ಅರಣ್ಯರೋದನವಾಗದಿರಲಿ ಹೊಸ ಕೃಷಿಕಾಡು ನೀತಿ
ಗಿಡಮರಗಳೊಂದಿಗೆ ಕೃಷಿಕರದ್ದು ಶತಮಾನಗಳ ಹಳೆಯ ನಂಟು. ಮನೆಯ ಹಿತ್ತಲಿನಲ್ಲಿ, ಜಮೀನಿನ ಬದುಗಳಲ್ಲಿ ಹಣ್ಣಿನ ಮರಗಳು ಹಾಗೂ ಮೋಪಿನ ಮರಗಳನ್ನು ಬೆಳೆಸುವುದು ಕೃಷಿಕರ ಪಾರಂಪರಿಕ ಪದ್ಧತಿ.
ಆದರೆ, ಕಳೆದ 3 - 4 ದಶಕಗಳಲ್ಲಿ ಈ ಪದ್ಧತಿ ನಶಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳು: ಹಿಡುವಳಿಗಳು ಕುಟುಂಬದ ಸದಸ್ಯರೊಳಗೆ ಪಾಲಾಗುತ್ತಾ ಸಣ್ಣದಾಗುತ್ತಿರುವುದು ಮತ್ತು ಮೋಪಿನ ಮರಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಪರವಾನಗಿ ಪಡೆಯುವಾಗಿನ ಸತಾಯಿಸುವಿಕೆ.
ಕೊನೆಗೂ ಈ ಬಗ್ಗೆ ಎಚ್ಚೆತ್ತುಕೊಂಡ ಕೇಂದ್ರ ಸರಕಾರ “ಕೃಷಿಕಾಡು ನೀತಿ” ರೂಪಿಸಿತು. ಇಂತಹ ನೀತಿಯನ್ನು ರೂಪಿಸಿದ ಜಗತ್ತಿನ ಮೊದಲ ದೇಶ ನಮ್ಮದು. ಮಾತ್ರವಲ್ಲ, ಇದನ್ನು ಕಾರ್ಯಗತಗೊಳಿಸಲಿಕ್ಕಾಗಿ ರೂ.444 ಕೋಟಿ ಅನುದಾನ ನೀಡಿತು.
10 ಫೆಬ್ರವರಿ 2014ರಂದು ಘೋಷಿಸಲಾದ “ಕೃಷಿಕಾಡು ನೀತಿ”ಯಲ್ಲಿ ಮರಗಳನ್ನು ಬೆಳೆಸಲಿಕ್ಕಾಗಿ ರೈತರನ್ನು ಪ್ರೋತ್ಸಾಹಿಸಬಲ್ಲ ಮೂರು ಪ್ರಧಾನ ಅಂಶಗಳಿವೆ: ಸಾಲ ನೀಡಿಕೆ, ವಿಮಾರಕ್ಷಣೆ ಮತ್ತು ಕಾನೂನಿನ ಸಡಿಲಿಕೆ.
ಕೃಷಿ ಜಮೀನಿನಲ್ಲಿ ಬೆಳೆಗಳು ಹಾಗೂ ಮೇವಿನ ಬೆಳೆಗಳ ಜೊತೆಗೆ ಮರಗಳನ್ನು ಬೆಳೆಸುವುದೇ ಕೃಷಿಕಾಡು ಪದ್ಧತಿ. ನಮ್ಮ ದೇಶದಲ್ಲಿ ಶೇ.80ಕ್ಕಿಂತ ಅಧಿಕ ಕೃಷಿಕರ ಹಿಡುವಳಿಗಳ ವಿಸ್ತೀರ್ಣ ಎರಡು ಹೆಕ್ಟೇರಿಗಿಂತ ಕಡಿಮೆ. ಕೃಷಿಕಾಡು ಪದ್ಧತಿ ಅನುಸರಿಸಿದರೆ, ಈ ಸಣ್ಣ ಹಿಡುವಳಿಗಳಲ್ಲಿ ವಿವಿಧ ಪ್ರಭೇದದ ಸಸ್ಯಗಳು ಬೆಳೆಯುತ್ತವೆ; ಇದರಿಂದಾಗಿ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.
“ನಮ್ಮ ಹಿಡುವಳಿಗಳ ವಿಸ್ತೀರ್ಣ ಕುಸಿಯುತ್ತಿರುವಾಗ, ಅವುಗಳ ಉತ್ಪಾದಕತೆ ಹೆಚ್ಚಿಸಲು ನಮಗಿರುವ ಒಂದೇ ಒಂದು ದಾರಿ ಕೃಷಿಕಾಡು ಪದ್ಧತಿ ಅನುಸರಿಸುವುದು” ಎನ್ನುತ್ತಾರೆ, ಅಶಿಷ್ ಮೊಂಡೊಲ್. ಅವರು ಕೃಷಿಕಾಡು ನೀತಿಯನ್ನು ರೂಪಿಸಿದ ರಾಷ್ಟ್ರೀಯ ಸಲಹಾ ಸಮಿತಿಯ ಸದಸ್ಯ.
ನಮ್ಮ ದೇಶದಲ್ಲಿ ಮೋಪು, ಪಲ್ಪು, ಪ್ಲೈವುಡ್, ಕಾಗದ – ಇಂತಹ ಕೃಷಿಕಾಡಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದನ್ನು ಪೂರೈಸುತ್ತಿರುವುದು ಆಮದಿನ ಮೂಲಕ. 2021-22ರಲ್ಲಿ ಭಾರತ ಆಮದು ಮಾಡಿಕೊಂಡ ಪಲ್ಪ್ ಮತ್ತು ಕಾಗದಕಸದ ಮೌಲ್ಯ ರೂ.119 ಬಿಲಿಯನ್. (2020-21ರಲ್ಲಿ ಆಮದು ಮಾಡಿಕೊಂಡ ಇದೇ ವಸ್ತುಗಳ ಮೌಲ್ಯ ರೂ.63 ಬಿಲಿಯನ್. ಅಂದರೆ, ಒಂದೇ ವರುಷದಲ್ಲಿ ಅವುಗಳ ಆಮದಿನ ಮೌಲ್ಯ ಸುಮಾರು ಎರಡು ಪಟ್ಟು ಹೆಚ್ಚಳ.)
ಭಾರತದಲ್ಲಿ 22,000ಕ್ಕಿಂತ ಅಧಿಕ ಮರದ ಮಿಲ್ಲುಗಳು, 2,500ಕ್ಕಿಂತ ಅಧಿಕ ದೊಡ್ಡ ಮತ್ತು ಸಣ್ಣ ಮರದ ಮಿಲ್ಲುಗಳು ಹಾಗೂ 660ಕ್ಕಿಂತ ಅಧಿಕ ಪಲ್ಪು ಮತ್ತು ಕಾಗದದ ಮಿಲ್ಲುಗಳಿವೆ. ಈ ಮರ-ಆಧಾರಿತ ಕೈಗಾರಿಕಾ ಘಟಕಗಳು ಕಚ್ಚಾ ವಸ್ತುವಿನ (ಅಂದರೆ ಮರದ) ತೀವ್ರ ಕೊರತೆ ಎದುರಿಸುತ್ತಿವೆ. ಯಾಕೆಂದರೆ, ಶೇಕಡಾ 70ಕ್ಕಿಂತ ಅಧಿಕ ಘಟಕಗಳು ಸಣ್ಣವು; ಅವು ಮೋಪಿಗಾಗಿ ಸುತ್ತಮುತ್ತಲಿನ ಸಣ್ಣರೈತರನ್ನು ಅವಲಂಬಿಸಿವೆ. ಆದರೆ, ಪ್ರೋತ್ಸಾಹದ ಕೊರತೆಯಿಂದಾಗಿ ರೈತರು ಮರಗಳನ್ನು ಬೆಳೆಸುತ್ತಿಲ್ಲ ಹಾಗೂ ಮೋಪು ಉತ್ಪಾದಿಸುತ್ತಿಲ್ಲ.
ಕೇಂದ್ರ ಸರಕಾರ ಘೋಷಿಸಿದ ಕೃಷಿಕಾಡು ನೀತಿ ಈ ಪರಿಸ್ಥಿತಿಯನ್ನು ಬದಲಾಯಿಸಬಲ್ಲದು. ಈ ವರೆಗೆ ಭಾರತೀಯ ಅರಣ್ಯ ಕಾಯಿದೆಯ ಸೆಕ್ಷನ್ 41 ಕೃಷಿಜಮೀನಿನಲ್ಲಿ ಬೆಳೆದ ಮರಗಳನ್ನು ಕಡಿಯಲಿಕ್ಕೆ ಮತ್ತು ಸಾಗಿಸಲಿಕ್ಕೆ ನಿರ್ಬಂಧ ವಿಧಿಸುತ್ತಿತ್ತು. ಹೊಸ ನೀತಿಯಲ್ಲಿ, ಆಯಾ ರಾಜ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ಈ ನಿರ್ಬಂಧ ಸಡಿಲಿಸುವ ಪ್ರಸ್ತಾಪವಿದೆ.
ಕೃಷಿಕಾಡಿಗೆ ಈಗ ವಿಮೆ ಲಭ್ಯವಿಲ್ಲ. ಹೊಸ ಕೃಷಿಕಾಡು ನೀತಿಯಲ್ಲಿ , ಬಿರುಗಾಳಿ, ಬರಗಾಲ ಹಾಗೂ ನೆರೆಯಂತಹ ಪ್ರಾಕೃತಿಕ ವಿಕೋಪಗಳಿಂದ ಮತ್ತು ಕಳ್ಳತನದಿಂದ ಆಗುವ ನಷ್ಟ - ಇವುಗಳಿಗೆ ವಿಮಾರಕ್ಷಣೆ ನೀಡುವ ಭರವಸೆಯಿದೆ. ಜೊತೆಗೆ, ರೈತರು ಬೆಳೆಸಿದ ಮರಗಳು ಕಟಾವಿಗೆ ಬರಲು 10ರಿಂದ 30 ವರುಷಗಳು ಬೇಕಾಗುವ ಕಾರಣ, ರೈತರಿಗೆ ಮರ ಬೆಳೆಸಲು ಕಡಿಮೆ ಬಡ್ಡಿಯ ಸಾಲ ನೀಡುವ ಪ್ರಸ್ತಾಪವೂ ಇದರಲ್ಲಿದೆ.
ಈ ಹೊಸ ನೀತಿಯಿಂದಾಗಿ, ಕೃಷಿಕಾಡಿನ ಪ್ರದೇಶದ ವಿಸ್ತೀರ್ಣವು 25 ದಶಲಕ್ಷ ಹೆಕ್ಟೇರಿನಿಂದ 53 ದಶಲಕ್ಷ ಹೆಕ್ಟೇರಿಗೆ ಹೆಚ್ಚಲಿದೆ ಎಂಬುದು ಕೇಂದ್ರ ಸರಕಾರದ ನಿರೀಕ್ಷೆ.
ಕೃಷಿಕಾಡು ಬೆಳೆಸುವುದರಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಅವಕಾಶಗಳೂ ಹೆಚ್ಚಾಗಲಿವೆ. ಯಾಕೆಂದರೆ, ನಮ್ಮ ಮೋಪಿನ ಬೇಡಿಕೆಯ ಶೇಕಡಾ 64 ರೈತರ ಜಮೀನಿನಲ್ಲಿ ಬೆಳೆದ ಮರಗಳಿಂದ ಪೂರೈಕೆಯಾದರೆ, ಪ್ರತಿ ವರುಷ ಪ್ರತಿ ಹೆಕ್ಟೇರಿನಲ್ಲಿ 450 “ಕೆಲಸದ ದಿನಗಳ” ಉದ್ಯೋಗ ಸೃಷ್ಟಿಯಾಗುತ್ತದೆ” ಎನ್ನುತ್ತಾರೆ ಅಶಿಷ್ ಮೊಂಡೊಲ್.
ಕೇಂದ್ರ ಸರಕಾರವು ಗ್ರಾಮೀಣ ಅಭಿವೃದ್ಧಿ, ಕೃಷಿ ಮತ್ತು ಅರಣ್ಯ – ಈ ಮೂರು ಮಂತ್ರಾಲಯಗಳ ಮೂಲಕ ಕೃಷಿಕಾಡಿಗೆ ಸಂಬಂಧಿಸಿದ ಯೋಜನೆಗಳಿಗಾಗಿ ಪ್ರತಿ ವರುಷ ಸುಮಾರು ರೂ.4,000 ಕೋಟಿ ವೆಚ್ಚ ಮಾಡುತ್ತಿದೆ. ಹೊಸ ಕೃಷಿಕಾಡು ನೀತಿಯಿಂದಾಗಿ, ಈ ವೆಚ್ಚದ ಮೂಲಕ ನಮ್ಮ ರೈತರಿಗೆ ಇನ್ನಷ್ಟು ಅನುಕೂಲವಾಗಲು ಸಾಧ್ಯ.
ಕೃಷಿ ಕಾಡು ನೀತಿ ಜ್ಯಾರಿಯಾಗಿ ಹತ್ತು ವರುಷಗಳಾಗುತ್ತ ಬಂದಿದೆ. ಇದೀಗ ಅದರ ಮೌಲ್ಯಮಾಪನ ಮಾಡಲು ಸಕಾಲ. ಈ ನೀತಿಯಿಂದಾಗಿ ರೈತರಿಗೆ ಅನುಕೂಲವಾಯಿತೇ? ಕೃಷಿ ಕಾಡಿನ ವಿಸ್ತೀರ್ಣ ಜಾಸ್ತಿಯಾಯಿತೇ? ಉದ್ಯೋಗವಕಾಶ ಹೆಚ್ಚಾಯಿತೇ? ಪರಿಸರ ರಕ್ಷಣೆಗೆ ಸಹಾಯವಾಯಿತೇ? ಎಂಬ ಪ್ರಶ್ನೆಗಳಿಗೆ ಮೌಲ್ಯಮಾಪನದಿಂದ ಉತ್ತರ ಸಿಗುತ್ತದೆಂದು ಹಾರೈಸೋಣ.
ಫೋಟೋ 1 ಮತ್ತು 2: ಕೃಷಿಕಾಡು .... ಕೃಪೆ: ಹೊಸಚಿಗುರು ಮತ್ತು ಡೌನ್ ಟು ಅರ್ತ್