ಅರ್ಥಪೂರ್ಣ ಚರ್ಚೆ ಅಗತ್ಯ
ಸಂಸತ್ತಿನ ಪ್ರಮುಖ ಉದ್ದೇಶವೇ ಶಾಸನ ರಚನೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮತ್ತು ಪರಿಹಾರ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಈ ಮೂಲ ಉದ್ದೇಶಗಳನ್ನೇ ಮರೆತಂತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾದ ಬಳಿಕ, ೧೮ ನೇ ಲೋಕಸಭೆಯ ಮೊದಲ ಅಧಿವೇಶನ ಕಳೆದ ಜೂನ್ ಜುಲೈ ತಿಂಗಳಲ್ಲಿ ಏಳು ತಿಂಗಳುಗಳ ಕಾಲ ನಡೆಯಿತು. ನೀಟ್ ಪರೀಕ್ಷೆ ವಿವಾದ, ಪ್ರಶ್ನೆ ಪತ್ರಿಕೆ ಸೋರಿಕೆ, ಅಗ್ನಿವೀರ್ ಕಾರ್ಯಕ್ರಮ ಮುಂತಾದ ವಿಷಯಗಳ ಬಗ್ಗೆ ಭಾರೀ ಗದ್ದಲ ಏರ್ಪಟ್ಟಿತ್ತು. ಅದಕ್ಕೂ ಮೊದಲು, ೨೦೨೩ರ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಮಣಿಪುರದ ಗಲಭೆಯ ವಿಷಯವೇ ಪ್ರಮುಖವಾಗಿತ್ತು. ಕಳೆದ ವರ್ಷದ ಬಜೆಟ್ ಅಧಿವೇಶನದ ಮೊದಲರ್ಧ ಅವಧಿಯಲ್ಲಿ ಯಾವ ವಿಧೇಯಕವೂ ಅಂಗೀಕಾರವಾಗಲಿಲ್ಲ. ೧೩೩ ಗಂಟೆ ನಡೆಯಬೇಕಿದ್ದ ಲೋಕಸಭೆ ಕಲಾಪ ಕೇವಲ ೪೫ ಗಂಟೆ ಮಾತ್ರ ನಡೆಯಿತು. ೧೩೦ ಗಂಟೆ ನಡೆಯಬೇಕಿದ್ದ ರಾಜ್ಯಸಭೆ ಕಲಾಪ ೩೨ ಗಂಟೆ ಮಾತ್ರ ನಡೆಯಿತು. ದ್ವಿತೀಯಾರ್ಧವಂತೂ ಅದಕ್ಕಿಂತ ಕೆಟ್ಟದಾಗಿತ್ತು. ಲೋಕಸಭೆ ಕಲಾಪ ೩೬ ಗಂಟೆಗಳ ಪೈಕಿ ಕೇವಲ ೧ ಗಂಟೆ ೪೫ ನಿಮಿಷ ನಡೆದರೆ, ರಾಜ್ಯಸಭೆ ಕಲಾಪ ೩೫ ಗಂಟೆಗಳ ಪೈಕಿ ೨ ಗಂಟೆ ೩೮ ನಿಮಿಷ ಮಾತ್ರ ನಡೆಯಿತು. ವಿರೋಧ ಪಕ್ಷಗಳ ನಾಯಕರಿಗೆ ಕೇಂದ್ರ ಗೃಹ ಸಚಿವ ಪತ್ರಬರೆದು ವಿನಂತಿಸಿದರೂ ಸಂಸತ್ತಿನಲ್ಲಿ ಗದ್ದಲ ನಿಲ್ಲಲಿಲ್ಲ. ಈ ಬಾರಿಯೂ ಇಂತಹುದೇ ದೃಶ್ಯಗಳು ಸಂಸತ್ತಿನಲ್ಲಿ ಕಾಣಿಸತೊಡಗಿವೆ. ಸೋಮವಾರ ಅಧಿವೇಶನ ಆರಂಭವಾಗಿದ್ದು, ಮೊದಲ ದಿನದ ಕಲಾಪವನ್ನು ಉದ್ಯಮಿ ಗೌತಮ್ ಅದಾನಿ ಮೇಲೆ ಬಂದಿರುವ ಲಂಚ ಆರೋಪ ಕುರಿತ ಗದ್ದಲವು ನುಂಗಿ ಹಾಕಿತು. ಮಂಗಳವಾರ ಸಂವಿಧಾನ ದಿನದ ರಜೆ ಬಳಿಕ, ಎರಡನೇ ದಿನವಾದ ಬುಧವಾರ ಕೂಡ ಸಂಸತ್ತಿನಲ್ಲಿ ಅದಾನಿ ವಿಷಯ, ಉತ್ತರ ಪ್ರದೇಶದ ಸಂಭಾಲ್ ಪ್ರಕರಣ ಮತ್ತಿತರ ವಿಷಯಗಳ ಬಗ್ಗೆಯೇ ಗಲಾಟೆ ನಡೆಯಿತು.
ಲೋಕಸಭೆಯ ನಿವೃತ್ತ ಮಹಾಕಾರ್ಯದರ್ಶಿ ಪಿಡಿಟಿ ಆಚಾರ್ಯ ಅವರು ಹೇಳುವ ಪ್ರಕಾರ, ಸಂಸತ್ತಿನ ಪ್ರತಿ ನಿಮಿಷದ ಕಲಾಪಕ್ಕೆ ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ ಸಂಸದರ ಮತ್ತು ಸಿಬ್ಬಂದಿಯ ಸಂಬಳ, ಭತ್ಯೆಗಳು, ಭದ್ರತೆ, ಕಟ್ಟಡ ನಿರ್ವಹಣೆ, ವಿದ್ಯುತ್, ನೀರು, ಪೆಟ್ರೋಲ್, ಆಹಾರದ ವೆಚ್ಚಗಳು ಸೇರಿವೆ. ೨-೩ ವರ್ಷಗಳ ಹಿಂದೆ ಲೆಕ್ಕ ಹಾಕಿದ್ದರ ಪ್ರಕಾರ, ಒಟ್ಟಾರೆ ಒಂದು ಅಧಿವೇಶನಕ್ಕೆ ಸುಮಾರು ೧೩೩ ಕೋಟಿ ರೂ. ವೆಚ್ಚವಾಗುತ್ತದೆ. ಇಷ್ಟೆಲ್ಲ ವೆಚ್ಚ ಮಾಡಿ, ಜನರ ಸಮಸ್ಯೆಗಳನ್ನೇ ಆಲಿಸದಿದ್ದರೆ ಏನು ಪ್ರಯೋಜನ? ವಿಧೇಯಕಗಳ ಬಗ್ಗೆ ಸಮಾಲೋಚಿಸದೇ ತುರಾತುರಿಯಲ್ಲಿ ಅಂಗೀಕರಿಸಿದರೆ ಅದರಿಂದ ಯಾರಿಗೆ ಲಾಭ? ಗದ್ದಲವೇ ಪ್ರಮುಖವಾಗಿಬಿಟ್ಟರೆ ನಿಜವಾಗಿಯೂ ಕೇಳಬೇಕಾದ ಪ್ರಶ್ನೆಗಳನ್ನೇ ಕೇಳಲು ಅವಕಾಶ ಸಿಗುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಸರ್ಕಾರ ಕೂಡ ವಿರೋಧ ಪಕ್ಷಗಳು ಒತ್ತಾಯಿಸುವ ವಿಷಯಗಳ ಚರ್ಚೆಗೆ ಒಂದಲ್ಲ ಒಂದು ನಿಯಮದಡಿ ಅವಕಾಶ ಮಾಡಿಕೊಡಬೇಕಾಗುತ್ತದೆ. ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೧-೧೧-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ