ಅಭಿವ್ಯಕ್ತಿ ಸ್ವಾತಂತ್ರ ಮತ್ತು ದುಂಡಾವರ್ತನೆ

ಅಭಿವ್ಯಕ್ತಿ ಸ್ವಾತಂತ್ರ ಮತ್ತು ದುಂಡಾವರ್ತನೆ

ಬರಹ

ಖಂಡನೆ....ಖಂಡನೆ...ಖಂಡನೆ

ಭಾನುವಾರ ಸುವರ್ಣ ಸುದ್ದಿ ವಾಹಿನಿ ಕಚೇರಿಗೆ ನುಗ್ಗಿ ಅನುಚಿತವಾಗಿ ವರ್ತಿಸಿದ ಕರ್ನಾಟಕ ಪ್ಯಾಪುಲರ್‍ ಫ್ರಂಟ್ ಆಫ್ ಇಂಡಿಯಾ ಎಂಬ ಸಂಘಟನೆಯ ಕಿಡಿಗೇಡಿ ಕೃತ್ಯವನ್ನು ಯಾರು ಮೆಚ್ಚಲಾರರು. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಭಾನುವಾರ ಆದದ್ದಿಷ್ಟು: ರಾಷ್ಟ್ರೀಯ ಹಿಂದೂ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್ ಸಂದರ್ಶನದ ತುಣುಕೊಂದನ್ನು ಸುವರ್ಣ ಸುದ್ದಿ ವಾಹಿನಿಯಲ್ಲಿ ಪ್ರಸಾರ ಮಾಡಿದ್ದು ಈ ಸಂಘಟನೆಯ ಕಣ್ಣು ಕೆಂಪಾಗಾಗಿಸಿತು. ಮುತಾಲಿಕ್ ಅವರು ಪಿಎಫ್‌ಐ ಚಟುವಟಿಕೆಗಳನ್ನು ಕಟುವಾಗಿ ಟೀಕಿಸಿದ್ದಾರೆ ಹಾಗೂ ಅದನ್ನು ಚಾನೆಲ್‌ ಪ್ರಸಾರ ಮಾಡಿದೆ ಎಂಬುದು ಇವರ ಆರೋಪ.

ತಮಾಷೆ ಎಂದರೆ, ಮುತಾಲಿಕ್‌ ಸಂದರ್ಶನದ ವರದಿ ಪ್ರಸಾರವಾಗಿ ಒಂದು ವಾರ ಕಳೆದಿತ್ತು. ಆದರೆ, ದೆಹಲಿಯಲ್ಲಿ ಶನಿವಾರ ಬಾಂಬ್ ಸ್ಫೋಟವಾಗುತ್ತಿದ್ದಂತೆ ಕುಂಬಳ ಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ಈ ಸಂಘಟನೆಯ ಕೆಲವರಲ್ಲಿ ಅಳುಕು ಹುಟ್ಟಿಸಿತು. ತಮ್ಮಂಥ ಸಂಘಟನೆಗಳ ಮೇಲೆ ಸಂಶಯದ ದೃಷ್ಟಿ ಹರಿಯುವುದಕ್ಕಿಂತ ಮುಂಚೆ, ತಾವೇ ವಿಷಯಾಂತರ ಮಾಡಿಬಿಡೋಣ ಎಂದು ಅವರು ಯೋಚಿಸಿರಬೇಕು.

ಹೀಗಾಗಿ, ಮುತಾಲಿಕ್‌ ಸಂದರ್ಶನ ಪ್ರಚಾರವಾಗಿ ಒಂದು ವಾರದ ನಂತರ, ಇವರು ಆಕ್ಷೇಪ ಎತ್ತಲು ಮುಂದಾದರು.

ಸಾಮಾನ್ಯವಾಗಿ, ಒಂದು ಸಂಘಟನೆ ಇನ್ನೊಂದು ಸಂಘಟನೆಯ ಮೇಲೆ ಕೆಸರೆರಚುವುದು ಸಾಮಾನ್ಯ. ನಮ್ಮ ದೇಶದಲ್ಲಿ ಆಡಳಿತ ಪಕ್ಷ ಪ್ರತಿಪಕ್ಷದ ಮೇಲೆ, ವಿಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಹಾಗೆ, ಸಂಘಟನೆಗಳು ಪರಸ್ಪರ ವಾಗ್ವಾದ, ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತವೆ. ಅದು ಮಾಧ್ಯಮಗಳ ಮೂಲಕ ಪ್ರಸಾರವೂ ಆಗುತ್ತದೆ. ಆರೋಪ ಮಾಡಿದವರ ವಿರುದ್ಧ ಪ್ರತ್ಯಾರೋಪ ಮಾಡುವುದು ಸಾಮಾನ್ಯ. ಆದರೆ, ಅದನ್ನು ಪ್ರಸಾರ ಮಾಡಿದವರ ಅಥವಾ ಪ್ರಚಾರ ಮಾಡಿದವರ ವಿರುದ್ಧ ದಾಂಧಲೆ ನಡೆಸಿದ ಉದಾಹರಣೆಗಳು ವಿರಳ.

ಆದರೆ, ವರದಿ ಪ್ರಸಾರ ಮಾಡಿದ ಮಾಧ್ಯಮದ ಮೇಲೆ ದುಂಡಾವರ್ತನೆ ತೋರುವ ಹಕ್ಕು ಯಾರಿಗೂ ಇಲ್ಲ ಎಂಬ ಸಾಮಾನ್ಯ ಪ್ರಜ್ಞೆ ಈ ಪ್ಯಾಪುಲರ್‍ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರಿಗೆ ಹೊಳೆದಿಲ್ಲದಿರುವುದು ಅಚ್ಚರಿ. ನಾವು ಮಾಡುವ ಕೃತ್ಯ ಸಮಾಜದ ಸ್ವಾಸ್ಥ್ಯ ಹಾಳುಮಾಡುವಂತದ್ದು ಎಂದು ಅವರಿಗೆ ಏಕೆ ಅನಿಸಿಲ್ಲ?

ಭಾರತ ಎನ್ನುವುದು ಕೇವಲ ಒಂದು ಜಾತಿ, ಮತ, ಪಂಗಡಗಳಿಗೆ ಸೀಮಿತವಾದ ದೇಶವಲ್ಲ. ಇದೊಂದು ಜಾತ್ಯಾತೀತ ದೇಶ. ಧರ್ಮನಿರಪೇಕ್ಷ ರಾಷ್ಟ್ರ. ದೇಶದಲ್ಲಿರುವ ಪ್ರತಿಯೊಬ್ಬ ಧರ್ಮದವನೂ, ಪ್ರತಿಯೊಬ್ಬ ನಾಗರೀಕನೂ ಸಹಕಾರ ಸಹಬಾಳ್ವೆಯಿಂದ ಜೀವನ ಸಾಗಿಸಬೇಕೆಂಬುದು ನಮ್ಮೆಲ್ಲರ ದ್ಯೇಯ, ಉದ್ದೇಶ. ಅದನ್ನು ಪ್ರಮೋದ್‌ ಮುತಾಲಿಕ್‌ ಹಾಗೂ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾಗಳೆರಡೂ ಪಾಲಿಸಬೇಕಾಗುತ್ತದೆ.

- ಲೋಕೇಶ್ ಅರಕಲಗೂಡು, ಬೆಂಗಳೂರು