ಅಮೆರಿಕಾದಲ್ಲಿ ಆರ್ಥಿಕ ಹಿನ್ನಡೆ: ಭಾರತದ ಮೇಲೆ ಪರಿಣಾಮ ಬೀರದೇ?

ಅಮೆರಿಕಾದಲ್ಲಿ ಆರ್ಥಿಕ ಹಿನ್ನಡೆ: ಭಾರತದ ಮೇಲೆ ಪರಿಣಾಮ ಬೀರದೇ?

ಬರಹ

ಲೆಹಮಾನ್ ಬ್ರದರ್ಸ್ ಹೂಡಿಕೆ ಬ್ಯಾಂಕು ದಿವಾಳಿ, ಮೆರಿಲ್ ಲಿಂಚ್ ಅನ್ನು ಬ್ಯಾಂಕ್ ಆಫ್ ಅಮೆರಿಕಾಖರೀದಿಸಿದ ಬೆನ್ನಲ್ಲೇ ಎಐಜಿ ಎನ್ನುವ ಅಮೆರಿಕನ್ ಇನ್ಶೂರೆನ್ಸ್ ಕಂಪೆನಿ ತನ್ನ ಆಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದೆ. ಅದು ಎಪ್ಪತ್ತೈದು ಬಿಲಿಯನ್ ಡಾಲರುಗಳನ್ನು ಒಟ್ಟು ಮಾಡಬೇಕಿದೆ. ಅಲ್ಲಿನ ಸರಕಾರ ಯಾವುದಾದರೂ ಸಹಾಯ ಪ್ರಕಟಿಸಬಹುದೇ ಎನ್ನುವುದು ಸದ್ಯದ ಕುತೂಹಲ. ಇವೆಲ್ಲವೂ ಭಾರತದ ಮೇಲೆ ಪರಿಣಾಮ ಬೀರಲಿವೆಯೇ?

ಈ ಬ್ಯಾಂಕುಗಳು ಭಾರತದಲ್ಲಿ ಹಣಕಾಸು, ಮೂಲಸೌಕರ್ಯ, ಇನ್ಶೂರೆನ್ಸ್, ಶೇರು ಮಾರುಕಟ್ಟೆಯಲ್ಲ ಹೂಡಿಕೆ ಹೊಂದಿದ್ದವು. ಲೆಹಮಾನ್ ಬ್ರದರ್ಸ್ ಭಾರತದಲ್ಲಿ ತನ್ನ ಘಟಕವನ್ನೂ ಹೊಂದಿತ್ತು. ಏಐಜಿ ಭಾರತದ ಟಾಟಾ ಸಮೂಹದ ಜತೆ ಪಾಲುದಾರನಾಗಿ ವಿಮಾ ವಲಯದಲ್ಲಿ ಭಾಗವಹಿಸಿದೆ. ಇನ್ನು ನಮ್ಮ ಐಟಿ ಕಂಪೆನಿಗಳು ಮುಳುಗಿದ-ಮುಳುಗುತ್ತಿರುವ ಕಂಪೆನಿಗಳಿಗೆ ಸೇವೆ ನೀಡುತ್ತಿರಬಹುದು. ಅವುಗಳಿಂದ ಹೊರಗುತ್ತಿಗೆ ಪಡೆದು ಸೇವೆ ನೀಡುತ್ತಿರಬಹುದು. ಅವುಗಳ ತಂತ್ರಾಂಶ ಅಭಿವೃದ್ಧಿ,ರಿಪೇರಿ ಮಾಡುವ ಸೇವೆ ನೀಡುತ್ತಿರಬಹುದು.ಇನ್ನು ನಮ್ಮ (ಖಾಸಗಿ)  ಬ್ಯಾಂಕುಗಳು ಅವುಗಳ ಜತೆ ಸಂಬಂಧ ಹೊಂದಿರಬಹುದು.ಅವುಗಳಲ್ಲಿ ಹೂಡಿಕೆ ಮಾಡಿರಬಹುದು. ನಮ್ಮ ಜನರು ಆ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿರಬಹುದು. ಹೀಗೆ ಅವುಗಳ ಹಿನ್ನಡೆ ನಮ್ಮಲ್ಲೂ ಸರಣಿ ಪರಿಣಾಮ ಬೀರಬಹುದು.

ಸದ್ಯಕ್ಕಂತೂ ಉದ್ಯೋಗದಲ್ಲಿ ಹಿನ್ನಡೆ ಎದ್ದು ಕಾಣಿಸುತ್ತಿದೆ. ನಮ್ಮ ಮ್ಯಾನೇಜ್‌ಮೆಂಟ್ ಪದವೀಧರರೂ(ಐಐಎಂ) ಕ್ಯಾಂಪಸ್ ಸಂದರ್ಶನಗಳಲ್ಲಿ ಈ ಕಂಪೆನಿಗಳಿಂದ ಆಯ್ಕೆಯಾಗಿ ಕೈತುಂಬಾ,ಮೈತುಂಬಾ ಪಗಾರದ ನಿರೀಕ್ಷೆಯಲ್ಲಿದ್ದರು.ಈಗವರ ಭವಿಷ್ಯ ಮಸುಕಾಗಿದೆ.ಐಟಿ ಕಂಪೆನಿಗಳು ತಮ್ಮ ಮೇಲೆ ಹೇಳಿಕೊಳ್ಳುವ ಪರಿಣಾಮ ಆಗದು ಎನ್ನುವ ವಿಶ್ವಾಸ ಪ್ರದರ್ಶಿಸಿವೆ. ತಾವುಗಳು ಒಂದು ಕಂಪೆನಿಯನ್ನು ನಂಬಿಲ್ಲ-ಪ್ರತಿ ಕಂಪೆನಿಯಿಂದ ತಾವು ಪಡೆಯುವ ವ್ಯವಹಾರ ಅಲ್ಪವಾದುದು ಎಂದವುಗಳ ಹೇಳಿಕೆ.

ಇನ್ನು ಬ್ಯಾಂಕುಗಳ ಪೈಕಿ ಐಸಿಐಸಿಐ ಬ್ಯಾಂಕು ಸುಮಾರು ಎಂಭತ್ತು ದಶಲಕ್ಷ ಡಾಲರು ಹೂಡಿಕೆ ಲೆಹಮಾನ್ ಬ್ರದರ್ಸ್ ಮೇಲೆ ಮಾಡಿದ್ದು,ಅರ್ಧಾಂಶ ನಷ್ಟ ನಿರೀಕ್ಷಿಸಿದೆ. ಅದರ ಪೈಕಿ ಮೂರನೇ ಒಂದಂಶ ನಷ್ಟಕ್ಕೆ ಈಗಾಗಲೇ ಹಣ ತೆಗೆದಿರಿಸಿದ್ದೇವೆ ಎಂದದು ಹೇಳಿಕೊಂಡಿದೆ. ಟಾಟಾ ಸಮೂಹದ ಜತೆ ಏಐಜಿ ವಿಮಾ ವಲಯದಲ್ಲಿ ಶೇಕಡಾ ಮೂವತ್ತರಷ್ಟು ಸಹಭಾಗಿತ್ವ ಹೊಂದಿದೆ.
ಅತ್ತ ಉದ್ಯೋಗ ಕಳೆದುಕೊಂಡವರು ಬ್ಯಾಂಕುಗಳಲಿ ಮನೆ ಸಾಲ,ವಾಹನ ಸಾಲ ಪಡೆದಿದ್ದರೆ ಈಗ ಸಾಲ ಮರು ಪಾವತಿ ಆಗದೆ ಸಮಸ್ಯೆ ಉದ್ಭವಿಸಬಹುದು. ಬ್ಯಾಂಕುಗಳು ಮನೆಗಳನ್ನು ಸಾಲ ಸಂದಾಯಕ್ಕಾಗಿ ಮಾರತೊಡಗಿದರೆ, ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಇಳಿದು,ಅಮೆರಿಕಾದ ಆರ್ಥಿಕ ಹಿನ್ನಡೆಯ ರಿಮೇಕ್ ಇಲ್ಲಿಯೂ ನಿರೀಕ್ಷಿತ.
ಹಾಗಾಗದಿರಲಿ ಎನ್ನುವುದು ಎಲ್ಲರ ಹಾರೈಕೆ.