ಅರ್ಜುನ
ಮೈಸೂರಿನ ಇತಿಹಾಸ ಪ್ರಸಿದ್ಧ ಜಂಬೂ ಸವಾರಿಯ ನೇತೃತ್ವ ವಹಿಸಿದ್ದ ಅರ್ಜುನ ಎಂಬ ಹೆಸರಿನ ಆನೆಯ ಬಗ್ಗೆ ಮರೆಯಲಾಗದ ನೆನಪಿನ ಪುಸ್ತಕವೊಂದನ್ನು ಬರೆದಿದ್ದಾರೆ ಐತಿಚಂಡ ರಮೇಶ್ ಉತ್ತಪ್ಪ. ಅರ್ಜುನ ಎಂಬ ಆನೆಯ ಬಗ್ಗೆ ಬರೆಯುತ್ತಾ ‘ನಿನ್ನ ಮರೆಯಲೆಂತು ನಾ’ ಎಂದು ರೋಧಿಸಿದ್ದಾರೆ. ಇದಕ್ಕೆ ಎ.ಪಿ. ನಾಗೇಶ್ ಅವರ ಮುನ್ನುಡಿ ಬರಹ ಹೀಗಿದೆ; “ಎಂತಹ ಕೃತಿ..! ಓದುತ್ತಾ ಹೋದಂತೆ ಭಾವುಕನಾದೆ.. ಕಣ್ಣೀರು ತುಂಬಿ ಬಂತು.. ಕೊನೆಯ ಪುಟ ಮುಗಿಸಿದಾಗ ನನಗೆ ಅನ್ನಿಸಿದ್ದು ಮನುಷ್ಯನಿಗಿಂತ ಪ್ರಾಣಿಗಳು ಎಷ್ಟು ವಿಶೇಷವಲ್ಲವೇ.. ಎಂದು. ಐತಿಚಂಡ ರಮೇಶ್ ಉತ್ತಪ್ಪ ಒಬ್ಬ ವಿಸ್ಮಯ ಬರಹಗಾರ. ಅವರು ಪ್ರಾಣಿಗಳನ್ನು ಅರ್ಥ ಮಾಡಿಕೊಂಡಷ್ಟು ಬೇರೆ ಯಾರನ್ನೂ ನೋಡಲಿಲ್ಲ. ಒಂದು ಆನೆಯ ಅಥವಾ ಯಾವುದೇ ಪ್ರಾಣಿಯನ್ನು ಗಮನಿಸಿ ಅದರ ಸ್ವಭಾವವನ್ನು ಹೀಗೆ ಎಂದು ಹೇಳುತ್ತಾರೆ. ಅಧ್ಯಯನ, ಸಂಶೋಧನೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಅವರು ಪ್ರಾಣಿಗಳ ವರ್ತನಶಾಸ್ತ್ರವನ್ನೂ ತಿಳಿದುಕೊಂಡಿದ್ದಾರೆ. ಬೇರೆ ಬರಹಗಾರರು, ಪ್ರಾಣಿಪ್ರಿಯರು ಒಂದು ಪ್ರಾಣಿಯನ್ನು ನೋಡುವುದಕ್ಕೂ ರಮೇಶ್ ಉತ್ತಪ್ಪ ಅವರು ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅವರು ಪ್ರಾಣಿಗಳ ಪ್ರತಿ ನಡೆಯನ್ನು ಆಕರ್ಷಕವಾಗಿ ವಿವರಿಸಬಲ್ಲರು. ಆನೆ, ಹುಲಿ, ಚಿರತೆ, ಹಾವುಗಳ ಕುರಿತು ಸಾಕಷ್ಟು ಅಧ್ಯಯನ ಮಾಡಿದ್ದು, ಮಾತಿಗೆ ಸಿಕ್ಕಾಗ ದೀರ್ಘ ವಿವರಣೆ ನೀಡುತ್ತಾರೆ. ಅವರು ಈ ಹಿಂದೆ ಬರೆದ 'ಆನೆ ಲೋಕದ ವಿಸ್ಮಯ', 'ಕುಶಾ ಕಿ ಕಹಾನಿ, ಎ ಟೂ ಲವ್ ಸ್ಟೋರಿ', 'ಅಭಿಮನ್ಯು ದಿ ಗ್ರೇಟ್' ಕೃತಿಯನ್ನು ಓದಿದ್ದೇನೆ. ಅವುಗಳು ಪ್ರಾಣಿ ಲೋಕದ ಅದ್ಭುತ ಕೃತಿಗಳು. ಎಲ್ಲಾ ವಯೋಮಾನದವರನ್ನು ಸೆಳೆಯುತ್ತವೆ. ಕಥೆ ಹೇಳುವ ಶೈಲಿಯಲ್ಲಿ ಪ್ರಾಣಿಗಳ ವಿಶೇಷತೆ, ಜೀವನ ಕ್ರಮವನ್ನು ವಿವರಿಸುವ ಬರವಣಿಗೆ ಶೈಲಿ ಅವರಿಗೆ ಸಿದ್ದಿಸಿದೆ. ಇದಕ್ಕಾಗಿಯೇ ಅವರನ್ನು ವಿಸ್ಮಯ ಬರಹಗಾರ ಎಂದೇ ಕರೆದಿದ್ದೇನೆ.
ನನಗೂ ಪ್ರಾಣಿಗಳೆಂದರೆ ಸಾಕಷ್ಟು ಇಷ್ಟ. ಕಾಡು ಸುತ್ತುವುದು, ಸಫಾರಿ ಹೋಗುವುದನ್ನು ಇಷ್ಟಪಡುತ್ತೇನೆ. ಸಮಯ ಸಿಕ್ಕಾಗ ಕಾಡಿನ ಪ್ರೀತಿ ಬೆಳೆಸಿಕೊಂಡಿರುವ ವಿನೋದ್ ಕುಮಾರ್ ನಾಯಕ್, ರಮೇಶ್ ಉತ್ತಪ್ಪ, ರಾಜ್‌ಕುಮಾರ್ ಮುಂತಾದವರೊಂದಿಗೆ ಸೇರುತ್ತೇನೆ. ಆಗ ಹೊರಗೆ ಬರುತ್ತದೆ ನೋಡಿ ಪ್ರಾಣಿ ಲೋಕದ ಅದ್ಭುತ ಘಟನೆಗಳು..
ಹೀಗೆ ಒಡನಾಟದಿಂದಾಗಿ ನಾನೂ ಕೂಡ ಪ್ರಾಣಿಪ್ರಿಯನಾಗಿದ್ದೇನೆ. ಅವರುಗಳಿಂದಾಗಿ ನಾನು ವನ್ಯಜೀವಿಗಳನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿಕೊಂಡಿದ್ದೇನೆ. ಅದೇ ರೀತಿ ಅಂಬಾರಿ ಆನೆ ಅರ್ಜುನನ ಬಗ್ಗೆ ಸಾಕಷ್ಟು ಕುತೂಹಲ ಹೊಂದಿದ್ದೇನೆ. ಆತ ಕಾರ್ಯಾಚರಣೆಯಲ್ಲಿ ಬಲಿಯಾದಾಗ ಸಾಕಷ್ಟು ದುಃಖವಾಯಿತು. ಅಂತಹ ಆನೆಯನ್ನು ಇನ್ನೆಂದಿಗೂ ನೋಡಲು ಸಾಧ್ಯವಿಲ್ಲ. ಅದರ ಗುಂಗಿನಲ್ಲಿಯೇ ಇರುವಾಗ ಗೆಳೆಯ ಐತಿಚಂಡ ರಮೇಶ್ ಉತ್ತಪ್ಪ ನನ್ನ ಟೇಬಲಿನ ಮೇಲೆ ಅವರು ಬರೆದ ಅರ್ಜುನನ ಕುರಿತ ಕೃತಿಯ ಹಸ್ತಪ್ರತಿ ಇಟ್ಟು ಮುನ್ನುಡಿ ಬರೆಯಿರಿ ಎಂದಾಗ ನಾನು ಕಕ್ಕಾಬಿಕ್ಕಿಯಾದೆ. ಇಷ್ಟು ಬೇಗ ಹೇಗೆ ಅರ್ಜುನನ ಕೃತಿಯನ್ನು ಬರೆದರೆ ಎಂದು ಅಚ್ಚರಿಯಾದರೂ ಅವರ ಪ್ರತಿಭೆಯ ಅರಿವಿದ್ದ ಹಿನ್ನೆಲೆಯಲ್ಲಿ ನಂಬಲೇಬೇಕಾಯಿತು.
ನಾನು ಒಳ್ಳೆಯ ಓದುಗ. ಆದರೆ, ಬರಹಗಾರನಲ್ಲ. ಈ ಹಿನ್ನೆಲೆಯಲ್ಲಿ ಓದಿ ಅಭಿಪ್ರಾಯ ತಿಳಿಸುತ್ತೇನೆ. ಮುನ್ನುಡಿ ಬರೆಯಲಾರೆ. ಅದಕ್ಕೆ ಸಾಕಷ್ಟು ಅನುಭವಿಗಳಿದ್ದಾರೆ ಎಂದು ಒಂದೆರಡು ಹೆಸರು ಹೇಳಿದೆ. ಅದಕ್ಕೆ ಅವರು ಬರೆ- ಯುತ್ತೀರೊ ಇಲ್ಲವೊ ಎಂದು ಕೊಡಗಿನ ಶೈಲಿಯಲ್ಲಿ ಕೇಳಿದಾಗ 'ಆಯಿತು, ಮೊದಲು ಓದುತ್ತೇನೆ', ಎಂದು ಹೇಳಿದೆ. ಕೆಲವು ದಿನಗಳು ಕಳೆದು ಒಂದೆರಡು ಬಾರಿ 'ಆಯಿತಾ, ಬರೆದ್ರಾ?' ಎಂದು ಕೇಳಿ ಕೇಳಿ ಅವರೇ ಕೇಳುವುದನ್ನು ಬಿಟ್ಟುಬಿಡುತ್ತಾರೆ ಎಂದು ಮನಸ್ಸಿನಲ್ಲಿ ಅಂದುಕೊಂಡೆ.
ಅಂದು ಹಸ್ತಪ್ರತಿಯನ್ನು ಮನೆಗೆ ಕೊಂಡೊಯ್ದು ಸುಮ್ಮನೆ ಕಣ್ಣಾಡಿಸಲು ಪ್ರಯತ್ನಿಸಿದೆ. ನನಗೆ ನಂಬಲು ಸಾಧ್ಯವಾಗಲಿಲ್ಲ. ಕೊನೆಯ ಪುಟವನ್ನು ಮಡಚಿ ಹಸ್ತಪ್ರತಿಯನ್ನು ಕೆಳಗೆ ಇಟ್ಟಾಗ ಸಮಯ ಮಧ್ಯರಾತ್ರಿ 2.30 ಕಳೆದಿತ್ತು..! ಕಣ್ಣಂಚಿನಲ್ಲಿ ನೀರು ಜಾರಿತು.. ಹೀಗೂ ಒಂದು ಆನೆ ಇತ್ತೆ ಎನ್ನುವ ಅಚ್ಚರಿಯೊಂದಿಗೆ ರಾತ್ರಿಯಿಡೀ ಅರ್ಜುನ ಕಾಡುತ್ತಲೇ ಇದ್ದ.
ಹೌದು, ಅರ್ಜುನನ ಕುರಿತು ಓದುತ್ತಿದ್ದಂತೆ ಎಂತಹವರಿಗೂ ಅಭಿಮಾನ ಉಕ್ಕಿ ಬರುತ್ತದೆ. ರಮೇಶ್ ಉತ್ತಪ್ಪ ಅವರ 'ಅಭಿಮನ್ಯು ದಿ ಗ್ರೇಟ್' ಕೃತಿಯಂತೆ ಇದು ಕೂಡ ಆನೆಯೊಂದರ ಸಾಹಸಗಾಥೆಯನ್ನು ಅದ್ಭುತವಾಗಿ ಪ್ರಸ್ತುತಪಡಿಸಿದೆ. ಇಂತಹ ಕೃತಿಗೆ ಮುನ್ನುಡಿ ಬರೆಯುವಂತೆ ಹೇಳಿರುವುದೇ ನನ್ನ ಭಾಗ್ಯ ಎಂದುಕೊಂಡೆ. ಮೊದಲ ಬಾರಿಗೆ ಬರೆದಿದ್ದೇನೆ. ಭಾವನೆಗಳನ್ನು ಅವರಂತೆ ಹೇಳಿಕೊಳ್ಳಲಾಗಲಿಲ್ಲ. ಆದರೆ, ಈ ಕೃತಿ ಓದಿದ ನಂತರ ಅದರ ಗುಂಗಿನಲ್ಲಿಯೇ ಬರೆದಿದ್ದೇನೆ. ನೀವು ಕೂಡ ಓದಿದ ನಂತರ ಅರ್ಜುನನ ನೆನಪಿನಲ್ಲಿಯೇ ಇರುತ್ತೀರಿ ಎಂದು ಭಾವಿಸಿದ್ದೇನೆ. ಐತಿಚಂಡ ರಮೇಶ್ ಉತ್ತಪ್ಪ ಅವರ ವನ್ಯಜೀವಿಗಳ ಕುರಿತು ಇದು ಏಳನೇ ಪುಸ್ತಕ ಎನ್ನುವುದೇ ಅಚ್ಚರಿ, ಸೊಗಸಾಗಿ ಕಾಡಿನ ಕಥೆಗಳನ್ನು ಹೇಳಿದ್ದಾರೆ. ನೀವೂ ಕೂಡ ಓದಿ ಅಭಿಪ್ರಾಯ ತಿಳಿಸಿ. ನನ್ನ ಗೆಳೆಯ ಎನ್ನುವು ಎನ್ನುವುದಕ್ಕಿಂತ 'ಗ್ರೀನ್ ಪೆನ್ ರೈಟರ್" (ವೈಲ್ಡ್ ಲೈಫ್ ರಿಪೋರ್ಟರ್) ಎನ್ನುವ ಹೆಮ್ಮೆ ನನಗೆ”
ಈ ಕೃತಿಯಲ್ಲಿ ಅರ್ಜುನನ ಜೊತೆ ದುರಂತ ನಾಯಕರುಗಳಾದ ದ್ರೋಣ, ಬಲರಾಮ, ರಾಜೇಂದ್ರ, ಗೋಪಾಲ ಸ್ವಾಮಿ ಎಂಬ ಆನೆಗಳ ಕಥೆಯೂ ಇದೆ. ೧೧೦ ಪುಟಗಳಿರುವ ಈ ಪುಟ್ಟ ಕೃತಿಯನ್ನು ನೀವು ಕೈಗೆತ್ತಿಕೊಂಡಿರಾದರೆ ಮತ್ತೆ ಓದಿ ಮುಗಿಸಿದ ನಂತರವೇ ಕೆಳಗಿಡುವಿರಿ. ಅದೂ ಕಣ್ಣೀರಿನ ಜೊತೆ !