ಅಮೇರಿಕಾ ಅಮೇರಿಕಾ...
ವೀಸಾ ಸ್ಟಾಂಪಿಂಗ್ ಆದಾಗಲೇ
ಮನದಲ್ಲಿ ದುಗುಡ ಶುರುವಾಗಿತ್ತು...
ಕನಸಿನಲ್ಲಿ ಕಂಡದ್ದು ಕಣ್ಣ ಮುಂದೆ ಇತ್ತು...
ಎಲ್ಲರಿಂದ ವಿದಾಯವೂ ಸಿಕ್ತು ...
ಹೋಗೋಕೆ ಎಲ್ಲ ತಯಾರಿಯೂ ಮುಗಿದಿತ್ತು...
ತುಂಬಿದ ಎರಡೂ ಬ್ಯಾಗ್ ಭಾರಿ...
ಮದುವೆಗಿಂತಲೂ ಹೆಚ್ಚಿನ ತಯಾರಿ...
ಮನೆಯಿಂದ ಹೊರಗೆ ಬರೋವಾಗ ಅನಿಸಿತ್ತು...
ಅಪ್ಪ ಅಮ್ಮನ ಜೊತೆ ಮಾತಾಡುವುದು ಇನ್ನು ಸ್ವಲ್ಪ ಉಳಿದಿತ್ತು...
ಕನಸಿನ ಲೋಕವೆಲ್ಲಾ ಹೊರಗಡೆ ಇತ್ತು...
ಆದರೆ ನಮ್ಮತನ ಎಲ್ಲ ಇಲ್ಲೇ ಇತ್ತು...
ಏನೋ ಸ್ವಲ್ಪ ಪಡೆಯೋದು
ಅದಕ್ಕೆನಾ ಇಷ್ಟೆಲ್ಲಾ ಬಿಡೋದು ...??
ಎಲ್ಲ ಗೆಳೆಯರೂ ಕೂಡಿ ನಗೋದು...
ಮತ್ತೆ ಯಾವಾಗ ಸೇರಿ ನಲಿಯೋದು...??
ಕಣ್ಣಲ್ಲಿ ಕನಸಿಗಿಂತ ಕಣ್ಣೀರೆ ಜಾಸ್ತಿ ಆಗಿದೆ...
ಅಮೇರಿಕಾ ಬೇಡವೆ ಬೇಡ ಅಂತ ಎಷ್ಟೋ ಸಲ ಅನಿಸಿದೆ...
ವಿಮಾನ ನಿಲ್ದಾಣದಲ್ಲಿ ಗೆಳೆಯರ ದಂಡು...
ನನ್ನ ಮನವು ಬೆಂಕಿಯ ಚೆಂಡು...
ಎಲ್ಲರ ಜೊತೆಯೂ ಮಾತು-ಕಥೆ...
ನನಗೊಬ್ಬನಿಗೆ ಗೊತ್ತು ಮನದಲ್ಲಿಯ ವ್ಯಥೆ...
ವಿದಾಯ ಹೇಳುವ ಕಾಲ ಬಂತು...
ಅಮ್ಮನ ಮಾತಿನಲಿ ನಡುಕವು ಉಂಟು...
ಏನು ಹೇಳದೆ ಎಷ್ಟೆಲ್ಲಾ ತಿಳಿಯುವುದುಂಟು...??
ಅಪ್ಪ ಅಂದ್ರು 'ಹೋಗ್ತಿಯ ಸಮೃದ್ಧಿಯ ನಾಡು
ಯಶಸ್ಸಿನ ಹಾದಿಲಿ ಮನೆ ಕಡೆ ಚಿಂತೆ ಬಿಡು
ಆದರೆ ಕಾಲ್ ಮಾಡೋ ರೂಢಿ ಇಡು'
ಕೌತುಕ ಕಾಳಜಿ ಇಬ್ಬರ ಕಣ್ಣಲ್ಲಿ...
ಅವರ ಪ್ರೀತಿ ಮುಚ್ಚಿತ್ತು ಸಿಹಿ ತಿಂಡಿಯ ಡಬ್ಬದಲ್ಲಿ...
ಗೆಳೆಯರ ಒಲವು ಅವರ ಶುಭಾಶಯದಲ್ಲಿ ...
ಜನ ಕೇಳ್ತಾರೆ ಏನು ಮಿಸ್ ಮಾಡ್ತಿಯ ಅಂತ...??
ಇವರಿಗೆ ಏನೆಲ್ಲಾ ಹೇಳ್ಬೇಕು ಅಂತ...??
ಗೆಳೆಯರ ಜೊತೆ ತಿರುಗೋದಾ...??
ಏಲ್ಲರೂ ಸೇರಿ ತಿಂಡಿ ತಿನ್ನೋದಾ...??
ಅಮ್ಮ ಮಾಡೋ ರೊಟ್ಟಿ ಸವಿಯೋದಾ...??
ಅಪ್ಪನ ಜೊತೆ ಹರಟೆ ಹೊಡೆಯೋದಾ...??
ಮನೆಯಲ್ಲಿ ಪುಟ್ಟ ಪಾಪುನ ಮುದ್ದಾಡೋದಾ...??
ಹೇಗ್ ಹೇಳೋದು ಏನು ಮಿಸ್ ಮಾಡ್ತೀನಿ ಅಂತ...??
ನಾವು ಈ ದೇಶ ನೋಡಿ ಬೆರಳು ಕಚ್ಚೋದನ್ನ
ಈ ಸುಸಂಸ್ಕೃತ ಜನ ನೋಡ್ತಾರೆ
ಈ ಸಮೃದ್ಧ ಜನ ಕೊನೆಗೂ ಸಮಾಧಾನವನ್ನೇ ಹುಡುಕ್ತಾರೆ...
ಹತ್ತಿರ ಇದ್ರೂ ಜನ ಇಲ್ಲಿ ದೂರಾನೆ ಇರೋದು...
ಎಲ್ಲ ಲೆಕ್ಕಕು ಉತ್ತರ ಇಲ್ಲಿ ಸೊನ್ನೇನೆ ಬರೋದು...
ಅದಕ್ಕೆ ಅನಿಸೋದು ಇಂಥ ದೊಡ್ಡ ರಾಜ್ಯಕ್ಕಿಂತ...
ನಮ್ಮೂರೇ ನಮಗೆ ಚೆಂದ ಅಂತ...
ಅರ್ಥವಿಲ್ಲದ ಸಾಧನೆ ಮಾಡೋದಕ್ಕೆ ಹೋಗಿ
ತಲೆಯ ಮೇಲೆ ಆಸರೆ ಇಲ್ಲದಂತಾಗಿ
ನಮ್ಮದಲ್ಲದ ಸಮೃದ್ಧ ರಾಜ್ಯದ ಪ್ರಜೆಗಳು ನಾವು...
ನಮ್ಮವರಿಂದಲೇ ದೂರವಿರುವ ಭಾಗ್ಯವಂತರೆ ನಾವು...??
(ಇತ್ತೀಚಿಗೆ ಕೇಳಿದ ಒಂದು ಮರಾಠಿ ಕವಿತೆ ನನ್ನ ಮನದಲ್ಲಿ ಅಚ್ಚೊತ್ತಿತ್ತು. ಕವಿತೆ ಕೇಳಿ ಮರುಕಳಿಸಿದ ನನ್ನ ನೆನಪುಗಳನ್ನು ಶಬ್ದಗಳಲ್ಲಿ ವ್ಯಕ್ತಪಡಿಸಿದೆ. ಮೆಚ್ಚುಗೆಗಳೆಲ್ಲ ಮೂಲ ಕವಿತೆಗೆ ಸಲ್ಲಬೇಕು)