ಅಮ್ಮಾ..! ಅಮ್ಮಾ..! ಏನಿದು...?

ಅಮ್ಮಾ..! ಅಮ್ಮಾ..! ಏನಿದು...?

ಕವನ

ಆ! ಅದೊಂದು ಮಧ್ಯರಾತ್ರಿ

ಗಾಢ ನಿದ್ರೆ, ಗಾಢ ನಿದ್ರೆ

ಕನಸೊಂದು ಬಿತ್ತು ಎನಗೆ!

 

ಕನಸು ಆ ಕನಸಲಿ

ನಾನೊಂದು ಹುಡುಗಿಯಾದೆ ಹುಡುಗಿ

ತಂದೆ - ತಾಯಿ ಕಳಕೊಂಡ ತಬ್ಬಲಿ ಹುಡುಗಿ

ದಿನ ದಿನವೂ ಕಣ್ಣೀರಿಡುವ ಹುಡುಗಿ

ಶೋಷಣಾಗ್ರಸ್ಥ ಸಮಾಜದ ಹುಡುಗಿ ||

 

ಯಾರೋ? ಪುಣ್ಯಾತ್ಮರೊಬ್ಬರು ಸಿಕ್ಕರು.

ನನ್ನ ಕೈ ಹಿಡಿದು ಸೇರಿಸಿದರು, ಆಶ್ರಮ ಶಾಲೆಗೆ.

ಕಣ್ಣೀರು ತೊಲಗಬಹುದೆಂದು ಶಾಲೆ ಸೇರಿದೆ, ಬೆಳಕು ಕಾಣಲು ||

 

ವಿಧಿಯಾಟವೇ ಬೇರಿತ್ತು, ಕ್ರೂರತೆಯಲಿ.

ಆಶ್ರಮದ ಒಡೆಯ ನನ್ನ ಮೇಲೆ ಕಣ್ಣಿಟ್ಟ!

ಆ ನೀಚನ ಅಭ್ಯಾಸ ಹೆಣ್ಣುಮಕ್ಕಳ ಶೋಷಣೆ!

ಮತ್ತದೇ ಕಣ್ಣೀರಧಾರೆ, ಅದೇ ನೋವಿನ ಸರಮಾಲೆ ||

 

ಯಾರೋ? ಮತ್ತೊಬ್ಬ ಪುಣ್ಯಾತ್ಮ ಸಿಕ್ಕರು.

ಮತ್ತೆ ಆಶಾವಾದಿಯಾದೆ, ಬಾಳ್ ಬೆಳಕಿಗೆ.

ಪೊಲೀಸ್ ಠಾಣೆಗೆ ದೂರು ನೀಡಿದೆ.

ಕಣ್ಣೀರ ಒರೆಸಿ ಎನ್ನಯ ಬದುಕಿಗೆ ಬೆಳಕು ತೋರುವರೆಂದು ||

 

ಅವರದೊಂದು ಪ್ರಶ್ನೆ.... ನೀನು ಯಾರು?

ಬಸವಣ್ಣನ ನ್ಯಾಯ ಬೇಡಲು ಬಂದ ಬಸವ ತಬ್ಬಲಿ.

ಕಣ್ಣೀರ ಕಥೆ ಹೇಳಿದೆ, ನಾನೊಬ್ಬಳು ಅನಾಥೆಯೆಂದು. 

ಮರುಗಿದರು... ಕೊರಗಿದರು... ಹೊರ ನೋಟದಲಿ..;

ಬೆದರಿದರು, ಆಘಾತಪಟ್ಟರು ಆಶ್ರಮಾಧೀಶನ ಅನಾಚಾರ ಕೇಳಿ...!

ಅಭಯಹಸ್ತ ನೀಡದಾದರು...!

ರಕ್ಷಣೆಯಿಂದ ದೂರ ಸರಿದರು...!

ಮಾತೊಂದು ಹೇಳಿದರು ಈ ವಿಷ ವರ್ತುಲದಲಿ

ನಿನಗೆ ರಕ್ಷಣೆಯೇ? ನ್ಯಾಯವೇ? ಕನಸಿನ ಮಾತು ಎಂದರು!

 

ಗುಡುಗು ಸಿಡಿಲು ಒಮ್ಮೆಗೇ

ಅಪ್ಪಳಿಸಿತು ಎನ್ನೆದೆಗೆ..

ಎದೆಬಡಿದು ಕಣ್ಣೀರು ಸುರಿಸಿದೆ ಮತ್ತೆ ಮತ್ತೆ...

ಪ್ರಜಾರಾಜ್ಯವಿದು... 

ಪ್ರಜೆಗಳು ಪ್ರಭುಗಳೋ? ಅನಾಥರೋ??

ಪ್ರಜೆಗಳೇ ಅನಾಥರಾದಮೇಲೆ... ಅನಾಥರಿಗ್ಯಾರು ಗತಿ....

ಭಾರತಾಂಬೆಯ ಮಡಿಲಲಿ ಹೆಣ್ಣಿಗಿಲ್ಲವೇ ರಕ್ಷಣೆ ....?

ಕನ್ನಡಾಂಬೆಯ ಮಡಿಲಲಿ ಕನಡತಿಗಿಲ್ಲವೇ ಸಂರಕ್ಷಣೆ..?

ಬಸವಣ್ಣನ ನಾಡಿನಲ್ಲಿ ಬಸವ ತಬ್ಬಲಿಗಿಲ್ಲವೇ ನ್ಯಾಯ..?

ಯಕ್ಷಪ್ರಶ್ನೆ...?

ದೊಪ್ಪನೆ ಮಂಚದಿಂದ ಕೆಳಗುರುಳಿದೆ.

ಬೆದರಿದ! ಭೂತಾಯಿಯ ಬಿಗಿದಪ್ಪಿಕೊಂಡೆ.

ಅಮ್ಮಾ; ಕೂಗಿ ಕರೆದೆ..! ಘೋರ ಕನಸೆಂದು ಚೀರಿದೆ...

 

- ಟಿ.ಮಂಜಪ್ಪ. ನಿ. ಮು.ಶಿ, ಶಿವಮೊಗ್ಗ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್