ಅರೇಬಿಯನ್ ನೈಟ್ಸ್ ಕಥೆ- ನಿರಕ್ಷರಿ ಶಿಕ್ಷಕ

ಅರೇಬಿಯನ್ ನೈಟ್ಸ್ ಕಥೆ- ನಿರಕ್ಷರಿ ಶಿಕ್ಷಕ

ಅರೇಬಿಯನ್ ನೈಟ್ಸ್ ಅಥವಾ ಅರೇಬಿಯಾದ ಇರುಳು ಎಂಬ ಕಥೆಗಳು ಬಹಳ ಪ್ರಸಿದ್ಧವಾಗಿವೆ. ಪ್ರಪಂಚದ ಬಹುತೇಕ ಭಾಷೆಗಳಿಗೆ ಈ ಕಥೆಗಳು ಅನುವಾದಗೊಂಡು ಅಬಾಲವೃದ್ಧರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನಿದು ಅರೇಬಿಯನ್ ನೈಟ್ಸ್ ಕಥೆಗಳು?

ಬಹಳ ಹಿಂದೆ ಮಧ್ಯಪೂರ್ವ ದೇಶಗಳು ಎಂದು ಕರೆಯಲ್ಪಡುವ ಅರೇಬಿಯಾದಲ್ಲಿ ಅರಸರು (ಖಲೀಫರು) ಆಳುತ್ತಿದ್ದರು. ಶಹರಿಯಾರ್ ಎಂಬ ದೊರೆಯು ಆಳುತ್ತಿದ್ದ ಸಂದರ್ಭದಲ್ಲಿ ದೇಶವು ಸುಭಿಕ್ಷವಾಗಿತ್ತು. ಅವನ ಬಳಿ ಹಲವಾರು ಸಿಪಾಯಿಗಳಿದ್ದರು. ರಕ್ಷಕರು, ಸೇವಕರು ಹಾಗೂ ಗುಲಾಮರೂ ಇದ್ದರು. ಅಧ್ಭುತವಾದ ಅರಮನೆಯಿತ್ತು. ಆದರೆ ಅವನಿಗೆ ಕೊರತೆಯಿದ್ದದ್ದು ವಿಶ್ವಾಸಾರ್ಹ ಪತ್ನಿಯದ್ದು. ಅವನು ಹಲವಾರು ಮಂದಿ ಹುಡುಗಿಯರನ್ನು ಮದುವೆಯಾದರೂ ಅವನಿಗೆ ಅವರಲ್ಲಿ ಒಂದಲ್ಲಾ ಒಂದು ಕೊರತೆ ಕಾಣಿಸುತ್ತಿತ್ತು. ಮದುವೆಯ ಮೊದಲ ರಾತ್ರಿ ಕಳೆದು ಬೆಳಗ್ಗೆಯಾದ ತಕ್ಷಣ ಅವನು ತನ್ನ ಹೆಂಡತಿಯನ್ನು ಕೊಲ್ಲಿಸುತ್ತಿದ್ದ. ಹೀಗಾಗಿ ಅವನಿಗೆ ಹುಡುಗಿಯನ್ನು ಕೊಡಲು ಯಾರೂ ಮುಂದೆ ಬರುವುದಿಲ್ಲ. ಅದೇ ಚಿಂತೆಯಲ್ಲಿ ಸುಲ್ತಾನನು ತನ್ನ ಮಂತ್ರಿಯಲ್ಲಿ ಈ ವಿಷಯ ತಿಳಿಸಿ ತನಗಾಗಿ ಹುಡುಗಿ ಹುಡುಕಲು ಹೇಳುತ್ತಾನೆ. ಮಂತ್ರಿಗೆ ಸಂಕಷ್ಟಕರ ಪರಿಸ್ಥಿತಿ. ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಶಹರಾಜಾದಾ ಹಾಗೂ ದುನಿಯಾಜಾದಾ. ದೊಡ್ಡವಳಿಗೆ ಕತೆ-ಕಾವ್ಯ ರಚನೆಯಲ್ಲಿ ಬಹಳ ಆಸಕ್ತಿ ಇತ್ತು. ತನ್ನ ತಂದೆಯ ನೋವು ಅರಿತ ಶಹರಾಜಾದಾ ತಾನು ರಾಜನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ. ಒಲ್ಲದ ಮನಸ್ಸಿನಿಂದ ಮಂತ್ರಿ ಈ ವಿಷಯವನ್ನು ಮಹಾರಾಜನಲ್ಲಿ ತಿಳಿಸಿದಾಗ ಅವನಿಗೆ ಬಹಳ ಸಂತೋಷವಾಗುತ್ತದೆ. ಶಹರಾಜಾಳ ಸಹೋದರಿಯೂ ಅರಮನೆಯ ನೌಕರಳಾಗಿ ಸೇರಿಕೊಳ್ಳುತ್ತಾಳೆ. 

ಶಹರಿಯಾರ್ ದೊರೆಗೆ ನಿದ್ರಾಹೀನತೆಯ ಸಮಸ್ಯೆ ಇತ್ತು. ಆ ಕಾರಣದಿಂದ ಅವನು ಸದಾ ಮಂಪರಿನಲ್ಲೇ ಇರುತ್ತಿದ್ದ. ಇದನ್ನು ಅರಿತ ಶಹರಾಜಾ ರಾಜನಿಗೆ ಪ್ರತೀ ದಿನ ಒಂದು ಕತೆ ಹೇಳುತ್ತೇನೆ ಎಂದು ಯೋಚನೆ ಮಾಡುತ್ತಾಳೆ. ರಾಜನಿಗೂ ಅವಳ ಈ ಉಪಾಯ ಇಷ್ಟವಾಗುತ್ತದೆ. ಕಥೆಗಳು ಎಷ್ಟು ರೋಚಕವಾಗಿರುತ್ತಿದ್ದುವೆಂದರೆ ರಾಜನಿಗೆ ಪ್ರತೀ ರಾತ್ರಿ ಕಥೆ ಕೇಳಲೇ ಬೇಕೆಂಬ ಆಶೆಯಾಗುತ್ತಿತ್ತು, ಅವನ ಗಮನವೆಲ್ಲಾ ಹೆಂಡತಿ ಹೇಳುವ ರೋಚಕ ಕಥೆಗಳ ಮೇಲೇಯೇ ಇದ್ದುದರಿಂದ ಅವನಿಗೆ ಪತ್ನಿಯ ಯಾವುದೇ ಕೊರತೆ ಕಂಡು ಬರುವುದೇ ಇಲ್ಲ. ಪ್ರತೀ ರಾತ್ರಿ ಶಹರಾಜಾ ಹೇಳಿದ ಕಥೆಗಳೇ ಅರೇಬಿಯನ್ ನೈಟ್ಸ್ ಎಂದು ಖ್ಯಾತಿಯಾಗಿವೆ. ಆ ಕಥೆಗಳಿಂದ ಆಯ್ದ ಸಣ್ನ ಕಥೆ ನಿಮಗಾಗಿ

---

ಅರೇಬಿಯಾದಲ್ಲಿ ಓರ್ವ ಸೋಮಾರಿ ಮನುಷ್ಯ ವಾಸ ಮಾಡುತ್ತಿದ್ದ. ಅವನಿಗೆ ಅಕ್ಷರಾಭ್ಯಾಸ ಇರಲಿಲ್ಲ. ಆ ಕಾರಣದಿಂದ ಅವನಿಗೆ ಓದಲು ಬರೆಯಲು ಬರುತ್ತಿರಲಿಲ್ಲ. ಆದರೆ ಅವನು ಬಹಳ ಚಾಲಾಕಿಯಾಗಿದ್ದ. ಅವನು ತನ್ನ ಜೀವನೋಪಾಯಕ್ಕಾಗಿ ಒಂದು ಉಪಾಯ ಮಾಡಿದ. ಶಾಲೆ ತೆರೆದು ಮಕ್ಕಳಿಗೆ ಪಾಠ ಮಾಡುವ ಯೋಜನೆ ಅವನದ್ದಾಗಿತ್ತು.

ಅವನು ಮೊದಲಿಗೆ ಒಂದು ಕೋಣೆಯನ್ನು ಬಾಡಿಗೆಗೆ ಪಡೆದುಕೊಂಡ. ಅದರಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಹಲವಾರು ಬೆಂಚುಗಳನ್ನು ಹಾಕಿದ. ಗೋಡೆಗಳಲ್ಲಿ ಸುಂದರ ಚಿತ್ರಗಳು ಹಾಗೂ ವಿವಿಧ ದೇಶಗಳ ನಕ್ಷೆಗಳನ್ನು ತೂಗು ಹಾಕಿದ. ಕೆಲವು ಪುಸ್ತಕಗಳನ್ನು ಕೊಂಡು ತಂದ. ಬರೆಯಲು ಹಾಳೆಗಳನ್ನು ತಂದ. ತಾನೊಬ್ಬ ಶಿಕ್ಷಕನಂತೆ ಕಾಣಬೇಕೆಂದು ತನ್ನ ತಲೆಗೆ ದೊಡ್ಡದಾದ ಪೇಟಾ ಕಟ್ಟಿಕೊಂಡು ನಾಲ್ಕು ಜನರಿಗೆ ಕಾಣುವಂತೆ ಕುಳಿತುಕೊಂಡ. 

ಹೀಗೆ ಶಾಲೆಯ ವ್ಯವಸ್ಥೆಗಳನ್ನು ಮಾಡಿದ ನಂತರ, ಆ ದಾರಿಯಲ್ಲಿ ಹೋಗುವ ಪ್ರತಿಯೊಬ್ಬರೂ ಇವನನ್ನು ಗಮನಿಸಿ ಈತ ದೊಡ್ದ ಶಿಕ್ಷಕನಿರಬೇಕೆಂದು ಅಂದುಕೊಂಡರು. ತಮ್ಮ ಮಕ್ಕಳಿಗೆ ಕಲಿಯಲು ಇದೇ ಒಳ್ಳೆಯ ಶಾಲೆ ಎಂದು ತಿಳಿದುಕೊಂಡು ಮಕ್ಕಳನ್ನು ಅವನ ಶಾಲೆಗೆ ಕಳುಹಿಸಿಸತೊಡಗಿದರು.

ಅವನು ಶಾಲೆಯಲ್ಲಿ ಮಕ್ಕಳಿಗೆ ಅವನದ್ದೇ ರೀತಿಯಲ್ಲಿ ಕಲಿಸುತ್ತಿದ್ದ. ಒಬ್ಬ ಬಾಲಕನಿಗೆ ಬರೆಯಲು ಹೇಳಿದರೆ, ಇನ್ನೊಬ್ಬನಿಗೆ ಅದನ್ನು ನಕಲು ಮಾಡಲು ಹೇಳುತ್ತಿದ್ದ. ಮೂರನೆಯವನಿಗೆ ಅದನ್ನು ಓದಲು ಹೇಳುತ್ತಿದ್ದ. ಹೀಗೆ ಒಬ್ಬರು ಇನ್ನೊಬ್ಬರಿಗೆ ಕಲಿಸುವಂತೆ ಮಾಡುತ್ತಿದ್ದ. ಸಾಮೂಹಿಕವಾಗಿ ಹಾಡು ಹಾಡಿಸುತ್ತಿದ್ದ, ಕಥೆ ಹೇಳಿಸುತ್ತಿದ್ದ. ಹೀಗೆ ಅವನ ಶಾಲೆ ಸರಾಗವಾಗಿ ಸಾಗತೊಡಗಿತು. ಅವನಿಗೆ ಓದಲು ಬರೆಯಲು ಬರುವುದಿಲ್ಲವೆಂದು ಯಾರಿಗೂ ತಿಳಿಯಲಿಲ್ಲ.

ಒಂದು ದಿನ ಓರ್ವ ಹೆಣ್ಣು ಮಗಳು ತನ್ನ ಪರ ಊರಿನಲ್ಲಿ ಕೆಲಸಕ್ಕೆ ಹೋಗಿದ್ದ ಗಂಡನ ಪತ್ರವನ್ನು ಈ ಶಿಕ್ಷಕನ ಬಳಿ ಓದಿಸಲು ಶಾಲೆಗೆ ಬಂದಳು. ಇವನಾದರೂ ಅವಳ ಕೈಯಲ್ಲಿರುವ ಪತ್ರ ನೋಡಿ ಗಾಬರಿಗೊಂಡು ತನಗೆ ತುರ್ತಾಗಿ ಕೆಲಸವಿದೆ, ಪ್ರಾರ್ಥನೆ ಮಾಡಲು ಹೋಗಲಿದೆ ಎಂದೆಲ್ಲಾ ನೆಪ ಹೇಳಿದರೂ ಆ ಹೆಣ್ಣು ಮಗಳು ಅವನನ್ನು ಬಿಡಲಿಲ್ಲ. ಕೈಯಲ್ಲಿ ಕಾಗದ ಹಿಡಿದುಕೊಂಡು ಮೇಲೆ ಕೆಳಗೆ ಮಾಡುತ್ತಾ, ಏನು ಮಾಡುವುದೆಂದು ಚಿಂತೆ ಮಾಡುತ್ತಾ ಅವನು ಅಳತೊಡಗಿದ. ಇದನ್ನು ಕಂಡ ಹೆಣ್ಣು ಮಗಳು ತನ್ನ ಗಂಡ ಸತ್ತು ಹೋಗಿದ್ದಾನೆ ಎಂದು ಅಂದುಕೊಂಡಳು. ಅವನಲ್ಲಿ ಈ ವಿಷಯ ಕೇಳಿದಾಗ ಅವನ ದುಃಖ ಇನ್ನಷ್ಟು ಜಾಸ್ತಿಯಾಗಿ ಮತ್ತಷ್ಟು ಜೋರಾಗಿ ಅಳತೊಡಗಿದ. ಆಗ ಆ ಮಹಿಳೆಗೆ ಖಂಡಿತವಾಗಿಯೂ ತನ್ನ ಗಂಡ ಸತ್ತು ಹೋಗಿದ್ದಾನೆ, ಅದನ್ನು ಹೇಳಲು ಗುರುಗಳಿಗೆ ಮನಸ್ಸು ಬರುತ್ತಿಲ್ಲ ಎಂದು ಅನಿಸಿ ಅಳುತ್ತಾ ಮನೆಗೆ ಓಡಿ ಬಂದಳು. ಮನೆಯಲ್ಲಿ ಇವಳ ಅಳು ಕೇಳಿ, ಅವಳ ನೆರೆಮನೆಯ ವ್ಯಕ್ತಿ ಅಲ್ಲಿಗೆ ಬಂದ. ವಿಷಯ ತಿಳಿದು, ನೀನು ಅಳುವುದು ಬೇಡ. ಕಳೆದ ವಾರ ನನಗೂ ಕಾಗದ ಬಂದಿದ್ದು ಅದರಲ್ಲಿ ಅವಳ ಗಂಡ ಇನ್ನು ಹತ್ತು ದಿನದಲ್ಲಿ ಊರಿಗೆ ಬರುತ್ತೇನೆ ಎಂದು ಬರೆದಿದ್ದಾನೆ ಎಂದ.

ಕಡೆಗೆ ಮಹಿಳೆಗೆ ಬಂದ ಕಾಗದ ತರಿಸಿ ಓದಲಾಗಿ ಅದರಲ್ಲಿ  ‘ ನಾನು ಕ್ಷೇಮವಾಗಿದ್ದೇನೆ. ಇನ್ನು ಹತ್ತು ದಿನಗಳ ಒಳಗೆ ನಾನು ಊರಿಗೆ ಬರುತ್ತೇನೆ, ನಿನಗಾಗಿ ಸ್ವಲ್ಪ ಹಣ ಮತ್ತು ಬಟ್ಟೆಯನ್ನು ಬುಟ್ಟಿಯಲ್ಲಿ ಇಟ್ಟು ಕಳುಹಿಸಿದ್ದೇನೆ. ತೆಗೆದುಕೋ’ ಎಂದು ಬರೆದಿದ್ದ.  ಇದನ್ನು ಕೇಳಿದ ಅವಳ ಅಳು ನಿಂತಿತು. ಅವಳು ಮತ್ತೆ ಶಿಕ್ಷಕನ ಬಳಿಗೆ ಬಂದು ವಿಷಯ ತಿಳಿಸಿ ‘ನೀವು ಯಾಕೆ ನನಗೆ ಸುಳ್ಳು ಹೇಳಿದ್ದೀರಿ?’ ಎಂದು ಕೇಳಿದಾಗ ಆ ಚಾಣಾಕ್ಷ ವ್ಯಕ್ತಿ ಹೇಳಿದ' ನಾನು ಗಡಿಬಿಡಿಯಲ್ಲಿ ಇದ್ದುದರಿಂದ ಕೇವಲ ಬಟ್ಟೆ, ಹಣ ಮಾತ್ರ ಓದಿದೆ. ಹಾಗೆ ನನಗೆ ಗೊಂದಲವಾಯಿತು. ಈಗ ಹೇಳುತ್ತೇನೆ ಕೇಳು ನಿನ್ನ ಗಂಡ ಇನ್ನು ಹತ್ತು ದಿನದಲ್ಲಿ ಬರುತ್ತಾನೆ.’ ಎಂದು ಕಾಗದದಲ್ಲಿ ಬರೆದಿದೆ ಎಂದ.

ಅದನ್ನು ಕೇಳಿದ ಮಹಿಳೆ ಇನ್ನಾದರೂ ನೀನು ಸರಿಯಾಗಿ ಓದಿ ವಿಷಯ ಹೇಳು, ಇಲ್ಲವಾದರೆ ಬಹಳ ತೊಂದರೆಯಾಗುತ್ತದೆ ಎಂದು ಹೇಳಿ ಮನೆಗೆ ಹೋದಳು. ಆ ಶಿಕ್ಷಕನೂ ಈ ಸಲ ನನ್ನ ಸತ್ಯ ಸಂಗತಿ ಯಾರಿಗೂ ತಿಳಿಯಲಿಲ್ಲ ಎಂದು ಸಂತೋಷ ಪಟ್ಟುಕೊಂಡ.

ಈ ಕಥೆ ಕೇಳಿದ ರಾಜ ಶಹರಿಯಾರ್ ಬಹಳ ಸಂತೋಷ ಪಟ್ಟ. ಹೀಗೆ ಶಹರಾಜಾ ಪ್ರತೀ ರಾತ್ರಿ ಕೆಲವೊಮ್ಮೆ ಸಣ್ಣ, ಕೆಲವೊಮ್ಮೆ ದೊಡ್ಡದಾದ ಸಾವಿರದ ಒಂದು ಕಥೆಗಳನ್ನು ಹೇಳಿ ರಾಜನನ್ನು ಖುಷಿ ಪಡಿಸಿ ತನ್ನ ಸಾವನ್ನು ತಪ್ಪಿಸಿಕೊಂಡಳು. ಇನ್ನೂ ಹಲವಾರು ಸುಂದರವಾದ, ರೋಚಕ ಕಥೆಗಳು ಅರೇಬಿಯನ್ ನೈಟ್ಸ್ ಪುಸ್ತಕದಲ್ಲಿವೆ. ಸಾಧ್ಯವಾದಾಗ ಬಿಡುವು ಮಾಡಿಕೊಂಡು ಓದಿ. ಮಕ್ಕಳಿಗೆ ಬಹಳ ಮನೋರಂಜನೆ ನೀಡುವ ಕಥೆಗಳು.

(ಅರೇಬಿಯನ್ ನೈಟ್ಸ್ ಕಥೆಗಳಿಂದ ಆರಿಸಿದ್ದು)