ಅರಳೀಮರ,ಆಲದಮರ,ಅತ್ತಿಮರ.

ಅರಳೀಮರ,ಆಲದಮರ,ಅತ್ತಿಮರ.

ಬರಹ

ಅರಳೀಮರ (ಅಶ್ವತ್ಥ, ಪಿಪ್ಪಲ..)-
ನಮ್ಮ ದೇಶದ ಎಲ್ಲೆಡೆ ಬೆಳೆಯುವ ಮರ. ಇದರ ತುಂಬಾ ಎಲೆಗಳಿರುತ್ತವೆ. ಸ್ವಲ್ಪ ಗಾಳಿಗೂ ಅಲ್ಲಾಡುತ್ತಾ ಪರಪರ ಶಬ್ದ ಮಾಡುತ್ತಿರುವುದು. ಅದಕ್ಕೇ ಈ ಮರಕ್ಕೆ ‘ಚಲಪತ್ರ’ ಎಂಬ ಹೆಸರೂ ಇದೆ.
ಆಲದಂತೆ ಈ ಮರಕ್ಕೂ ಬೀಳಲುಗಳಿದ್ದರೂ ಗಾತ್ರದಲ್ಲಿ
ಸಣ್ಣ ಮತ್ತು ತೆಳುವಾಗಿರುವುದು.(पीपल कि दाडी :) )

ಈ ವೃಕ್ಷದ ಅಡಿಯಲ್ಲೇ ಕುಳಿತು ಅಖಂಡ ೪೯ ದಿನ ಧ್ಯಾನಿಸಿ,
ಜ್ಞಾನೋದಯವಾದ ಬುದ್ಧನಿಂದಾಗಿ ಇದಕ್ಕೆ ‘ಬೋಧಿ ವೃಕ್ಷ’ ಎನ್ನುವರು.

ಆನೆಗಳಿಗೆ ಇದರ ಎಲೆ ಪ್ರಿಯ ಖಾದ್ಯ ದ್ರವ್ಯ. ೪-೬ ದಿನ ಆನೆಗಳಿಗೆ ಇದರ ಎಲೆ ತಿನ್ನಲು ಸಿಗದಿದ್ದರೆ ಉನ್ಮತ್ತಗೊಳ್ಳುವುದಂತೆ. ಅದಕ್ಕೇ ಅಶ್ವತ್ಥಕ್ಕೆ
‘ಗಜಾಶನ, ಗಜಭಕ್ಷ್ಯ’ ಎಂಬ ಹೆಸರು ಬಂತು.

ಹಿಂದಿ ಹೆಸರು- ಪೀಪಲ್, ಪೀಪರ್

ಇಂಗ್ಲೀಷ್ನಲ್ಲಿ-sacred fig, peepul tree.

ಬಾಟನಿಕಲ್ ಹೆಸರು- Ficus religiosa. (Ficus rumphii ಇತ್ಯಾದಿ ಹಲವು ಪ್ರಭೇದಗಳಿವೆ)

ಅರಳಿಮರದಲ್ಲಿ ಭೂತಪ್ರೇತಗಳು ವಾಸಿಸುವುದಿಲ್ಲ ಎಂಬ ನಂಬಿಕೆ. ದೇವಸ್ಥಾನಗಳ ಸಮೀಪ ಅರಳೀಮರ,ಅಥವಾ ಅರಳೀಮರದ ಸಮೀಪ ದೇವಸ್ಥಾನಗಳು ಏಳುವುದು ಸಾಮಾನ್ಯ.

ಈ ಮರದ ಅಡಿಯಲ್ಲಿ ನಾಗನ ಕಲ್ಲುಗಳನಿಟ್ಟು ಪೂಜಿಸುವರು. ಮಕ್ಕಳಾಗದ ದಂಪತಿಗಳು ಅಶ್ವತ್ಥಕ್ಕೆ ಸುತ್ತು ಹಾಕಿ ನಾಗನ ಕಲ್ಲಿಗೆ ಪೂಜೆ ಸಲ್ಲಿಸಿದರೆ ಮಕ್ಕಳಾಗುವುದಂತೆ.

ಸಿನಿಮಾಗಳಲ್ಲಿ, ಅರಳೀ ಮರದ ಅಡಿಯ ಕಟ್ಟೆಯಲ್ಲಿ, ಹಳ್ಳಿಯ ಸಮಸ್ತ ಜನರು ಸೇರಿ, ಚರ್ಚೆ,ಜಗಳ,ನ್ಯಾಯತೀರ್ಮಾನ ಮಾಡುವುದನ್ನು ನೋಡಿಯೇ ಇರುತ್ತೀರಿ. ಕನ್ನಡದ ಹೆಸರಾಂತ, ಜನಪ್ರಿಯ ನಟ-ಅಶ್ವತ್ಥ.
*************************
ಆಲದ ಮರ- ಭಾರತದ ‘ರಾಷ್ಟ್ರವೃಕ್ಷ’.
ಹಿಂದಿಯಲ್ಲಿ ‘ಬರಗದ್’ ಎನ್ನುವರು.
ಇದರ ನೆರಳಲ್ಲಿ ಬನಿಯಾ(ಹಿಂದೂ ವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು banyan tree ಎಂದು ವಿದೇಶೀಯರು ಕರೆದರು.

ಸಂಸ್ಕೃತದಲ್ಲಿ ಇದನ್ನು ‘ನ್ಯಗ್ರೋಧ’ ಎಂದು ಕರೆಯುವರು. ಬಿಸಿಲು, ಮಳೆ ಕೆಳಗೆ
ಬೀಳುವುದರಿಂದ ತಡೆಯುವುದು ಎಂದು ಇದರ ಅರ್ಥ. ( ನ್ಯಕ್ ಅಧೋದೇಶೇ
ಸೂರ್ಯತಾಪ ವರ್ಷಾದಿ ರೋಧನಾತ್..)

ಬೆಂಗಳೂರಲ್ಲಿರುವ ದೊಡ್ಡಾಲದ ಮರವನ್ನು ನೋಡಲು ಮರೆಯದಿರಿ.
************************
ಅತ್ತಿಮರ-

ಸಂ - ಉದುಂಬರ.
ಹಿಂ - ಗೂಲರ್
ಬಾ.ಹೆಸರು - Ficus glomerata

ಇದರಲ್ಲಿ ಸಣ್ಣತ್ತಿ,ದೊಡ್ಡತ್ತಿ,ಕಲ್ಲತ್ತಿ,ನೀರು‌ಅತ್ತಿ ಎಂದು ಭೇದವಿದೆ.
ಸಿನೆಮಾ ಹಾಡು ‘ಅತ್ತಿಯಾ ಹಣ್ಣು ಅಂಜೂರವೇ..’ ನೆನಪಿದೆಯಾ?
***********************
ಈಗ ಒಂದು ಪ್ರಶ್ನೆ:
ಈ ಮೂರೂ ಮರಗಳ ಸಂಸ್ಕೃತ ಹೆಸರು ಒಟ್ಟಾಗಿ ‘ನ್ಯಗ್ರೋಧೋದುಂಬರೋsಶ್ವತ್ಥ’. ಅಲ್ಲವೇ.
ವಿಷ್ಣು ಸಹಸ್ರನಾಮದಲ್ಲಿ ೮೮ನೇ ಶ್ಲೋಕ-
‘ಸುಲಭಃ.. .. .. ..
ನ್ಯಗ್ರೋಧೋದುಂಬರೋಶ್ವತ್ಥಶ್ಚಾಣೂರಾಂಧ್ರ ನಿಷೂದನಃ’ ಎಂದಿದೆ.

ಸರ್ವ ವೃಕ್ಷಗಳಲ್ಲಿ ‘ಅಶ್ವತ್ಥ’ ನಾನೇ ಎಂದು ಗೀತೆಯಲ್ಲಿ ಕೃಷ್ಣ ಹೇಳಿರುವನು.
ನ್ಯಗ್ರೋಧ, ಉದುಂಬರ 'ವೃಕ್ಷಗಳೂ' ವಿಷ್ಣುವಿನ ಸಹಸ್ರ ನಾಮಗಳಲ್ಲಿ ಸೇರಿರುವುದೇ?

-ಗಣೇಶ.