ಅರಶಿನ ದಾರ- ಕಿರುಗತೆ

ಅರಶಿನ ದಾರ- ಕಿರುಗತೆ

ಶ್ಯಾಮಲಿ ಕಡುಬಡತನದಲ್ಲಿ ಅರಳಿದ ಪುಷ್ಪ‌. ಓದಿನಲ್ಲಿ ಜಾಣೆಯಾಗಿದ್ದ ಮಗಳನ್ನು ಕೂಲಿ ಕೆಲಸ ಮಾಡಿ ಹೆತ್ತವರು ಚೆನ್ನಾಗಿ ಓದಿಸಿ ಶಿಕ್ಷಕ ತರಬೇತಿ ಮಾಡಿಸಿದ್ದರು. ಪದವಿಯಲ್ಲಿ ಜೊತೆಗಿದ್ದ ಪಕ್ಕದ ಮನೆಯ ಭಾಸ್ಕರ್ ಶ್ಯಾಮಲಿ, 'ನಿನ್ನನ್ನೇ ಮೆಚ್ಚಿದ್ದೇನೆಂದು' ಹೇಳುತ್ತಿದ್ದ. ಆದರೆ ಅವನದು ಪ್ರೀತಿಯ ನಾಟಕವೆಂದು ಅರಿಯಲು, ಶ್ಯಾಮಲಿಗೆ ಹೆಚ್ಚು ದಿನ ಬೇಕಾಗಿರಲಿಲ್ಲ. ಬ್ಯಾಂಕ್ ನಲ್ಲಿ ಕೆಲಸ ಸಿಕ್ಕಾಗ, ಶ್ಯಾಮಲಿಯನ್ನು ತಿರಸ್ಕರಿಸಿದ. ತನ್ನ ಜೊತೆಗೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾಳನ್ನು ಮದುವೆಯಾದ. ಆಕೆ ಬಣ್ಣದ ಚಿಟ್ಟೆ ಎಂದು ಅರಿವಾದಾಗ ಕಾಲ ಮಿಂಚಿತ್ತು. ಖಾಸಗಿ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರಿದ ಶ್ಯಾಮಲಿಯನ್ನು ಶಿಕ್ಷಕ ರಮೇಶ ಇಷ್ಟಪಟ್ಟ. ಹಿರಿಯರು ಮುಂದೆ ನಿಂತು ಮಾತುಕತೆಯಾಗಿ  ಸರಳವಾಗಿ ವಿವಾಹ ನಡೆಯಿತು. ಪ್ರೀತಿಸಿ ಮದುವೆಯಾದವಳು ಕೈಕೊಟ್ಟ ಕಾರಣ ಶ್ಯಾಮಲಿಯನ್ನು ಮದುವೆಯಾಗುವ ಕನಸು ಹೊತ್ತ ಭಾಸ್ಕರ ಊರಿಗೆ ಬಂದ. ಯಾರು ಬಂದವರು? ಎಂದು ಕೇಳುತ್ತಾ ಹೊರಬಂದ ಶ್ಯಾಮಲಿಯ ಕತ್ತಿನಲ್ಲಿ ನೇತಾಡುತ್ತಿದ್ದ ತಾಳಿಯೊಂದಿಗಿನ ‘ಅರಶಿನ ದಾರ’ ಭಾಸ್ಕರನನ್ನು ನೋಡಿ ಅಣಕಿಸಿದಂತಾಯಿತು.

-ರತ್ನಾ ಕೆ.ಭಟ್, ತಲಂಜೇರಿ

ಸಾಂದರ್ಭಿಕ ಚಿತ್ರ: ಇಂಟರ್ನೆಟ್ ತಾಣ