ಅಯೋಧ್ಯೆ ಪ್ರಕರಣ : ನಿನ್ನೆ ಮತ್ತು ಇಂದು ನಾನು ಕಂಡದ್ದು

ಅಯೋಧ್ಯೆ ಪ್ರಕರಣ : ನಿನ್ನೆ ಮತ್ತು ಇಂದು ನಾನು ಕಂಡದ್ದು

ಬರಹ


  ಅಯೋಧ್ಯೆ ತೀರ್ಪು ಹೊರಬೀಳಲಿರುವ ಇಂದು, ಅಂದರೆ ಸೆಪ್ಟೆಂಬರ್ ೩೦ರಂದು, ಮಧ್ಯಾಹ್ನ ೧೨ ಗಂಟೆಗೀಗ ಈ ಲೇಖನ ಬರೆಯಲು ಕುಳಿತಿದ್ದೇನೆ.
  ನಿನ್ನೆ ಇಡೀ ದಿನ ಮತ್ತು ಇಂದು ಬೆಳಗಿನಿಂದ ಇಷ್ಟೊತ್ತಿನವರೆಗೆ ನಾನು ಬೆಂಗಳೂರು ಉದ್ದಗಲ, ಯಲಹಂಕ, ಹೊಸಕೋಟೆ, ವರ್ತೂರು, ಸರ್ಜಾಪುರ, ಅತ್ತಿಬೆಲೆ, ಆನೇಕಲ್ ಮೊದಲಾದ ಸ್ಥಳಗಳನ್ನು ಸುತ್ತಾಡಿ ಇದೀಗಷ್ಟೇ ಮನೆಗೆ ವಾಪಸಾದೆ. ಹಿಂದೂ ಮತ್ತು ಮುಸ್ಲಿಂ ಕೋಮುಗಳ ಪುರುಷರು-ಸ್ತ್ರೀಯರು ಹಲವರನ್ನು ಅಯೋಧ್ಯೆ ತೀರ್ಪಿನ ಬಗ್ಗೆ ಈ ಎರಡು ದಿನಗಳಲ್ಲಿ ಮಾತಾಡಿಸಿದ್ದೇನೆ. ಕನಿಷ್ಠಪಕ್ಷ ನೂರು ಮಂದಿಯೊಡನಾದರೂ ನಾನು ಮಾತಾಡಿರಬಹುದು. ಯಾರೊಬ್ಬರೂ ತೀರ್ಪಿನ ನಂತರ ಗಲಭೆಯನ್ನು ಬಯಸಿಲ್ಲ. ’ಇಂತಹ ಸಂದರ್ಭಗಳಲ್ಲಿ ಶಾಂತಿ ಕಾಪಾಡಬೇಕೆಂಬ ನಮ್ಮ ಹಂಬಲವೇ ನಾವು ಭಾರತಮಾತೆಗೆ ಸಲ್ಲಿಸಬಲ್ಲ ಅತಿದೊಡ್ಡ ಗೌರವ, ಮತ್ತು, ಶಾಂತಿ ಕಾಪಾಡುವ ಇಚ್ಛಾಶಕ್ತಿಯೇ ಈ ದೇಶದ ಅತಿ ದೊಡ್ಡ ಶಕ್ತಿ’ ಎಂದು ನಾನು ವಿವರಿಸಿದಾಗ ಹಿಂದು-ಮುಸ್ಲಿಂ ಎಲ್ಲರೂ ಒಕ್ಕೊರಲಿನಿಂದ ಹೌದೆಂದು ಪ್ರತಿಕ್ರಿಯಿಸಿದ್ದಾರೆ.
  ’ಸಂಪದ’ದಲ್ಲಿ ನಿನ್ನೆ ನಾನು ಬರೆದ ಕಿರುಬರಹಕ್ಕೆ ಸಂಪೂರ್ಣ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಪ್ರತಿಕ್ರಿಯಿಸಿರುವ ಎಲ್ಲ ಓದುಗ ಮಿತ್ರರೂ ಶಾಂತಿಯನ್ನು ಪ್ರತಿಪಾದಿಸಿದ್ದಾರೆ.
  ಇದನ್ನೆಲ್ಲ ಕಂಡಾಗ ನನಗೆ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. (೧) ಭಾರತದ ಹಿಂದು-ಮುಸ್ಲಿಂ ಎರಡೂ ಕೋಮುಗಳ ಎಲ್ಲ ಶ್ರೀಸಾಮಾನ್ಯರೂ ಶಾಂತಿಯುತ ಸಹಬಾಳ್ವೆಯನ್ನು ಬಯಸುವವರು; (೨) ಶಾಂತಿಯ ಬಯಕೆಯು ಸಮಾಜದಲ್ಲಿ ಸದಾ ಹೃದಯಗಳನ್ನು ಬೆಸೆಯುತ್ತದೆ, ಜನರನ್ನು ಒಗ್ಗೂಡಿಸುತ್ತದೆ.
  ಈ ಎರಡು ಇತ್ಯಾತ್ಮಕ ವಿಷಯಗಳೇ ನಮ್ಮೀ ದೇಶದ ಮಹಾನ್ ಶಕ್ತಿ. ಅದನ್ನು ಕಾಪಾಡಿಕೊಳ್ಳೋಣ. ಯುದ್ಧ-ಗಲಭೆಗಳಿಂದ ಎರಡೂ ಕಡೆಯವರಿಗೂ ನಷ್ಟ; ಶಾಂತಿ-ಸೌಹಾರ್ದಗಳಿಂದ ಎರಡೂ ಕಡೆಯವರಿಗೂ ಲಾಭ. ಆಂತರಿಕ ಗಲಭೆಗಳಿಂದ ದೇಶಕ್ಕೆ ನಷ್ಟ; ಆಂತರಿಕ ಶಾಂತಿ-ಸೌಹಾರ್ದದಿಂದ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚಿನ ಪ್ರತಿಷ್ಠೆ ಲಭ್ಯ. ಈ ಸತ್ಯವನ್ನು ನಾವೆಲ್ಲ ಸದಾ ನೆನಪಿನಲ್ಲಿಟ್ಟುಕೊಂಡಿರೋಣ.
  ಇಂದು ತೀರ್ಪಿನ ನಂತರ ಕೆಲವು ಕುತ್ಸಿತಮತಿಗಳಿಂದಾಗಿ ನಮ್ಮ ಸುತ್ತಮುತ್ತ ಏನಾದರೂ ಗಲಭೆ ಸಂಭವಿಸಿದರೆ ನಾವು ಅದರಲ್ಲಿ ಭಾಗಿಗಳಾಗುವುದು ಬೇಡ. ’ಚಂದ’ ನೋಡುತ್ತ ನಿಲ್ಲುವ ಮೂಲಕ ಗಲಭೆ ವಾತಾವರಣಕ್ಕೆ ಸಂಖ್ಯಾಬಲ ನೀಡುವುದೂ ಬೇಡ. ನಮ್ಮ ಸುತ್ತಮುತ್ತಲಿನವರೇ ಯಾರೋ ಕೆಲವರು ಅನ್ಯೋದ್ದೇಶದಿಂದ ಗಲಭೆ ಶುರುಹಚ್ಚಿದರೆಂದರೆ ಆಗ ನಾವು, ಸಾಧ್ಯವಿದ್ದರೆ, ಅವರಿಗೆ ತಿಳಿಹೇಳಿ ಗಲಭೆಯ ಕಿಡಿಯನ್ನು ಆರಿಸುವ ಪ್ರಯತ್ನ ಮಾಡೋಣ.
  ಇತರ ಅನೇಕ ಅವಿವೇಕಿ ರಾಷ್ಟ್ರಗಳಂತಲ್ಲದೆ ಭಾರತವು ವಿವೇಕವನ್ನು ಮೆರೆಯುವ ಪ್ರಬುದ್ಧ ರಾಷ್ಟ್ರ ಎಂಬುದನ್ನು ಈ ಸಂದರ್ಭದಲ್ಲಿ ಜಗತ್ತಿಗೆ ತೋರಿಸಿಕೊಡೋಣ.