ಅರಣ್ಯ ಇಲಾಖೆ ಗುತ್ತಿಗೆ ಸಿಬ್ಬಂದಿ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

ಅರಣ್ಯ ಇಲಾಖೆ ಗುತ್ತಿಗೆ ಸಿಬ್ಬಂದಿ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

ಪ್ರಾಣಾಪಾಯವನ್ನೂ ಲೆಕ್ಕಿಸದೆ, ಮುಂಚೂಣಿಯಲ್ಲಿ ನಿಂತು ರಾಜ್ಯದ ಅರಣ್ಯ ಹಾಗೂ ವನ್ಯಜೀವಿ ರಕ್ಷಣೆಯ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ೪೦೦೦ಕ್ಕೂ ಅಧಿಕ ಹೊರಗುತ್ತಿಗೆ ಸಿಬ್ಬಂದಿ ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ಕಾಡು-ಮೇಡು ಅಲೆಯುತ್ತಾ ನಾಡಿನ ವನ್ಯಜೀವಿ ಸಂಪತ್ತನ್ನು ರಕ್ಷಿಸುತ್ತಿರುವ ಈ ಸಿಬ್ಬಂದಿಗೆ ಕೆಲಸ ಖಾಯಂ ಇರಲಿ, ಸಿಗಬೇಕಾಗಿರುವ ಸಂಬಳವೂ ಸಕಾಲಕ್ಕೆ ದೊರೆಯುತ್ತಿಲ್ಲ. ಕಳೆದ ಮೂರು ತಿಂಗಳಿಂದ ವೇತನವೇ ಆಗಿಲ್ಲ. ಕೆಲವೊಮ್ಮೆ ಆರು ತಿಂಗಳಿಗೊಮ್ಮೆ ಸಂಬಳ ಆಗುವುದೂ ಉಂಟು. ಪೋಲಿಸ್ ಹಾಗೂ ಮಿಲಿಟರಿ ಕ್ಯಾಂಟಿನ್ ಮಾದರಿಯಲ್ಲಿ ಈ ನೌಕರರಿಗೆ ರಿಯಾಯತಿ ದರದಲ್ಲಿ ಪಡಿತರ ಒದಗಿಸುವ ವ್ಯವಸ್ಥೆಯೂ ಇಲ್ಲ. ಜತೆಗೆ ಕಾಡಿಗೆ ಬೆಂಕಿ ಬಿದ್ದಾಗ ನಂದಿಸಲು ಬೇಕಾದ ಉಪಕರಣಗಳು ಇಲ್ಲ. ಕೊಟ್ಟಿರುವ ಉಪಕರಣಗಳನ್ನು ಹೇಗೆ ಬಳಸಬೇಕೆಂಬ ತರಬೇತಿಯನ್ನೂ ಕೊಟ್ಟಿಲ್ಲ. ಹೀಗಾಗಿ ಅನಿವಾರ್ಯವಾಗಿ ಈ ಸಿಬ್ಬಂದಿ ಸೊಪ್ಪು ಹಿಡಿದು ಬೆಂಕಿ ನಂದಿಸಿ ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ವನ್ಯಜೀವಿಗಳ ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಅಥವಾ ವನ್ಯ ಜೀವಿಗಳು ಲಗ್ಗೆ ಇಟ್ಟಾಗ ಓಡಿಸಲು ಬೇಕಾದ ಸಲಕರಣೆಗಳು ಹಾಗೂ ರಕ್ಷಣಾ ಪರಿಕರಗಳು ಇಲ್ಲದೆ ಈ ಸಿಬ್ಬಂದಿ ನಿಜಕ್ಕೂ ಸಮಸ್ಯೆ ಅನುಭವಿಸುತ್ತಿದ್ದಾರೆ.

ಕಾಡು ಇದ್ದರೆ ನಾಡು. ವನ್ಯಜೀವಿಗಳು ಹೆಚ್ಚಿದ್ದಷ್ಟೂ ಕಾಡು ಉಳಿಯುತ್ತದೆ. ನಗರೀಕರಣ ಹೆಚ್ಚಿದಂತೆ ಕಾಡು ನಿಧಾನವಾಗಿ ನಾಶವಾಗಿ, ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಭಂಗವಾಗುತ್ತದೆ. ಹೀಗಾಗಿ ಕಾಡುಗಳ ರಕ್ಷಣೆಗೆ, ವನ್ಯಜೀವಿಗಳನ್ನು ಬೇಟೆಯಾಡುವುದನ್ನು, ಕೊಲ್ಲುವುದನ್ನು ತಡೆಯಲು ಅರಣ್ಯ ಕಾವಲುಗಾರರು ಬೇಕೇಬೇಕು. ಅವರನ್ನು ಸರ್ಕಾರ ಕಾಯಂ ಅಂತೂ ಮಾಡುತ್ತಿಲ್ಲ. ಆದರೆ ವೇತನವನ್ನೂ ಸಕಾಲಕ್ಕೆ ಕೊಡದೆ ಸತಾಯಿಸುವಂತಹ ಮನಃಸ್ಥಿತಿಯನ್ನು ಯಾವುದೇ ಕಾರಣಕ್ಕೂ ತೋರಬಾರದು. ಈ ಸಿಬ್ಬಂದಿಗೆ ಅಗತ್ಯವಿರುವ ತರಬೇತಿಯನ್ನು ನೀಡಿದರೆ ರಾಜ್ಯದ ಅರಣ್ಯ ಇಲಾಖೆಗೆ ಈ ಎಲ್ಲರೂ ಒಳ್ಳೆಯ ಆಸ್ತಿಯಾಗಬಲ್ಲರು. ಹಾಗೆಯೇ ಅವರಿಗೆ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುವತ್ತ ಸರ್ಕಾರ ಆದ್ಯ ಗಮನಹರಿಸಬೇಕು. ಕಾಡಿನಲ್ಲೇ ಅಲೆಯುತ್ತಾ, ವನ್ಯಜೀವಿಗಳ ದಾಳಿ ಯಾವಾಗ ಬೇಕಾದರೂ ಆಗಬಹುದು ಎಂಬ ಭಯದಲ್ಲೇ ಕಾಡು ರಕ್ಷಿಸುತ್ತಿರುವ ಈ ಸಿಬ್ಬಂದಿಯ ಸೇವೆಗೆ ಬೆಲೆ ಕಟ್ಟಲು ಆಗದು. ಸರ್ಕಾರ ಮೊದಲು ಅವರ ಸಮಸ್ಯೆಯನ್ನು ಆಲಿಸಬೇಕು. ಅರಣ್ಯ ಉಳಿಸುವುದು ಎಂದರೆ ಬೆಂಗಳೂರಿನಲ್ಲಿ ನಡೆವ ಸಮಾರಂಭಗಳಲ್ಲಿ ಹೂಕುಂಡದಲ್ಲಿ ನೆಟ್ಟ ಗಿಡಕ್ಕೆ ನೀರು ಹಾಕುವುದಷ್ಟೇ ಅಲ್ಲ.

ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೧೩-೦೧-೨೦೨೪ 

ಚಿತ್ರ ಕೃಪೆ: ಇಂಟರ್ನೆಟ್ ತಾಣ