ಅಯ್ಯೋ! ಗ್ಯಾಸೆ.........(ನಗೆ ಬರಹ)

ಅಯ್ಯೋ! ಗ್ಯಾಸೆ.........(ನಗೆ ಬರಹ)

ಇನ್ನೇನು ನಾಲ್ಕೇ ನಾಲ್ಕು ಬಾರಿ ಚಕ್ಳಿಕುಲಿ ತಾಳಿಸೋದಿತ್ತು.  ಅಷ್ಟರಲ್ಲಿ ನೀ ಕೈಕೊಟ್ಯಲ್ಲೆ.  ಇನ್ನೊಂದು ಸ್ವಲ್ಪ ಹೊತ್ತು ಇದ್ದಿದ್ದರೆ ನಿನ್ನ ಗಂಟೇನು ಹೋಗುತ್ತಿತ್ತು?  ಈಗ ನೋಡು ಮಡಿಯಲ್ಲಿ ಬೇರೆ ಇದ್ದೇನೆ.  ಆ ಓಣಿಯಲ್ಲಿ ಹೋಗಿ ನಿನ್ನ ಮುಖ ಕಳಚಿ ರೆಗ್ಯೂಲೇಟರ್ ಹಾಕಬೇಕಾ?  ಮನಸ್ಸಲ್ಲೇ ಬೈಕೊಂಡೆ.  ಅದೇರಿ,  ಗಣೇಶ ಹಬ್ಬದ ದಿನವೇ ಗ್ಯಾಸು ಅರ್ಧದಲ್ಲಿ ಖಾಲಿ ಆಯಿತು ಅಡಿಗೆ ಮಾಡುವಾಗ. 
 
 ಪರವಾಗಿಲ್ಲ ದಿನಾ ಅಲ್ಲಿ ನೀರಾಕಿ ತೊಳಿತೀನಲ್ಲಾ.  ದೇಹದ ಮಡಿಗೆ ಹಂಗಂಗೆ ಸಮಾಧಾನ ಮಾಡಿ ಹೋಗಿ ಸಿಲಿಂಡರ್ ನಾಬ್ ತೆಗೆದು ರೆಗ್ಯೂಲೇಟರ್ ಕೂಡಿಸೋಕೆ ನೋಡ್ತೀನಿ, ಊಹೂಂ ಸುತಾರಾಂ ಕೂಡವಲ್ಲದು.  ಅಮುಕಿ ಅಮುಕಿ ಕೈಯ್ಯೆಲ್ಲ ನೋವು ಬಂತು.  ಅಯ್ಯೋ ದೇವರೆ ಈ ಹಬ್ಬದ ದಿನ ಯಾರನ್ನು ಕರೀಲಿ.  ಆಯ್ತು ಪಟಕ್ಕಂತ ಹೋಗಿ ಪಕ್ಕದ ಮನೆ ಹುಡುಗನ್ನೂ ಕರೆದು ಕೂಡ್ಸಪ್ಪಾ ಅಂದಿದ್ದಾಯಿತು. ಇಲ್ಲವೇ ಇಲ್ಲ. "ಆಂಟಿ ರೆಗ್ಯೂಲೇಟರ್ ಹಾಳಾಗಿರಬೇಕು"  "ಇಲ್ಲ ಕಣೊ, ಹಳೆ ಸಿಲಿಂಡರ್ಗೆ ಕೂಡುತ್ತೆ".  "ಆಂಟಿ ಪೋನ್ ಮಾಡಿ.  ಕೂಡಲೇ ಬರುತ್ತಾರೆ."
 
ಇರೊ ಬರೊ ನಂಬರೆಲ್ಲ ಹುಡುಕಿ ಏಜನ್ಸಿಯ ಯಾವ ನಂಬರಿಗೆ ಮಾಡಿದರೂ ಉತ್ತರ ಇಲ್ಲ.  ಎಮರ್ಜನ್ಸಿಗೆ ಈ ನಂಬರಿಗೆ ಟೋಲ್ ಫ್ರೀ ಕಾಲ್ ಮಾಡಿ.   ಇವರ ಮನೆ ಕಾಯಾ!  ಬರಿ ಎಲ್ಲ ಮುದ್ರಿಕೆಯಲ್ಲಿ ನಂಬರ್.  ಪೋನ್ ಮಾಡಿದರೆ ತಗೋಳೋರೆ ಗತಿ ಇಲ್ಲ.  ಸರಿ ಹೊಸ ಗ್ಯಾಸಿಗೆ ಬುಕ್ ಮಾಡೆಂದು ಮಗಳಿಗೆ ಹೇಳಿ ಹೊರಟೆ ಮುಂದಿನ ತಯಾರಿಗೆ.  
 
ಪಕ್ಕದ ಮನೆ ಆಂಟಿ ವಿಚಾರಿಸಲಾಗಿ "ನಮ್ಮಲ್ಲಿ ತುಂಬಿದ ಸಿಲೀಂಡರ್ ಇಲ್ಲಾ ಕಂಡ್ರೀ,ಇದ್ದರೆ ಕೊಡ್ತಿದ್ದೆ" ಸಂದರ್ಭಕ್ಕೆ ತಕ್ಕಂತೆ ಕೊಡುವ ಜಾಣ ಉತ್ತರ ಗೊತ್ತಿದ್ದರೂ ಆ ಸಂದರ್ಭದಲ್ಲಿ ಮರೆತು ಹೋಗಿತ್ತು ನನಗಾದ ಟೆನ್ಸನ್ನಲ್ಲಿ.  ಕಷ್ಟಕ್ಕೆ ಆಗದವರ ಸಾಲಿನಲ್ಲಿ ದಾಖಲಿಸಿರೋದು ನಂತರ ನೆನಪಾಯಿತು.  ಇನ್ನೊಬ್ಬರು "ಈಗ ಬಂದೆ,ಸ್ನಾನ ಮಾಡಿ"  ಪತ್ತೆ ಇಲ್ಲ ಆಸಾಮಿ.  ಬಹುಶಃ ಇನ್ನೂ ಸ್ನಾನ ಮುಗಿದಿಲ್ಲ ಅನಿಸುತ್ತದೆ ಪಾಪ!  
 
ಗಣೇಶನಿಗೆ ಅದೆಷ್ಟು ಬಗೆ ತಿಂಡಿ ತೀರ್ಥ ಮಾಡಿದರೂ ಸಾಲದು ಅಂತ ನನ್ನಪ್ಪನ ಮನೆಯಲ್ಲಿ ಇದನ್ನೇ ಅನುಸರಿಸಿ ಹಲವು ಬಗೆ ತಿಂಡಿಗಳು ನೈವೇದ್ಯಕ್ಕೆ ಮಾಡುತ್ತಿದ್ದರು. ನಾನೂ ಕೂಡಾ ಇದೇ ಪದ್ದತಿಯಲ್ಲಿ ಒಂದಷ್ಟು ಬಗೆ ಮಾಡೋದು ರೂಢಿ ಮಾಡಿಕೊಂಡಿದ್ದೆ.  ಏನೆ ತೊಂದರೆ ಬಂದರೂ ತಪ್ಪಿಸುತ್ತಿರಲಿಲ್ಲ.  ಆದರೆ ಇತ್ತೀಚೆಗೆ ಯಾಕೊ ಮನಸ್ಸು ಎಲ್ಲದಕ್ಕೂ ಹಿಂದೇಟು ಹಾಕುತ್ತಿದೆ.  ಬರಿ ಪಂಚಕಜ್ಜಾಯ,ಚಕ್ಕುಲಿ,ಮೋದಕ, ಕರ್ಜೀಕಾಯಿ, ಶಂಕರಪೊಳೆ,ಎಳ್ಳುಂಡೆ,ಬಾಳೆ ಹಣ್ಣಿನ ಶೀಕರಣೆ ಒಂದಷ್ಟು ಹಣ್ಣುಗಳು. ಇವಿಷ್ಟೇ ನೈವೇದ್ಯಕ್ಕೆ ತಯಾರಾಗಿದ್ದು.  ಕಡಬು ಮಾಡಿಲ್ಲ ಅನ್ನುವ ಕೋಪಕ್ಕಿರಬೇಕು ಗಣೇಶ ಊಟಕ್ಕೆ ಮೂರು ನಾಮ ಹಾಕಿದ ಅಂತ ಮನಸಲ್ಲೆ ನನ್ನನ್ನೇ ನಾ ಶಪಿಸಿಕೊಂಡೆ.   
 
ಏನೆ ಮಾಡಿದರೂ ತಿನ್ನೋದು ನಾವೇ ಆದರೂ ಸಾಲದ್ದಕ್ಕೆ ಡಾಕ್ಟರ್ ಬೇರೆ ಕಡಿವಾಣ ಹಾಕಿರುತ್ತಾರೆ ಅದು ತಿನ್ನಬೇಡಿ ಇದು ತಿನ್ನಬೇಡಿ.  ಇನ್ನು ಮಾಡಿದ್ದೆಲ್ಲ ನೋಡ್ತಾ ಕೂರೋಕ್ಕೆ ಆಗುತ್ತಾ?  ಬಾಯಿ ಚಪಲ ಎಲ್ಲಿ ಕೇಳುತ್ತೆ.  ತಿಂದೋಗುತ್ತೆ.  ಬೇಡ್ ಬೇಡಾ ಅಂದರೂ ಆಗುವ ಬೇಜಾರಿಗೆ ಇಷ್ಟು ವರ್ಷ ಮೆಂದ ಬಾಯಿಗೆ ಹಬ್ಬ ಹುಣ್ಣಿಮೆ ಅದೂ ಇದೂ ಅಂತ ದೇವರ ಹೆಸರಲ್ಲಿ ಮಾಡುವ ತಿಂಡಿಗಳಿಗೆ ಕಡಿವಾಣ ಹಾಕಿ ಹಾಕಿ ಈ ಸಾರಿ ಗಣೇಶನಿಗೂ ಸಂಚಕಾರ ಮಾಡಿದ್ದು ಎಲ್ಲೋ ತಪ್ಪಾಯಿತೇನೊ ಅನ್ನುವ ಕುರ್ ಕುರಿ ಮನಸ್ಸು ಕಾಡಲು ಶುರುವಾಯಿತು.  ಮಾಡಿದ್ದಷ್ಟೇ ತಿಂಡೀನ ಅವನ ಮುಂದಿಟ್ಟು ತಪ್ಪಾಯಿತು ಕಣಪ್ಪಾ . ಕಡಬಿನ ನೈವೇದ್ಯ ಮಾಡೇ ಮಾಡ್ತೀನಿ ಅನ್ನುವ ಭಾಷೆ ಇಟ್ಟು ಮಂಗಳಾರತಿ ಬೆಳಗಿ ಅಡ್ಡಬಿದ್ದೆ.  ಅದವನಿಗೆ ಕೇಳಿಸಿತೊ ಇಲ್ಲವೊ ಗೊತ್ತಿಲ್ಲ, ನಾನಂತೂ ಪಾಪ ಪ್ರಜ್ಞೆಯಿಂದ ಹೊರ ಬಂದೆ.
 
ಮತ್ತೆ ಅಡಿಗೆ ಮಾಡುವ ಯೋಚನೆಗೆ ತಿಲಾಂಜಲಿ ಇಟ್ಟು ಹೆಚ್ಚಿಟ್ಟ ತರಕಾರಿ ಫ್ರಿಜ್ ಸೇರಿಸಿ ಮೊದಲೇ ಮಾಡಿಟ್ಟುಕೊಂಡಿದ್ದ ಅನ್ನಕ್ಕೆ ಒಂದಷ್ಟು ಸೌತೇಕಾಯಿ ಸಲಾಡ್ ಮಾಡಿ ಗಣೇಶ ಹಬ್ಬದ ಊಟ ಮುಕ್ತಾಯವಾಯಿತು.
 
ಹಾಂ, ಪಕ್ಕನೆ ನೆನಪಾಯಿತು ಅಟ್ಟದ ಮೇಲಿನ ಮೂವತ್ತು ವರ್ಷದ ಸಂಗಾತಿ.  ಅದೇರಿ, ಹಳೆ ಕಾಲದ ಕರೆಂಟ್ ಸ್ಟೋವ್ ಅತ್ತೆ ಬಿಟ್ಟುಕೊಟ್ಟಿದ್ದು ನಮ್ಮವರು ತಂದಿರುವುದೆಂದು.  ಅದಿನ್ನೂ ಜೋಪಾನವಾಗಿ ಎತ್ತಿಟ್ಟಿದ್ದೆ . ಎಷ್ಟೇ ಹಳೆಯ ಸಾಮಾನಾದರೂ ಬಿಸಾಕುವ ಬುದ್ಧಿಯಿಲ್ಲದ ನನ್ನ ಸ್ವಭಾವ ಈಗ ಉಪಯೋಗಕ್ಕೆ ಬಂತು.  "ಮಗಳೆ ಹತ್ತು ಅಟ್ಟ ತೆಗಿ ಕರೆಂಟ್ ಸ್ವೋವ್" ಅಂದೆ.  "ಏನಮ್ಮಾ ಅದಿನ್ನೂ ಇಟ್ಕೊಂಡಿದೀಯಾ?  ಅದೇನು ಸರಿಗಿದೆಯೊ ಇಲ್ಲವೊ?"  ಪ್ಲಗ್ ಹಾಕಿ ನೋಡಿದರೆ ಸರಿಯಾಗಿದೆ!  "ತದಾಂಗು ತಕಧಿಮಿ ತೋಂ"  ಮನಸ್ಸು ಅದುವರೆಗಿನ ಟೆನ್ಷನ್ ಮರೆತು ಖುಷಿಯಿಂದ ಕುಣಿಯಿತು.  ಹಳೇ ಸ್ಟೋವಲ್ಲಿ ಮಾಡಿದ ಬಿಸಿ ಬಿಸಿ ಕಾಫಿ ಹೊಟ್ಟೆ ಸೇರುತ್ತಿದ್ದಂತೆ ಉತ್ಸಾಹ ಉಕ್ಕಿ ಬಂತು.  ತಾಣಕ್ಕೆ ಈ ದಿನವೇ ಕಳಿಸಬೇಕಾಗಿದ್ದ ಬರಹದ ಹುಡುಕಾಟದಲ್ಲಿ ತಲ್ಲೀನಳಾದೆ.  ಎಲ್ಲವನ್ನೂ ಬ್ಲಾಗಲ್ಲಿ ಹುಡುಕಿ ಸರಿಪಡಿಸಿ ಕಳಿಸುವಷ್ಟರಲ್ಲಿ  ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.  ರಾತ್ರಿಯ ಊಟ ಗುರುಗಳ ಉಪವಾಸವಾಯಿತು ಚಿಂತೆಯಿಲ್ಲದೆ.  ಮಾಡಿದ ತಿಂಡಿಗಳನ್ನು ಹೋಗ್ತಾ ಬರ್ತಾ ತಿಂದು ಮಗಳಾಗಲೇ "ಅಮ್ಮಾ ರಾತ್ರಿಗೇನು ಬೇಡಾ ನನಗೆ" ಅಂದಾಗಿತ್ತು.
 
ಮಾರನೇ ದಿನ ಪಂಚಮಿ.  ಮತ್ತದೆ ಪೂಜೆಯ ಸಡಗರ ಬೇಗ ಎಲ್ಲ ಮುಗಿಸುವ ಧಾವಂತ.  ಪೊಪಾಯಾ ಹಣ್ಣು ಹಸಿದ ಹೊಟ್ಟೆಯಲ್ಲಿ ತಿನ್ನಬೇಕು ಡಾಕ್ಟರ್ ಉವಾಚ! ಪಾಲಿಸಿದೆ.  ಮನೆಗೆಲಸ ಎಲ್ಲ ಮುಗಿಸಿ ಬೇಗ ಪೂಜೆನೂ ಮಾಡಿದ್ದಾಯಿತು.  ನೈವೇದ್ಯಕ್ಕೆ ಇಟ್ಟ ಹಾಲು ಬಿಸಿ ಮಾಡಲು ಇಟ್ಟಾಗ ಸ್ವಲ್ಪ ಚಾ ಪುಡಿ ಹಾಕು ಹೇಳ್ತಿತ್ತು.  ಸರಿ ಇಬ್ಬರಿಗೂ ಆಗುತ್ತೆ ಅಂತ ಇನ್ನೊಂದಷ್ಟು ಹಾಲು ಪಾತ್ರೆಗೆ ಹಾಕಲು ಹೋದೆ.  ಕರೆಂಟು ಎಳೀತು ನೋಡಿ.  ಮೈಯ್ಯೆಲ್ಲ ಅದುರಿತು, ಹಾಲೊಂದಷ್ಟು ಚೆಲ್ಲಿತು, ಕೈ  ಹಾಲಿನ ಪಾತ್ರೆ ಬಿಡಲಿಲ್ಲ. ಸ್ವಲ್ಪ ಕಿರುಚಿದ್ದೆ, ಅನಿಸುತ್ತೆ. ಸಾಕಿದ ನಾಲ್ಕು ಕಾಲಿನ ನಮ್ಮನೆ ಪುಟ್ಟಾ ಓಡಿ ಬಂದು ಭೌ ಭೌ ಅಂತು.  ಇತ್ತ ಮಗಳು ಅಮ್ಮಾ ಏನಾಯಿತು? ಅಂತ ತನ್ನ ರೂಮಿಂದ ಓಡಿ ಬಂದ್ಲು, ಸ್ಟೋವ್ ಉರಿತಾನೆ ಇತ್ತು.  ಕಾಲಿಡಲು ಜಾಗವಿಲ್ಲ,  ಹೇಗೊ ಸ್ವಿಚ್ ಬಂದು ಮಾಡಿ ಸುಧಾರಿಸಿಕೊಂಡು ಸ್ವಶ್ಚ ಮಾಡುವಷ್ಟರಲ್ಲಿ ಸಾಕಾಯಿತು. ಹಾಗಂತ ಟೀ ಕುಡಿಯದಿರಲು ಸಾಧ್ಯವೆ?  ಖಂಡಿತಾ ಇಲ್ಲ.  ಮತ್ತೆ ಗೊಟಾಯಿಸಲು ಇಟ್ಟು ಇನ್ನೇನು ಬಗ್ಗಿಸಬೇಕು ಕಪ್ಪಿಗೆ ಕೈ ತಪ್ಪಿ ಸಿಂಕು ಟೀಯೆಲ್ಲ ಕುಡಿಬೇಕಾ?  ಥೊ^^^^^ ಇದ್ಯಾಕೊ ಗಣೇಶಾ ಏನೇನೊ ಅವಾಂತರ ಮಾಡುತ್ತಿದ್ದಾನೆ.  ಯಾಕೆ? ಯಾಕೆ? ಅಂತ ತಲೆ ಕೆಡೋಕೆ ಶುರುವಾಯಿತು.  ಇದೇ ಯೋಚನೆಯಲ್ಲಿ ಮತ್ತೆ ಟೀಗಿಟ್ಟಾಗ ಪಕ್ಕನೆ ನೆನಪಾಯಿತು ಚಂದನ ತೇಯಿದು ಹಚ್ಚಿ ನಾನು ಪೂಜೆ ಮಾಡೋದು ಮರೆತೆ.  ಆಯಿತು ಗಣೇಶಾ ಅದನ್ನೂ ಪೂರೈಸುತ್ತೇನೆ.  ಇನ್ನೇನು ಅವಾಂತರ ಮಾಡಬೇಡಾ.  ಸಧ್ಯ ಟೀ ಸುರಕ್ಷಿತವಾಗಿ ಕುಡಿಯಲು ಬಿಡು ಮಾರಾಯಾ.  ತಪ್ಪಾಯಿತು ನನ್ನಪ್ಪಾ ಅಂತ ಬೇಡಿಕೊಂಡ ಮೇಲೆ ಇಲ್ಲಿಯವರೆಗಿನ ಗಳಿಗೆಗಳು ಸುರಕ್ಷಿತವಾಗಿ ಇವೆ.  ಟೀ ಕುಡಿದು ಅಡಿಗೆಗೆ ತೊಡಗಿದೆ.
 
ಎಲ್ಲಿ ಕರೆಂಟು ಗೋತಾ ಆದರೆ ಅಂತ ಹಿಂದಿನ ದಿನ ಫ್ರಿಡ್ಜಲ್ಲಿ ಪೇರಿಸಿಟ್ಟ ತರಕಾರಿ ಎಲ್ಲ ಬೇಯಿಸಿದ್ದಾಯಿತು.  "ನೋಡೆ ಗ್ಯಾಸಿಲ್ಲ.  ಸಾಯಂಕಾಲಕ್ಕೂ ಸೇರಿಸಿ ಅನ್ನ ಮಾಡ್ತೀನಿ" ಹೇಳಿ ಅನ್ನವನ್ನೂ ಮಾಡಿದ್ದಾಯಿತು.  ಪಲ್ಯವೂ ರೆಡಿ,ಇನ್ನೇನು ಸಾಂಬಾರ್ ಒಗ್ಗರಣೆ ಹಾಕಿ ಬೇಯೋಕಿಟ್ಟರೆ ರೋಡಲ್ಲಿ ಗ್ಯಾಸ್ ಮೂರ್ಗಾಲಿನ ಆಟೋ ನಿಂತ ಸೌಂಡೂ^^^..  ಪಟಕ್ಕಂತ ಕರೆಂಟ್ ಸ್ಟೋವ್ ಆರಿಸಿ ಗ್ಯಾಸನವನ ಎಳ್ಕಂಬಂದೆ ಬಾರಪ್ಪಾ, ಸ್ವಲ್ಪ ನೋಡಪ್ಪಾ ಅಂದೆ.    "ಮೇಡಂವರೆ ಇದು ನಾಬ್ ದೊಡ್ಡದಿದೆ ಸಿಲೀಂಡರ್ ಬದಲಾಯಿಸಬೇಕು"  ತತ್ತರಿಕೆ ಇನ್ನು ಗ್ಯಾಸ್ ಬರೋದು ಕಾಯಬೇಕಾ?  ಮೂವತ್ತು ವರ್ಷದ ಸಂಸಾರದಲ್ಲಿ ಯಾವತ್ತೂ ಈ ಗ್ಯಾಸ್ ಮಾತ್ರ ಕೈ ಕೊಟ್ಟಿರಲಿಲ್ಲ, ಈ ಹಬ್ಬದಲ್ಲೇ ಹೀಗಾಗಬೇಕಾ? ಹೇಳ್ಕೊಂಡೆ.  ಅವನಿಗೇನು ಕೇಳ್ಕಂಡು ಹೋದಾ.  ಮತ್ತೆ ಬಂದು ಸ್ಟೋವ್ ಸ್ವಿಚ್ ಹಾಕಿದರೆ ಢಮಾರ್!  ಉರಿತಿಲ್ಲ.  ಅದಕ್ಕೂ ನನ್ನ ಮೇಲೆ ಕೋಪ ಬಂತು ಅನಿಸಿತು. ಬೇಜಾರಾಯಿತು ನನಗೆ.  ಹೋಳು ರುಬ್ಬಿದ ಮಸಾಲೆ ಎಲ್ಲ ತಪ್ಪಲೆಗೆ ಹಾಕಿ ಫ್ರಿಜ್ಜಲ್ಲಿ ಪೇರಿಸಿದೆ.  ಮತ್ತದೆ ಸೌತೇಕಾಯಿ ಸಲಾಡು ಪಲ್ಯ ಮೊಸರು ಮಗಳ ಮೂತಿ ವಾರೆಯಾಯಿತು ನಾನೇನು ಮಾಡಲಿ?  ಪಾಪ! ಮಂಗಳೂರು ಸೌತೇಕಾಯಿ ಸಾಂಬಾರು ಬೆಳಗಿನ ಉಪವಾಸದ ಅವಳ ಹೊಟ್ಟೆ ಕಾಯ್ತಿತ್ತು!
 
ಊಟ ಮಾಡಿ ಇನ್ನೇನು ಸ್ವಲ್ಪ ವಿರಮಿಸಬೇಕು ಅಷ್ಟರಲ್ಲಿ ಗ್ಯಾಸ್, ಗ್ಯಾಸ್ ಗೇಟು ಬಡಿತ.  ಸಡಗರದಿಂದ ಹೆಣ್ಣು ಇನಿಯನ ನೋಡಲು ಓಡುವಂತೆ ನಾನೂ ಅವಸರದಲ್ಲಿ ಬಾಗಿಲು ತೆಗೆದು ಬರಮಾಡಿಕೊಂಡೆ ಅವನನ್ನು ಅಲ್ಲ ಗ್ಯಾಸನ್ನು!  ಅದುವರೆಗಿನ ಗ್ಯಾಸ್ ವೃತ್ತಾಂತ ಎಲ್ಲ ಊದಿ.  ಎಷ್ಟೆಂದರೂ ಅವನು ಪರಿಚಯದವನು ಅಲ್ಲವೆ?  ಹೇಳಿಕೊಳ್ಳದಿದ್ದರೆ ಸಮಾಧಾನ ಇಲ್ಲ.  ಅದಲ್ಲದೆ ಆ ನಾಬ್ ಹಾಕಲು ಬರದೇ ಇರೊ ಸಿಲೀಂಡರ್ ಸಾಗಾಕಬೇಕಲ್ಲಾ.  ಏನಾದರೂ ಸಭೂಬು ಹೇಳಿದರೆ?  ಒಳಗೊಳಗೆ ಈ ಕಾಯ್ದೆ ಕಾನೂನಿನ ಅಳುಕು ನನಗೆ.  ಅವನು ಎಲ್ಲಾ ಕೇಳಿಸಿಕೊಂಡು ಏನೂ ಮಾತಾಡದೆ ಎರಡೂ  ಸಿಲೀಂಡರ್ ಬದಲಾಯಿಸಿ ತನ್ನ ಕೆಲಸ ಮುಗಿಸಿ ಹಣ ಪಡೆದು ಹೊರಟ.  ಅಬ್ಬಾ!  ಸಧ್ಯ ಅಂತೂ ಎಲ್ಲಾ ಒಂದು ಹಂತಕ್ಕೆ ಬಂತು.
 
ಅಯ್ಯೋ! ಈ ಬರೆಯೋದರಲ್ಲಿ ಮರೆತಿದ್ದೆ,.  ಗ್ಯಾಸ್ ಬಂತಲ್ಲಾ ಚಕ್ಲಿ ಹಿಟ್ಟು ತಾಳಿಸಬೇಕು ಫ್ರಿಜ್ಜಲ್ಲಿ ಇಟ್ಟಿದ್ದು ಅದೇನು ಬರುತ್ತೊ ಇಲ್ಲವೊ ನೋಡಬೇಕು.  ಬರ್ತೀನಿ ಇರಿ.
 
26-8-2017. 3.22pm
 

Comments