರ್’ ಎಂದು ಕಿರುಚಿ ಸ್ಕೂಟಿ ನೆಲಕ್ಕೆ ಒರಗಿಸಿದ್ದ ತಂಗಿ, ಜುಗುಪ್ಸೆಯಿಂದ ಜೇಡನನ್ನೂ ಸಹ ಕೊಲ್ಲಲು ಕಸಬರಿಗೆ ಸಮೇತ ಅಣಿಯಾದವಳು ಇಂದು ಅದರ ‘ಫ್ಯಾನ್’ ಆಗಿದ್ದು ನನಗೆ ಸೂಜಿಗವೆನಿಸಿತ್ತು. ಮನೆಯವರನ್ನು ಮಾತ್ರವಲ್ಲದೇ ಓಣಿಯ ಜನರನ್ನೂ ಸಹ ಕರೆದು ತೋರಿಸಿ ಆಕೆ ಸಂಭ್ರಮಿಸಿದ ಪರಿ ನಮಗೆಲ್ಲ ಸಂಭ್ರಮದ ವಾತಾವರಣ ಸೃಷ್ಟಿಸಿತ್ತು. ‘ಸೌಂದರ್ಯ ವಸ್ತುವಿನಲ್ಲಿಲ್ಲ; ನೋಡುಗನ ಕಣ್ಣುಗಳಲ್ಲಿ ಇದೆ’ ಎಂಬ ಮಾತಿಗೆ ಅನ್ವರ್ಥಕವಾಗಿತ್ತು ಆ ಮಿರಿ-ಮಿರಿ ಮಿಂಚುವ ಜೇಡ ಹಾಗು ಆತನ ಬಲೆ.

ರಾಜ ಕಂಡ ಆದರೆ ಆತನ ರಾಣಿ ಕಾಣಲಿಲ್ಲ. ‘ಬೆಳಗಿನ ವೇಳೆಯ ವಿಹಾರ’ಕ್ಕೆ ಆಕೆ ತೆರಳಿದಂತಿತ್ತು ಬಹುಶ:. ಆಕೆ ಏನಾದರೂ ಅವನೊಟ್ಟಿಗಿದ್ದಿದ್ದರೆ ಖಾತ್ರಿ ಈ ಇಬ್ಬನಿಯ ಹನಿ ಮುತ್ತುಗಳನ್ನು ಪೋಣಿಸಿ ಆಕೆಯ ಕೊರಳಿಗೆ ತೊಡಿಸುತ್ತಿದ್ದ. ಹೀಗೆ ಏನೇನೋ ಮಾನವ ಸಹಜವಾದ ಆಲೋಚನೆಗಳು ಹೊಸ ಜಗತ್ತನ್ನು ಸೃಷ್ಟಿಸಿದವು. ಮನದುಂಬಿ ಆತನಿಗೆ ‘ಥ್ಯಾಂಕ್ಸ್’ ಹೇಳದೇ ವಿಧಿ ಇರಲಿಲ್ಲ. ನಿಸರ್ಗವನ್ನು ಕೌತುಕದ ಖಣಿಯಾಗಿಸಿದ ಈ ಅಸಂಖ್ಯ ಜೀವಿಗಳಿಗೆ ಹಾಗು ಜಗವೆಂಬ ಆ ಕರ್ತಾರನ ಕಮ್ಮಟಕ್ಕೆ ನಾವು ವ್ಯಾಖ್ಯೆ ಬರೆದು ಸಂವಿಧಾನಿಕ ಚೌಕಟ್ಟು ನಿರ್ಮಿಸಲು ಸಾಧ್ಯವೇ?

ಬಹುಶ: ಇದು ಮೊದಲ ಹಾಗು ಕೊನೆಯ ಬಿಡುಗಡೆಯ ಹಾದಿ ಎಂದು ನನಗೆ ಅನ್ನಿಸಿತು. ಅಮ್ಮ ಕೂಗಿದಳು. ‘ಕಾಲೇಜ್ ಗೆ ಇವತ್ತ ಸೂಟಿ ಏನೋ..ಮಾಸ್ತರ್ರೇ..?’ ಅಯ್ಯೋ ಅದೊಂದು ಇದೆಯಲ್ಲ ಅಂದವನೇ ಗಡಿಬಿಡಿಯಲ್ಲಿ ಸ್ನಾನಕ್ಕೆ ಓಡಿದೆ.. ತಂಗಿ ಇಂದು ಕಾಲೇಜ್ ಗೆ ರಜೆ ಹಾಕುವ ಹುನ್ನಾರದಲ್ಲಿದ್ಲು!